ಆಯುರ್ವೇದ ದಿನ
By Guruprasad Hawaldar
ಓಂ ನಮೋ ಭಗವತೇ ಮಹಾಸುದರ್ಶನ ವಾಸುದೇವಾಯ|
ಧನ್ವಂತರಾಯ ಅಮೃತ ಕಳಶ ಹಸ್ತಾಯ, ಸಕಲ ಭಯ ವಿನಾಶಾಯ |
ಸರ್ವರೋಗ ನಿವಾರಣಾಯ, ತ್ರಿಲೋಕ ಪತಯೇ ತಿಲೋಕ ನಿಧಯೇ|
ಓಂ ಶ್ರೀ ಮಹಾವಿಷ್ಣು ಸ್ವರೂಪಾಯ ಶ್ರೀ ಧನ್ವಂತರಿ ಸ್ವರೂಪ|
ಓಂ ಶ್ರೀಶ್ರೀ ಔಷಧ ಚಕ್ರ ನಾರಾಯಣಾಯ ನಮಃ ||
ಸೋಮವಾರ (ಅಕ್ಟೋಬರ್ 24) ಧನ್ವಂತರಿ ಮತ್ತು ಆಯುರ್ವೇದ ದಿನವನ್ನಾಗಿ ಆಚರಿಸಲಾಗುತ್ತದೆ.
ಧನ್ವಂತರಿ ಭಾರತದ ಮೊದಲ ವೈದ್ಯನೆಂಬ ನಂಬಿಕೆ ಭಾರತೀಯರಲ್ಲಿ ಇದೆ. ವೈದಿಕ ಸಂಪ್ರದಾಯದ ಪ್ರಕಾರ ಧನ್ವಂತರಿ ಆಯುರ್ವೇದದ ಹರಿಕಾರ. ಹಿಂದೂ ಸಂಪ್ರದಾಯದಲ್ಲಿ ಹಲವು ಸಸ್ಯಗಳ, ಗಿಡಮೂಲಿಕೆಗಳ ಪಾರಿಸರಿಕ ಬಳಕೆಯಿಂದ ಔಷಧ ತಯಾರಿಸಿದ ಗೌರವ ಧನ್ವಂತರಿಗೆ ಸಲ್ಲುತ್ತದೆ. ಆಯುರ್ವೇದದ ಮುಖ್ಯ ಗುರಿ ರೋಗ ತಡೆಗಟ್ಟುವಿಕೆ ಮತ್ತು ಆರೋಗ್ಯವನ್ನು ಉತ್ತೇಜಿಸುವುದು. ಭಗವಾನ್ ಧನ್ವಂತರಿಯನ್ನು ಆಯುರ್ವೇದದ ದೇವರು ಎಂದು ಕರೆಯಲಾಗುತ್ತದೆ.
ಆಯುರ್ವೇದ ವೈದ್ಯರು ಧನ್ವಂತರಿ ತ್ರಯೋದಶಿಯಂದು ಧನ್ವಂತರಿ ಜಯಂತಿಯನ್ನು ಆಚರಿಸುತ್ತಾರೆ. ಅಂದು ತಮಗೆ ವಿದ್ಯೆ ಕಲಿಸಿದ ಗುರುವಿಗೆ ವಂದನೆ ಸಲ್ಲಿಸುವುದು ಪದ್ದತಿ.
ಆರೋಗ್ಯದ ಆದಿದೇವತೆಯಾದ ಧನ್ವಂತರಿ ಯನ್ನು ಕೇಂದ್ರ ಸರ್ಕಾರ ಆಯುರ್ವೇದ ದಿನವನ್ನಾಗಿ 2016 ರಿಂದ ಪ್ರತಿ ವರ್ಷ ಆಚರಿಸಲಾಗುತ್ತಿದೆ.
ಧನ್ವಂತರಿ ಎನ್ನುವುದಕ್ಕೆ ವಿಶೇಷ ಅರ್ಥವಿದೆ. ಏನೆಂದರೆ ಧನ+ಏವ+ಅಂತಃ+ಅರಿ= ಧನ್ವಂತರಿ. ಇನ್ನೊಂದು ಅರ್ಥ ಧನಷಾ+ತರತೇ+ತಾರಯತೇ+ಪಾಪತ್= ಧನ್ವಂತರಿ (ಪಾಪ ವಿಮುಕ್ತಿ). ಚಾಕ್ಷುಷ ಮನ್ವಂತರದಲ್ಲಿ ದೂರ್ವಾಸ ಋಷಿಗಳ ಶಾಪದಿಂದ ಇಂದ್ರನು ಸಂಪತ್ತುರಹಿತನಾಗಿ ಚರ್ತುಮುಖ ಬ್ರಹ್ಮದೇವರ ಹತ್ತಿರ ಬಂದು ತಮ್ಮ ಸ್ಥಿತಿಯನ್ನು ವಿವರಿಸಿದ. ಬ್ರಹ್ಮದೇವರು ಮಹಾವಿಷ್ಣುವಿನಲ್ಲಿ ಶರಣು ಹೊಂದಲು ತಿಳಿಸಿದರು. ಅದೇ ಪ್ರಕಾರ ದೇವತೆಗಳು ಮಹಾವಿಷ್ಣುವಿನ ಬಳಿಗೆ ಹೋಗಿ ಸ್ತೋತ್ರ ಮಾಡಿದರು. ದೇವತೆಗಳ ಸ್ತೋತ್ರದಿಂದ ಪ್ರಸನ್ನನಾದ ವಿಷ್ಣು, ಅವರಿಗೆ ಅಭಯವನ್ನು ನೀಡಿದ. ಅಸುರರ ಜೊತೆ ಸಂಧಿ ಮಾಡಿಕೊಂಡು ಸಮುದ್ರಮಥನ ಮಾಡಲು ತಿಳಿಸಿದ. ಆಗ ‘ಮಂದರ ಪರ್ವತ’ವನ್ನು ಕಡಗೋಲನ್ನಾಗಿ ಹಾಗೂ ‘ವಾಸುಕೀ’ ಎಂಬ ಸರ್ಪವನ್ನು ಹಗ್ಗವನ್ನಾಗಿ ಮಾಡಿ ಸಮುದ್ರವನ್ನು ಕಡೆಯುತ್ತಿರಲು ಮೊದಲು ಹಾಲಾಹಲ ವಿಷ ಬಂತು. ಅದನ್ನು ಶಿವನು ಸ್ವೀಕರಿಸಿ ವಿಷಕಂಠನಾದ. ಮತ್ತೆ ಮಥನ ಕಾರ್ಯ ಮುಂದುವರೆದಾಗ ಕಾಮಧೇನು ಬಂತು. ಅದನ್ನು ಯಜ್ಞ ಮಾಡುವ ಋಷಿಗಳು ಸ್ವೀಕರಿಸಿದರು. ನಂತರ ಉಚೈ ಶ್ರವಸ್ ಕುದುರೆ ಬಂತು. ಅದನ್ನು ಬಲಿರಾಜ ಸ್ವೀಕರಿಸಿದ. ಜೊತೆಗೆ ಐರಾವತ ಆನೆ ಬಂತು. ಅದನ್ನು ಇಂದ್ರ ತೆಗೆದುಕೊಂಡ. ಪಾರಿಜಾತವೆಂಬ ಕಲ್ಪವೃಕ್ಷ ಬರಲು ಅದು ದೇವಲೋಕವನ್ನು ಅಲಂಕರಿಸಿತು ಹಾಗೂ ಅಪ್ಸರ ಸ್ತ್ರೀಯರು ಹುಟ್ಟಿ ಬಂದರು. ಆನಂತರವೂ ಮಥನ ಕಾರ್ಯ ಮುಂದುವರೆದಾಗ ವೈದ್ಯನಾದ ಮಹಾವಿಷ್ಣುವು ದಿವ್ಯಗಂಧಾನುಲೇಪಿತನಾಗಿ ‘ಅಮೃತ ಕಲಶ’ ಕೈಯಲ್ಲಿ ಹಿಡಿದು ‘ಧನ್ವಂತರಿ ಅಪರಾವತಾರ’ ತಾಳಿಬಂದದ್ದು ಆಶ್ವೀಜ ಮಾಸದ ಕೃಷ್ಣ ಪಕ್ಷದ ತ್ರಯೋದಶಿ ದಿನ ಎಂದು ಪುರಾಣಗಳು ಹೇಳುತ್ತವೆ.
ಮಹಾ ವಿಷ್ಣುವು ಧನ್ವಂತರಿಯಾಗಿ ಅವತಾರ ರೂಪದಲ್ಲಿ ಬರಲು ಬಲವಾದ ಕಾರಣ ಏನೆಂದರೆ- ದೇವತೆಗಳು ಅಸುರರೊಂದಿಗೆ ಹೋರಾಡುವ ಸಂದರ್ಭದಲ್ಲಿ ಗುಣಪಡಿಸಲಾಗದ ನೋವು- ವ್ಯಾಧಿಗಳಿಗೆ ತುತ್ತಾಗುತ್ತಿದ್ದರು. ಇದನ್ನು ಕಂಡು ವಿಷ್ಣುವು ವೈದ್ಯನಾಗಿ ಚಿಕಿತ್ಸೆ ನೀಡಲು ಬಂದ. ಆ ದಿನವು ಕಾರ್ತೀಕ ಮಾಸದ ಕೃಷ್ಣಪಕ್ಷದ ತ್ರಯೋದಶಿ ದಿನವಾಗಿತ್ತು. ಅಂದಿನಿಂದ ಆ ದಿನವನ್ನು ಧನ್ವಂತರಿ ಜಯಂತಿ ಆಚರಿಸಲಾಗುತ್ತದೆ.
ಧನ್ವಂತರಿಯು ಬಲಗೈಯಲ್ಲಿ ಜ್ಞಾನಮುದ್ರೆಯನ್ನೂ, ಎಡಗೈಯಲ್ಲಿ ಅಮೃತಕಲಶವನ್ನೂ ಹಿಡಿದುಕೊಂಡಿದ್ದಾನೆ. ನಮ್ಮ ಹೃದಯದಲ್ಲಿ ಅಗ್ನಿಮಂಡಲ, ಚಂದ್ರಮಂಡಲ, ಸೂರ್ಯಮಂಡಲಗಳಿವೆ. ಹೃದಯದಲ್ಲಿರುವ ಸೂರ್ಯಮಂಡಲದಲ್ಲಿ ಸೂರ್ಯನಾರಾಯಣನನ್ನು ಚಿಂತಿಸಿ, ಗಾಯತ್ರಿ ಮಂತ್ರವನ್ನು ಜಪಿಸುವಂತೆ ಹೃದಯದಲ್ಲಿರುವ ಚಂದ್ರಮಂಡಲದಲ್ಲಿ ಧನ್ವಂತರಿಯನ್ನು ಚಿಂತಿಸಿ ಜಪಿಸಿದಾಗ ,ಹೃದಯದ ಚಂದ್ರಮಂಡಲದಲ್ಲಿರುವ ಧನ್ವಂತರಿಯು 72000 ನಾಡಿಗಳಲ್ಲಿ ತನ್ನ ಬೆಳಕನ್ನು ಸೂಸುತ್ತಾ ನಮ್ಮ ಸಮಸ್ತ ದೇಹವನ್ನು ಅಮೃತಮಯವನ್ನಾಗಿ ಮಾಡುತ್ತಾನೆ. ಅಲ್ಲದೆ ಶಿರಸ್ಸಿನಲ್ಲಿ ಹುಬ್ಬುಗಳ ನಡುವೆ, ಕಿರುನಾಲಿಗೆಯಲ್ಲಿ, ಹೊಕ್ಕಳಿನಲ್ಲಿ ಮತ್ತು ಕೆಳಭಾಗ ದಲ್ಲಿರುವ ಷಟ್ಚಕ್ರಗಳಲ್ಲಿಯೂ ಇದೇ ಧನ್ವಂತ ರಿಯು ಅಮೃತಧಾರೆಯನ್ನು ಸುರಿಸುತ್ತಾನೆ ಎಂದು ಪಂಡಿತರು ಹೇಳುತ್ತಾರೆ.
ಆಯುರ್ವೇದವೆಂದರೆ ಅದು ಬದುಕಿನ ಅಧ್ಯಯನ. ಆಯುರ್ ಎಂದರೆ ಬದುಕು, ವೇದ ಎಂದರೆ ತಿಳಿದುಕೊಳ್ಳುವುದು & ಆಯು—ಆಯಸ್ಸು; ವೇದ—ಜ್ಞಾನ ಆಯುರ್ವೇದ ಭಾರತೀಯ ವೈದ್ಯಶಾಸ್ತ್ರ, 7೦೦೦ ವರ್ಷಗಳಿಗೂ ಹೆಚ್ಚು ಹಳೆಯದಾದ ಔಷಧ ಪದ್ಧತಿ. ವೇದಗಳಲ್ಲಿ ಮೂಡಿಬರುವ ಈ ಪದ್ಧತಿ ಸರ್ವ ರೋಗಗಳಿಗೂ ಔಷಧಿಎಂಬುದನ್ನು ತಿಳಿಸುತ್ತದೆ.
ಆಯುರ್ವೇದದ ಉಲ್ಲೇಖವನ್ನು ನಾವು ಅಥರ್ವಣ ವೇದದಲ್ಲಿ ಕಾಣಬಹುದು. ಆಯುರ್ವೇದ ಶಾಸ್ತ್ರ ಕುರಿತಂತೆ ಮೂರು ಮುಖ್ಯಗ್ರಂಥಗಳನ್ನು ಕಾಣಬಹುದು. ಅವೆಂದರೆ ಚರಕ ಸಂಹಿತೆ (ಕ್ರಿ.ಪೂ.ಮೊದಲನೆ ಶತಮಾನದ ಆತ್ರೇಯ ಋುಷಿ ವಿದ್ಯಾಲಯದ ಚರಕರಿಂದ), ಸುಶ್ರುತ ಸಂಹಿತೆ (ಕ್ರಿ.ಪೂ.6ನೇ ಶತಮಾನದ ಧನ್ವಂತರಿ ದೇವ ಶಾಲೆಯ ಸುಶ್ರುತರಿಂದ), ಅಷ್ಠಾಂಗ ಹೃದಯ (ಆರನೇ ಶತಮಾನದ ಕಾಶ್ಯಪ ಋುಷಿ ಶಾಲೆಯ ವಾಗ್ಭಟರಿಂದ). ಇನ್ನುಳಿದಂತೆ ಸಾರಂಗಧಾರ ಸಂಹಿತೆ, ಮಾಧವ ನಿಧಾನ, ಭಾವ ಪ್ರಕಾಶದಲ್ಲೂ ಆಯುರ್ವೇದದ ಉಲ್ಲೇಖವಿದೆ.
ಆಯುರ್ವೆದ ಅತ್ಯಂತ ಪುರಾತನವಾದದ್ದು. ಮನುಷ್ಯ ಅಸ್ವಸ್ಥನಾದಾಗ ಗಿಡಮೂಲಿಕೆಗಳಿಂದ ಕಷಾಯ, ಕಾಡೆಗಳನ್ನು ತಯಾರಿಸಿ ಕುಡಿಸಿ ಅಥವಾ ಬೇರು, ಎಲೆ, ಹೂವು, ಕಾಂಡಗಳನ್ನು ಅರೆದು ಗಾಯಗಳಿಗೆ ಲೇಪಿಸುತ್ತೇವೆ. ಔಷಧೀಯ ಗುಣಗಳನ್ನು ಸಸ್ಯಗಳು ಹೊಂದಿವೆ. ಪ್ರತಿ ರೋಗಕ್ಕೂ ಒಂದು ಗಿಡಮೂಲಿಕೆ ಇದೆ. ಮೊದಲು ವೈದ್ಯರು ಗುಡ್ಡ, ಬೆಟ್ಟ, ಕಾಡುಗಳನ್ನು ಅಲೆದು ಔಷಧೀಯ ಸಸ್ಯಗಳನ್ನು ತಂದು ಮದ್ದನ್ನು ತಯಾರಿಸುತ್ತಿದ್ದರು. ಹಿಂದೆ ರಾಮಾಯಣ ಕಾಲದಲ್ಲಿ ನಡೆದ ಘಟನೆ ಈ ಆಯುರ್ವೆದಕ್ಕೆ ಸಾಕ್ಷಿ ಆಗಿದೆ. ರಾಮ, ಲಕ್ಷ್ಮಣರು ಕಾಡಿನಲ್ಲಿದ್ದಾಗ ಒಂದು ಸಂದರ್ಭದಲ್ಲಿ ಲಕ್ಷ್ಮಣ ಮೂರ್ಛೆ ಹೋಗುತ್ತಾನೆ. ರಾಮ ಗಾಬರಿಗೊಂಡು ತನ್ನ ಭಕ್ತನಾದ ಹನುಮಂತನಿಗೆ, ಕಿಷ್ಕಿಂಧಾ ಪರ್ವತಕ್ಕೆ ಹೋಗಿ ಸಂಜೀವಿನಿ ಕಡ್ಡಿ ತರಲು ಹೇಳುತ್ತಾನೆ. ತಕ್ಷಣ ಹನುಮಂತ ಆ ಪರ್ವತಕ್ಕೆ ಹೋಗಿ ಹುಡುಕಿದಾಗ ಸಂಜೀವಿನಿ ಸಿಗದ ಕಾರಣ ಪರ್ವತವನ್ನೇ ಹೊತ್ತು ತರುತ್ತಾನೆ. ಅದರಿಂದ ಸಂಜೀವಿನಿಯನ್ನು ತೆಗೆದು ಲಕ್ಷ್ಮಣನ ಪ್ರಾಣವನ್ನು ಉಳಿಸಲಾಗುತ್ತದೆ. ಹಿಂದೆ ಋಷಿಮುನಿಗಳು ಹಾಗೂ ಗುಡ್ಡಗಾಡು ಜನರು ಹಣ್ಣು, ಗಡ್ಡೆ, ಗೆಣಸು ತಿಂದು ಅಪಾರ ಶಕ್ತಿಯನ್ನು ಪಡೆದಿದ್ದರು. ಹಾಗೆಯೇ ಆರೋಗ್ಯ ಸರಿಯಿಲ್ಲದಾಗ ಆಯುರ್ವೆದವನ್ನೇ ಬಳಸುತ್ತಿದ್ದರು.
ಹಿಂದೂ ಧರ್ಮದ ಪ್ರಕಾರ, ಧನ್ವಂತರಿಯ ಜನ್ಮದಿನವನ್ನು ಕಾರ್ತಿಕ ಕೃಷ್ಣ ತ್ರಯೋದಶಿಯಂದು ಆಚರಿಸಲಾಗುತ್ತದೆ. ಈ ದಿನ ಭಗವಾನ್ ಧನ್ವಂತರಿಯು ಅಮೃತ ಕಲಶದೊಂದಿಗೆ ಹೊರಹೊಮ್ಮಿದನೆಂದು ನಂಬಲಾಗಿದೆ. , ಈ ವರ್ಷ ಕೇಂದ್ರ ಆಯುಷ್ ಸಚಿವಾಲಯವು ಧನ್ವಂತರಿ ಜಯಂತಿಯನ್ನು ಆಯುರ್ವೇದ ದಿನದ ಆಗಿ “ಪ್ರತಿ ದಿನ ಪ್ರತಿ ಮನೆಯಲ್ಲಿ ಆಯುರ್ವೇದ-2022 ” (Har Din Har Ghar Ayurveda’.) ಥೀಮ್ ನೊಂದಿಗೆ ಆಚರಿಸಲಾಗುತ್ತದೆ.
ಇಂದಿನ ಆಧುನಿಕ ಜಗತ್ತಿನಲ್ಲಿ ಆಯುರ್ವೇದ ಔಷಧ ಪದ್ಧತಿಗೆ ಮೊರೆ ಹೋಗುತ್ತಿದ್ದಾರೆ ಯಾವುದೇ ತರಹದ ಅಡ್ಡ ಪರಿಣಾಮಗಳು ಇಲ್ಲದೇ ಇರುವುದರಿಂದ ಜನರು ಹೆಚ್ಚು ನಂಬುತ್ತಿದ್ದಾರೆ.ಆರ್ಯುವೇದ ಅದರ ಪದ್ದತಿ ಔಷಧಿಗಳು ಇಂದು ದೊಡ್ಡ ಉದ್ಯಮವಾಗಿ ಲಕ್ಷಾಂತರ ಜನರಿಗೆ ಉದ್ಯೋಗ ನೀಡಿದೆ ಅಲ್ಲದೇ ದೇಶವಿದೇಶಗಳಲ್ಲಿ ಭಾರತೀಯ ಈ ಪದ್ದತಿಯನ್ನು ಅನುಸರಿಸುತ್ತಿದ್ದಾರೆ.
***
ಡಾ.ಗುರುಪ್ರಸಾದ್ ಹವಾಲ್ದಾರ್
- ವೃತ್ತಿಯಲ್ಲಿ ಶಿಕ್ಷಕರು, ಪ್ರವೃತ್ತಿಯಲ್ಲಿ ಲೇಖಕರು. ಅಧ್ಯಾತ್ಮ ಮತ್ತು ಪುರಾಣ ಕಥನಗಳ ಬರವಣಿಗೆಯಲ್ಲಿ ಎತ್ತಿದ ಕೈ. ಸಮಕಾಲೀನ ಸಂದರ್ಭಗಳ ಬಗ್ಗೆಯೂ ಅವರ ಬರಹ ಬಹಳ ಮೊನಚು. ರಾಜ್ಯದ ಅನೇಕ ಪತ್ರಿಕೆ, ವೆಬ್ ತಾಣ್, ಡಿಜಿಟಲ್ ಮಾಧ್ಯಮಗಳಲ್ಲಿ ಅವರ ಲೇಖನಗಳು ಪ್ರಕಟವಾಗಿವೆ.