ನೊಂದ ಕುಟುಂಬಕ್ಕೆ ಸಾಂತ್ವನ ಹೇಳಲು ಹೋದ ಸಿಎಂ; ಅಳಲು ತೋಡಿಕೊಳ್ಳಲು ಕುಟುಂಬಸ್ಥರಿಗೆ ಅಡ್ಡಿ ಮಾಡಿದ ಬಿಜೆಪಿ ಮುಖಂಡರು
ಮಂಗಳೂರು: ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಧಾರುಣವಾಗಿ ಹತ್ಯೆಗೀಡಾದ ಹಿನ್ನೆಲೆಯಲ್ಲಿ ರೊಚ್ಚಿಗೆದ್ದಿರುವ ಬಿಜೆಪಿ ಕಾರ್ಯಕರ್ತರ ಆಕ್ರೋಶಕ್ಕೆ ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಗುರಿಯಾಗಬೇಕಾಯಿತು.
ಇಂದು ಸಂಜೆ ಬೆಳ್ಳಾರೆಯ ಪ್ರವೀಣ್ ಮನೆಗೆ ಬಂದ ಮುಖ್ಯಮಂತ್ರಿಗಳು, ಪ್ರವೀಣ್ ಅವರ ಪತ್ನಿ ನೂತನ ಹಾಗೂ ತಾಯಿ-ತಂದೆಗೆ ಸಾಂತ್ವನ ಹೇಳಲೆತ್ನಿಸಿದರು. ಈ ಸಂದರ್ಭದಲ್ಲಿ ಅಲ್ಲಿಯೇ ಇದ್ದ ಬಿಜೆಪಿ ಕಾರ್ಯಕರ್ತರು ಆಕ್ರೋಶಕ್ಕೆ ಒಳಗಾದರಲ್ಲದೆ, ಬೊಮ್ಮಾಯಿ ಅವರ ಘೋಷಣೆಗಳನ್ನು ಕೂಗಿದರು. ಧಿಕ್ಕಾರ ಕೂಗಿ ತಮ್ಮ ಸಿಟ್ಟನ್ನು ಹೊರಹಾಕಿದರು.
ಮೊದಲು ಪ್ರವೀಣ್ ಅವರ ಪತ್ನಿ ಸೂತನ ಹಾಗೂ ಅವರ ತಂದೆ ಅವರಿಗೆ ಸಾಂತ್ವನ ಹೇಳಿದ ನಂತರ, ಪ್ರವೀಣ್ ಅವರ ಬಾವಾ ತೀವ್ರ ದ್ವನಿಯಲ್ಲಿ ಅಳಲು ತೋಡಿಕೊಳ್ಳಲು ಯತ್ನಿಸಿದರು. ಆ ವೇಳೆ ಇದನ್ನೆಲ್ಲ ಮುಖ್ಯಮಂತ್ರಿಗಳ ಬಳಿ ಹೇಳುವುದು ಬೇಡ ಎಂದು ಕೆಲ ನಾಯಕರು ಅಡ್ಡಿಪಡಿಸಿದಾಗ ಬಿಜೆಪಿ ಕಾರ್ಯಕರ್ತರ ತಾಳ್ಮೆಯ ಕಟ್ಟೆಯೊಡೆಯಿತು. ಮನೆಯಲ್ಲಿ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕರ ವಿರುದ್ಧ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ ಧಿಕ್ಕಾರ ಕೂಗಿದರು.