ಹೆತ್ತವರನ್ನೇ ಗೋಳೊಯ್ದುಕೊಂಡ ಪುತ್ರಿಯರಿಗೆ ಪಾಠ ಕಲಿಸಿದ ಎಸಿ!
by Guna Chikkaballapura
ಚಿಕ್ಕಬಳ್ಳಾಪುರ: ಅಧಿಕಾರಶಾಹಿಯ ಅಬ್ಬರಕ್ಕೆ ಸದಾ ನಲುಗುವ ಜನರಿಗೆ ಮರುಭೂಮಿಯ ಓಯೆಸಿಸ್ʼನಂತೆ ಇಲ್ಲೊಬ್ಬರು ಅಧಿಕಾರಿ ಇದ್ದಾರೆ! ಇದು ಅಚ್ಚರಿಯಾದರೂ ಹೌದು!!
ಅಂದಹಾಗೆ; ಅವರ ಹೆಸರು ಡಾ.ಜಿ ಸಂತೋಷ್ ಕುಮಾರ್, ಚಿಕ್ಕಬಳ್ಳಾಪುರ ಜಿಲ್ಲೆಯ ಉಪ ವಿಭಾಗಾಧಿಕಾರಿ.
ಏನಿದು ಸ್ಟೋರಿ? ಮುಂದೆ ಓದಿ..
ಮಕ್ಕಳಿಗೆ ಆಸ್ತಿ ದಾನ ಮಾಡಿ ಬೀದಿಗೆ ಬಿದ್ದಿದ್ದ ವೆಂಕಟೇಶಾಚಾರಿ, ಪದ್ಮಾವತಮ್ಮ ಎಂಬ ವೃದ್ದ ದಂಪತಿಯ ಪರ ಆದೇಶ ನೀಡಿ ಆಸರೆಯಾದ ಉಪ ವಿಭಾಗಾಧಿಕಾರಿ ಡಾ.ಜಿ.ಸಂತೋಷ್ ಕುಮಾರ್ ಅವರ ಕಾರ್ಯವೈಖರಿಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಬದುಕಿನ ಸಂಧ್ಯಾಕಾಲದಲ್ಲಿ ನೊಂದು, ಬೆಂದವರ ಬಾಳಿಗೆ “ಸಂತೋಷ”ದ ಹೊನಲು ನೀಡಿದ ಡಾ.ಜಿ.ಸಂತೋಷ್ ಕುಮಾರ್ ಅವರ ಕಾಳಜಿ ಬಗ್ಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.
ತಮಗೆ ಹೆಣ್ಣು ಮಕ್ಕಳಾದರೂ ಅವರನ್ನು ಅಕ್ಕರೆಯಿಂದ ಸಾಕಿ, ಸಲುಹಿ ಉತ್ತಮ ಬದುಕು ರೂಪಿಸಿಕೊಟ್ಟಿದ್ದರು. ಇಳಿ ವಯಸ್ಸಿನಲ್ಲಿ ಆಸ್ತಿ ನಮಗ್ಯಾಕೆ ಎಂದು ಇದ್ದ ಕೋಟಿ ಬೆಲೆಯ ಆಸ್ತಿಯನ್ನು ಮಕ್ಕಳಿಗೆ ಹಂಚಿದ್ದರು. ಆದರೆ ಹೆತ್ತವರು ಎನ್ನುವುದನ್ನೇ ಮರೆತ ಪುತ್ರಿಯರು ಅವರನ್ನು ಮೂಲೆಗೆ ತಳ್ಳಿ, ಅವರ ನೆಮ್ಮದಿಯ ಬದುಕಿಗೆ ಕೊಳ್ಳಿ ಇಟ್ಟಿದ್ದರು. ಇದನ್ನು ಗಂಭೀರವಾಗಿ ಪರಿಣಿಸಿದ ಡಾ.ಸಂತೋಷ್ ಕುಮಾರ್ ಅವರು ವೃದ್ದರ ಪರವಾಗಿ ಆದೇಶ ನೀಡುವುದರ ಮೂಲಕ ಆದೇಶ ಪ್ರತಿಯೊಂದಿಗೆ ಸ್ವಾತಂತ್ರ್ಯ ದಿನದಂದೇ ಆ ವೃದ್ದರ ಮನೆಗೆ ಭೇಟಿ ನೀಡಿ ಆಸ್ತಿಯನ್ನು ಮರಳಿಕೊಡುವ ಆದೇಶ ಪತ್ರವನ್ನು ಹಸ್ತಾಂತರ ಮಾಡಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದ ಅಜಾದ್ ಚೌಕ್ʼನ 87 ವರ್ಷದ ವೆಂಕಟೇಶಾಚಾರ್, 67 ವರ್ಷದ ಪದ್ಮಾವತಮ್ಮ ಅವರು ತಮ್ಮ ಮೂವರು ಪುತ್ರಿಯರಿಗೆ ಸರಿ ಸುಮಾರು ಕೋಟಿ ರೂಪಾಯಿ ಬೆಲೆ ಬಾಳುವ ಮನೆಯನ್ನು ದಾನವಾಗಿ ನೀಡಿದ್ದರು. ಆದರೆ ಮಕ್ಕಳು ಬದುಕಿಗೆ ಮುಳ್ಳಾಗಿದ್ದರಿಂದ ನೊಂದ ದಂಪತಿಗಳು ನ್ಯಾಯಕ್ಕಾಗಿ ಕಂದಾಯ ಅಧಿಕಾರಿಗಳ ಮೊರೆ ಹೋಗಿದ್ದರು. ಪರಿಣಾಮ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ಚಿಕ್ಕಬಳ್ಳಾಪುರದ ಎಸಿ ಡಾ.ಜಿ.ಸಂತೋಷ್ ಕುಮಾರ್ ಅವರು ಹಿರಿಯ ನಾಗರೀಕ ಪೋಷಣೆ ಮತ್ತು ಶ್ರೇಯೋಭಿವೃದ್ದಿ ಹಾಗೂ ಸಂರಕ್ಷಣೆ ಕಾಯ್ದೆ-2007ರ ಅಡಿ ಜೀವನ ನಿರ್ವಹಣೆ ಕಲಂ 23ರ ಪ್ರಕಾರ ಮಕ್ಕಳಿಗೆ ಮಾಡಿದ್ದ ದಾನಪತ್ರವನ್ನ ರದ್ದುಪಡಿಸಿ, ಪೋಷಕರಿಗೆ ಮಕ್ಕಳು ಮಾಸಿಕ ತಲಾ 7 ಸಾವಿರ ರೂಪಾಯಿ ಜೀವನಾಂಶ ನೀಡುವಂತೆ ಕಟ್ಟಪ್ಪಣೆ ಮಾಡಿದ್ದಾರೆ. ಜತೆಗೆ ಪೋಷಕರಿಗೆ ಕಿರುಕುಳ ನೀಡದೇ ನೆಮ್ಮದಿಯ ಬದುಕು ರೂಪಿಸುವಂತೆ ಆದೇಶಿಸಿದ್ದಾರೆ.
ಸ್ವಾತಂತ್ರ್ಯ ದಿನದಂದೇ ಆದೇಶ
ಸ್ವಾತಂತ್ರ್ಯದ ದಿನಾಚರಣೆಯಂದು ಖುದ್ದು ವೃದ್ದ ದಂಪತಿಗಳ ಮನೆಗೆ ತೆರಳಿದ ಎಸಿ ಸಂತೋಷ್ ಕುಮಾರ್ ಹಾಗೂ ಪತ್ನಿ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಯೂ ಆಗಿರುವ ಡಾ.ಬಿ.ಎಸ್.ಹೇಮಲತಾ ಅವರು ಫಲ ತಾಂಬೂಲದೊಂದಿಗೆ ಆದೇಶ ಪತ್ರವನ್ನು ವೃದ್ದ ದಂಪತಿಗಳಿಗೆ ನೀಡಿದರು. ಹೆತ್ತ ಮಕ್ಕಳು, ರಕ್ತ ಸಂಬಂಧಿಕರೇ ಮನೆಯಿಂದ ಹೊರ ಹಾಕಿದ್ದರೂ, ಯಾವುದೇ ಸಂಬಂದವಿಲ್ಲದ ಕಂದಾಯ ಅಧಿಕಾರಿಗಳ ಕಾಳಜಿ ಹಾಗೂ ಕಾರ್ಯಕ್ಷಮತೆಯನ್ನು ಕಂಡು ವೃದ್ಧ ದಂಪತಿ ಕಣ್ಣೀರಾಗಿದ್ದಾರೆ. ಅವರಲ್ಲಿ ಕಂಡ ಆನಂದ ಬಾಷ್ಪ ಅಧಿಕಾರಿಗಳ ಹೃದಯವನ್ನು ಕರಗಿಸಿದೆ.
ಮಕ್ಕಳಿಗೆ ಮಾಡಿದ್ದ ದಾನಪತ್ರವನ್ನು ರದ್ದು ಮಾಡಿಕೊಡುವಂತೆ ವೃದ್ದ ದಂಪತಿಗಳು ಕಳೆದ ವರ್ಷ ಅರ್ಜಿ ಸಲ್ಲಿಸಿದ್ದರು. ಅಲ್ಲದೆ ಮಕ್ಕಳಿಂದ ತಾವು ಅನುಭವಿಸುತ್ತಿರುವ ನೋವನ್ನು ಪತ್ರಿಕಾ ಹೇಳಿಕೆಯ ಮೂಲಕ ತೋಡಿಕೊಂಡಿದ್ದರು. ಇದನ್ನೆಲ್ಲಾ ಗಮನಿಸಿ ದಾಖಲೆಗಳ ಅನುಸಾರ ಕಾನೂನುಬದ್ಧವಾಗಿ ನೊಂದ ವೃದ್ದ ದಂಪತಿಗಳ ಪರವಾಗಿ ಆದೇಶ ಮಾಡಿದ್ದೇನೆ. ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದಂದು ಅವರ ಮನೆಗೆ ತೆರಳಿ ಆದೇಶ ಪತ್ರ ನೀಡಿ ನನ್ನ ಜವಾಬ್ದಾರಿ, ಕರ್ತವ್ಯವನ್ನು ನಿರ್ವಹಿಸಿದ್ದೇನೆ.
-ಡಾ.ಜಿ.ಸಂತೋಷ್ ಕುಮಾರ್, ಉಪ ವಿಭಾಗಧಿಕಾರಿ, ಚಿಕ್ಕಬಳ್ಳಾಪುರ ಜಿಲ್ಲೆ