ಗೃಹ ಸಚಿವ ಅರಗ ಜ್ಞಾನೇಂದ್ರ ವಾಗ್ದಾಳಿ
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 5 ವರ್ಷದ ಆಡಳಿತದಲ್ಲಿ ಜನ ಸಾಕಷ್ಟು ಅನುಭವಿಸಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ವಾಗ್ದಾಳಿ ನಡೆಸಿದರು.
ಗೃಹ ಸಚಿವರಾಗಿ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಅವರು ಮಾತನಾಡಿದರು.
ಜಾತಿ ಜಾತಿಗಳನ್ನ ಒಡೆಯೊ ಕೆಲಸವನ್ನು ಸಿದ್ದರಾಮಯ್ಯ ಮಾಡಿದ್ದಾರೆ. ಅಲ್ಪಸಂಖ್ಯಾತರನ್ನು ಬಹುಸಂಖ್ಯಾತರ ವಿರುದ್ದ ಎತ್ತಿ ಕಟ್ಟಿದ್ದು ಸಿದ್ದರಾಮಯ್ಯ.ಟಿಪ್ಪು ಜಯಂತಿ ಮಾಡಿದ್ದು ಸಿದ್ದರಾಮಯ್ಯ. 30 ಕ್ಕೂ ಹೆಚ್ಚು ಕೊಲೆಗಳು ಅವರ ಕಾಲದಲ್ಲೇ ಆಗಿದ್ದವು ಎಂದು ಹೇಳಿದರು.
ಭ್ರಷ್ಟಾಚಾರ ಇದ್ದಿದ್ದೇ ಅವರ ಕಾಲದಲ್ಲಿ. ಮತ್ತೆ ಕಾಂಗ್ರೆಸ್ ಏನೋ ಮಾಡ್ತಾರೆ ಅಂತ ಜನರಿಗೆ ಭ್ರಮೆ ಇಲ್ಲ. ಬಿಜೆಪಿ ಸರ್ಕಾರದಲ್ಲಿ ಸಣ್ಣ ಪುಟ್ಟ ಲೋಪ ಇರಬಹುದು. ಆದರೆ ಕಾಂಗ್ರೆಸ್ ಗಿಂತ ಬಿಜೆಪಿ ಉತ್ತಮ ಅಂತ ಜನರಿಗೆ ಅನ್ನಿಸಿದೆ ಮತ್ತೆ ನಮ್ಮ ಪಕ್ಷ ಅಧಿಕಾರಕ್ಕೆ ಬರಲಿದೆ.
ಅರಗ ಜ್ಞಾನೇಂದ್ರ
ಎಫ್ ಎಸ್ ಎಲ್ ಲ್ಯಾಬ್ ವಿಶ್ವ ವಿದ್ಯಾಲಯ ಮಾಡಬೇಕೆಂಬ ಉದ್ದೇಶವಿದೆ, ಇದಕ್ಕೆ ಕೇಂದ್ರ ಗೃಹ ಇಲಾಖೆ ಒಪ್ಪಿಗೆ ನೀಡಿದ್ದು ಶೀಘ್ರದಲ್ಲೇ ವಿಶ್ವವಿದ್ಯಾಲಯ ಮಾಡುತ್ತೇವೆ ಎಂದು ಸಚಿವರು ಮಾಹಿತು ನೀಡಿದರು.
ಅಪರಾಧ ಪ್ರಕರಣದಲ್ಲಿ ಶಿಕ್ಷೆ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕಿದೆ,ಮಾದಕ ವಸ್ತುಗಳಿಗೆ ನಿಯಂತ್ರಣ ಆಗಬೇಕು.ಇಂತಹ ಪ್ರಕರಣದಲ್ಲಿ ಏನಾದರೂ ಪ್ರಬಲವಾಗಿ ಮಾಡಬೇಕು ಎಂಬ ಆಸೆ ಇದೆ. ಸಚಿವನಾಗಿ ಒಂದು ವರ್ಷ ಆಗಿದೆ. ನನ್ನ ಕೆಲಸ ನನಗೆ ತೃಪ್ತಿ ತಂದಿದೆ ಎಂದು ಇದೇ ವೇಳೆ ಆರಗ ಜ್ಞಾನೇಂದ್ರ ತಿಳಿಸಿದರು.
ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ, ನಟ ಪುನೀತ್ ರಾಜ್ ಕುಮಾರ್ ನಿಧನರಾದಾಗ ಅತ್ಯಂತ ಯಶಸ್ವಿಯಾಗಿ ಅಂತ್ಯ ಸಂಸ್ಕಾರ ಕಾರ್ಯ ಮಾಡಿದ್ದೇವೆ. ಪುನೀತ್ ಅಂತ್ಯ ಸಂಸ್ಕಾರದಲ್ಲಿ ನಾನು ಸಿಎಂ ಇಬ್ಬರು ಸ್ಥಳದಲ್ಲೇ ಇದ್ದು ಕೆಲಸ ಮಾಡಿದ್ದೇವೆ ಎಂದು ತಿಳಿಸಿದರು.
ಒಂದು ವರ್ಷ ಅನೇಕ ಸವಾಲುಗಳು ಇದ್ದವು. ಹಿಜಾಬ್ ಪ್ರಕರಣ ನನಗೆ ಹೆಚ್ಚು ಚಾಲೆಂಜ್ ಆಗಿತ್ತು. ಹಗಲು ರಾತ್ರಿ ಈ ಬಗ್ಗೆ ಕೆಲಸ ಮಾಡಿದ್ದೇವೆ. ಮುಖ್ಯಮಂತ್ರಿ ಸೇರಿದಂತೆ ಎಲ್ಲರ ಸಹಕಾರದಿಂದ ಎಲ್ಲವನ್ನು ಯಶಸ್ವಿಯಾಗಿ ನಿಭಾಯಿಸಿದ್ದೇನೆ. ಸಿಹಿಯೂ ಇದೆ- ಕಹಿಯು ಇದೆ. ಅಧಿಕಾರಗಳ ವಿಶ್ವಾಸ ತೆಗೆದುಕೊಂಡು ಕೆಲಸ ಮಾಡಿದ್ದೇನೆ. ಮತಾಂತರ ನಿಷೇಧ ಕಾಯ್ದೆ, ಆನ್ ಲೈನ್ ಗೇಮ್ ನಿಷೇಧ ಕಾಯ್ದೆ ಜಾರಿ ತಂದೆವು ಎಂದು ಗೃಹ ಸಚಿವರು ಹೇಳಿದರು.
ಜೈಲು ಅಂದರೆ ಸೆರಮನೆ ಆಗಿರದೆ ಕೆಲವರಿಗೆ ಅರಮನೆ ಆಗಿತ್ತು. ಇದಕ್ಕಾಗಿ ಬಿಲ್ ತಂದು ಕ್ರಮ ತೆಗೆದುಕೊಂಡಿದ್ದೇವೆ. ಅಕ್ರಮ ಮಾಡೋರಿಗೆ ಬಿಗಿಯಾದ ಕಾಯ್ದೆ ಜಾರಿ ಮಾಡಿದ್ದೇವೆ ಎಂದು ಸಚಿವರು ಹೇಳಿದರು.
ಇಲಾಖೆಯಲ್ಲಿ ಮತ್ತಷ್ಟು ಅಭಿವೃದ್ಧಿ ಕೆಲಸ ಆಗಬೇಕು. ಇಲಾಖೆ ಜನ ಸ್ನೇಹಿಯಾಗಬೇಕು. ಇಂಟಲಿಜೆನ್ಸ್ ಗೆ ವಿಶೇಷ ನೇಮಕಾತಿ ಮಾಡಿಕೊಳ್ಳುತ್ತಿದ್ದೇವೆ ಎಂದು ಆರಗ ತಿಳಿಸಿದರು.