40% ಕಮಿಷನ್ ಉರುಳು: ಕೆಂಪಣ್ಣ ಆರೋಪದಿಂದ ತಪ್ಪಿಸಿಕೊಳ್ಳಲು ಕಥೆ ಕಟ್ಟಿದರಾ ಕೋಲಾರ ಜಿಲ್ಲಾ ಉಸ್ತುವಾರಿ ಮಂತ್ರಿ!!
by SK Chandrashekar Kolar
ಬೆಂಗಳೂರು/ಕೋಲಾರ: ಕೋಲಾರ ಜಿಲ್ಲೆಯಲ್ಲಿ ನಡೆಯುತ್ತಿರುವ ಕಾಮಗಾರಿಗಳಲ್ಲಿ ಗುತ್ತಿಗೆದಾರರಿಂದ ಕಮಿಷನ್ ಕಲೆಕ್ಷನ್ ಆರೋಪಕ್ಕೆ ಗುರಿಯಾಗಿರುವ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಅವರು, ಸ್ವತಃ ಮುಖ್ಯಮಂತ್ರಿಗಳಿಗೇ ಸುಳ್ಳು ಮಾಹಿತಿ ನೀಡಿ ಯಾಮಾರಿಸಿರುವುದು ಬೆಳಕಿಗೆ ಬಂದಿದೆ.
ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಮುನಿರತ್ನ ಅವರ ವಿರುದ್ಧ ಕಮಿಷನ್ ಕಲೆಕ್ಷನ್ ಆರೋಪ ಮಾಡಿರುವ ಬೆನ್ನಲ್ಲೇ, ಅದೇ ಸಚಿವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸುಳ್ಳು ಮಾಹಿತಿ ನೀಡಿರುವ ಅಂಶ ಬಯಲಿಗೆ ಬಂದಿದ್ದು, ಇದು ಎಲ್ಲರ ಹುಬ್ಬೇರಿಸಿದೆ. ಬಿಜೆಪಿ ವಲಯದಲ್ಲಿ ಕೆಲವರಿಗೆ ಈ ಮಾಹಿತಿ ಗೊತ್ತಾಗಿದೆ.
ಏನಿದು ಪತ್ರ?
ಅಗಸ್ಟ್ 26ರಂದು ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ಮುನಿರತ್ನ ಅವರು, ಅಗಸ್ಟ್ 22 ಮತ್ತು 23ರಂದು ಕೋಲಾರಕ್ಕೆ ಭೇಟಿ ಕೊಟ್ಟಿರುವುದಾಗಿ, ಸ್ಥಳ ಪರಿಶೀಲನೆ ಮಾಡಿದಾಗ ಯಾವುದೇ ಗುಂಡಿಗಳು ಇರಬಾರದೆಂದು ಮೌಖಿಕವಾಗಿ ಸೂಚಿಸಿದ್ದೆ ಎಂದು ಬರೆಯಲಾಗಿದ್ದು, ಅಲ್ಲದೆ; ಕಾಮಗಾರಿಯ ಗುಣಮಟ್ಟ ಪರಿಶೀಲಿಸಿರುವುದಾಗಿ ಪತ್ರದಲ್ಲಿ ಬರೆದು ತಿಳಿಸಿದ್ದಾರೆ. ಆದರೆ, ಈ ಅಧಿಕೃತ ಪತ್ರದಲ್ಲಿ ಅವರು ಕೊಟ್ಟಿರುವ ಮಾಹಿತಿ ಎಲ್ಲವೂ ಸುಳ್ಳು ಎಂದು ಗೊತ್ತಾಗಿದೆ.
ಏಕೆಂದರೆ, ಆ ಸಭೆಯನ್ನು ಸಚಿವರು ನಡೆಸಿಯೇ ಇಲ್ಲ ಹಾಗೂ ಅಂದು ಅವರು ಕೋಲಾರ ನಗರಕ್ಕೆ ಭೇಟಿಯನ್ನೇ ನೀಡಿಲ್ಲ. ಅಲ್ಲದೆ, ಅಗಸ್ಟ್ 23ರಂದಿನ ಸಚಿವರ ಕೋಲಾರದ ಭೇಟಿ ರದ್ದು ಮಾಡಿರುವುದಾಗಿ ಖುದ್ದು ಜಿಲ್ಲಾಡಳಿತವೇ ಮಾಧ್ಯಮಗಳಿಗೆ ಅಧಿಕೃತ ಮಾಹಿತಿ ನೀಡಿತ್ತು. ಅಂದರೆ, ಅಗಸ್ಟ್ 22 ಮತ್ತು 23ರಂದು ಸಚಿವ ಮುನಿರತ್ನ ಅವರು ಕೋಲಾರಕ್ಕೆ ಬಂದೇ ಇಲ್ಲ.
ಹಾಗಾದರೆ ಎಲ್ಲಿ ಹೋಗಿದ್ದರು ಸಚಿವರು?
ಕೋಲಾರದ ಸಭೆಗೆ ಚಕ್ಕರ್ ಹಾಕಿ ಸಚಿವ ಮುನಿರತ್ನ ಅವರು ಅಂದು (ಅ.23) ಉನ್ನತ ಶಿಕ್ಷಣ ಸಚಿವ ಮುನಿರತ್ನ ಅವರು ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರ ಜತೆಯಲ್ಲಿ ದೆಹಲಿಗೆ ತೆರಳಿದ್ದರು. ಅದೇ ದಿನ ಅವರು ದೆಹಲಿಯಲ್ಲಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರನ್ನು ಭೇಟಿಯಾಗಿದ್ದರು. ಆ ಕುರಿತು ರಾಜೀವ್ ಚಂದ್ರಶೇಖರ್ ಅವರು ತಮ್ಮ ಅಧಿಕೃತ ಖಾತೆಯಲ್ಲಿ ಟ್ವೀಟ್ ಮಾಡಿದ್ದು, ಅದನ್ನು ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ತಮ್ಮ ಅಧಿಕೃತ ಟ್ವೀಟ್ನಲ್ಲಿ ರೀ ಟ್ವೀಟ್ ಮಾಡಿದ್ದಾರೆ. ಅಲ್ಲಿ ಲಭ್ಯವಾಗಿರುವ ಫೋಟೋದಲ್ಲಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ಡಾ.ಸಿ.ಎನ್.ಅಶ್ವತ್ಥನಾರಾಯಣ ಇನ್ನಿತರರು ಇದ್ದಾರೆ.
ಇನ್ನು ಅಗಸ್ಟ್ 22ರಂದು ಕೂಡ ಮುನಿರತ್ನ ಅವರು ಕೋಲಾರಕ್ಕೆ ಬಂದಿಲ್ಲ. ಬದಲಿಗೆ ಬೆಂಗಳೂರಿನ ಗೋವಿಂದರಾಜ ನಗರದಲ್ಲಿ ನಡೆದ ಕನಕ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಈ ಕಾರ್ಯಕ್ರಮದಲ್ಲಿ ಕಾಗಿನೆಲೆ ಪೀಠದ ಶ್ರೀ ನಿರಂಜನಾನಂದಪುರಿ ಶ್ರೀಗಳು ಸಾನ್ನಿಧ್ಯ ವಹಿಸಿ, ಸಚಿವರಾದ ವಿ.ಸೋಮಣ್ಣ, ಭೈರತಿ ಬಸವರಾಜು, ಸಂಸದ ತೇಜಸ್ವಿ ಸೂರ್ಯ ಮುಂತಾದವರು ಉಪಸ್ಥಿತರಿದ್ದರು.
ಆದರೆ, ಮುನಿರತ್ನ ಅವರು ಇಷ್ಟೆಲ್ಲಾ ಪುರಾವೆಗಳು ಇದ್ದರೂ, ತಾವು ಎರಡು ದಿನ ಕೋಲಾರಕ್ಕೆ ಹೋಗಿ ಸಭೆಗಳನ್ನು ನಡೆಸಿರುವುದಾಗಿ ಮುಖ್ಯಮಂತ್ರಿಗಳಿಗೆ ತಪ್ಪು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಮುನಿರತ್ನ ಅವರು ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರ ಸಿಕೆನ್ಯೂಸ್ ನೌ ಗೆ ಲಭ್ಯವಾಗಿದೆ.
ಅಲ್ಲದೆ, ಮುನಿರತ್ನ ಅವರು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರನ್ನು ದೆಹಲಿಯಲ್ಲಿ ಭೇಟಿಯಾಗಿದ್ದ ಬಗ್ಗೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪ್ರಕಟವಾಗಿದ್ದ ಚಿತ್ರಗಳು ಹಾಗೂ ಸ್ಕ್ರೀನ್ ಶಾಟ್ ಗಳು ಹಾಗೂ ಗೋವಿಂದರಾಜ ನಗರದಲ್ಲಿ ಅವರು ಪಾಲ್ಗೊಂಡಿದ್ದ, ಸ್ವತಃ ಮುನಿರತ್ನ ಅವರ ಟ್ವಿಟರ್ ನಲ್ಲಿ ಪೋಸ್ಟ್ ಮಾಡಲಾಗಿದ್ದ ಚಿತ್ರಗಳನ್ನು ಇಲ್ಲಿ ಪ್ರಕಟಿಸಲಾಗಿದೆ.
ಕೆಂಪಣ್ಣ ಅವರು ಸಚಿವ ಮುನಿರತ್ನ ಅವರ ವಿರುದ್ಧ ಮಾಡಿರುವ ಆರೋಪಗಳಿಂದ ಆಡಳಿತಾರೂಢ ಬಿಜೆಪಿ ಪಕ್ಷಕ್ಕೆ ತೀವ್ರ ಮುಜುಗರವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಹಾಗೆಯೇ, ಕ್ಯಾಬಿನೆಟ್ ಸಚಿವರೊಬ್ಬರು ಮುಖ್ಯಮಂತ್ರಿಗಳಿಗೆ ತಪ್ಪು ಮಾಹಿತಿ ನೀಡಿರುವ ಮಾಹಿತಿ ರಾಜ್ಯದ ಹಿರಿಯ ಮುಖಂಡರಿಗೆ ಗೊತ್ತಾಗಿದ್ದು, ಅವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ಗೊತ್ತಾಗಿದೆ.
ಶೇ.40ರಷ್ಟು ಲಂಚದ ಆರೋಪಕ್ಕೆ ಗುರಿಯಾಗಿರುವ ಸಚಿವ ಮುನಿರತ್ನ ಅವರು ಗುತ್ತಿಗೆದಾರ ಸಂಘದ ಆರೋಪವನ್ನು ಸುಳ್ಳಾಗಿಸಲು ಕಸರತ್ತು ನಡೆಸುತ್ತಿರುವುದಕ್ಕೆ ಈ ಪ್ರಸಂಗವೊಂದು ಉದಾಹರಣೆ.
ಮತ್ತೊಂದೆಡೆ ವಲಸಿಗ ಸಚಿವರು ಮುನಿರತ್ನ ಅವರನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಕೆಂಪಣ್ಣ ಅವರನ್ನು ವಾಚಾಮಗೋಚರವಾಗಿ ನಿಂದನೆ ಮಾಡುತ್ತಿರುವ ಬಗ್ಗೆಯೂ ಪಕ್ಷದಲ್ಲಿ ಅಪಸ್ವರ ಎದ್ದಿದೆ ಎನ್ನಲಾಗಿದೆ.