ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಕೈಕೊಟ್ಟ ಆಪ್ತರು; ಆರಂಭದಲ್ಲಿ ಸಂಪುಟ ಸಂಕಟ ತೀವ್ರ
ಬೆಂಗಳೂರು: ಸಿದ್ದರಾಮಯ್ಯ ಸರಕಾರಕ್ಕೆ ಆಗಲೇ ಸಂಪುಟ ಸಂಕಟದ ಶಾಕ್ ಹೊಡೆದಿದ್ದು, ಕ್ಯಾಬಿನೆಟ್ ಸೇರಲು ಸೂಟು ಹೊಲಿಸಿಯೊಂಡಿದ್ದ ಹಿರಿಯ ನಾಯಕರು ಸ್ವತಃ ಸಿದ್ದರಾಮಯ್ಯ ಅವರಿಗೆ ಬಿಸಿ ಮುಟ್ಟಿಸಿದ್ದಾರೆ.
135 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಬೀಗುತ್ತಿದ್ದ ಕಾಂಗ್ರೆಸ್ ಪಕ್ಷಕ್ಕೆ ಸಿಎಂ ಆಯ್ಕೆ ಬಿಕ್ಕಟ್ಟು ಬಗೆಹರಿಯಿತು ಎನ್ನುವಷ್ಟರಲ್ಲಿ ಕ್ಯಾಬಿನೆಟ್ ರಚನೆ ಕಗ್ಗಂಟು ಆಗಿದೆ.
ಎಂಟು ಸಚಿವರ ಪಟ್ಟಿ ರೆಡಿ ಮಾಡಲು ಶನಿವಾರ ಬೆಳಗಿನಜಾವದವರೆಗೂ ಸಮಾಲೋಚನೆ ನಡೆಸಿದ ಕಾಂಗ್ರೆಸ್ ದುಸ್ಥಿತಿಯ ಬಗ್ಗೆ ಪ್ರತಿಪಕ್ಷಗಳು ಆಡಿಕೊಂಡು ನಗುತ್ತಿವೆ.ಸಿಕೆನ್ಯೂಸ್ ನೌ ಗೆ ಸಿಕ್ಕಿರುವ ಮಾಹಿತಿಯ ಪ್ರಕಾರ; ಕೊನೆಪಕ್ಷ 28 ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಉದ್ದೇಶ ಇತ್ತು.
ಈ ಮೂಲಕ ಸಂಪುಟ ಸಮಸ್ಯೆಯನ್ನು ನಿವಾರಿಸಿಬಿಡುವುದು ಸಿದ್ದರಾಮಯ್ಯ ಹಾಗೂ ಕೆಸಿ ವೇಣುಗೋಪಾಲ್ ಉದ್ದೇಶವಾಗಿತ್ತು ಎನ್ನಲಾಗಿದೆ. ರಾಹುಲ್ ಗಾಂಧಿ ಅವರಿಗೂ ಇದೇ ಇಂಗಿತ ಇತ್ತೆಂದು ಮೂಲವೊಂದು ತಿಳಿಸಿದೆ.
ಆದರೆ, ಪಟ್ಟಿ ಏಕಪಕ್ಷೀಯವಾಗಿದ್ದ ಕಾರಣಕ್ಕೆ ಡಿಕೆ ಶಿವಕುಮಾರ್ ಸಡ್ಡು ಹೊಡೆದು ನಿಂತಿದ್ದಾರೆ. ಚರ್ಚೆಗಳು, ಚೌಕಾಸಿ ವ್ಯವಹಾರ ಕ್ಷಣಕ್ಕೊಂದು ತಿರುವು ಪಡೆಯುತ್ತಾ ಹೋದಾಗ 28 ಜನರ ಪಟ್ಟಿ 8ಕ್ಕೆ ಇಳಿದಿದೆ. ಮೇಲ್ನೋಟಕ್ಕೆ ಜಾತಿ ಸಮೀಕರಣ ಎಂದು ಹೇಳಲಾಗುತ್ತಿದ್ದೆ.
ನಿಜ ಸಂಗತಿ ಎಂದರೆ, ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವೆ ಸಮೀಕರಣ ಸರಿ ಹೊಂದಿಲ್ಲ. ಪರಿಣಾಮವಾಗಿ, ಹೊಸದಿಲ್ಲಿಯಲ್ಲಿ ಇಡೀ ಶುಕ್ರವಾರ ಹಾಗೂ ಶನಿವಾರ ಮೂರನೇ ಜಾವದವರೆಗೆ ನಡೆದ ಮಾತುಕತೆ ಹಳ್ಳಹಿಡಿದು ಹೋಗಿದೆ.
ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ರಾಜ್ಯ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ನಡುವೆ ನಡೆದ ಸಮಾಲೋಚನೆಗಳೆಲ್ಲವೂ ಹೊಳೆಯಲ್ಲಿ ಹುಣಸೆ ಹಿಚುಕಿದಂತೆ ಆಗಿದೆ.
ಬಹುಮತ ಸರಕಾರ ಬಂತು ಎಂದು ಬೀಗುತ್ತಿದ್ದ ಈ ನಾಯಕರಿಗೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವಿನ ತಿಕ್ಕಾಟ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ಸರಕಾರ ಐದು ವರ್ಷ ಉಳಿಯುತ್ತಾ ಎನ್ನುವ ಗ್ಯಾರಂಟಿ ಬಗ್ಗೆ ವರಿಷ್ಠರು ತಲೆ ಕೆಡಿಸಕೊಳ್ಳುವ ಪರಿಸ್ಥಿತಿ ಸೃಷ್ಟಿಯಾಗಿದೆ.
ಸಂಪುಟಕ್ಕೆ ಸಡ್ಡು; ಕಾರ್ಯಕ್ರಮಕ್ಕೆ ಗೈರು
ನಿನ್ನೆ ನಡೆದ ಪ್ರಮಾಣ ಸ್ವೀಕಾರ ಸಮಾರಂಭಕ್ಕೆ ಕಾಂಗ್ರೆಸ್ ಪಕ್ಷದ ಅನೇಕರು ಕೈ ಕೊಟ್ಟಿದ್ದಾರೆ.ಕಾಂಗ್ರೆಸ್ ಪಕ್ಷದ ಮಿತ್ರಪಕ್ಷಗಳ ನಾಯಕರು, ಮೈತ್ರಿ ಸರಕಾರದ ಮುಖ್ಯಮಂತ್ರಿಗಳು, ಸ್ವಪಕ್ಷದ ಸಿಎಂಗಳು ಕಂಠೀರವ ಕ್ರೀಡಾಂಗಣಕ್ಕೆ ಬಂದು ಒಗ್ಗಟ್ಟು ಪ್ರದರ್ಶಿಸಿದರೆ, ಮಂತ್ರಿಗಿರಿ ಸಿಗಲಿಲ್ಲ ಎನ್ನುವ ಸಿಟ್ಟಿಗೆ ಅನೇಕರು ಸಮಾರಂಭದ ಕಡೆ ಸುಳಿಯಲಿಲ್ಲ.
ಮುಖ್ಯವಾಗಿ ಮಾಜಿ ಸಚಿವ ದಿನೇಶ್ ಗುಂಡೂರಾವ್, ಬಸವರಾಜ ರಾಯರೆಡ್ಡಿ, ಸಂತೋಷ್ ಲಾಡ್, ಶಿವರಾಜ್ ತಂಗಡಗಿ ಹಾಗೂ ಶಾಸಕರಾದ ಕೆ.ಎನ್ ರಾಜಣ್ಣ, ಬೈರತಿ ಸುರೇಶ್, ರಾಘವೇಂದ್ರ ಹಿಟ್ನಾಳ್, ತುಕಾರಾಮ್, ರಿಜ್ವಾನ್ ಅರ್ಷದ್ ಸೇರಿದಂತೆ ಅನೇಕರು ಕಂಠೀರವ ಕಡೆ ಕಣ್ಣು ಹಾಕಲೇ ಇಲ್ಲ. ಇವರೆಲ್ಲರೂ ಸಿದ್ದರಾಮಯ್ಯ ಗುಂಪಿನಲ್ಲಿ ಗುರುತಿಸಿಕೊಂಡವರು.
ಇನ್ನು ಡಿಕೆಶಿ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ಮಧು ಬಂಗಾರಪ್ಪ ಅವರೂ ಬಂದಿರಲಿಲ್ಲ.
ವೀಕ್ಷಕರು ಬೆಂಗಳೂರಿಗೆ ಬಂದು ಸಿದ್ದು ಸಿಎಂ ಆಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದ ಅನೇಕ ನಿಷ್ಠರ ಹೆಸರುಗಳೇ ಸಂಪುಟ ಪಟ್ಟಿಯಲ್ಲಿ ಇಲ್ಲ ಎನ್ನುವ ಮಾಹಿತಿ ಇದೆ. ಆದರೆ, ತಮ್ಮ ಪರ ದನಿ ಎತ್ತಿದ್ದ ಬಹುತೇಕ ಶಾಸಕರ ಹಿತರಕ್ಷಣೆ ಮಾಡಲು ಡಿಕೆ ಶಿವಕುಮಾರ್ ಹರಸಾಹಸ ನಡೆಸುತ್ತಿದ್ದಾರೆ ಎಂದು ಗೊತ್ತಾಗಿದೆ.
ಹೈಕಮಾಂಡ್ ನಲ್ಲಿಯೇ ಗುಂಪುಗಾರಿಕೆಕರ್ನಾಟಕದ ಕಾಂಗ್ರೆಸ್ ತಿಕ್ಕಾಟಕ್ಕೆ ಸಂಬಂಧಿಸಿ ಕಾಂಗ್ರೆಸ್ ಹೈಕಮಾಂಡ್ ನಲ್ಲಿಯೇ ಎರಡು ಗುಪುಗಳು ಸೃಷ್ಟಿಯಾಗಿವೆ. ಆ ಗುಂಪುಗಳು ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವೆ ಹಂಚಿ ಹೋಗಿವೆ ಎಂದು ಗೊತ್ತಾಗಿದೆ. ಈ ಎಲ್ಲಾ ಬೆಳವಣಿಗೆಗಳನ್ನು ಪ್ರತಿಪಕ್ಷ ಬಿಜೆಪಿ ಸೈಲೆಂಟಾಗಿ ಗಮನಿಸುತ್ತಿದೆ.