ಬಂಗಾರಪೇಟೆ, ಕೆಜಿಎಫ್ ಭಾಗದಲ್ಲಿ ಕೆರೆಗಳ ಪರಿಶೀಲನೆ ನಡೆಸಿದ ಕೇಂದ್ರ ಸಚಿವೆ
ಕೆಜಿಎಫ್/ಬಂಗಾರಪೇಟೆ: ಕೇಂದ್ರ ಸರಕಾರದ ಅಮೃತ ಯೋಜನಾ ಅಡಿಯಲ್ಲಿ ನೀಡಲಾಗಿದ್ದ ಅನುದಾನದಲ್ಲಿ ಕೈಗೊಂಡಿರುವ ಜಿಲ್ಲೆಯ ಕೆರೆಗಳ ಕಾಮಗಾರಿಯನ್ನು ಇಂದು ವೀಕ್ಷಣೆ ಮಾಡಿದ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಕಳಪೆ ಕಾಮಗಾರಿ ಕಾರಣಕ್ಕೆ ಅಧಿಕಾರಿಗಳಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.
ಬಂಗಾರಪೇಟೆ ತಾಲೂಕಿನ ಚಿಕ್ಕಅಂಕಡಹಳ್ಳಿ ಕೆರೆ, ಕೆಜಿಎಫ್ ಬಳಿಯ ಪೆದ್ದಪಲ್ಲಿ ಕೆರೆ ಹಾಗೂ ಕೋಲಾರದ ಶೆಟ್ಟಿಕೊತ್ತನೂರು ಕೆರೆಯ ಕಾಮಗಾರಿಯನ್ನು ಕೇಂದ್ರ ಸಚಿವರು ವೀಕ್ಷಿಸಿದರು.
ಇಷ್ಟೂ ಕೆರೆಗಳ ಕಾಮಗಾರಿಯನ್ನು ಸೂಕ್ಷ್ಮವಾಗಿ ಅವಲೀಕನ ಮಾಡಿದ ಅವರು, ಕಳಪೆ ಕಾಮಗಾರಿ ಮಾಡಿರುವ ಬಗ್ಗೆ ಸಿಟ್ಟಾದರು. ಮೊದಲೇ ಖಡಕ್ ಸಚಿವೆ ಎಂದೇ ಹೆಸರಾಗಿರುವ ಅವರು ಅಧಿಕಾರಿಗಳ ಮೇಲೆ ಪ್ರಶ್ನೆಗಳ ಸುರಿಮಳೆಗರೆದರು. ಈ ಸಂದರ್ಭದಲ್ಲಿ ಜಿಲ್ಲೆಯ ಉನ್ನತ ಅಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ, ಸಂಸದ ಮುನಿಸ್ವಾಮಿ ಅವರ ಎದುರಿನಲ್ಲಿಯೇ ಸಚಿವರು ಗರಂ ಆದರು.
“ಕೆರೆಗಳ ಕಾಮಗಾರಿಯನ್ನು ನಿಯಮಬದ್ಧವಾಗಿ ಮಾಡಿಲ್ಲ. ಕೆರೆಗಳಿಗೆ ಬೇಲಿ ನಿರ್ಮಾಣ ಮಾಡಲಾಗಿಲ್ಲ. ಕೆರೆಗಳ ಅಕ್ಕಪಕ್ಕದಲ್ಲಿ ಖಾಸಗಿ ಜಮೀನುಗಳಿವೆ. ಆ ಜಮೀನುಗಳು-ಕೆರೆಗಳು ಸೇರಿಕೊಂಡಿವೆ. ಯಾವುದು ಕೆರೆ, ಯಾವುದು ಖಾಸಗಿ ಭೂಮಿ ಎನ್ನುವುದು ಗೊತ್ತಾಗುವುದೇ ಇಲ್ಲ. ಕಾಮಗಾರಿಯನ್ನು ಅತ್ಯಂತ ಬೇಜವಾಬ್ದಾರಿಯಿಂದ ಕೈಗೊಳ್ಳಲಾಗೊದೆ” ಎಂದು ಅಧಿಕಾರಿಗಳ ಮೇಲೆ ಕಿಡಿಕಾರಿದರು.
ಸಚಿವರ ಪ್ರಶ್ನಾವಳಿಗೆ ಉತ್ತರಿಸಲು ಅಧಿಕಾರಿಗಳು ತಿಣುಕಾಡಿದರು. ಇದರಿಂದ ಮತ್ತೂ ಸಿಟ್ಟಾದ ನಿರ್ಮಲಾ ಸೀತಾರಾಮನ್ ಅವರು, ಎಲ್ಲವೂ ಕರಾರುವಕ್ಕಾಗಿ, ನಿಯಮಬದ್ಧವಾಗಿ ಮಾಡಬೇಕು. ಈ ಬಗ್ಗೆ ಸ್ಪಷ್ಟವಾದ ವರದಿ ನೀಡಬೇಕು ಎಂದು ತಾಕೀತು ಮಾಡಿದರು.
ಈ ಮೂರೂ ಕೆರೆಗಳ ಅಭಿವೃದ್ಧಿಗೆ ತಮ್ಮ ಸಂಸತ್ ಸದಸ್ಯ ನಿಧಿಯಿಂದ 1.83 ಕೋಟಿ ರೂ., ಮಹಾತ್ಮಾ ಗಾಂಧಿ ನರೇಗಾ ಯೋಜನೆಯಿಂದ 15.56 ಕೋಟಿ ರೂ., ಖಾಸಗಿ ಕೈಗಾರಿಕಾ ವಲಯದ ಸಿಎಸ್ ಆರ್ ನಿಧಿಯಿಂದ 6.14 ಕೋಟಿ ರೂ.ಗಳಷ್ಟು ಅನುದಾನವನ್ನು ನೀಡಲಾಗಿತ್ತು. ಕೊಟ್ಟ ಅನುದಾನಕ್ಕೆ ತಕ್ಕಂತೆ ಕಾಮಗಾರಿ ನಡೆಯದೇ ಇರುವುದು ಕೇಂದ್ರ ಸಚಿವರ ಸಿಟ್ಟಿಗೆ ಕಾರಣವಾಗಿತ್ತು.
ಹೋದ ಕಡೆ ಎಲ್ಲ ಕೇಂದ್ರ ಸಚಿವರು ಸ್ಥಳೀಯ ಜನರಿಂದ ಮಾಹಿತಿ ಪಡೆದುಕೊಂಡರು.