ಎರಡನೇ ಮಹಿಳಾ ಪ್ರಥಮ ಪ್ರಜೆ
ನವದೆಹಲಿ: ಭಾರತದ 15ನೇ ರಾಷ್ಟ್ರಪತಿಯಾಗಿ ಶ್ರೀಮತಿ ದ್ರೌಪದಿ ಮುರ್ಮು ಅವರು ಸೋಮವಾರ ಅಧಿಕಾರ ಗೌಪ್ಯತೆಯ ಪ್ರಮಾಣ ವಚನ ಸ್ವೀಕರಿಸಿದರು.
ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಭರ್ಜರಿ ಬಹುಮತದಿಂದ ಆಯ್ಕೆಯಾದ ದ್ರೌಪದಿ ಮುರ್ಮು ಅವರಿಗೆ ಸೋಮವಾರ ಸಂಸತ್‍ನ ಸೆಂಟ್ರಲ್ ಹಾಲ್‍ನಲ್ಲಿ ನಡೆದ ಸಮಾರಂಭದಲ್ಲಿ ಸುಪ್ರಿಂ ಕೋರ್ಟ್ ಮುಖ್ಯನ್ಯಾಯಮೂರ್ತಿಗಳಾದ ಎನ್.ವಿ.ರಮಣ ಅಧಿಕಾರ ಗೌಪ್ಯತಾ ಪ್ರಮಾಣ ವಚನ ಬೋಧಿಸಿದರು.
ನಿರ್ಗಮಿತ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್, ಪ್ರಧಾನಿ ನರೇಂದ್ರ ಮೋದಿ, ಉಪ ರಾಷ್ಟ್ರಪತಿ ಎಂ.ವೆಂಕಯ್ಯನ್ಯಾಯ್ಡು, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತಿತರೆ ಗಣ್ಯರು ಪಾಲ್ಗೊಂಡಿದ್ದರು.
ನಿರ್ಗಮಿತ ಹಾಗೂ ಚುನಾಯಿತ ರಾಷ್ಟ್ರಪತಿಯವರು ಭವ್ಯ ರಾಷ್ಟ್ರಪತಿ ಭವನದಿಂದ ಭವ್ಯ ಮೆರವಣಿಗೆಯಲ್ಲಿ ಗಣ್ಯರೊಂದಿಗೆ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಆಗಮಿಸಿದರು. ಈ ವೇಳೆ ರಕ್ಷಣಾ ಪಡೆಗಳು ರಾಷ್ಟ್ರಪತಿ ಅವರಿಗೆ ಗೌರವ ವಂದನೆ ಸಲ್ಲಿಸಿದವು.
21 ಕುಶಾಲ ತೋಪು ಸಿಡಿತದ ಸಂಭ್ರಮದ ನಡುವೆ ನೂತನ ರಾಷ್ಟ್ರಪತಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಿತು. ಸೆಂಟ್ರಲ್ ಹಾಲ್‍ಗೆ ಆಗಮಿಸಿದ ದ್ರೌಪತಿ ಮುರ್ಮು ಅವರನ್ನು ಅಬ್ಬರದ ಚಪ್ಪಾಳೆಗಳು ಸ್ವಾಗತಿಸಿದವು. ಸಭಾಂಗಣದಲ್ಲಿದ್ದ ಎಲ್ಲರೂ ಎದ್ದು ನಿಂತು ಗೌರವ ಸಲ್ಲಿಸಿದರು.
ಒಡಿಶಾದ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ದ್ರೌಪದಿ ಮುರ್ಮು ಅವರು ದೇಶದ ರಾಷ್ಟ್ರಪತಿಯಾದ ಮೊದಲ ಬುಡಕಟ್ಟು ಮಹಿಳೆಯಾಗಿದ್ದಾರೆ.
ಔಪಚಾರಿಕ ಕಾಗದ ಪತ್ರಗಳಿಗೆ ಸಹಿ ಹಾಕಿದ ಬಳಿಕ ಭಾಷಣ ಮಾಡಿದ ಮುರ್ಮು ಅವರು, ನನ್ನ ಆಯ್ಕೆ ಬಡ ಭಾರತೀಯನೂ ಕೂಡಾ ಕನಸು ಕಾಣಬಹುದು ಮತ್ತು ಅದನ್ನು ಈಡೇರಿಸಿಕೊಳ್ಳಬಹುದು ಎಂಬುದನ್ನು ಸಾಬೀತು ಮಾಡಿದೆ ಎಂದು ಹೇಳಿದರು.