• About
  • Advertise
  • Careers
  • Contact
Monday, May 19, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home EDITORS'S PICKS

ನೆಹರು ಎಂದರೇ

cknewsnow desk by cknewsnow desk
August 15, 2022
in EDITORS'S PICKS, GUEST COLUMN
Reading Time: 2 mins read
0
ನೆಹರು ಎಂದರೇ
976
VIEWS
FacebookTwitterWhatsuplinkedinEmail

ದೂರಗಾಮಿತ್ವ, ಮೃದು ಮನಸ್ಸು, ಕಠಿಣ ನಿಲುವಿನ ವ್ಯಕ್ತಿತ್ವ

ಸ್ವಾತಂತ್ರ್ಯದ ಅಮೃತ ಮಹೋತ್ಸವ ಜಾಹೀರಾತಿನಲ್ಲಿ ಆಧುನಿಕ ಭಾರತದ ಪ್ರಾತಃಸ್ಮರಣೀಯರಲ್ಲೊಬ್ಬರು ಪಂಡಿತ್‌ ನೆಹರು ಅವರ ಪಟ ಕೈಬಿಟ್ಟ ಅಪಕ್ವ ನಡವಳಕೆಗೆ ಸಾಕ್ಷಿಯಾಗಿ ನಡೆಯುತ್ತಿರುವ ಚರ್ಚೆಯ ನಡುವಿನ ಹೊಸ ಹೊಳಹು ಈ ಲೇಖನ . ಕಥೆಗಾರ ಕೇಶವ ಮಳಗಿ ಅವರ ಈ ಬರಹ ಜವಾಹರಲಾಲರ ದರ್ಶನವನ್ನೇ ಒಳಗೊಂಡಿದೆ.

by Keshava Malagi

ಇತಿಹಾಸವನ್ನು ಒಬ್ಬ ಮನುಷ್ಯನಲ್ಲ, ಸಮುದಾಯಗಳು ಸೃಷ್ಟಿಸುತ್ತವೆ. ಒಂದು ಕಾಲಘಟ್ಟದಲ್ಲಿ ವ್ಯಕ್ತಿಗಳು ನಿಮಿತ್ತ ಮಾತ್ರವಾಗಿರಬಹುದು. ಹೀಗಾಗಿ, ಆತ ಅಥವಾ ಆಕೆಯ ಹೆಸರು ಉಲ್ಲೇಖಗೊಳ್ಳುವುದು ಕೇವಲ ಪ್ರಾಸಂಗಿಕವಷ್ಟೇ.

ಹೀಗಾಗಿಯೇ, ಇತಿಹಾಸವನ್ನು ಪ್ರಕ್ಷೇಪಗೊಳಿಸುವುದು ಸಾಧ್ಯವಿಲ್ಲ. ಇದನ್ನು ಬಲ್ಲವರು ತಥಾಕಥಿತ ಪುರಾಣಗಳನ್ನು ಸೃಷ್ಟಿಸುತ್ತಾರೆ. ವಿಶ್ವವನ್ನೇ ಗೆಲ್ಲಲು ಹೊರಟ ಸಿಕಂದರನ ಕೈಗಳು ಮನುಷ್ಯ ಬದುಕಿನ ವೈಫಲ್ಯವನ್ನು ಸೂಚಿಸುವಂತೆ ಗೋರಿಯಿಂದ ಹೊರ ಚಾಚಿದ್ದವು.‌ ಸೋದರನ ಮೇಲೆ ಸಾಧಿಸಿದ ವಿಜಯವು ಕುಕ್ಕುಟೇಶ್ವರನಿಗೆ ವೈರಾಗ್ಯವನ್ನೇ ತಂದಿತು. ತನ್ನ ದಿಗ್ವಿಜಯವನ್ನು ಲೋಕಕೆ ಸಾರಲು ಬಂಡೆಯ ತುದಿಗೆ ತೆರಳಿದ ಚಕ್ರವರ್ತಿ ಆ ಮೊದಲೇ ಆ ಸ್ಥಳವು ಬೇರೆ ಹೆಸರುಗಳಿಂದ ಕಿಕ್ಕಿರಿದಿರುವುದು ಕಂಡಿತು.

ತಿಂದ ಜೋಳದ ಋಣಕ್ಕಾಗಿ ನಿಂತ ನೆಲಕೆ ದ್ರೋಹ ಬಗೆಯುತಿರುವ ಮುಖವಾಡಿಗರೆ, ನಾಡಿನ ಎಪ್ಪತ್ತೈದರ ಸಂಭ್ರಮವೆಂದಾಗ ಒಂದಿಡೀ ವರ್ಷ ಸಾರ್ವಜನಿಕ ಚರ್ಚೆ ನಡೆಸಿ, ಎಲ್ಲ ವಿರೋಧಪಕ್ಷಗಳೂ ಒಪ್ಪಿಕೊಳ್ಳುವ ‘ರಾಷ್ಟ್ರೀಯ ಕರಡ’ನ್ನು ಪ್ರಕಟಿಸಬಹುದಿತ್ತು. ಈ ದೇಶ ಎದುರಿಸುತ್ತಿರುವ ಬಡತನ, ನಿರುದ್ಯೋಗ, ಮಕ್ಕಳ ಅಕಾಲಿಕ ಸಾವು, ಅಪೌಷ್ಟಿಕತೆ, ಗ್ರಾಮೀಣ ಭಾಗದಲ್ಲಿನ ಲಿಂಗ ತಾರತಮ್ಯ, ಕ್ಷಯಿಸುತ್ತಿರುವ ಕೃಷಿ ಕ್ಷೇತ್ರ, ಸಾರ್ವಜನಿಕ ಶಿಕ್ಷಣ, ಆರೋಗ್ಯ, ಉನ್ನತ ಶಿಕ್ಷಣದ ಸಬಲೀಕರಣ ಹೀಗೆ ರಾಜಕಾರಣಿಗಳಿಗೆ ಅಪಥ್ಯವಾದ ವಿಷಯಗಳು ಅದರಲ್ಲಿ ಸೇರಿ, ಮುಂದಿನ ಇಪ್ಪತ್ತೈದು ವರ್ಷಗಳಲ್ಲಿ ಎಲ್ಲರೂ ಸೇರಿ ಇವನ್ನು ಹೇಗೆ ನಿವಾರಿಸುತ್ತೇವೆ, ಎಂದು ಸರ್ವ ರಾಜಕೀಯ ಪಕ್ಷಗಳೂ ಸಾರ್ವಜನಿಕ ವಾಗ್ದಾನವನ್ನು ನೀಡಬಹುದಾಗಿತ್ತು.

ಆದರೆ, ಈ ದೇಶದ ನಿಜವಾದ ದುರಂತ ಮತ್ತು ವಿಪತ್ತು ಎಂದರೆ ಇಲ್ಲಿನ ರಾಜಕೀಯ ಪಕ್ಷಗಳು ನಾಡನ್ನು ತಮ್ಮ ಖಾಸಗಿ ಆಸ್ತಿ ಎಂದು ನಂಬಿರುವುದು. ವಣಿಜ ಒಡ್ಡೋಲಗವನ್ನು ರಂಜಿಸಲು ಶಿಖಂಡಿ ನೃತ್ಯವನ್ನು ಮಾಡುವುದು. ಈ ಕಾರಣವಾಗಿಯೇ, ‘ಪಕ್ಷಗಳನ್ನು ಈ ದೇಶದ ಜನ ಆಯ್ಕೆ ಮಾಡುತ್ತಾರೆ, ದೇಶದ ಸಂವಿಧಾನದ ಕಟ್ಟಳೆಯಂತೆ ಜನರೇ ಸಾರ್ವಭೌಮರು’, ಎನ್ನುವುದು ಶಬ್ದಕೋಶದ ಸವಕಲು ಪದವಾಗಿದೆ. ದೌರ್ಭಾಗ್ಯವಶಾತ್ ಜನ ಮೂರ್ಖರು, ಅಜ್ಞಾನಿಗಳು, ಜಾತಿವಾದಿಗಳು, ನೈತಿಕವಾಗಿ ಭ್ರಷ್ಟರೂ ಆಗಿದ್ದಾರೆ. ಹೀಗಾಗಿ, ರಾಜಕೀಯ ಪಕ್ಷಗಳಿಗೆ ಒಡೆದು ಆಳುವುದು ನೀರು ಕುಡಿದಷ್ಟು ಸಲೀಸಾಗಿದೆ. ವಣಿಜ ಸಂಕುಲದ ಕೈಯಲ್ಲಿ ಸಿಕ್ಕಿ ಹಾಕಿಕೊಂಡಿರುವ ಸೂತ್ರವು ನೈಜ ಕಳಕಳಿಯ ಮುತ್ಸದ್ದಿಯ ಕೈ ಸೇರುವವರೆಗೂ ದಲ್ಲಾಳಿಗಳದ್ದೇ ಕಾರುಬಾರು.

ಆದರೆ, ಗೆದ್ದು ಚಕ್ರದಲ್ಲಿ ಮೇಲಕ್ಕೇರಿದವರು ಕೆಳಗಿಳಿಯುವುದು ನಿಸರ್ಗ ನಿಯಮ. ಒಂದು ದೇಶದ ಚರಿತ್ರೆಯನ್ನು ಒಂದು ಹೆಸರು, ಒಂದು ಚಿತ್ರವನ್ನು ಅಳಿಸುವುದರಿಂದ ಕಟ್ಟಲಾಗುವುದಿಲ್ಲ. ದೇಶವನ್ನು ತಮಗಿಂತ ಎತ್ತರದ ಸ್ಥಾನದಲ್ಲಿಟ್ಟು ನಾಡು ಕಟ್ಟಿದವರಲ್ಲಿ ನೆಹರು ಕೂಡ ಒಬ್ಬರು.

ಈ ಕೆಳಗಿನ ಲೇಖನ ಇವತ್ತಿನ ಸ್ಥಿತಿಗೆ ಕನ್ನಡಿಯಂತಿದೆ.

☘️

ತುಂಬಿ ತುಳುಕುವ ಉತ್ಸಾಹ. ವಿದೇಶದಲ್ಲಿ ಪಡೆದ ಪಾಶ್ಚಾತ್ಯ ಶಿಕ್ಷಣದಿಂದ ರೂಢಿಸಿಕೊಂಡ ಶಿಷ್ಟತೆ, ಮುಕ್ತತೆ ಮತ್ತು ಹೊಸ ಆಲೋಚನಾ ಕ್ರಮ. ಉನ್ನತ ಅಧ್ಯಯನದಲ್ಲಿ ವಿಜ್ಞಾನ ಮತ್ತು ಇತಿಹಾಸವನ್ನು ಓದಿದ್ದರೂ ರಾಜಕೀಯ, ಅರ್ಥಶಾಸ್ತ್ರಗಳಲ್ಲಿ ಅಪಾರ ಆಸಕ್ತಿ. 1912ರಲ್ಲಿ ಭಾರತಕ್ಕೆ ಮರಳಿ ಬರುವ ಮೊದಲು ಲಂಡನ್ನಿನ ಇನ್ನರ್ ಟೆಂಪಲ್‌ನಲ್ಲಿ ಕಾನೂನುಶಾಸ್ತ್ರ ಅಧ್ಯಯನ ಮಾಡಿ ತಮ್ಮ ಊರಿನಲ್ಲಿಯೇ ಕೈಗೊಂಡ, ಆ ಕಾಲದ ಸಮಾಜದಲ್ಲಿ ಅತ್ಯಂತ ಗೌರವಾನ್ವಿತವೆಂದೇ ಗುರುತಿಸಲಾಗುತ್ತಿದ್ದ ನ್ಯಾಯವಾದಿ ವೃತ್ತಿ. ಬದುಕಿಗೆ ಅತ್ಯವಶ್ಯಕವಾದ ಅಂತಃಕರಣ, ಆದರ್ಶ ಮತ್ತು ಮೌಲ್ಯಗಳನ್ನು ರೂಪಿಸಿದ ಕೌಟುಂಬಿಕ ಪರಿಸರದಿಂದಾಗಿ ತನಗಾಗಿ ಮಾತ್ರವಲ್ಲದೆ, ಸಮಾಜಕ್ಕಾಗಿ ಬದುಕಬೇಕೆಂಬ ಉನ್ನತ ಧ್ಯೇಯ. ಆ ಕಾರಣವಾಗಿಯೇ, ನ್ಯಾಯವಾದಿ ಮತ್ತು ರಾಜಕಾರಣಿಯಾಗಿದ್ದ ತಂದೆಯಂತೆಯೇ ತಾವೂ ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಗಂಭೀರವಾದ ಪಾತ್ರವನ್ನು ನಿರ್ವಹಿಸಬೇಕೆಂಬ ಮಹದಾಸೆ. ಆ ನಿಟ್ಟಿನಲ್ಲಿಯೇ ಸಾಗಿದ್ದರೂ ಒಳಗೆ ಮಾತ್ರ, ಏನೊಂದು ಸ್ಪಷ್ಟತೆಯಿರದ ಬೇಗುದಿ. ಹೊರಗಾದರೂ ಪರಿಸ್ಥಿತಿ ಭಿನ್ನವಾಗಿರಲಿಲ್ಲ. ದೇಶ ಕುಲುಮೆಯ ಬೆಂಕಿಯಂತೆ ಒಳಗೇ ಉರಿಯುತ್ತಿತ್ತು.

ಮಾಗುತ್ತಿದ್ದ ಯೌವ್ವನದ ಇಪ್ಪತ್ತೇಳರ ಜವಹರಲಾಲ್ ನೆಹರು, ಮೋಹನದಾಸ ಕರಮಚಂದ ಗಾಂಧಿಯವರನ್ನು ಮೊದಲ ಸಲ ಭೇಟಿಯಾದಾಗ ಇದ್ದುದು ಹೀಗೆಯೆ. ಜವಹರಲಾಲ್ ಆ ವರ್ಷದ ರಂಗಪಂಚಮಿಯಲ್ಲಷ್ಟೇ ಕಮಲ ಕೌಲ್‌ರನ್ನು ಮದುವೆಯಾಗಿದ್ದರು. ಇದೀಗ, ಕೊರೆಯುವ ಮಾಗಿಯ ಮಂಜಿನಲ್ಲಿ ದೇಶದ ರಾಜಕಾರಣದ ಕಾವು ಹೆಚ್ಚಿಸಲೆಂಬಂತೆ ರಾಷ್ಟ್ರೀಯ ಕಾಂಗ್ರೆಸ್‌ನ ಮೂವತ್ತೊಂದನೆಯ ಅಧಿವೇಶನವನ್ನು ಲಖನೌದಲ್ಲಿ ನಿಗದಿಪಡಿಸಲಾಗಿತ್ತು (1916ರಲ್ಲಿ, ಡಿಸೆಂಬರ್ 26ರಿಂದ 30ರವರೆಗೆ). ನಾಲ್ಕುದಿನಗಳ ಕಾಲ ನಡೆದ ಆ ರಾಜಕೀಯ ಸಭೆ, ಇಪ್ಪತ್ತೇಳರ ಜವಹರಲಾಲ್ ಮತ್ತು ನಲ್ವತ್ತೇಳರ ಮೋಹನದಾಸರ ಬದುಕಿನಲ್ಲಿ ಮಹತ್ತರ ಬದಲಾವಣೆ ತಂದಿತು. ಇಬ್ಬರ ನಡುವೆ ಇಪ್ಪತ್ತು ವರ್ಷಗಳ ಅಂತರವಿತ್ತು. ಆದರೆ, ವಯಸ್ಸು, ಸೈದ್ಧಾಂತಿಕ ಭಿನ್ನತೆ, ನಂಬಿಕೆಗಳ ಹೊರತಾಗಿಯೂ, ಅಲ್ಲಿ ಬೆಸೆದ ಹೆಸರಿಸಲಾಗದ ಈ ಹೊಸ ಸಂಬಂಧ ಮುಂದೆ ಮೂವತ್ತೆರಡು ವರ್ಷಗಳ ಕಾಲ ಗಾಂಧಿ ಕೊನೆಯುಸಿರೆಳೆಯುವವರೆಗೆ ಅಬಾಧಿತವಾಗಿ ಮುಂದುವರೆಯಿತು.

ಈ ಭೇಟಿಯ ಕುರಿತು ಜವಹರಲಾಲ್ ತಮ್ಮ ಒಂದು ಆತ್ಮಕಥೆಯಲ್ಲಿ (ಸ್ವಾತಂತ್ರ್ಯದೆಡೆಗೆ) ನೆನಪಿಸಿಕೊಳ್ಳುವುದು ಹೀಗೆ:

“ಗಾಂಧಿಯವರೊಡನೆ ನನ್ನ ಮೊದಲ ಭೇಟಿಯಾದುದು ಕ್ರಿಸ್‌ಮಸ್ ಸಮಯದಲ್ಲಿ ನಡೆದ 1916ರ ಲಖನೌ ಕಾಂಗ್ರೆಸ್ ಅಧಿವೇಶದಲ್ಲಿ. ದಕ್ಷಿಣ ಆಫ್ರಿಕಾದಲ್ಲಿ ಸಾಹಸಿಗನಂತೆ ಅವರು ಸಂಘಟಿಸಿದ್ದ ಹೋರಾಟದ ಕುರಿತು ನಾವೆಲ್ಲ ತುಂಬ ಮೆಚ್ಚಿಕೊಂಡಿದ್ದೆವು. ಆದರೆ ಅವರು ಮಾತ್ರ ಎಲ್ಲರಿಂದ ಅಂತರ ಕಾಯ್ದುಕೊಂಡು, ನಮ್ಮಂಥ ಯುವಕರಿಗೆ ಭಿನ್ನವಾಗಿ, ರಾಜಕೀಯದಿಂದ ದೂರವಿರುವ ವ್ಯಕ್ತಿಯಂತೆ ಕಂಡಿದ್ದರು. ಕಾಂಗ್ರೆಸ್ಸಿನ ಅಥವಾ ಯಾವುದೇ ರಾಷ್ಟ್ರೀಯ ವಿಷಯಗಳಲ್ಲಿ ಭಾಗಿಯಾಗಲು ಅದೇಕೊ ನಿರಾಕರಿಸಿದ್ದರು. ದಕ್ಷಿಣ ಆಫ್ರಿಕಾದಲ್ಲಿ ಭಾರತೀಯರ ಸ್ಥಿತಿಗತಿಗೆ ಮಾತ್ರ ತಮ್ಮನ್ನು ಸಿಮೀತಗೊಳಿಸಿಕೊಂಡಿದ್ದರು. ಆದರೆ ಬಹುಬೇಗ ಚಂಪಾರಣದ ಭೂಮಾಲಿಕರ ವಿರುದ್ಧದ ಗೇಣಿದಾರರ ಪರ ಅವರು ನಿಂತಾಗ ನಮ್ಮಲ್ಲಿ ಹುರುಪು ತುಂಬಿಕೊಂಡಿತು. ಭಾರತದ ನೆಲದಲ್ಲಿ ತಮ್ಮ ವಿಧಾನಗಳನ್ನು ಬಳಸಲು ಸಜ್ಜುಗೊಳಿಸಿಕೊಳ್ಳುತ್ತಿರುವಂತೆ ಅವರು ಕಾಣುತ್ತಿದ್ದರು. ಆ ವಿಧಾನಗಳು ಪರಿಣಾಮಕಾರಿಯಾಗಿಯೂ ಹೊರ ಹೊಮ್ಮಿದವು”.

*

ನೆಹರು ಮತ್ತು ಗಾಂಧಿ / courtesy: Wikipedia

ಗಾಂಧೀಜಿಯವರದು ಆರ್ಷೇಯ ದೃಷ್ಟಿಕೋನ. ನೆಹರು ಅವರದು ಆಧುನಿಕ. ಗಾಂಧಿ ವೇದ, ಉಪನಿಷತ್ತು, ಗೀತೆಯಿಂದ ತಮ್ಮ ಚೈತನ್ಯವನ್ನು ಪಡೆದರೆ, ನೆಹರು ಹೊಸ ಸಿದ್ಧಾಂತಗಳು, ಯುರೋಪಿನ ಪ್ರಜಾಸತ್ತೆ, ಸಮಾಜವಾದ, ಮಾರ್ಕ್ಸ್‌ವಾದ ಹೊಸ ಆರ್ಥಿಕ ಪ್ರಸ್ತಾವನೆಗಳಿಂದ ಪ್ರಭಾವಿತಗೊಂಡವರು.

ಗಾಂಧಿ ತಮ್ಮ ನಂಬಿಕೆಗೆ ಅನುಗುಣವಾಗಿಯೇ ಹಿಂದೂ ಧರ್ಮದ ಮೂಲಕವೇ ಕ್ರಿಶ್ಚಿಯನ್, ಇಸ್ಲಾಂ ಮತ್ತಿತರ ಧರ್ಮಗಳನ್ನು ಪ್ರೀತಿಸಬಲ್ಲೆ. ಹಿಂದೂ ಧರ್ಮವನ್ನು ನನ್ನಿಂದ ಕಸಿದರೆ ನನ್ನಲ್ಲೇನೂ ಉಳಿಯಲಾರದು ಎಂದು ಹೇಳಬಲ್ಲರು. ಅಸ್ಪೃಶ್ಯತೆಯನ್ನು ಒಳಗೊಂಡು ಎಲ್ಲ ಕೆಡುಕುಗಳಿಗೂ ಈ ಸಿದ್ಧಾಂತದಲ್ಲಿ ಉತ್ತರವಿದೆ ಎಂದು ಅಚಲ ವಿಶ್ವಾಸ ಹೊಂದಬಲ್ಲರು.

ಆದರೆ ನೆಹರು, ದೇಶವನ್ನು ವೈಜ್ಞಾನಿಕ ಮನೋಭಾವದ ತಳಹದಿಯಲ್ಲಿ ಕಟ್ಟಬೇಕು. ಆಧುನಿಕ ತಂತ್ರಜ್ಞಾನ, ಸೌಲಭ್ಯಗಳ ಮೂಲಕ ಆರ್ಥಿಕ ಪ್ರಗತಿ ಸಾಧಿಸಿದರೆ ಕೆಲವು ಸಮಸ್ಯೆಗಳನ್ನು ಬಗೆಹರಿಸಬಹುದು; ರಾಜಕೀಯ ಸಿದ್ಧಾಂತವು ಕುಲ ಮತ್ತು ಮತಗಳಿಂದ ನಿರಪೇಕ್ಷಿತವಾಗಿರ ಬೇಕಾಗಿರುವುದು ಅಗತ್ಯವೆಂದು ನಂಬಿದ್ದರು. ಆ ಕಾರಣವಾಗಿಯೇ ಗಾಂಧಿ, ಚರಕ-ಖಾದಿ-ಗ್ರಾಮೋದ್ಯೋಗ-ಸ್ವರಾಜ್ಯ- ಹರಿಜನದಂತಹ ವಿಷಯಗಳನ್ನು ಪ್ರಸ್ತಾಪಿಸಿದಾಗ, ಅವನ್ನು ಸಂದೇಹದಿಂದ ನೋಡುತ್ತಲೇ ವಿಜ್ಞಾನವನ್ನು ಗ್ರಾಮದೊಂದಿಗೆ ಹೇಗೆ ಸಮೀಕರಿಸಬಹುದು, ಗ್ರಾಮಗಳು ಯಾವ ರೀತಿಯಲ್ಲಿ ನಗರಗಳಿಂದ ಪ್ರಭಾವಗೊಳ್ಳಬಹುದು, ಧರ್ಮನಿರಪೇಕ್ಷತೆ (ಕುಲಮತಗಳ ಪ್ರಭಾವಗಳಿಂದ ತಟಸ್ಥವಾಗಿರುವುದು), ಲೋಕನ್ಯಾಯಪರತೆಯನ್ನು ಸಾಧಿಸುವ ಬಗೆ ಯಾವುದು ಎಂದು ಯೋಚಿಸಿದರು. ನೆಹರು ಕೋಪದಿಂದ, ‘ನಾನು ನಿಮ್ಮಂತೆ ಧಾರ್ಮಿಕ ಮನಸ್ಥಿತಿಯವನಲ್ಲ’, ಎಂದೊಮ್ಮೆ ಗಾಂಧಿಗೆ ಬರೆದುದುಂಟು.

ವೈಯಕ್ತಿಕ ನೆಲೆಯಲ್ಲಿ ನೆಹರು ಅವರನ್ನು ತಕ್ಷಣದ ಕಾಂಗ್ರೆಸ್ ಸಮಸ್ಯೆಗಳು, ಅಲ್ಲಿನ ಒಳಸುಳಿಗಳು, ಅದಕ್ಷತೆ, ಸ್ವಜನ ಪಕ್ಷಪಾತ, ಆಧುನಿಕ ಮನೋಭಾವದ ಕೊರತೆಯಂಥ ಜ್ವಲಂತ ಸಮಸ್ಯೆಗಳು ತೀವ್ರವಾಗಿ ಕಾಡುತ್ತಿದ್ದವು. ಆದರೆ ಗಾಂಧೀಜಿಗೆ ಇವೇ ವಿಷಯಗಳು ವಿಚಲಿತಗೊಳಿಸಿದರೂ ನೋಡುವ ಬಗೆ ಮಾತ್ರ ಬೇರೆಯಾಗಿದ್ದವು. ದೊಡ್ಡ ಗುರಿಯನ್ನು ಸಾಧಿಸಲು ಸಂಸ್ಥೆ ಉಳಿಯುವುದು ಅಗತ್ಯ ಮತ್ತು ಅದಕ್ಕಾಗಿ ಎಲ್ಲರನ್ನೂ ಒಳಗೊಳ್ಳುವುದು ಅನಿವಾರ್ಯವೆಂಬುದು ಗಾಂಧಿ ಕಂಡುಕೊಂಡಿದ್ದರು.

ಈ ಒಳಗೊಳ್ಳುವಿಕೆಯಲ್ಲಿ ಜವಹರಲಾಲ್‌ರಂತೆಯೇ, ಸಿ. ರಾಜಗೋಪಾಲಚಾರಿ, ವಲ್ಲಭಭಾಯಿ ಪಟೇಲ್, ಬಾಬು ರಾಜೇಂದ್ರಪ್ರಸಾದ, ಸರೊಜಿನಿ ನಾಯಿಡುರಂಥ ಅನೇಕ ನಾಯಕರೂ, ಹೆಸರಿಲ್ಲದ ಅಸಂಖ್ಯ ಕಾರ್ಯಕರ್ತರು ಸೇರಿರಬೇಕು ಎಂಬುದು ಅವರ ನಿಲುವಾಗಿತ್ತು. ಹಾಗೆಂದೇ, ಏಕಕಾಲಕ್ಕೆ ತಮ್ಮ ರಾಜಕೀಯ ವಾರಸುದಾರನನ್ನು ಮತ್ತು ತಮ್ಮ ಅನುಯಾಯಿಗಳಾದ ಇನ್ನುಳಿದ ನಾಯಕರನ್ನು ಒಟ್ಟಿಗೆ ಸೇರಿಸುವಂಥ ಒಳಸುಳಿಗಳನ್ನು ತಾವೇ ಸೃಷ್ಟಿಸುತ್ತಿದ್ದರು. ಉಭಯ ಪಕ್ಷಗಳೂ ಎಲ್ಲವನ್ನೂ ಪಡೆದುಕೊಂಡಿದ್ದೇವೆ ಎಂಬ ಭಾವದಲ್ಲಿ ಬಿಟ್ಟುಕೊಡುವ ತಂತ್ರಗಳನ್ನೂ ಸೂಚಿಸುತ್ತಿದ್ದರು. ಉದ್ದೇಶ ಮಾತ್ರ ಎಲ್ಲರೂ ಒಂದಾಗಿ ಸ್ವರಾಜ್ಯ ಸ್ಥಾಪಿಸುವುದೇ ಆಗಿತ್ತು. ಜವಹರಲಾಲ್‌ರು ಗಾಂಧೀಜಿಯ ತಂತ್ರಗಳನ್ನು ಅರಿತಿದ್ದರು. ಮಾತ್ರವಲ್ಲ, ಹಾಗೆ ಮಾಡುವುದು ಅನಿವಾರ್ಯವೆಂಬಂತೆ ಗಾಂಧಿ ಸಲಹೆಗಳನ್ನು ಸ್ವೀಕರಿಸುತ್ತಿದ್ದರು. ಇಂಥ ಅಂಶಗಳ ಸುಳಿವು ಅವರು ಬರೆದುಕೊಂಡ ಪತ್ರಗಳಲ್ಲಿಯೇ ನಮಗೆ ದೊರಕುತ್ತದೆ.

*

ಪಾಶ್ಚಾತ್ಯ ಶಿಕ್ಷಣ ಕಲಿಸಿದ ಶಿಷ್ಟಾಚಾರ, ಸೂಕ್ಷ್ಮತೆಗಳನ್ನು; ವಿಜ್ಞಾನ, ಇತಿಹಾಸ, ಅಂತಾರಾಷ್ಟ್ರೀಯ ರಾಜಕಾರಣ ಮತ್ತು ತಂತ್ರಜ್ಞಾನದಲ್ಲಿ ರೂಢಿಸಿಕೊಂಡ ಆಸಕ್ತಿಗಳನ್ನು ಕಾಲಕಾಲಕ್ಕೆ ನೆಹರು ಬರೆದ ಪತ್ರಗಳಲ್ಲಿ ಕಾಣಬಹುದು. ಈ ಅಭಿರುಚಿಯೇ ಅವರು ನಿಧಾನಕ್ಕೆ ವಿಶ್ವದ ಎಲ್ಲ ದಮನಿತರ ಪರ ನಿಲುವು ತೆಗೆದುಕೊಳ್ಳುವಲ್ಲಿ ಪ್ರೇರೇಪಿಸಿದಂತೆ ಕಾಣುತ್ತದೆ. ಸ್ವಾತಂತ್ರ್ಯದ ನಂತರ ಏಶಿಯ ಮತ್ತು ಆಫ್ರಿಕಾ ದೇಶಗಳ ನಾಯಕತ್ವ ವಹಿಸಿಕೊಳ್ಳುವಲ್ಲಿ ಕೂಡ ಈ ಆಸಕ್ತಿಗಳು ಮಹತ್ವದ ಪಾತ್ರ ವಹಿಸಿದವು. ರವೀಂದ್ರನಾಥ ಠಾಕೂರರಂತೆಯೇ, ಹಸಿವು, ಬಡತನ ಮತ್ತು ಶೋಷಣೆಗಳು ನಾಗರಿಕತೆಯೊಂದಿಗೆ ಬೆಳೆದುಬಂದ ಶಾಪವೆಂದು ನೆಹರು ಭಾವಿಸಿದ್ದರು. ಈ ಶಾಪದ ಶಮನವನ್ನು ಅಂತಾರಾಷ್ಟ್ರೀಯ ಸಮುದಾಯದೊಂದಿಗೆ ಸೇರಿ ಬಗೆಹರಿಸಬೇಕೆಂಬುದು ಅವರ ನಿಲುವಾಗಿತ್ತು.

ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಬಹುಕಾಲವನ್ನು (ಹೆಚ್ಚೂ ಕಡಿಮೆ ಒಂಬತ್ತು ವರ್ಷ) ಸೆರೆಮನೆಯಲ್ಲಿ ಕಳೆದುದರಿಂದ ತಮ್ಮ ಸಮಯವನ್ನು ಓದು-ಬರಹಗಗಳಲ್ಲಿ ತೊಡಗಿಸಿಕೊಳ್ಳಲು, ಅನೇಕ ವಿಷಯಗಳ ಕುರಿತು ಆಳವಾಗಿ ಯೋಚಿಸಲು ನೆಹರು ಅವರಿಗೆ ಸಾಧ್ಯವಾಯಿತು. ಅವರನ್ನು ಮಾರ್ಕ್ಸ್‌ವಾದಿ ಎನ್ನಲಾಗದಿದ್ದರೂ ಆ ಸಿದ್ಧಾಂತ ಆಳವಾದ ಪ್ರಭಾವವನ್ನು ಬೀರಿತು. ಸಮಾಜವನ್ನು ಸಮಗ್ರವಾಗಿ ಅರಿಯಲು ಇತಿಹಾಸ, ಆರ್ಥಿಕ ವ್ಯವಸ್ಥೆಗಳ ಕುರಿತು ಚಿಂತನೆ ನಡೆಸಿರಬೇಕು ಎಂಬುದು ಅವರ ಭಾವನೆಯಾಗಿತ್ತು. ಧಾರ್ಮಿಕ ಮನೋಭಾವವಿಲ್ಲದಿದ್ದರೂ ಭಾರತದ ಸಂಸ್ಕೃತಿ ಮತ್ತು ಪರಂಪರೆಗಳ ಕುರಿತು ಗಾಢವಾದ ನಂಬಿಕೆಯಿತ್ತು.

ಕೆಲವು ವಿದ್ವಾಂಸರು ಗುರುತಿಸಿರುವಂತೆ, ನೆಹರು ಸ್ವಯಂಸಿದ್ಧ ವ್ಯಕ್ತಿತ್ವವನ್ನು ಹೊಂದಿರಲಿಲ್ಲ. ಸಂಕೋಚ, ಹಿಂಜರಿಕೆ, ಪರರಿಗೆ ನೋಯಿಸಬಾರದು ಎನ್ನುವ ಅತಿಯಾದ ಕಾಳಜಿ ಎನ್ನುವಂತೆ ಮೇಲುನೋಟಕ್ಕೆ ಕಾಣುತ್ತಿದ್ದರೂ, ತಾವು ಹೇಳಬೇಕಾದುದನ್ನು ಅತ್ಯಂತ ಸೌಮ್ಯಧ್ವನಿಯಲ್ಲಿ ಪ್ರಸ್ತುತಪಡಿಸುವ ವಿಧಾನ ಕರಗತವಾಗಿತ್ತು. ನೆಹರು ಅತ್ಯಂತ ಸಂಕೀರ್ಣದ, ಒಡಪಿನಂಥ, ವಿವಾದಗಳಿಂದ ಕೂಡಿದ ವ್ಯಕ್ತಿತ್ವ, ಎಂದು ಕೆಲವರು ಬೆರಳು ತೋರಿಸಿದರೂ ಅವರು ಬದುಕಿದ ಯುಗಧರ್ಮವೇ ಸಂಕೀರ್ಣತೆ, ಸಂಘರ್ಷಗಳಿಂದ ತುಂಬಿತ್ತು.

ಗೆಳೆತನವನ್ನು ಬಯಸುವುದು ನೆಹರು ಅವರ ಮುಖ್ಯ ಗುಣಗಳಲ್ಲೊಂದಾಗಿತ್ತು ಎಂದು ಅಧ್ಯಯನಕಾರರು ಗುರುತಿಸುವುದುಂಟು. ಎಲ್ಲರೊಳಗೆ ಅಡಗಿರಬಹುದಾದ ಜ್ವಾಲಾಮುಖಿಯಂತಹ ಅಭಿಪ್ರಾಯಗಳನ್ನು ಮುಚ್ಚುಮರೆಯಿಲ್ಲದೆ ಹಗುರವಾಗಿ ತೆರೆದಿಡಬಲ್ಲ ಸ್ವಭಾವವನ್ನು ಅವರು ಹೊಂದಿದ್ದರು. ಉದಾಹರಣೆಗೆ, “ನಾವು ಭಾರತೀಯರಾಗಿರುವುದಕ್ಕೆ ಹೆಮ್ಮೆಪಡುವ ಅಗತ್ಯವಿಲ್ಲ, ಬದಲಿಗೆ ನಾವು ಭಾರತೀಯರಾಗಿರಲು ಬೇಕಾಗುವ ಘನತೆಯನ್ನು ಸಂಪಾದಿಸಲು, ಸಹನೆ ಮತ್ತು ಸ್ಥೈರ್ಯವನ್ನು ಬೆಳೆಸಿಕೊಳ್ಳಲು ಪ್ರಯತ್ನಿಸಬೇಕು. ಹಾಗೂ ನಮ್ಮ ಭಿನ್ನಾಭಿಪ್ರಾಯಗಳು ಎಷ್ಟೇ ಕಟುವಾಗಿದ್ದರೂ ದ್ವೇಷವಾಗಿ ಪರಿವರ್ತನೆಗೊಳ್ಳುವಂತಿರಬಾರದು”, ಎಂದು ಆ ಕಾಲಕ್ಕೆ ಅಷ್ಟೊಂದು ಪ್ರಿಯವಲ್ಲದ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸುತ್ತಿದ್ದುದನ್ನು ಇಂತಹ ಅಧ್ಯಯನಕಾರರು ದಾಖಲಿಸಿರುವುದುಂಟು.

ಹಾಗೆಂದು ಗಾಂಧಿ ಅಥವಾ ನೆಹರು ಎಲ್ಲ ಕಾಲಕ್ಕೂ ಅತ್ಯಂತ ಸಮರ್ಪಕವಾಗಿ ಮತ್ತು ಎಲ್ಲರೂ ಒಪ್ಪುವಂಥ ವಿಧಾನದಲ್ಲಿಯೇ ಚಿಂತಿಸಿ, ನಿರ್ಣಯಗಳನ್ನು ಕೈಗೊಂಡರೆ? ಎಂದರೆ, ಬಹುಶಃ ಇರಲಿಕ್ಕಿಲ್ಲವೆಂಬುದೇ ಉತ್ತರವಾಗಿರಬಹುದು. ತಾವು ಜೀವಿಸಿದ ಕಾಲಮಾನದಲ್ಲಿ, ಸನ್ನಿವೇಶಗಳ ಒತ್ತಡಕ್ಕೆ ಸಿಲುಕಿ ಅವರು ತೆಗೆದುಕೊಂಡ ನಿಲುವುಗಳು ಲೋಕಹಿತವನ್ನು ಬಯಸಿದ್ದವು. ಒಂದೊಮ್ಮೆ ಈ ಲೋಕನಾಯಕರು ತೆಗೆದುಕೊಂಡ ನಿರ್ಣಯಗಳು ದೋಷದಿಂದ ಕೂಡಿ ಅಪಕ್ವತೆಯಿಂದ ನರಳಿದ್ದರೂ ಅವುಗಳ ಹಿಂದೆ ಸಮಾಜಕ್ಕೆ ಕೆಡುಕನ್ನುಂಟು ಮಾಡಬೇಕೆಂಬ ಉದ್ದೇಶವಿರಲಿಲ್ಲ ಎಂದು ಊಹಿಸುವುದೇ ಹೆಚ್ಚು ಸರಿಯಾದೀತು.

ನೆಹರು ಅವರ ದ್ವಂದ್ವ, ವಿರೋಧಾಭಾಸದ ನಿಲುವು, ಬದಲಾಗುತ್ತಿದ್ದ ನಿರ್ಣಯಗಳು, ಕಾಲಾಂತರದಲ್ಲಿ ಕ್ಷೀಣಿಸುತ್ತ ನಡೆದ ಸಮಾಜವಾದದ ಸೆಳೆತ ಇತ್ಯಾದಿಗಳು ಅನಂತರದ ಇತಿಹಾಸದಲ್ಲಿ ವಿಮರ್ಶೆಗೆ ಒಳಗಾಗಿವೆ. ನೆಹರು ಅವರ ಭಾಷಾನೀತಿ, ರಕ್ಷಣಾನೀತಿ, ಆಂತರಿಕ ಭದ್ರತೆ, ಬೃಹತ್ ಕೈಗಾರಿಕೆಗಳ ಬಗೆಗಿನ ಒಲವುಗಳು ಹೀಗೆ ಅನೇಕ ವಿಷಯಗಳು ಕಟುಟೀಕೆಗೆ ಒಳಗಾಗಿವೆ. ಆದರೆ, ಅದಾಗ ಸ್ವಾತಂತ್ರ್ಯ ಪಡೆದ ದೇಶವೊಂದರಲ್ಲಿ ಕುಲಮತ ನಿರಪೇಕ್ಷತೆ ಹಾಗೂ ಲೋಕನ್ಯಾಯಪರತೆಯನ್ನು ಅಂತಿಮ ಮೌಲ್ಯವಾಗಿ ಪರಿಗಣಿಸಿ ನೆಹರು ಕಟ್ಟಲೆತ್ನಿಸಿದ ಸಾರ್ವಜನಿಕ ಪ್ರಜಾಸತ್ತಾತ್ಮಕ ಸಂಸ್ಥೆಗಳು ಯಾವುದೇ ಸಮಾಜಕ್ಕೂ ಮಾದರಿಯಂತಾಗುವಂತಿದ್ದವು. ಹಾಗೆ ಕಟ್ಟಿದ ಸಂಸ್ಥೆಗಳ ಮೇಲೆ ಮಾಡುವ ವಿಮರ್ಶೆಯೇ ಬೇರೆ ಮತ್ತು ಆ ಸಂಸ್ಥೆಗಳು ನಿರ್ಮಾಣಗೊಂಡ ಮೌಲ್ಯಗಳ ತಳಹದಿಯನ್ನು ಅರ್ಥಮಾಡುಕೊಳ್ಳುವ ಪ್ರಕ್ರಿಯೆಯೇ ಬೇರೆ ಎಂಬ ವಿವೇಚನೆ ತುಂಬ ಮುಖ್ಯವಾಗಿದೆ. ಸಮಾಜವಾದದ ಮುಖವಾಡದ ನೆಹರು ಒಬ್ಬ ಸ್ವಾರ್ಥಿಯಾಗಿದ್ದರು ಎಂಬಷ್ಟರ ಮಟ್ಟಿಗೆ ವೈಯಕ್ತಿಕ ನೆಲೆಯ ಕಟುಟೀಕೆಗಳೂ ದಾಖಲಾಗಿವೆ. ಆದರೆ, ಇಂಥ ಯಾವ ವಿಮರ್ಶೆಗಳೂ ಇತಿಹಾಸವನ್ನು ಅಧ್ಯಯನ ಮಾಡುವವರರ ವಸ್ತುನಿಷ್ಠತೆಯನ್ನು ಮಸುಕಾಗಿಸಲಾರವು.

  • ಮೇಲಿನ ಗುಂಪು ಚಿತ್ರದಲ್ಲಿರುವವರು:
  • ಶರತ್ ಚಂದ್ರ ಬೋಸ್, ಜಗಜೀವನರಾಮ್, ಬಾಬು ರಾಜೇಂದ್ರ ಪ್ರಸಾದ್, ವಲ್ಲಭಭಾಯಿ ಪಟೇಲ್, ಅಸಷ್ ಅಲೀ, ಜವಹರ ಲಾಲ್ ನೆಹರು ಮತ್ತು ಸೈಯದ್ ಅಲೀ ಜಾಹೀ. ಎಲ್ಲರೂ ಧರಿಸಿರುವುದು ಅಸಲಿ ಖಾದಿ ಎನ್ನುವುದನ್ನು ಗಮನಿಸಿ.
  • ಹಕ್ಕು: ಹಲ್ಟನ್, ಡಚ್ ಕಲೆಕ್ಷನ್.

ಕೇಶವ ಮಳಗಿ
  • ಕನ್ನಡದ ವರ್ತಮಾನ ಕಾಲದ ಬಹುಮುಖ್ಯ ಕಥೆಗಾರರು. ಟಾಲ್‌ಸ್ಟಾಯ್‌ ಮತ್ತು ಗಾರ್ಕಿ ಅವರಿಂದ ಪ್ರಭಾವಿತರಾದವರು. ಮುಖ್ಯವಾಗಿ ರಶ್ಯನ್‌ ಸಾಹಿತ್ಯದ ಬಗ್ಗೆ ಬಲವಾದ ಒಲವುಳ್ಳವರು. ಸಮಾಜಕ್ಕೆ ಸದಾ ಕಾಲ ಸಲ್ಲುವ ಬರಹಗಾರ. ‘ಕಡಲ ತೆರೆಗೆ ದಂಡೆ’, ‘ಮಾಗಿ ಮೂವತ್ತೈದು’, ‘ವೆನ್ನೆಲ ದೊರೆಸಾನಿ’, ‘ಹೊಳೆ ಬದಿಯ ಬೆಳಗು’ ಕಥಾ ಸಂಕಲನಗಳು ಹಾಗೂ  ‘ಕುಂಕುಮ ಭೂಮಿ’, ‘ಅಂಗಧ ಧರೆ’ ಕಾದಂಬರಿಗಳು, ‘ಬೋರಿಸ್ ಪಾಸ್ತರ್‌ನಾಕ್: ವಾಚಿಕೆ’, “ನೀಲಿ ಕಡಲ ಹಕ್ಕಿ’ (ಕತೆಗಳು), ‘ಮದನೋತ್ಸವ’ (ಕಾದಂಬರಿ), ‘ಸಂಕಥನ’ (ಫ್ರೆಂಚ್ ಸಾಹಿತ್ಯ, ಸಮಾಜ, ಸಂಸ್ಕೃತಿ, ಸಾಹಿತ್ಯ ವಿಮರ್ಶೆ), ‘ಕಡಲಾಚೆಯ ಚೆಲುವೆ’ (ಫ್ರೆಂಚ್ ಕಥೆಗಳು), ಆಲ್ಬರ್ಟ್‌ ಕಾಮು (ತರುಣ ವಾಚಿಕೆ) ಇವು ಅನುವಾದಗಳು. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿ ಹಲವು ಮಹತ್ತ್ವದ ಪ್ರಶಸ್ತಿಗಳು ಮಳಗಿ ಅವರನ್ನು ಅರಸಿ ಬಂದಿವೆ.
Tags: azadi ka amrit mahotsavcknewsnowfirst prime ministerindia independence dayjawaharlal nehruNehru
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ಜೈಲಿನಿಂದ ಹೊರಬಂದ ಕೂಡಲೇ ಮೀಡಿಯಾ ಮುಂದೆ ಕುಳಿತ ಅಲ್ಲು ಅರ್ಜುನ್‌

ಜೈಲಿನಿಂದ ಹೊರಬಂದ ಕೂಡಲೇ ಮೀಡಿಯಾ ಮುಂದೆ ಕುಳಿತ ಅಲ್ಲು ಅರ್ಜುನ್‌

by cknewsnow desk
December 14, 2024
0

ಅರೆಸ್ಟ್ ಆದ 24 ಗಂಟೆಗಳಲ್ಲೇ ಜೈಲಿನಿಂದ ರಿಲೀಸ್; ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸುತ್ತಿದೆ ಪುಷ್ಪಾ - 2

ಉದ್ಯೋಗ & ಕೌಶಲ್ಯಕ್ಕೆ ₹1.48 ಲಕ್ಷ ಕೋಟಿ; ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸಂತಸ

ಉದ್ಯೋಗ & ಕೌಶಲ್ಯಕ್ಕೆ ₹1.48 ಲಕ್ಷ ಕೋಟಿ; ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸಂತಸ

by cknewsnow desk
July 23, 2024
0

ಪ್ರಧಾನಿ ಕನಸಿನ 'ವಿಕಸಿತ ಭಾರತ' ನಿರ್ಮಾಣಕ್ಕೆ ಶಕ್ತಿ ತುಂಬುವ ಬಜೆಟ್

ಹಾಸನ ಪೆನ್‍ಡ್ರೈವ್ ಪ್ರಕರಣ; ಅಶ್ಲೀಲ ವಿಡಿಯೋ ಲೀಕ್‌ ಹಿಂದೆ DCM ಡಿಕೆಶಿ ಕೈ ಚಳಕ

ಹಾಸನ ಪೆನ್‍ಡ್ರೈವ್ ಪ್ರಕರಣ; ಅಶ್ಲೀಲ ವಿಡಿಯೋ ಲೀಕ್‌ ಹಿಂದೆ DCM ಡಿಕೆಶಿ ಕೈ ಚಳಕ

by cknewsnow desk
May 6, 2024
0

ನಾಗಮಂಗಲದ ಎಲ್.‌ಆರ್.‌ಶಿವರಾಮೇಗೌಡ ಮಧ್ಯಸ್ಥಿಕೆ; ಮೊಬೈಲ್‌ ಸಂಭಾಷಣೆ ಆಡಿಯೋ ಬಿಡುಗಡೆ

ಶ್ರೀರಾಮ ನವಮಿ ಶುಭಾಶಯಗಳು

ಶ್ರೀರಾಮ ನವಮಿ ಶುಭಾಶಯಗಳು

by cknewsnow desk
April 17, 2024
0

ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇದಸೇ | ರಘುನಾಥಾಯ ನಾಥಾಯ ಸೀತಾಯಾಃ ಪತಯೇ ನಮಃ || ಶ್ರೀ ರಾಮ ಜಾನಕೀನಾಥ ತಾಟಕಾಸುರ ಮರ್ದನ | ಇಕ್ಷ್ವಾಕುಕುಲಸಂಭೂತ ರಣಪಂಡಿತ ರಾಘವಃ...

ಪ್ರಕಾಶ್ ರೈ ಸಂಸ್ಥೆಗೆ ಸರಕಾರದ ಹಣ; ದಾರಿ ತಪ್ಪಿದ ಕಲಾವಿದ ಎಂದು ಕುಟುಕಿದ JDS

ಪ್ರಕಾಶ್ ರೈ ಸಂಸ್ಥೆಗೆ ಸರಕಾರದ ಹಣ; ದಾರಿ ತಪ್ಪಿದ ಕಲಾವಿದ ಎಂದು ಕುಟುಕಿದ JDS

by cknewsnow desk
April 16, 2024
0

ಕುಮಾರಸ್ವಾಮಿ ಅವರನ್ನು ದಾರಿ ತಪ್ಪಿದ ಮಗ ಎಂದ ನಟನಿಗೆ ತಿರುಗೇಟು ಕೊಟ್ಟ ದಳ

Next Post
ವೃದ್ಧ ದಂಪತಿಯ ಸ್ವಾತಂತ್ರ್ಯ ರಕ್ಷಿಸಿದ ಉಪ ವಿಭಾಗಾಧಿಕಾರಿ

ವೃದ್ಧ ದಂಪತಿಯ ಸ್ವಾತಂತ್ರ್ಯ ರಕ್ಷಿಸಿದ ಉಪ ವಿಭಾಗಾಧಿಕಾರಿ

Leave a Reply Cancel reply

Your email address will not be published. Required fields are marked *

Recommended

ಶುಕ್ರದೆಸೆ ಅಂದ್ರೆ ಇದೇನಾ? ಇಡೀ ಶುಕ್ರ ಗ್ರಹವೇ ನನ್ನದು ಎನ್ನುತ್ತಿದೆ ರಷ್ಯ!

ಶುಕ್ರದೆಸೆ ಅಂದ್ರೆ ಇದೇನಾ? ಇಡೀ ಶುಕ್ರ ಗ್ರಹವೇ ನನ್ನದು ಎನ್ನುತ್ತಿದೆ ರಷ್ಯ!

5 years ago
ಸ್ವಾರ್ಥಕ್ಕಾಗಿ ಚಿಕ್ಕಬಳ್ಳಾಪುರದಲ್ಲಿ ಮೆಡಿಕಲ್‌ ಕಾಲೇಜು ಸ್ಥಾಪನೆ ಮಾಡಿಲ್ಲ

ಸ್ವಾರ್ಥಕ್ಕಾಗಿ ಚಿಕ್ಕಬಳ್ಳಾಪುರದಲ್ಲಿ ಮೆಡಿಕಲ್‌ ಕಾಲೇಜು ಸ್ಥಾಪನೆ ಮಾಡಿಲ್ಲ

3 years ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ