ಯಥಾಸ್ಥಿತಿ ಕಾಪಾಡಿಕೊಳ್ಳಲು ಸುಪ್ರೀಂ ಕೋರ್ಟ್ ಆದೇಶ
ನವದೆಹಲಿ: ತೀವ್ರ ಕುತೂಹಲ ಕೆರಳಿಸಿದ್ದ ಬೆಂಗಳೂರು ನಗರದ ಈದ್ಗಾ ಮೈದಾನಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಆ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅವಕಾಶ ನಿರಾಕರಿಸಿ, ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶ ನೀಡಿದೆ.
ಸುಪ್ರೀಂ ಕೋರ್ಟ್ʼನ ತ್ರಿಸದಸ್ಯ ಪೀಠ ಈ ತೀರ್ಪನ್ನು ನೀಡಿದ್ದು, ಆ ಮೈದಾನದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕೆಂದು ಹೇಳಿದೆ. ಅತ್ತ ನ್ಯಾಯಾಲಯದ ತೀರ್ಪು ಹೊರಬೀಳುತ್ತಿದ್ದಂತೆಯೇ ಇತ್ತ ಈದ್ಗಾ ಮೈದಾನದಲ್ಲಿ ಮತ್ತಷ್ಟು ಭದ್ರತೆ ಮಾಡಲಾಗಿದೆ. ಮೈದಾನದ ಸುತ್ತ ಖಾಕಿ ಪಹರೆ ಹಾಕಲಾಗಿದೆ.
ಚಾಮರಾಜಪೇಟೆಯಲ್ಲಿರುವ ಈ ಮೈದಾನ ಈದ್ಗಾ ಮೈದಾನವೆಂದು ವಕ್ಫ್ ಬೋರ್ಡ್ ಪ್ರತಿಪಾದಿಸುತ್ತಿದೆ. ಆ ಮೈದಾನದಲ್ಲಿ ಗಣೇಶೋತ್ಸವಕ್ಕೆ ರಾಜ್ಯ ಹೈಕೋರ್ಟ್ ಅನುಮತಿ ನೀಡಿದ್ದನ್ನು ವಕ್ಫ್ ಬೋರ್ಡ್ ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಿತ್ತು. ಇದು ಎಲ್ಲಡೆ ತೀವ್ರ ಕುತೂಹಲಕ್ಕೆ ಕಾರಣವಾಗಿತ್ತು.
ರಾಜ್ಯ ಸರಕಾರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ವಾದ ಮಂಡಿಸಿದರೆ; ಆದರೆ ವಕ್ಫ್ ಬೋರ್ಡ್ ಪರ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ವಕಾಲತ್ತು ವಹಿಸಿದ್ದರು.
“ಈ ಮೈದಾನದಲ್ಲಿ ಯಾವುದೇ ಶಾಶ್ವತ ಕಟ್ಟಡ ನಿರ್ಮಾಣ ಮಾಡುವುದಿಲ್ಲ. ಕರ್ನಾಟಕ ಸರ್ಕಾರವೇ ಕಾನೂನು ಸುವ್ಯವಸ್ಥೆಯನ್ನು ನೇರವಾಗಿ ನಿರ್ವಹಣೆ ಮಾಡುತ್ತಿದೆ. ಆದ್ದರಿಂದ ಗಣೇಶೋತ್ಸವಕ್ಕೆ ಅನುಮತಿ ನೀಡಬೆಕು” ಎಂದು ಸರಕಾರದ ಪರ ವಕೀಲರು ನ್ಯಾಯಾಲಯದ ಮುಂದೆ ವಾದಿಸಿದ್ದರು.
ಇದಕ್ಕೆ ಪ್ರತಿಯಾಗಿ ವಾದಿಸಿದ್ದ ಕಪಿಲ್ ಸಿಬಲ್ ಅವರು; “ಈದ್ಗಾ ಮೈದಾನ ಮುಸ್ಲೀಮರಿಗೆ ಸೇರಿದ್ದು. ಸುಮಾರು ಎರಡು ಶತಮಾನಕ್ಕೂ ಹೆಚ್ಚು ಕಾಲದಿಂದ ನಡೆದುಕೊಂಡು ಬಂದ ಸಂಪ್ರದಾಯವನ್ನು ಬದಲಿಸುವುದು ಏಕೆ? ಅಲ್ಲದೆ, ಈದ್ಗಾ ಮೈದಾನವು ವಕ್ಫ್ ಮಂಡಳಿಯ ಆಸ್ತಿ. ಈಗ ಕರ್ನಾಟಕ ಸರಕಾರವು ಈ ಅಂಶವನ್ನು; ಅಂದರೆ, ಮಾಲೀಕತ್ವವನ್ನು ಪ್ರಶ್ನೆ ಮಾಡಿದೆ. ಇದೆಲ್ಲವನ್ನೂ ಸರಕಾರ ಉದ್ದೇಶಪೂರ್ವಕವಾಗಿಯೇ ಮಾಡುತ್ತಿರುವಂತಿದೆ. ಹೀಗಾಗಿ ಗಣೇಶೋತ್ಸವಕ್ಕೆ ಅವಕಾಶ ಕೊಡಬಾರದು” ಎಂದು ವಾದಿಸಿದರು.
ಒಮ್ಮತಕ್ಕೆ ಬಾರದ ದ್ವಿಸದಸ್ಯ ಪೀಠ
ಇದಕ್ಕೂ ಮುನ್ನ ಈ ಅರ್ಜಿಯನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರಿದ್ದ ಪೀಠವು ವೊಚಾರಣೆ ನಡೆಸಿತ್ತು. ಆದರೆ, ಆ ಪೀಠಕ್ಕೆ ಒಮ್ಮತಕ್ಕೆ ಬರಲು ಆಗಿರಲಿಲ್ಲ. ಹೀಗಾಗಿ ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್ ಅವರು ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ, ಅಭಯ್ ಎಸ್. ಓಕಾ ಮತ್ತು ಎಂ.ಎಂ.ಸುಂದರೇಶ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠವನ್ನು ರಚಿಸಿದ್ದರು.
ಈಗ ತ್ರಿಸದಸ್ಯ ಪೀಠವು ಮೈದಾನದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶ ನೀಡಿದೆ. ಅಲ್ಲಿಗೆ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಅವಕಾಶ ಇರುವುದಿಲ್ಲ.
ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಸೇರಿದಂತೆ ಎಲ್ಲ ರೀತಿಯ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅಗಸ್ಟ್ 31 ರಿಂದ ಅನುಮತಿ ನೀಡಬಹುದು ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ಹೇಳಿತ್ತು. ಈ ಆದೇಶವನ್ನು ಪ್ರಶ್ನಿಸಿದ್ದ ವಕ್ಫ್ ಮಂಡಳಿ ಸುಪ್ರೀಂ ಕೋರ್ಟಿಗೆ ಮೊರೆ ಹೋಗಿತ್ತು.