ನಾನು ಏನು ಬೇಕಾದರೂ ತಿನ್ನುವೆ, ಕೇಳಲು ಇವರು ಯಾರು ಎಂದು ಚಿಕ್ಕಬಳ್ಳಾಪುರದಲ್ಲಿ ಗುಟುರು ಹಾಕಿದ ಮಾಜಿ ಸಿಎಂ
ಬೆಂಗಳೂರು/ಚಿಕ್ಕಬಳ್ಳಾಪುರ: ಮೀನು ತಿಂದು ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಮಾಡಿಕೊಂಡು ಆಸ್ತಿಕರ ಕೋಪಕ್ಕೆ ತುತ್ತಾಗಿದ್ದ ವಿಧಾನಸಭೆಯ ಪ್ರತಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗ ಮತ್ತದೇ ಮಾಂಸಾಹಾರ ಸೇವಿಸಿದ ವಿವಾದಕ್ಕೆ ಸಿಲುಕಿದ್ದಾರೆ.
ಕೊಡಗಿನಲ್ಲಿ ತಮ್ಮ ಮೇಲೆ ಮೊಟ್ಟೆ ದಾಳಿ ನಡೆದ ಬೆನ್ನಲ್ಲೇ ದೇಶಾದ್ಯಂತ ಸುದ್ದಿಗೆ ಗ್ರಾಸವಾಗಿರುವ ಅವರು, ಆ ದಾಳಿ ನದಡೆದ ದಿನ ಕೊಡಗಿಗೆ ಭೇಟಿ ನೀಡಿದ್ದ ವೇಳೆ ನಾಟಿಕೋಳಿ ಸಾರು ಊಟ ಮಾಡಿ ದೇವಸ್ಥಾನಕ್ಕೆ ಹೋಗಿರುವುದು ಆಸ್ತಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಮಡಿಕೇರಿಯ ಸರ್ಕ್ಯೂಟ್ ಹೌಸ್‌ನಲ್ಲಿ ಅಗಸ್ಟ್ 18ರ ಮಧ್ಯಾಹ್ನ ನಾಟಿಕೋಳಿ ಸಾರು ಊಟ ಮಾಡಿದ್ದ ಪ್ರತಿಪಕ್ಷ ನಾಯಕರು, ಅಂದು ರಾತ್ರಿ ಸಮೀಪದ ಬಸವೇಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು.
ಸಿದ್ದರಾಮಯ್ಯಗೆ ಮಾಜಿ ಎಂಎಲ್‌ಸಿ ವೀಣಾ ಅಚ್ಚಯ್ಯ ಮನೆಯಿಂದ ಊಟದ ವ್ಯವಸ್ಥೆ ಮಾಡಲಾಗಿತ್ತು.
ಮಾಂಸಾಹಾರದ ಊಟದ ಬಳಿಕ ಕೊಡ್ಲಿಪೇಟೆಯ ಬಸವೇಶ್ವರ ದೇವಸ್ಥಾನಕ್ಕೆ ಸಿದ್ದರಾಮಯ್ಯ ಭೇಟಿ ನೀಡಿದ್ದು ಈಗ ಕೊಡಗು ಜನರ ಆಕ್ರೋಶವನ್ನು ದುಪ್ಪಟ್ಟುಗೊಳಿಸಿದೆ. ಸಿದ್ದರಾಮಯ್ಯ ಮಾಂಸದ ಊಟ ಮಾಡಿದ ಫೋಟೋ, ದೇವಸ್ಥಾನಕ್ಕೆ ಹೋದ ವಿಡಿಯೋ ವೈರಲ್ ಆಗಿದೆ.
ಮಾಂಸ ತಿಂದರೆ ತಪ್ಪೇನು ಎಂದ ಸಿದ್ದರಾಮಯ್ಯ?
ಚಿಕ್ಕಬಳ್ಳಾಪುರಕ್ಕಿಂದು ಬೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮಗಳು ಮಾಂಸದ ಊಟದ ಬಗ್ಗೆ ಕೇಳಿದ ಪ್ರಶ್ನೆಗೆ ಸಿಡಿಮಿಡಿಗೊಂಡ ಸಿದ್ದರಾಮಯ್ಯ; ಮಾಂಸ ತಿಂದರೆ ತಪ್ಪೇನು ಎಂದು ಪ್ರಶ್ನಿಸಿದರು.
“ಇಂತಹುದೇ ಊಟ ಮಾಡಿ ದೇವಸ್ಥಾನಕ್ಕೆ ಬರಬೇಕು ಅಂತ ದೇವರು ನಿಯಮ ಮಾಡಿದ್ದಾನಾ? ಮಧ್ಯಾಹ್ನ ಊಟ ಮಾಡಿ ಸಂಜೆ ದೇವಸ್ಥಾನಕ್ಕೆ ಹೋಗಬಾರದು ಅಂತ ಯಾರಾದರೂ ಹೇಳಿದ್ದಾರಾ?’ ಎಂದು ಅವರು ಕೇಳಿದರು.
“ಅಷ್ಟಕ್ಕೂ ನಾನು ಎಲ್ಲಿಗಾದರೂ ಹೋಗುವೆ, ಏನಾದರೂ ತಿನ್ನುವೆ. ಇದ್ದನ್ನೆಲ್ಲಾ ಕೇಳಲು ಇವರು ಯಾರು?” ಎಂದು ಸಿದ್ದರಾಮಯ್ಯ ಅವರು ತಮ್ಮ ವಿರೋಧಿಗಳನ್ನು ಖಾರವಾಗಿ ಪ್ರಶ್ನಿಸಿದ್ದಾರೆ.
“ನಾನು ಮೂಲತಃ ಮಾಂಸಾಹಾರಿ. ಅದು ನನ್ನ ಆಹಾರ ಪದ್ಧತಿ. ಇದನ್ನು ಯಾಕೆ ವಿವಾದ ಮಾಡಬೇಕು? ಬಿಜೆಪಿಯವರಿಗೆ ಎಲ್ಲದರಲ್ಲೂ ಹುಳುಕು ಹುಡುಕುವುದೇ ಅವರ ಕೆಲಸ” ಎಂದು ಅವರು ಹರಿಹಾಯ್ದರು.