ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ನೇರ ಆರೋಪ
ಬೆಂಗಳೂರು: ಕೋಲಾರ ಜಿಲ್ಲೆ ಉಸ್ತುವಾರಿ ಸಚಿವ ಮುನಿರತ್ನ ಅವರು ಕಾಮಗಾರಿಗಳಲ್ಲಿ ಗುತ್ತಿಗೆದಾರರಿಂದ ಲಂಚದ ಹಣ ಡಿಮಾಂಡ್ ಮಾಡುತ್ತಿದ್ದಾರೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ನೇರವಾಗಿ ಆರೋಪ ಮಾಡಿದ್ದಾರೆ.
ರಾಜ್ಯ ಬಿಜೆಪಿ ಸರಕಾರದ ವಿರುದ್ಧ ಪ್ರತಿಪಕ್ಷಗಳ ಕಡೆಯಿಂದ 40% ಕಮಿಷನ್ ಆರೋಪ ಪದೇಪದೆ ಕೇಳಿಬರುತ್ತಿರುವ ಬೆನ್ನಲ್ಲೇ ಈಗ ಕ್ಯಾಬಿನೆಟ್ ಸಚಿವರೊಬ್ಬರ ಮೇಲೆಯೇ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಗಣಬೀರವಾದ ಕಮಿಷನ್ ಕಲೆಕ್ಷನ್ ಆರೋಪ ಮಾಡಿದ್ದಾರೆ.
ಅಗಸ್ಟ್ 15ರಂದು ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪುಕೋಟೆ ಮೇಲೆ ನಿಂತು ಸ್ವಾತಂತ್ರೋತ್ಸವ ಅಮೃತ ಮಹೋತ್ಸವದ ಭಾಷಣ ಮಾಡುವ ವೇಳೆ; ದೇಶದಿಂದ ಲಂಚಾವತಾರವನ್ನು ನಿರ್ಮೂಲನೆ ಮಾಡುವುದಾಗಿ ಭಾಷಣ ಮಾಡಿದ್ದರು. ಆದರೆ, ಇದಕ್ಕೆ ವಿರೋಧಾಭಾಸ ಎನ್ನುವಂತೆ ಅವರದ್ದೇ ಪಕ್ಷ ಬಿಜೆಪಿ ಸರಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಅವರು ದೂರಿದ್ದಾರೆ.
ಕೋಲಾರ ಉಸ್ತುವಾರಿ ಸಚಿವ ಮುನಿರತ್ನ ಅವರೇ ಕಮಿಷನ್ ಹಣ ಕೇಳುತ್ತಿದ್ದಾರೆ. ಕೋಟ್ಯಂತರ ರೂಪಾಯಿ ಹಣ ಸಂಗ್ರಹ ಮಾಡಿಕೊಂಡು ಬನ್ನಿ ಎಂದು ಹೇಳುತ್ತಿದ್ದಾರೆ ಎಂದು ಕೆಂಪಣ್ಣ ಅವರು ಗಂಭೀರ ಆರೋಪ ಮಾಡಿದ್ದಾರೆ.
ಇದೇ ವೇಳೆ ಸಚಿವರು, ಶಾಸಕರು ಗುತ್ತಿಗೆದಾರರನ್ನು ಹಣಕ್ಕಾಗಿ ಹಿಂಡಿಹಿಪ್ಪೆ ಮಾಡುತ್ತಿರುವ ಬಗ್ಗೆ ಕೆಂಪಣ್ಣ ಅವರು ಬುಧವಾರ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಈ ಬಗ್ಗೆ ಚರ್ಚೆ ಮಾಡಿದ್ದಾರೆ. ಆ ಭೇಟಿ ನಂತರ ಕೆಂಪಣ್ಣ ಅವರು ಮುನಿರತ್ನ ಅವರ ಕಮಿಷನ್ ಪುರಾಣವನ್ನು ಮಾಧ್ಯಮಗಳ ಮುಂದೆ ಬಹಿರಂಗ ಮಾಡಿದ್ದಾರೆ.
ಕೆಂಪಣ್ಣ ಅವರ ಜತೆ ಗುತ್ತಿಗೆದಾರರ ಸಂಘದ ನಿಯೋಗದ 30ಕ್ಕೂ ಹೆಚ್ಚು ಸದಸ್ಯರು ಸಿದ್ದರಾಮಯ್ಯ ಅವರನ್ನೇ ಭೇಟಿ ಮಾಡಿ ತಮ್ಮ ಅಳಲು ತೋಡಿಕೊಂಡರು.
ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ, “ಸಚಿವ ಮುನಿರತ್ನ ಗುತ್ತಿಗೆದಾರರಿಂದ ಹಣ ಸಂಗ್ರಹ ಮಾಡಿಕೊಡಲು ಕಾರ್ಯನಿರ್ವಾಹಕ ಅಭಿಯಂತರರಿಗೆ ಹೇಳುತ್ತಾರೆ. ಪರ್ಸೆಂಟೇಜ್ ಕಲೆಕ್ಷನ್ ಮಾಡದಿದ್ದರೇ ಸಸ್ಪೆಂಡ್ ಮಾಡುವುದಾಗಿ ಹೆದರಿಸುತ್ತಾರೆ. ಜಿಲ್ಲಾ ಉಸ್ತುವಾರಿ ಸಚಿವರೇ ಹಣ ಕಲೆಕ್ಟ್ ಮಾಡಿ ಅಂತಾರೆ. ಇದು ಅತ್ಯಂತ ಭ್ರಷ್ಟ ಸರಕಾರ ಎಂದು ಅವರು ಆರೋಪಿಸಿದರು.
ಮಾನ ಮರ್ಯಾದೆ ಇಲ್ಲದೇ ಕಮಿಷನ್ ಕೇಳುತ್ತಾರೆ. ಕೆಲ ಕಡೆ ಶೇ.100ರಷ್ಟ ಕಮಿಷನ್ ಇದೆ. ಎಲ್ಲಾ ಶಾಸಕರು ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದ್ದಾರೆ. ಹೀಗಾಗಿ 40 ಪರ್ಸೆಂಟ್ ಕಮಿಷನ್ ಕೇಸ್ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು. 15 ದಿನಗಳಲ್ಲಿ ಮತ್ತೆ ಪ್ರಧಾನಿ ಮೋದಿಗೆ ಪತ್ರ ಬರೆಯುತ್ತೇವೆ ಎಂದು ಕೆಂಪಣ್ಣ ಹೇಳಿದ್ದಾರೆ.
ಸಿದ‍್ಧರಾಮಯ್ಯ ಭೇಟಿ ವೇಳೆ ಯಾವುದೇ ದಾಖಲೆ ನೀಡಿಲ್ಲ. ಅವರು ಈ ವಿಚಾರವನ್ನು ಸದನದಲ್ಲಿ ಪ್ರಸ್ತಾಪಿಸುವುದಾಗಿ ಹೇಳಿದ್ದಾರೆ. ಈ ಹಿಂದೆ ಕೆಲವು ದಾಖಲೆ ನೀಡಿದ್ದರಿಂದ ಕೆಲ ಗುತ್ತಿಗೆದಾರರಿಗೆ ಗುತ್ತಿಗೆ ನೀಡಿದೇ ಸಮಸ್ಯೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಉಸ್ತುವಾರಿ ಸಚಿವರ ದಾಖಲೆ!!
ಜಿಲ್ಲಾ ಉಸ್ತುವಾರಿ ಸಚಿವರೊಬ್ಬರು ನೇರವಾಗಿ ಕಮೀಷನ್ ಸಂಗ್ರಹಕ್ಕೆ ಮುಂದಾಗಿರುವುದು ರಾಜ್ಯದ ಇತಿಹಾಸದಲ್ಲಿ ಅಪರೂಪದ ಘಟನೆ ಎಂದು ಹೆಸರೇಳಲಿಚ್ಛಿಸದ ಇನ್ನೊಬ್ಬರು ಗುತ್ತಿಗೆದಾರರು ತಿಳಿಸಿದ್ದಾರೆ.
ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಇದೇ ಮುನಿರತ್ನ ರಾಜರಾಜೇಶ್ವರಿ ನಗರದ ಕಾಂಗ್ರೆಸ್ ಶಾಸಕರಾಗಿದ್ದರು. ಆಗ ಮುನಿರತ್ನ ಅವರ ಕ್ಷೇತ್ರ ಸೇರಿದಂತೆ ಬೆಂಗಳೂರಿನ ಕೆಲ ಆಯ್ದ ಶಾಸಕರ ಕ್ಷೇತ್ರಗಳಿಗೆ ಯಥೇಚ್ಛವಾಗಿ ಅನುದಾನ ಹರಿದುಹೋಯಿತು. ವಿಪರ್ಯಾಸ ಎಂದರೆ; ಹಾಗೆ ಅನುದಾನದ ಬಂಪರ್ ಹೊಡೆದ ಶಾಸಕರೆಲ್ಲ ಆಪರೇಷನ್ ಕಮಲಕ್ಕೆ ತುತ್ತಾಗಿ ಬಿಜೆಪಿಗೆ ಹೋಗಿ ಈಗ ಸಚಿವರಾಗಿದ್ದಾರೆ. ಅವರ ಭ್ರಷ್ಟಾಚಾರದ ವಿರುದ್ಧ ಹಿಂದೆ ಬಿಜೆಪಿ ಪಕ್ಷದ ಸ್ಥಳೀಯ ಮುಖಂಡರೇ ಹೋರಾಟ ನಡೆಸಿದ್ದರು! ಈಗ ಅವರೇ ಬಿಜೆಪಿಯಲ್ಲಿ ಕೊಳ್ಳೆ ಹೊಡೆಯುತ್ತಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸುತ್ತಾರೆ.