ಬಿಜೆಪಿಯಲ್ಲಿ ಜಗದೀಶ್ ಶೆಟ್ಟರ್ ಹೆಸರು ಮುನ್ನೆಲೆಗೆ / ರಾಜ್ಯಾಧ್ಯಕ್ಷ ಹುದ್ದೆಗೆ ಸುನೀಲ್ ಕುಮಾರ್‌ಗೆ ಅವಕಾಶ ನಿರೀಕ್ಷೆ
ಬೆಂಗಳೂರು: ನಾಯಕತ್ವ ಬದಲಾವಣೆ ವದಂತಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ಆದರೆ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಹೆಸರು ಮುಖ್ಯಮಂತ್ರಿ ಪದವಿಗೆ ಬಿಜೆಪಿ ಒಳಗೆ ಭಾರೀ ಚರ್ಚೆಗೆ ಬಂದಿದೆ ಎಂದು ಗೊತ್ತಾಗಿದೆ.
ಕೇಂದ್ರ ಬಿಜೆಪಿ ವರಿಷ್ಠರು ನನಗೆ ಮುಕ್ತ ಸ್ವಾತಂತ್ರ್ಯ ನೀಡಿದ್ದಾರೆ, ತಮ್ಮನ್ನು ವಿಧಾನಸಭೆ ಚುನಾವಣೆಗೂ ಮುನ್ನವೇ ಬದಲಾಯಿಸಿ ಬೇರೊಬ್ಬರಿಗೆ ಸಾರಥ್ಯ ನೀಡಲಾಗುತ್ತದೆ ಎಂಬುದರಲ್ಲಿ ಯಾವುದೇ ಹುರುಳಿಲ್ಲ ಎಂದು ಬೊಮ್ಮಾಯಿ ಅವರು ತಿಳಿಸಿದ್ದಾರಾದರೂ, ಶೆಟ್ಟರ್ ಹೆಸರು ತೇಲಿಬಂದಿರುವ ಬಗ್ಗೆ ಅವರು ಚಕಾರ ಎತ್ತಿಲ್ಲ ಹಾಗೂ ಪಕ್ಷದ ಇತರರೂ ಈ ಬಗ್ಗೆ ಸೊಲ್ಲೆತ್ತಿಲ್ಲ.
ತಮ್ಮ ಬದಲಾವಣೆಯ ಬಗ್ಗೆ ಎದ್ದಿರುವ ಸುದ್ದಿಗಳ ಬಗ್ಗೆ ಸ್ವತಃ ಬೊಮ್ಮಾಯಿ ಅವರೇ ಹೇಳಿದ್ದಿಷ್ಟು;
ನನಗೆ ಕೇಂದ್ರ ಬಿಜೆಪಿ ನಾಯಕರ ಸಂಪೂರ್ಣ ಬೆಂಬಲವಿದೆ. ಆಡಳಿತದಲ್ಲಿ ಯಾರೂ ಹಸ್ತಕ್ಷೇಪ ಮಾಡುತ್ತಿಲ್ಲ, ಹೈಕಮಾಂಡ್ ಮುಕ್ತ ಸ್ವಾತಂತ್ರ್ಯ ನೀಡಿದೆ. ಯಡಿಯೂರಪ್ಪನವರ ಕೈಗೊಂಬೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿರುವುದು ಸರಿಯಲ್ಲ. ಅವರಿಂದ ನಾನು ಸಲಹೆ ಹಾಗೂ ಮಾರ್ಗದರ್ಶನ ಪಡೆಯುತ್ತೇನೆ. ಸರ್ಕಾರದ ದೈನಂದಿನ ಆಡಳಿತದಲ್ಲಿ ಯಡಿಯೂರಪ್ಪನವರು ಹಸ್ತಕ್ಷೇಪ ಮಾಡಿಲ್ಲ. ಇದು ಪ್ರತಿಪಕ್ಷಗಳ ಕಲ್ಪನೆ.
ಕರ್ನಾಟಕದಲ್ಲಿ ಯಡಿಯೂರಪ್ಪ ಅವರು ಒಬ್ಬ ಪ್ರಭಾವಶಾಲಿ ಹಾಗೂ ಸಮೂಹ ನಾಯಕ. ಅವರ ಅವಧಿಯಲ್ಲಿ ಜಾರಿ ಮಾಡಿದ್ದ ಜನಪರ ಕಾರ್ಯಕ್ರಮಗಳ ಅನುಷ್ಠಾನದಿಂದ ಉತ್ತೇಜನ ಪಡೆದಿದ್ದೇನೆ. ಸರ್ಕಾರ ಮುನ್ನೆಡೆಸುವ ಸಂದರ್ಭದಲ್ಲಿ ಅವರ ಮಾರ್ಗದರ್ಶನ ಪಡೆಯುತ್ತೇವೆ. ನಮ್ಮ ಸರ್ಕಾರಕ್ಕೆ ಅವರ ಸಹಕಾರ ಮತ್ತು ಸಹಾಯ ಅತ್ಯಗತ್ಯ. ಇದರಲ್ಲಿ ತಪ್ಪೇನಿದೆ?
ಅಧ್ಯಕ್ಷ ಸ್ಥಾನಕ್ಕೆ ಶೋಭಾ & ಸುನೀಲ್ ಹೆಸರು
ಇದೇ ವೇಳೆ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನದಿಂದ ನಳೀನ್ ಕುಮಾರ್ ಕಟೀಲ್ ಅವರು ಇಳಿಯುವುದು ಖಚಿತ. ಅವರ ಅಧಿಕಾರಾವಧಿಯೂ ಮುಗಿದಿದೆ. ಈ ಸ್ಥಾನಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಹೆಸರು ಬಲವಾಗಿ ಕೇಳಿಬಂದಿತ್ತು.
ಲಿಂಗಾಯಿತ ಸಮುದಾಯಕ್ಕೆ ಮುಖ್ಯಮಂತ್ರಿ ಸ್ಥಾನ ಹಾಗೂ ಒಕ್ಕಲಿಗರಿಗೆ ಪಕ್ಷದ ಅಧ್ಯಕ್ಷ ಸ್ಥಾನ ಕಲ್ಪಿಸುವ ಬಗ್ಗೆ ಬಿಜೆಪಿಯಲ್ಲಿ ಚರ್ಚೆ ನಡೆದಿದೆ ಎಂದು ಗೊತ್ತಾಗಿದೆ.
ಇನ್ನೊಂದೆಡೆ; ರಾಜ್ಯ ಇಂಧನ ಸಚಿವ ಸುನೀಲ್ ಕುಮಾರ್ ಅವರು ಪಕ್ಷದ ಅಧ್ಯಕ್ಷರಾಗಲು ಇಚ್ಛೆ ವ್ಯಕ್ತಪಡಿಸಿದ್ದಾರೆಂಬ ಮಾಹಿತಿ ಇದೆ. ಸಚಿವ ಸ್ಥಾನಕ್ಕಿಂತ ಪಕ್ಷದ ಕೆಲಸ ಮಾಡುವುದು ನನಗೆ ಇಷ್ಟ ಎಂಬುದಾಗಿ ಅವರು ನಾಯಕರಿಗೆ ತಿಳಿಸಿದ್ದಾರೆಂದು ಹೇಳಲಾಗಿದೆ.