BIG IMPACT : ಸಿಕೆನ್ಯೂಸ್ ನೌ ವರದಿಗೆ ಸ್ಪಂಧಿಸಿದ ಚಿಕ್ಕಬಳ್ಳಾಪುರ ವಿಭಾಗೀಯ ಸಾರಿಗೆ ನಿಯಂತ್ರಣಾಧಿಕಾರಿ
by Siddhu Devanahalli
ಚಿಕ್ಕಬಳ್ಳಾಪುರ/ದೇವನಹಳ್ಳಿ: ಅಧಿಕೃತ ಪಾಸ್ ಹೊಂದಿದ್ದರೂ ವಿಕಲಚೇತನರನ್ನು ರಾಜ್ಯ ಸಾರಿಗೆ ಬಸ್ಸುಗಳಿಂದ ಹೊರದಬ್ಬುವ ಚಾಲಕ, ನಿರ್ವಾಹಕರ ಕರ್ತವ್ಯಲೋಪದ ಬಗ್ಗೆ ಜುಲೈ 12ರಂದು ಸಿಕೆನ್ಯೂಸ್ ನೌ ನಲ್ಲಿ ಪ್ರಕಟವಾದ ವಿಕಲಚೇತನರ ಮೇಲೆ KSRTCಗೆ ಕಣ್ಣುರಿ! ಬಸ್ ಹೊರದಬ್ಬುವ ವಿಕೃತಿ!! ಎಂಬ ಸುದ್ದಿ ಸದ್ದು ಮಾಡಿ, ಇಲಾಖೆಯ ಅಧಿಕಾರಿಗಳ ಕಣ್ತೆರೆಸಿದೆ.
ವಿಕಲಚೇತನರ ಮೇಲೆ ಚಾಲಕ ಕಂ ನಿರ್ವಾಹಕರು ನೆಡೆಸಿದ ದಬ್ಬಾಳಿಕೆ ಮತ್ತು ಆ ವಿಕಲಚೇತನ ವ್ಯಕ್ತಿ ಆ ದಿನ ಕಗ್ಗತ್ತಲ ರಾತ್ರಿಯಲ್ಲಿ ಅನುಭವಿಸಿದ ಸಂಕಷ್ಟಕ್ಕೆ ಪರಿಹಾರ ಸಿಕ್ಕಿದೆ. ಅದಕ್ಕೆ ಹಿರಿಯ ಅಧಿಕಾರಿಗಳು ಸೂಕ್ತವಾಗಿ ಸ್ಪಂಧಿಸಿದ್ದಾರೆ.
ನೊಂದ ವಿಕಲಚೇತನ ವ್ಯಕ್ತಿ ಮುಖ್ಯಮಂತ್ರಿಯವರಿಗೆ ಟ್ವಿಟ್ಟರ್ ಖಾತೆ ಮೂಲಕ ನ್ಯಾಯಕಾಗಿ ಇಟ್ಟ ಮನವಿಗೆ ಪ್ರತಿಸ್ಪಂದನೆ ಸಿಕ್ಕಿದೆ. ಇವೆಲ್ಲವನ್ನೂ ಸಿಕೆನ್ಯೂಸ್ ನೌ ಸವಿಸ್ತಾರವಾಗಿ ವರದಿ ಮಾಡಿ ವಿಕಲಚೇತನರ ಮೇಲೆ KSRTC ಬಸ್ಸುಗಳಲ್ಲಿ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಗಮನ ಸೆಳೆದಿತ್ತು.
ಸಿಕೆನ್ಯೂಸ್ ನೌ ವರದಿಯನ್ನು ಗಮನಿಸಿದ ಚಿಕ್ಕಬಳ್ಳಾಪುರ ವಿಭಾಗೀಯ ಸಾರಿಗೆ ನಿಯಂತ್ರಣಾಧಿಕಾರಿ (ಡಿಸಿ) ಹಿಮವರ್ಧನ್ ನಾಯ್ಡು ಅಲ್ಲೂರಿ ಅವರು, ತಮ್ಮ ಕಚೇರಿಗೇ ನೊಂದ ವಿಕಲಚೇತನ ವ್ಯಕ್ತಿಯನ್ನು ಕಚೇರಿಗೇ ಕರೆಸಿಕೊಂಡು ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಘಟನೆಗೆ ಕಾರಣನಾದ ಹಾಗೂ ದುರ್ವರ್ತನೆ ತೋರಿದ ಚಿಕ್ಕಬಳ್ಳಾಪುರ ಘಟಕದ ಚಾಲಕ ಆನಂದ್ ಎಂಬುವವರನ್ನು ಕರೆಸಿ ಬುದ್ಧಿವಾದ ಹೇಳಿದ್ದಾರೆ. ಅಲ್ಲದೆ, ಮತ್ತೊಮ್ಮೆ ಇಂಥ ವರ್ತನೆ ಮರುಕಳಿಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಇನ್ನು ಮುಂದೆ ಇಂಥ ಘಟನೆಗಳಿಗೆ ಅವಕಾಶ ನೀಡುವುದಿಲ್ಲ. ವಿಕಲಚೇತನರಿಗೆ ತೊಂದರೆ ಮಾಡಿದರೆ ಸಹಿಸುವ ಪ್ರಶ್ನೆಯೇ ಇಲ್ಲ. ಚಾಲಕ, ನಿರ್ವಾಹಕರಿಗೆ ಕಠಿಣ ಸಂದೇಶ ನೀಡಲಾಗುವುದು.
ಹಿಮವರ್ಧನ್ ನಾಯ್ಡು ಅಲ್ಲೂರಿ / ವಿಭಾಗೀಯ ಸಾರಿಗೆ ನಿಯಂತ್ರಣಾಧಿಕಾರಿ, ಚಿಕ್ಕಬಳ್ಳಾಪುರ
ವೆಂಕಟಗಿರಿಕೋಟೆ ಬಳಿ KSRTC ನಿಲುಗಡೆಗೆ ಆದೇಶ
ಚಿಕ್ಕಬಳ್ಳಾಪುರ-ಬೆಂಗಳೂರು ಹೆದ್ದಾರಿಯ ನಡುವೆ ಬರುವ ವೆಂಕಟಗಿರಿಕೋಟೆ ಬಳಿ ಸರಕಾರಿ ಬಸ್ಸುಗಳು, ಅದರಲ್ಲೂ ಚಿಕ್ಕಬಳ್ಳಾಪುರ ಜಿಲ್ಲೆಯ ಸಾರಿಗೆ ಬಸ್ಸುಗಳು ನಿಲುಗಡೆ ನೀಡದಿರುವ ಕಾರಣಕ್ಕೆ, ಸಾರ್ವಜನಿಕರು ಹಾಗೂ ಶಾಲೆ ಕಾಲೇಜು ವಿದ್ಯಾರ್ಥಿಗಳೆಲ್ಲರೂ ಖಾಸಗಿ ಬಸ್ಸುಗಳನ್ನೇ ಅನಿವಾರ್ಯವಾಗಿ ಆಶ್ರಯಿಸಬೇಕಾದ ಪರಿಸ್ಥಿತಿಯ ಬಗ್ಗೆಯೂ
ವಿಭಾಗೀಯ ಸಾರಿಗೆ ನಿಯಂತ್ರಣಾಧಿಕಾರಿ ಕ್ರಮ ವಹಿಸುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ, ಇನ್ನು ಮುಂದೆ ವೆಂಕಟಗಿರಿಕೋಟೆಯಲ್ಲಿ ಕೋರಿಕೆಯ ನಿಲುಗಡೆ ಮಾಡುವಂತೆ ಬಾಗೇಪಲ್ಲಿ ಹಾಗೂ ಚಿಕ್ಕಬಳ್ಳಾಪುರ ಬಸ್ ಘಟಕಗಳಿಗೆ ಆದೇಶ ನೀಡಿದ್ದಾರೆ.
ವಿಕಲಚೇತನರು ಯಾರೇ ಬಸ್ ಹತ್ತಿದರೆ, ಅವರಿಗೆ ಮೀಸಲಾದ ಆಸನ ವ್ಯವಸ್ಥೆ ಮಾಡಿಸಿಕೊಡುವುದು ಹಾಗೂ ಅವರು ಕೋರಿದ ಸ್ಥಳದಲ್ಲಿ ಬಸ್ ನಿಲುಗಡೆ ಮಾಡಿ ಸುರಕ್ಷಿತವಾಗಿ ಇಳಿಸುವ ಬಗ್ಗೆಯೂ ಸಾರಿಗೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ತಿಳಿವಳಿಕೆ ಮೂಡಿಸುವುದಾಗಿ ಅವರು ಭರವಸೆ ನೀಡಿದ್ದಾರೆ. ಅಲ್ಲದೆ, ಸಿಕೆನ್ಯೂಸ್ ನೌ ಸಾಮಾಜಿಕ ಕಾಳಜಿಯ ವರದಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.