ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆದಿದ್ದಕ್ಕೆ ಪ್ರತೀಕಾರ
ತಿ.ನರಸೀಪುರ: ಪೂಜಾ ಕಾರ್ಯದಲ್ಲಿ ಭಾಗವಹಿಸಲು ತಾಲ್ಲೂಕಿನ ಮೂಗೂರು ಗ್ರಾಮಕ್ಕೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ರವರಿಗೆ ಕಪ್ಪುಬಾವುಟ ಪ್ರದರ್ಶಿಸಲು ಬಂದ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೊಡಗಿನಲ್ಲಿ ಅತಿವೃಷ್ಟಿಯಿಂದ ಆದ ತೊಂದರೆಗಳನ್ನು ವೀಕ್ಷಣೆ ಮಾಡಲು ಬಂದ ಸಂದರ್ಭದಲ್ಲಿ ಅವರ ಕಾರಿನ ಮೇಲೆ ಬಿಜೆಪಿ ಕಾರ್ಯಕರ್ತರು ಮೊಟ್ಟೆ ಎಸೆದು ಅವಮಾನಿಸಿದ್ದರು.
ಈ ಹಿನ್ನೆಲೆಯಲ್ಲಿ ತಿ. ನರಸೀಪುರದಲ್ಲಿರುವ ರಾಷ್ಟ್ರೀಯ ಹೆದ್ದಾರಿ 212ರ ಗರ್ಗೇಶ್ವರಿ ಮತ್ತು ಪಟ್ಟಣದ ಚಿಕ್ಕಮ್ಮ ತಾಯಿ ಛತ್ರದ ಬಳಿ ತಾ.ಪಂ.ಮಾಜಿ ಉಪಾಧ್ಯಕ್ಷ ಬಿ.ಮರಯ್ಯ,ಪುರಸಭೆ ಅಧ್ಯಕ್ಷ ಮದನ್ ರಾಜ್,ಮಾಜಿ ಅಧ್ಯಕ್ಷ ಸೋಮು ಹಾಗು ಸದಸ್ಯ ಸಹೀದ್ ಅಹಮದ್ ನೇತೃತ್ವದಲ್ಲಿ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸಲು ಕಾಂಗ್ರೆಸ್ ಕಾರ್ಯಕರ್ತರು ಸಿದ್ದರಾಗಿದ್ದರು.
ಪ್ರತಿಭಟನೆಯ ತೀವ್ರತೆಯನ್ನು ಅರಿತ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ನಂದಿನಿ,ಡಿವೈಎಸ್ಪಿ ಗೋವಿಂದರಾಜು, ಪಿಎಸ್ಐ ಗಳಾದ ಕೃಷ್ಣಪ್ಪ ಪ್ರತಿಭಟನಾ ನಿರತರ ಮನವೊಲಿಕೆಗೆ ಮುಂದಾದರು.
ಕಾರ್ಯಕರ್ತರು ಕಪ್ಪು ಭಾವುಟ ಪ್ರದರ್ಶನ ಮಾಡೇ ತೀರುವುದಾಗಿ ಪಟ್ಟು ಹಿಡಿದರು.ಈ ಹಿನ್ನೆಲೆಯಲ್ಲಿ ಪೋಲಿಸರು ಮುಂಜಾಗ್ರತಾ ಕ್ರಮವಾಗಿ ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಿ ಖಾಸಗೀ ವಾಹನದಲ್ಲಿ ಕರೆದೊಯ್ದರು.
ಸಿದ್ದರಾಮಯ್ಯರಿಗೆ ಬಿಜೆಪಿ ಕಾರ್ಯಕರ್ತರು ಮಾಡಿದ ಅಪಮಾನವನ್ನು ಖಂಡಿಸಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ನಾವು ನಿರ್ಧರಿಸಿದ್ದೆವು.
ಆದರೆ, ಸರ್ಕಾರ ಪೋಲೀಸರ ಮುಖಾಂತರ ನಮ್ಮನ್ನು ಬಂಧಿಸಿ ನಮ್ಮ ಹಕ್ಕನ್ನು ಕಸಿದುಕೊಳ್ಳುವ ಮೂಲಕ ಪ್ರಜಾಪ್ರಭುತ್ವಕ್ಕೆ ಅಪಮಾನ ಮಾಡಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದರು.