ಬಿಜೆಪಿ ವಿರುದ್ಧ ರಾಹುಲ್ ಗಾಂಧಿ ಟೀಕಾಪ್ರಹಾರ
ನವದೆಹಲಿ: ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿರುವ ಭಾರತ ಐಕ್ಯತೆ ಯಾತ್ರೆ ಬುಧ ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭಗೊಂಡಿದೆ.
ಬೆಳಗ್ಗೆ ರಾಹುಲ್‍ಗಾಂಧಿ ಅವರು ತಮಿಳುನಾಡಿನ ಶ್ರೀಪೆರಂಬೂರಿನಲ್ಲಿ ತಮ್ಮ ತಂದೆ ಹಾಗೂ ಮಾಜಿ ಪ್ರಧಾನಿ ರಾಜೀವ್‍ಗಾಂಧಿ ಅವರ ಪುಣ್ಯ ಭೂಮಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳ ಕಾಂಗ್ರೆಸ್ ನಾಯಕರು ರಾಹುಲ್‍ಗಾಂಧಿ ಅವರ ಜತೆ ಇದ್ದರು. ಅಲ್ಲಿಂದ ಕನ್ಯಾಕುಮಾರಿಗೆ ತೆರಳಿದ ರಾಹುಲ್‍ಗಾಂಧಿ ಪಾದಯಾತ್ರೆ ಆರಂಭಿಸಿದರು.
ಸುಮಾರು 150 ದಿನ 3570 ಕಿ.ಮೀ. ಪಾದಯಾತ್ರೆ ಸಾಗಲಿದ್ದು, 12 ಜಿಲ್ಲೆಗಳನ್ನು ಹಾದು ಹೋಗಲಿದೆ. ಭಾರತದ ತುತ್ತ ತುದಿ ಕಾಶ್ಮೀರಕ್ಕೆ ತಲುಪುವ ಈ ಪಾದಯಾತ್ರೆ ಕಾಂಗ್ರೆಸ್‍ನ ತಳಮಟ್ಟದ ಕಾರ್ಯಕರ್ತರನ್ನು ತಲುಪಲಿದೆ ಎಂದು ಭಾವಿಸಲಾಗಿದೆ.
ದೇಶವನ್ನು ಕಾಡುತ್ತಿರುವ ಬೆಲೆ ಏರಿಕೆ, ನಿರುದ್ಯೋಗ, ಅಗತ್ಯ ವಸ್ತುಗಳ ಮೇಲಿನ ಜಿಎಸ್‍ಟಿ ಏರಿಕೆ, ಸರ್ಕಾರಿ ಆಸ್ತಿಗಳ ಪರಭಾರೆ ಸೇರಿದಂತೆ ಹಲವು ಮಹತ್ವದ ವಿಚಾರಗಳನ್ನು ರಾಹುಲ್‍ಗಾಂಧಿ ತಮ್ಮ ಯಾತ್ರೆ ಉದ್ಧಕ್ಕೂ ಪ್ರಸ್ತಾಪಿಸಲಿದ್ದಾರೆ.
ಬಿಜೆಪಿ ವಿರುದ್ಧ ಟೀಕಾಪ್ರಹಾರ
ನಮ್ಮ ತ್ರಿವರ್ಣ ಧ್ವಜವು ಪ್ರತೀ ಧರ್ಮ, ರಾಜ್ಯ ಮತ್ತು ಭಾಷೆಗೆ ಸೇರಿದ್ದು. ಆದರೆ ಇಂದು ಭಾರತವನ್ನು ಧರ್ಮ ಮತ್ತು ಭಾಷೆ ಆಧಾರದ ಮೇಲೆ ವಿಭಜಿಸುತ್ತಿರುವ ಬಿಜೆಪಿ ಮತ್ತು ಆರ್‌ಎಸ್‌ಎಸ್ ತ್ರಿವರ್ಣ ಧ್ವಜದ ಮೇಲೆ ದಾಳಿ ನಡೆಸುತ್ತಿವೆ ಎಂದು ರಾಹುಲ್ ಗಾಂಧಿ ದೂರಿದರು.
ಅವರಿಂದು ಕನ್ಯಾಕುಮಾರಿಯಲ್ಲಿ ‘ಭಾರತ್ ಜೋಡೋ ಯಾತ್ರೆ’ಗೆ ಚಾಲನೆ ನೀಡಿ ಮಾತನಾಡಿದರು.
ಇಂದು ಪ್ರತಿಯೊಂದು ಸಾಂವಿಧಾನಿಕ ಸಂಸ್ಥೆಯೂ ಸರಕಾರದಿಂದ ದಾಳಿಗೆ ಒಳಗಾಗುತ್ತಿವೆ. ಹೀಗಾಗಿ ದೇಶವನ್ನು ಒಗ್ಗೂಡಿಸಲು ಜನರು ಜನರ ಬೆಂಬಲ ನೀಡಬೇಕು ಎಂದು ರಾಹುಲ್ ಗಾಂಧಿ ಅವರು ಮನವಿ ಮಾಡಿದರು.
“ನಮ್ಮ ತ್ರಿವರ್ಣ ಧ್ವಜವು ಯಾವುದೇ ಧರ್ಮವನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕನ್ನು ಖಾತರಿಪಡಿಸುತ್ತದೆ. ಆದರೆ ಇಂದು ಈ ಧ್ವಜವು ದಾಳಿಗೆ ಒಳಗಾಗಿದೆ” ಎಂದು ರಾಹುಲ್ ಗಾಂಧಿ ಹೇಳಿದರು.
ಭಾರತ ಈಗ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ ಮತ್ತು ಇದುವರೆಗೆ ಅತ್ಯಧಿಕ ನಿರುದ್ಯೋಗ ದರವನ್ನು ಎದುರಿಸುತ್ತಿದೆ. ದೇಶವು ದುರಂತದತ್ತ ಸಾಗುತ್ತಿದೆ ಎಂದು ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.