ಬಾದಾಮಿಯಿಂದ ಸ್ಪರ್ಧಿಸುವುದು ರೂಲ್ಡೌಟ್ ಎಂದ ಪ್ರತಿಪಕ್ಷ ನಾಯಕ
ಕೋಲಾರ: ಬಾದಾಮಿ ಕ್ಷೇತ್ರದ ಶಾಸಕನಾದ ನನ್ನನ್ನು ಕೋಲಾರಕ್ಕೆ ಬಂದು ಸ್ಪರ್ಧೆ ಮಾಡುವಂತೆ ಇಲ್ಲಿನ ಜನರ ಒತ್ತಾಯ ಇತ್ತು. ಅದಕ್ಕೆ ಕೋಲಾರಕ್ಕೆ ಬಂದಿದ್ದೇನೆ ಎಂದು ಪ್ರತಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ಕೋಲಾರದಲ್ಲಿ ದೇವಾಲಯ, ಚರ್ಚ್, ಮಸೀದಿಗಳಿಗೆ ಭೇಟಿ, ಪ್ರತಿಮೆಗಳಿಗೆ ಮಾಲಾರ್ಪಣೆ ಇತ್ಯಾದಿಗಳನ್ನು ಮುಗಿಸಿದ ಮೇಲೆ ಅವರು ಮಾಧ್ಯಮಗಳ ಜತೆ ಮಾತನಾಡಿದರು.
ನನಗೆ ಈ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ಜನರು ಮತ್ತು ನಮ್ಮ ಪಕ್ಷದ ನಾಯಕರು ಒತ್ತಾಯ ಮಾಡುತ್ತಿದ್ದಾರೆ. ಎರಡು ದಿನ ನೀವು ಕೋಲಾರಕ್ಕೆ ಬಂದರೆ ಸಾಕು, ನಾವೆಲ್ಲಾ ಸೇರಿ ಒಟ್ಟಾಗಿ ಗೆಲ್ಲಿಸುವ ಭರವಸೆ ನೀಡಿದ್ದಾರೆ. ಹೀಗಾಗಿ ಬಂದಿದ್ದೇನೆ ಎಂದು ಅವರು ತಿಳಿಸಿದರು.
ನನಗೆ ಯಾವ ಕ್ಷೇತ್ರದಲ್ಲಿಯೂ ಸ್ಪರ್ಧೆ ಮಾಡಲು ಅಂಜಿಕೆ ಇಲ್ಲ. ಬಾದಾಮಿ ಕ್ಷೇತ್ರದಲ್ಲಿ ಸ್ವರ್ಧೆ ಮಾಡುವಂತೆ ಒತ್ತಾಯವಿದೆ. ವಯಸ್ಸಾದ ಕಾರಣ ದೂರದ ಬಾದಾಮಿಗೆ ಓಡಾಡಲು ನನಗೆ ಕಷ್ಟವಾಗುತ್ತಿದೆ. ಅದಕ್ಕಾಗಿ ಹತ್ತಿರದ ಕ್ಷೇತ್ರವೊಂದು ಬೇಕಾಗಿತ್ತು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.
ಕೋಲಾರ ಭಾಗದ ಮುಖಂಡರು ಕೋಲಾರಕ್ಕೇ ಬರುವಂತೆ ಒತ್ತಾಯ ಮಾಡಿದ್ದರು. ಅದಕ್ಕಾಗಿ ಇವತ್ತು ಕೋಲಾರಕ್ಕೆ ಭೇಟಿ ಮಾಡಿರುವೆ. ಸಿ.ಬೈರೇಗೌಡರು ಮತ್ತು ನಾನು ಸ್ನೇಹಿತರು. ಅದಕ್ಕಾಗಿ ಬೈರೇಗೌಡರ ಸಮಾಧಿಗೆ ಗೌರವ ಸಲ್ಲಿಸಿದ್ದೇನೆ ಎಂದರು ಸಿದ್ದರಾಮಯ್ಯ.
ಬಾದಾಮಿ ದೂರ ಇರುವ ಕಾರಣಕ್ಕೆ ಸರಿಯಾಗಿ ಅಲ್ಲಿನ ಜನರ ಕಷ್ಟಸುಖಕ್ಕೆ ಸ್ಪಂದಿಸಲು ಆಗುತ್ತಿಲ್ಲ ಅದಕ್ಕಾಗಿ ಹತ್ತಿರದ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಬೇಕು ಎಂದುಕೊಂಡಿದ್ದೇನೆ. ಹಲವಾರು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವಂತೆ ನನತೆ ಒತ್ತಾಯಗಳು ಬರುತ್ತಿವೆ ಎಂದು ಅವರು ಹೇಳಿಕೊಂಡರು.
ನನ್ನ ಸ್ಪರ್ಧೆ ಬಗ್ಗೆ ನಾನು ಈಗಾಗಲೇ ನಮ್ಮ ವರಿಷ್ಠರ ಜತೆ ಚರ್ಚೆ ಮಾಡಿದ್ದೇನೆ. ಬೇರೆ ಕಡೆ ಸ್ಪರ್ಧೆ ಮಾಡಬೇಕು ಅಂದಾಗ ಹಲವೆಡೆಯಿಂದ ಆಹ್ವಾನ ಬಂದಿದೆ. ವರಿಷ್ಠರು, ನೀವು ಎಲ್ಲಾದರೂ ನಿಲ್ಲಿ, ನೀವೇ ನಿರ್ಧಾರ ಮಾಡಿ ಎಂದಿದ್ದಾರೆ. ಕೋಲಾರದಲ್ಲಿ ನನಗೆ ಹೆಚ್ವಿನ ಸ್ನೇಹಿತರು ಇದ್ದಾರೆ. ಎಲ್ಲರೂ ಒತ್ತಾಯ ಮಾಡುತ್ತಿದ್ದಾರೆ. ಕೆ.ಹೆಚ್.ಮುನಿಯಪ್ಪ ಅವರ ಜತೆಗೂ ಮಾತನಾಡಿದ್ದೇನೆ. ಅವರು ಸಪೋರ್ಟ್ ಮಾಡುವುದಾಗಿ ಹೇಳಿದ್ದಾರೆ. ಹಾಲಿ ಶಾಸಕ ಶ್ರೀನಿವಾಸಗೌಡ ಅವರು ಒತ್ತಾಯ ಮಾಡುತ್ತಿದ್ದಾರೆ. ಅದಕ್ಕೆ ಇವರೆಲ್ಲರಿಗೂ ಇಲ್ಲಾ ಎಂದು ಹೇಳಲಾಗುತ್ತಿಲ್ಲ ಎಂದರು ಸಿದ್ದರಾಮಯ್ಯ.
ಅಂತಿಮವಾಗಿ ಹೈಕಮಾಂಡ್ ಎಲ್ಲಿ ನಿಲ್ಲಲು ಸೂಚಿಸಿದರೆ ಅಲ್ಲಿ ನಿಲ್ಲುತ್ತೇನೆ. ಬಾದಾಮಿ ರೂಲ್ಡ್ ಔಟ್, ಅಲ್ಲಿ ಆಗೋದಿಲ್ಲ. ಕೋಲಾರದ ಎಲ್ಲಾ ನಾಯಕರ ಒತ್ತಾಸೆಗೆ ನಾನು ಚಿರಋಣಿ ಆಗಿರುವೆ. ಎಲ್ಲರ ಅಭಿಪ್ರಾಯ ಪಡೆದು ಹೈಕಮಾಂಡ್ ಜತೆ ಮಾತನಾಡುತ್ತೇನೆ ಎಂದು ಅವರು ತಿಳಿಸಿದರು.
ಕುಮಾರಸ್ವಾಮಿ ಬಗ್ಗೆ ಮಾತನಾಡಲ್ಲ
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಕೋಲಾರದಿಂದಲೇ ಪಂಚರತ್ನ ಯಾತ್ರೆ ಶುರು ಮಾಡುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ, ಇಲ್ಲ. ನಾನು ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡಲ್ಲ ಎಂದು ಹೇಳಿದರು.
ಕೋಲಾರ ರೌಂಡ್ಸ್
ಇದಕ್ಕೂ ಮುನ್ನ ಸಿದ್ದರಾಮಯ್ಯ ಅವರು ಇಡೀ ಕೋಲಾರವನ್ನು ಸುತ್ತು ಹಾಕಿದರು. ಬೆಂಗಳೂರಿನಿಂದ ಬರುವ ದಾರಿಯಲ್ಲೇ ಬೆಂಗಳೂರು ನಗರದ ಕೊಳಚೆ ನೀರಿನಿಂದ ತುಂಬಿರುವ ನರಸಾಪುರ ಕೆರೆಯನ್ನು ಸಿದ್ದರಾಮಯ್ಯ ಅವರು ವೀಕ್ಷಿಸಿದರು. ಮಾಜಿ ಸಚಿವ ಕೃಷ್ಣಭೈರೇಗೌಡ, ವಿಧಾನ ಪರಿಷತ್ ಸದಸ್ಯ ನಸೀರ್ ಅಹಮದ್, ಶಾಸಕರಾದ ರಮೇಶ್ ಕುಮಾರ್, ನಾರಾಯಣಸ್ವಾಮಿ, ಅನಿಲ್ ಕುಮಾರ್, ನಂಜೇಗೌಡ, ಜೆಡಿಎಸ್ ಶಾಸಕ ಶ್ರೀನಿವಾಸಗೌಡ ಸೇರಿದಂತೆ ಜಿಲ್ಲೆಯ ಕಾಂಗ್ರೆಸ್ ನಾಯಕರೆಲ್ಲರೂ ಹಾಜರಿದ್ದರು.
ಅಲ್ಲಿಂದ ಅವರು ವೇಮಗಲ್ ಸಮೀಪದ ಸೀತಿಬೆಟ್ಟಕ್ಕೆ ತೆರಳಿ ಶ್ರೀ ಬೈರವೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು.