ಬಾಗೇಪಲ್ಲಿ ಕ್ಷೇತ್ರಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಎಂಟ್ರಿ ವಿಚಾರಕ್ಕೆ ಬಿಜೆಪಿ ಅಭ್ಯರ್ಥಿ ಮುನಿರಾಜು ಟಾಂಗ್
by GS Bharath Gudibande
ಗುಡಿಬಂಡೆ: ಕಾಂಗ್ರೆಸ್ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರಿಗೆ ಸೋಲಿನ ಭೀತಿ ಆರಂಭವಾಗಿದೆ. ಹಾಗಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಾಗೇಪಲ್ಲಿಗೆ ಬಂದು ಸ್ಪರ್ಧೆ ಮಾಡುವಂತೆ ಆಹ್ವಾನ ನೀಡುತ್ತಿದ್ದಾರೆ ಎಂದು ಬಾಗೇಪಲ್ಲಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರಾಜು ಲೇವಡಿ ಮಾಡಿದ್ದಾರೆ.
ಗುಡಿಬಂಡೆಯಲ್ಲಿ ಬಿಜೆಪಿ ಸಾಧನಾ ಸಮಾವೇಶಕ್ಕೆ ಕಾರ್ಯಕರ್ತರನ್ನು ಆಹ್ವಾನಿಸಲು ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಶಾಸಕರಿಗೆ ಸೋಲಿನ ಭೀತಿ ಆರಂಭವಾಗಿದೆ ಹಾಗಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನ ಮಾಡುತ್ತಿದ್ದಾರೆ.
ಶಾಸಕರು ಸೋಲುತ್ತಾರೆ ಎಂಬುದು ಮುಂಚಿತವಾಗಿ ಒಪ್ಪಿಕೊಂಡಿದ್ದಾರೆ ಎಂದು ಅವರು ಟೀಕಿಸಿದರು.
ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಒಂದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಜುಲೈ 28ರಂದು ಬಿಜೆಪಿ ಸಾಧನಾ ಸಮಾವೇಶವನ್ನು ಆಯೋಜಿಸಲಾಗಿದೆ. ಈ ಸಾಧನಾ ಸಮಾವೇಶಕ್ಕೆ ಬಾಗೇಪಲ್ಲಿ ಕ್ಷೇತ್ರದಿಂದ ಸಾವಿರಾರು ಕಾರ್ಯಕರ್ತರು, ಅಭಿಮಾನಿಗಳು ಭಾಗವಹಿಸಬೇಕು ಎಂದು ಅವರು ಮನವಿ ಮಾಡಿದರು.
ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಗೆಲ್ಲಿಸಿ
ಬಾಗೇಪಲ್ಲಿ ಕ್ಷೇತ್ರದಿಂದ ಬಿಜೆಪಿ ಪಕ್ಷದ ಅಭ್ಯರ್ಥಿಯನ್ನು ಶಾಸಕರಾಗಿ ಗೆಲ್ಲಿಸಿ ವಿಧಾನಸಭೆಗೆ ಕಳುಹಿಸಬೇಕು ಎಂದು ಬೆಂಗಳೂರು ಗ್ರಾಮಾಂತರ ಉಸ್ತುವಾರಿ ಸಚಿವರಾದ ಡಾ.ಕೆ.ಸುಧಾಕರ್ ಅವರು ಪಣ ತೊಟ್ಟಿದ್ದಾರೆ. ಅದಕ್ಕಾಗಿ ನಾವು ಎಲ್ಲರೂ ಶ್ರಮಿಸಬೇಕು ಎಂದು ಮುನಿರಾಜು ಕರೆ ನೀಡಿದರು.
ಕಾಂಗ್ರೆಸ್ ನಾಯಕರ ಬಿಜೆಪಿ ಸೇರ್ಪಡೆ
ಬಾಗೇಪಲ್ಲಿ ಕ್ಷೇತ್ರದ ಕಾಂಗ್ರೆಸ್ ನಾಯಕರು ಪಕ್ಷ ಬಿಟ್ಟು ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ನೇತೃತ್ವದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು, ಬಾಗೇಪಲ್ಲಿಯ ಪುರಸಭೆ ಸದಸ್ಯ ಅನಾ ಮೂರ್ತಿ, ಗುಡಿಬಂಡೆ ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷೆ ಆಶಾ ಜಯಪ್ಪ, ಗ್ರಾಮ ಪಂಚಾಯತಿ ಸದಸ್ಯರು ಸೇರಿದಂತೆ ಮುಂತಾದವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿ ಬಲ ಹೆಚ್ಚಿಸಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ ಮಾತನಾಡಿ, ಬಿಜೆಪಿ ಸರ್ಕಾರದ ಸಾಧನಾ ಸಮಾವೇಶಕ್ಕೆ ಅಸಂಖ್ಯಾತ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಬೇಕು. ಈ ಮೂಲಕ ಸರ್ಕಾರಕ್ಕೆ ಹಾಗೂ ಪಕ್ಷಕ್ಕೆ ಹೆಚ್ಚು ಬೆಂಬಲ ನೀಡಬೇಕು ಎಂದು ಹೇಳಿದರು.
ಈ ವೇಳೆ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಕೇಶವಪ್ರಸಾದ್, ಬಿಜೆಪಿ ಜಿಲ್ಲಾ ಎಸ್.ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ನವೀನ್, ಬಿಜೆಪಿ ತಾಲೂಕು ಅಧ್ಯಕ್ಷ ಗಂಗಿರೆಡ್ಡಿ, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಅನೀಲ್ ಕುಮಾರ್, ಬಿಜೆಪಿ ಮುಖಂಡರಾದ ರಾಮಾಂಜಿ, ರಿಜ್ವಾನ್ ಪಾಷ, ಗರುಡಾಚಾರ್ಲಹಳ್ಳಿ ಅಮರೇಶ್ ಜಿ.ಎ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು