ಕೊಚ್ಚಿಹೋದ ಕೋಡಿ ರಸ್ತೆ, ಮತ್ತೆ ಭಾರೀ ಗಾತ್ರದ ವಾಹನಗಳದ್ದೇ ಟನ್ಷನ್
ಮಲೆನಾಡಿನಂತೆ ಕಂಗೊಳಿಸುತ್ತಿದೆ ಗಡಿ ಪ್ರವಾಸಿಗರಿಗೆ ಹ್ಹಾಟ್ ಸ್ಪಾಟ್
by GS Bharath Gudibande
ಗುಡಿಬಂಡೆ: ಶನಿವಾರ ರಾತ್ರಿ ಸುರಿದ ಭಾರೀ ಮಳೆಗೆ ಇಲ್ಲಿನ ಐತಿಹಾಸಿಕ ಅಮಾನಿಭೈರಸಾಗರ ಕೆರೆ ಕೋಡಿ ಹೋಗುತ್ತಿದ್ದು, ಆ ಸುಂದರ, ರಮಣೀಯ ದೃಶ್ಯವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಲಗ್ಗೆ ಇಟ್ಟಿದ್ದಾರೆ.
ಎಲ್ಲಿ ನೋಡಿದರೂ ಕಾಣುವ ನೀರು, ನೀರಿನಲ್ಲಿ ಆಟವಾಡುತ್ತಿರುವ ಮಕ್ಕಳು ಸಾರ್ವಜನಿಕರು.. ಇಂಥ ಸುಂದರ ದೃಶ್ಯಗಳಿಗೆ ಅಮಾನಿಭೈರ ಸಾಗರ ಕೆರೆ ಮತ್ತೆ ಸಾಕ್ಷಿಯಾಗಿದೆ.
ಪ್ರವಾಸಿಗರ ಲಗ್ಗೆ
ಭಾನುವಾರವಾಗಿರುವ ಕಾರಣಕ್ಕೆ ಇಂದು ಸಹಜವಾಗಿ ವಿವಿಧ ಪ್ರವಾಸಿಗರು ಗುಡಿಬಂಡೆ ಕೆಡೆ ಹೆಚ್ಚು ಪ್ರಮಾಣದಲ್ಲಿ ಬಂದಿದ್ದರು. ಅದರಲ್ಲೂ ಬೆಂಗಳೂರಿನ ಮಂದಿಯೇ ಹೆಚ್ಚು. ಮೈದುಂಬಿಕೊಂಡು ಕೋಡಿ ಹರಿಯುತ್ತಿದ್ದ ಅಮಾನಿ ಭೈರಸಾಗರವನ್ನು ಪ್ರವಾಸಿಗರು ರೋಮಾಂಚಿರಾಗಿದ್ದು, ಕೋಡಿಯಲ್ಲಿ ಅವರನ್ನು ನಿಯಂತ್ರಣ ಮಾಡುವುದೇ ಕಷ್ಟವಾಗಿದೆ ಪ್ರವಾಸಿಗರನ್ನು ಕಂಟ್ರೋಲ್ ಮಾಡಲು ಹರಸಾಹಸ ಪಡಬೇಕಾಗಿದೆ.
ರಾಜಧಾನಿ ಬೆಂಗಳೂರಿಗೆ ಕೇವಲ 90 ಕಿ.ಮೀ ದೂರದಲ್ಲಿರುವ ಗುಡಿಬಂಡೆಯ ಅಮಾನಿ ಭೈರಸಾಗರ ಕೆರೆಯನ್ನು ನೋಡಲು ಕೇವಲ ಒಂದು ದಿನ ಟ್ರಿಪ್ ಅಂತ ಜನ ಇಲ್ಲಿಗೆ ಭಾರೀ ಪ್ರಮಾಣದಲ್ಲಿ ಬರುತ್ತಾರೆ. ಸದಾ ಬ್ಯುಸಿ ಜೀವನದಲ್ಲಿರುವ ಸಿಟಿ ಜನರು ಸ್ವಲ್ಪ ರಿಲ್ಯಾಕ್ಸ್ ಆಗಲು ಕುಟುಂಬದ ಜೊತೆಗೆ ಊಟ, ತಿಂಡಿ ಪಾರ್ಸೆಲ್ ಕಟ್ಟಿಕೊಂಡು ಈ ಸುಂದರ ವಾತಾವರಣದಲ್ಲಿ ಪುಲ್ ಎಂಜಾಯ್ ಮಾಡಿಕೊಂಡು ಹೋಗ್ತಾರೆ. ಕೆಲ ವರ್ಷಗಳಿಂದ ಗುಡಿಬಂಡೆ ಪಟ್ಟಣ ಬೆಂಗಳೂರಿಗರ ಅಚ್ಚುಮೆಚ್ಚಿನ ಪ್ರವಾಸಿ ತಾಣವಾಗಿದೆ.
ಅಮಾನಿ ಭೈರಸಾಗರ ಕೆರೆಯೂ ತುಂಬಿ ಹರಿಯುತ್ತಿದ್ದು ಬಯಲು ಸೀಮೆಯಲ್ಲೀಗ ಮಲೆನಾಡಿನ ವಾತಾವರಣ ಸೃಷ್ಟಿಯಾಗಿದೆ. ಇಂಥಹ ಸುಂದರ ವಾತಾವರಣವನ್ನು ಸವಿಯಲು ವೀಕೆಂಡ್ʼನಲ್ಲಿ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಸುಂದರ ಬೆಟ್ಟಗುಡ್ಡಗಳ ನಡುವೆ ಸುಂದರವಾದ ಪರಿಸರದಲ್ಲಿ ಕೆರೆಯ ಸುತ್ತಮುತ್ತ ಪ್ರವಾಸಿಗರು ಪುಲ್ ಎಂಜಾಯ್ ಮಾಡುತ್ತಿದ್ದಾರೆ. ಒಂದೆಡೆ ಯುವಕರು ನೀರಿನಲ್ಲಿ ಡೈ ಹೊಡೆಯುತ್ತಾ ಈಜಾಡುತ್ತಾ ಎಂಜಾಯ್ ಮಾಡುತ್ತಿದ್ದರೆ, ಇನ್ನೊಂದೆಡೆ ಮಹಿಳೆಯರು ಮಕ್ಕಳು ಕುಟುಂಬ ಸಮೇತವಾಗಿ ಕೋಡಿ ಹರಿಯುತ್ತಿದ್ದ ಸ್ಥಳದಲ್ಲಿ ಝಳು ಝಳು ಹರಿಯುವ ನೀರಿನಲ್ಲಿ ಮೈಯೊಡ್ಡಿ ಖುಷಿಪಡುತ್ತಿದ್ದಾರೆ.
ಒಂಡೇ ಟ್ರಿಪ್ ಗೆ ಬೆಸ್ಟ್
ಒಂದು ದಿನದ ಪ್ರವಾಸಕ್ಕೆ ಬೆಸ್ಟ್ ಪ್ಲೇಸ್ ಎಂದರೆ ಗುಡಿಬಂಡೆ. ತಾಲೂಕಿನ ಸುತ್ತಮುತ್ತ ಹಲವಾರು ಪ್ರವಾಸಿ ತಾಣಗಳಿವೆ. ಗುಡಿಬಂಡೆ ಅಮಾನಿ ಭೈರಸಾಗರ ಕೆರೆ, ಗುಡಿಬಂಡೆಯ ಸುರಸದ್ಮಗಿರಿ ಬೆಟ್ಟ, ವಾಟದ ಹೊಸಹಳ್ಳಿ ಕೆರೆ, ಎಲ್ಲೋಡು ಶ್ರೀ ಆದಿನಾರಾಯಣ ಸ್ವಾಮಿ ಬೆಟ್ಟ, ಗುಡಿಬಂಡೆಯ ವಾಬಸಂದ್ರ ರಸ್ತೆಯ ಮೂಲಕ ಎಲ್ಲೋಡು ಮಾರ್ಗದಲ್ಲಿ ನವಿಲುಗಳ ಮನಮೋಹಕ ದೃಶ್ಯ.. ಹೀಗೆ ಹಲವು ರೋಮಾಂಚನ ಸ್ಥಳಗಳನ್ನು ಒಂದೇ ದಿನದಲ್ಲಿ ನೋಡಿ ಸಂತೋಷ ಪಡಬಹುದು.
ಮೂಲಭೂತ ಸೌಲಭ್ಯಗಳದ್ದೇ ಕೊರತೆ
ಹರೀಶ್ ಪಾಲ್, ಪ್ರವಾಸಿಗ ಬೆಂಗಳೂರು
ಗುಡಿಬಂಡೆ ಅಮಾನಿ ಭೈರಸಾಗರ ಕೆರೆ ಹಾಗೂ ಇತರೆ ಪ್ರವಾಸಿ ತಾಣಗಳನ್ನು ನೋಡಲು ಬರುವ ಪ್ರವಾಸಿಗರಿಗೆ ದೊಡ್ಡ ಸಮಸ್ಯೆ ಎಂದರೆ ಮೂಲ ಸೌಕರ್ಯ. ನೀರಿದ್ದರೆ ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಆದರೆ ಇಲ್ಲಿಗೆ ಬರುವ ಜನರಿಗೆ ಒಂದಷ್ಟು ಕಾಲ ಕಳೆಯಲು ನೆರಳು, ಮಕ್ಕಳು ಆಟವಾಡಲು ಸಣ್ಣದೊಂದು ಪಾರ್ಕ್, ಶೌಚಾಲಯ.. ಹೀಗೆ ಕೆಲ ಮೂಲಭೂತ ಸೌಕರ್ಯಗಳು ಇಲ್ಲ. ಈ ಸೌಲಭ್ಯಗಳನ್ನು ಒದಗಿಸಿದರೆ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ದುಪ್ಪಟ್ಟಾಗುತ್ತದೆ. ಜತೆಗೆ ಸ್ಥಳೀಯ ಆಡಳಿತಕ್ಕೂ ಕೂಡ ಆದಾಯದ ಮೂಲವಾಗುತ್ತದೆ.