ಶಾಂತಿ-ಸುವ್ಯವಸ್ಥೆ ಕಾಪಾಡುವುದು ಎಲ್ಲ ರಾಜಕೀಯ ಪಕ್ಷಗಳ ಜವಾಬ್ದಾರಿ ಎಂದು ಉಪದೇಶ ಮಾಡಿದ ಬೊಮ್ಮಾಯಿ
ಹುಬ್ಬಳ್ಳಿ: ರಾಜ್ಯದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವುದು ಎಲ್ಲ ರಾಜಕೀಯ ಪಕ್ಷಗಳ ಜವಾಬ್ದಾರಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಕೆಲಸವನ್ನು ಯಾರೂ ಮಾಡಬಾರದು ಎಂದು ಹೇಳಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರು ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಬೇಕು. ಯಾವುದೇ ವಿಚಾರದ ಬಗ್ಗೆ ವೈಚಾರಿಕತೆ ಇದ್ದರೆ ವೈಚಾರಿಕತೆಯಿಂದಲೇ ಪ್ರತಿಪಾದಿಸಬೇಕು, ವಿರೋಧಿಸುವುದಿದ್ದರೆ ವೈಚಾರಿತೆಯಿಂದಲೇ ವಿರೋಧಿಸಬೇಕು ಎಂದು ಹೇಳಿದರು.
ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ಸಾರ್ವಕರ್ ಅವರನ್ನು ಶ್ರೇಷ್ಠ ಪುತ್ರ ಎಂದು ಹೇಳಿದ್ದಾರೆ, ಸಾರ್ವಕರ್ ಬಗ್ಗೆ ಪರ-ವಿರೋಧ ವಿಚಾರಗಳು ವ್ಯಕ್ತವಾಗಿವೆ. ಹಾಗೆಯೇ ಟಿಪ್ಪು ಸುಲ್ತಾನ್ ಬಗ್ಗೆ ಪರ-ವಿರೋಧ ಅಭಿಪ್ರಾಯಗಳಿವೆ. ಹೀಗಾಗಿ ವೈಚಾರಿಕ ದೃಷ್ಟಿಕೋನದಿಂದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾತನಾಡಬೇಕು ಎಂದು ಬೊಮ್ಮಾಯಿ ಹೇಳಿದರು.
ವಿಧಾನಸಭೆ ವಿರೋಧ ಪಕ್ಷದ ನಾಯಕರಿಗೆ ಸೂಕ್ತ ರಕ್ಷಣೆ ಕೊಡಲು ಈಗಾಗಲೇ ಸೂಚನೆ ಕೊಡಲಾಗಿದೆ. ಕೊಡಗಿನಲ್ಲಿ ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣವನ್ನು ಎಷ್ಟರಮಟ್ಟಿಗೆ ರಾಜಕೀಕರಣ ಮಾಡುತ್ತಾರೆ ಎಂಬುದು ಆ ಪಕ್ಷಕ್ಕೆ ಬಿಟ್ಟ ವಿಚಾರವಾಗಿದೆ ಎಂದು ತಿಳಿಸಿದರು.
ಕಳಸಾ ಮಂಡೂರಿ ಯೋಜನೆ ವಿಚಾರದಲ್ಲಿ ಸಾಕಷ್ಟು ಪ್ರಗತಿಯಾಗಿದೆ. ಅರಣ್ಯ ಇಲಾಖೆ ಹಾಗೂ ಸಿಡಬ್ಲುಸಿಯಲ್ಲಿ ಈ ಯೋಜನೆಗೆ ಅನುಮತಿ ನೀಡುವ ಅಂತಿಮ ಹಂತದಲ್ಲಿದೆ. ಈ ಎರಡರಿಂದಲೂ ಅನುಮತಿ ದೊರೆತ ಕೂಡಲೇ ಯೋಜನೆ ಪ್ರಾರಂಭವಾಗಲಿದೆ ಎಂದು ಸಿಎಂ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.