ಮೀಸಲಾತಿ ಪ್ರಮಾಣ ಹೆಚ್ಚಿಸಲು ಸರ್ವಪಕ್ಷ ಸಭೆಯಲ್ಲಿ ತೀರ್ಮಾನ
ಬೆಂಗಳೂರು: ಸಾಕಷ್ಟು ಹಗ್ಗಜಗ್ಗಾಟದ ನಡುವೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (SC-ST) ಮೀಸಲು ಬೇಡಿಕೆಗೆ ಮೋಕ್ಷ ಬಂದಿದ್ದು, ಎರಡೂ ಸಮುದಾಯಗಳ ಮೀಸಲು ಪ್ರಮಾಣ ಹೆಚ್ಚಳ ಮಾಡಲು ಶುಕ್ರವಾರ ನಡೆದ ಸರ್ವಪಕ್ಷ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ ಸೇರಿದಂತೆ ವಿವಿಧ ಪಕ್ಷಗಳ ನಾಯಕರು ಭಾಗಿಯಾಗಿ, ಮೀಸಲು ಹೆಚ್ಚಳಕ್ಕೆ ಬೆಂಬಲ ಸೂಚಿಸಿದರು.
ಎಸ್ಸಿ ವರ್ಗದ ಮೀಸಲಾತಿಯನ್ನು ಸದ್ಯ ಇರುವ ಶೇ. 15ರಿಂದ ಶೇ.17ಕ್ಕೆ ಹಾಗೂ ಎಸ್ಟಿ ಮೀಸಲಾತಿಯನ್ನು ಈಗಿರುವ ಶೇ.3ರಿಂದ 7ಕ್ಕೆ ಹೆಚ್ಚಳ ಮಾಡಲಾಗುವುದು. ಸರ್ವಪಕ್ಷ ಸಭೆಯ ನಿರ್ಣಯವನ್ನು ಸಚಿವ ಸಂಪುಟದಲ್ಲಿ ಇರಿಸಿ ಅಂಗೀಕಾರ ಪಡೆದುಕೊಂಡ ನಂತರ ಸರಕಾರದ ಆದೇಶ ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಹೆಚ್.ಡಿ.ಕುಮಾರಸ್ವಾಮಿ ಸಲಹೆ
ಎಸ್ ಸಿ ಮತ್ತು ಎಸ್ ಟಿ ಸಮುದಾಯಕ್ಕೆ ಮೀಸಲಾತಿ ಏರಿಕೆ ಮಾಡುವ ಸಂಬಂಧ ರಾಜ್ಯ ಸರಕಾರ ಆದಷ್ಟು ಬೇಗ ನಿರ್ಣಯ ಕೈಗೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಒತ್ತಾಯ ಮಾಡಿದ್ದಾರೆ.
ಈ ಬಗ್ಗೆ ಕರೆಯಲಾಗಿದ್ದ ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಿದ ಮೇಲೆ ನಗರದ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಜನತಾ ಮಿತ್ರ ಸಮಾರೋಪ ಸಮಾವೇಶದ ಸಿದ್ಧತೆಗಳನ್ನು ಪರಿಶೀಲನೆ ಮಾಡಿದ ವೇಳೆ ಮಾಧ್ಯಮಗಳ ಜತೆ ಮಾತನಾಡಿದರು.
ಇಂದು ಸರ್ವಪಕ್ಷ ಸಭೆ ಕರೆದಿದ್ದರು. ಸರ್ವಪಕ್ಷದ ನಾಯಕರು ಈ ಬಗ್ಗೆ ಚರ್ಚಿಸಿದ್ದು, ಜನಗಣತಿ ಆಧಾರದ ಮೇಲೆ ಎಸ್ ಸಿ ಸಮಾಜಕ್ಕೆ ಶೇ. 15 ರಿಂದ ಶೇ.17 ಕ್ಕೆ ಹಾಗೂ ಎಸ್ ಟಿಗೆ ಶೇ.3 ರಿಂದ ಶೇ.7 ಕ್ಕೆ ಮೀಸಲಾತಿ ಏರಿಕೆ ಮಾಡಲು ಆ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಆದಷ್ಟು ಬೇಗನೆ, ಸಮಯ ವ್ಯರ್ಥ ಮಾಡದೆ ಮೀಸಲಾತಿಯನ್ನು ಹೆಚ್ಚಿಸಿ ಜಾರಿಗೆ ತರಬೇಕು ಎಂದು ನಾನು ಸಲಹೆ ಮಾಡಿದ್ದೇನೆ.
ಹೆಚ್.ಡಿ.ಕುಮಾರಸ್ವಾಮಿ
ಮೀಸಲಾತಿ ಹೆಚ್ಚಳ ಮಾಡುವ ಬಗ್ಗೆ ಸದನದಲ್ಲಿ ಹೇಳಿದ್ದರು. ಹಾಗಾಗಿ, ಸಭೆ ಕರೆಯಲಾಗಿತ್ತು. ಹಿಂದೆ ನಾನು ಮುಖ್ಯಮಂತ್ರಿಯಾಗಿದ್ದಾಗ ನ್ಯಾ.ನಾಗಮೋಹನ್ ದಾಸ್ ಸಮಿತಿ ರಚನೆ ಮಾಡಿದ್ದೆವು. ಆ ವರದಿಗೆ ನನ್ನ ನೇತೃತ್ವದ ಸರಕಾರ ಒಪ್ಪಿಗೆಯನ್ನು ನೀಡಿತ್ತು. ಈ ವರದಿ ಅನುಷ್ಠಾನಕ್ಕೆ ತರಬೇಕೆಂದು ನಾಯಕ ಸಮುದಾಯದ ಪೂಜ್ಯ ಶ್ರೀಗಳು ಸುಧೀರ್ಘ ಕಾಲದಿಂದ ಧರಣಿ ಮಾಡಿದ್ದಾರೆ. ಇದರ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸರ್ವ ಪಕ್ಷದ ಸಭೆ ಕರೆದಿದ್ದು, ಸರ್ವ ಪಕ್ಷಗಳೂ ಈ ಬಗ್ಗೆ ಸರಕಾರಕ್ಕೆ ಸಲಹೆ ಮಾಡಿದ್ದೇವೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
ನ್ಯಾ.ನಾಗಮೋಹನ್ ದಾಸ್ ವರದಿಯಲ್ಲಿ ಇದರ ಪ್ರಮುಖ ವಿಷಯ ಇದ್ದರೂ, ದೇಶದ ಹಲವಾರು ರಾಜ್ಯದಲ್ಲಿ ಇರುವ ಹಲವಾರು ಸಣ್ಣ ಪುಟ್ಟ ಸಮಾಜದರು ಇದ್ದಾರೆ. 75 ವರ್ಷದಲ್ಲಿ ಎಂದೂ ಮೀಸಲಾತಿ ಕಾಣದೆ ಇರುವ ಆನೇಕ ಸಮುದಾಯಗಳು ಇವೆ. ಅದರ ಜತೆಗೆ ಒಳ ಮೀಸಲಾತಿ ಬಗ್ಗೆಯೂ ಚರ್ಚೆ ಮಾಡಿದ್ದೇವೆ. 2005 ರಲ್ಲಿ ಒಳ ಮೀಸಲಾತಿ ವಿಚಾರವಾಗಿ ಕಮಿಟಿ ರಚನೆ ಮಾಡಿತ್ತು. ಆಗಿನ ಸರ್ಕಾರ ಆ ವರದಿ ಕೊಟ್ಟು ಹತ್ತು ವರ್ಷಗಳಾಗಿವೆ. ಇನ್ನೂ ಅದರ ಕಾರ್ಯಗತವಾಗಿಲ್ಲ. ಆದರೆ, ಅದಕ್ಕೆ ಕೋಟ್ಯಾಂತರ ರೂ. ಹಣ ಖರ್ಚಾಗಿದೆ. ಇದರ ಬಗ್ಗೆಯೂ ಕ್ರಮ ತೆಗೆದುಕೊಳ್ಳುವಂತೆ ಸಭೆಯಲ್ಲಿ ಹೇಳಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಟಿ.ಎ.ಶರವಣ, ಭೋಜೇಗೌಡ, ಕೆ.ಎನ್.ತಿಪ್ಪೇಸ್ವಾಮಿ, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಆರ್ ಪ್ರಕಾಶ್ ಮುಂತಾದವರು ಹಾಜರಿದ್ದರು.