ಶಬರಿಮಲೆ ಮದ್ಯ-ಮಾದಕ ವಸ್ತುಮುಕ್ತ ತಾಣ; ಮಕರವಿಳಕ್ಕು ಆರಂಭಕ್ಕೆ ಮುನ್ನ ಕೇರಳ ಸರಕಾರ ನಿರ್ಧಾರ
ತಿರುವನಂತಪುರ/ಪಟ್ಟಾನಂತಿಟ್ಟ: ಶಬರಿಮಲೆಗೆ ಸಂಬಂಧಿಸಿದಂತೆ ಮುಂಬರುವ ಮಕರವಿಳಕ್ಕುಗೂ ಮೊದಲೇ ಕೇರಳದ ಕಮ್ಯುನಿಸ್ಟ್ ಸರಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.
ಶಬರಿಮಲೆ ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಮದ್ಯ ಮತ್ತು ಮಾದಕವಸ್ತು ಮುಕ್ತ ಪ್ರದೇಶ ಎಂದು ಕೇರಳದ ಪಿಣರಾಯಿ ವಿಜಯನ್ ಸರಕಾರ ಘೋಷಣೆ ಮಾಡಿದ್ದು, ಕ್ಷೇತ್ರದ ಪಾವಿತ್ರ್ಯತೆಗೆ ಧಕ್ಕೆ ಬಾರದಂತೆ ಕೆಲ ಕಠಿಣ ಕ್ರಮಗಳನ್ನು ಕೈಗೊಂಡಿದೆ.
ಕೋವಿಡ್ ನಂತರ ಶಬರಿಮಲೆ ಯಾತ್ರೆಗೆ ಹಾಗೂ ಮಕರವಿಳಕ್ಕುಗೆ ಕೇರಳ ಸರಕಾರ ಭರ್ಜರಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಇದೇ ನವೆಂಬರ್ ೧೭ರಿಂದ ಯಾತ್ರೆ ಆರಂಭವಾಗಿ ಮುಂದಿನ ವರ್ಷ ಜನವರಿ ೧೫ರವರೆಗೆ ನಡೆಯಲಿದೆ.
ಶ್ರೀ ಅಯ್ಯಪ್ಪ ಸನ್ನಿಧಾನ ಸೇರಿದಂತೆ ಶಬರಿಮಲೆ ವ್ಯಾಪ್ತಿಯಲ್ಲಿ ಬರುವ ಪಂಪಾ ನದಿ ತೀರ, ಮರಕೂಟಂ, ಶಬರಿಪೀಠ ಸೇರಿದಂತೆ ಇನ್ನೂ ಅನೇಕ ಪ್ರದೇಶಗಳನ್ನು ಮದ್ಯ ಹಾಗೂ ಮಾದಕ ವಸ್ತು ಮುಕ್ತ ಪ್ರದೇಶಗಳೆಂದು ಅಲ್ಲಿನ ಸರಕಾರ ಘೋಷಣೆ ಮಾಡಿದೆ.
ಈ ಬಗ್ಗೆ ಪೊಲೀಸ್ ಇಲಾಖೆಗೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ. ಮುಖ್ಯವಾಗಿ ಅಯ್ಯಪ್ಪಮಾಲೆ ಧರಿಸುವ ಭಕ್ತರು ಈ ಬಗ್ಗೆ ಎಚ್ಚರ ವಹಿಸಬೇಕು ಎಂದು ತಿಳಿಸಲಾಗಿದೆ. ಈ ಬಗ್ಗೆ ನಿಗಾ ಇಡಲು ಅಬಕಾರಿ, ಪೊಲೀಸ್, ಅರಣ್ಯ ಇಲಾಖೆಗಳನ್ನು ಒಳಗೊಂಡ ಸಂಯುಕ್ತ ಕಾರ್ಯಪಡೆಯನ್ನು ರಚನೆ ಮಾಡಲಾಗಿದೆ.
ಕಠಿಣ ಕ್ರಮಗಳೇನು?
- ಮದ್ಯ ಸೇವನೆ, ಮಾದಕ ವಸ್ತು ವ್ಯಸನಿಗಳಿಗೆ ಅಯ್ಯಪ್ಪ ದರ್ಶನ ಭಾಗ್ಯ ಇಲ್ಲ
- ನಿಲಕ್ಕಲ್ ಬೇಸ್ ಕ್ಯಾಂಪಿನಲ್ಲಿಯೇ ತೀವ್ರ ತಪಾಸಣೆ
- ಹೆಜ್ಜೆಹೆಜ್ಜೆಗೂ ತಪಾಸಣೆ, ವಾಹನಗಳ ಶೋಧ ಕಡ್ಡಾಯ
- ಪಂಪಾ ತಪ್ಪಲಿನಲ್ಲಿ ವಿಶೇಷ ತನಿಖಾ ವ್ಯವಸ್ಥೆ
- ಪಾದಚಾರಿ ಮಾರ್ಗದಲ್ಲಿಯೂ ಕಟ್ಟೆಚ್ಚರ
- ಸನ್ನಿಧಾನದಲ್ಲೂ ತೀವ್ರ ನಿಗಾ, ವಸತಿ ಗೃಹಗಳ ಮೇಲೆ ಹದ್ದಿನಕಣ್ಣು
- ನಿಷೇಧಿತ ಪ್ರದೇಶದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಇಲ್ಲ