ಹೊಸ ಸರಕಾರ ಬಂದ ಮೇಲೆ ಚೊಚ್ಚಲ ಅಧಿವೇಶನ
ಬೆಂಗಳೂರು: 16ನೇ ವಿಧಾನಸಭೆಯ ಮೊದಲ ಅಧಿವೇಶನದ ಕಲಾಪ ಸೋಮವಾರ ಆರಂಭಗೊಂಡಿದೆ.
ಮೊದಲ ದಿನದ ಅಧಿವೇಶನದಲ್ಲಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಸೇರಿ ನೂತನ ಸಚಿವರು ಹಾಗೂ ಎಲ್ಲಾ ಶಾಸಕರು ಪ್ರಮಾಣವಚನ ಸ್ವೀಕರಿಸಿದರು.
ಸೋಮವಾರದಿಂದ ಬುಧವಾರದವರೆಗೆ ವಿಧಾನಸಭೆ ಅಧಿವೇಶನ ನಡೆಯಲಿದ್ದು, ಸೋಮವಾರ ಬೆಳಗ್ಗೆ 11.15ಕ್ಕೆ ಅಧಿವೇಶನ ಆರಂಭವಾಯಿತು. ಮೊದಲ ಎರಡು ದಿನಗಳ ಕಾಲ ಎಲ್ಲ ಶಾಸಕರ ಪ್ರಮಾಣವಚನ ಸ್ವೀಕಾರ ನಡೆಯಲಿದೆ. ಮೂರನೇ ದಿನ ಸಭಾಧ್ಯಕ್ಷರ ಆಯ್ಕೆ ನಡೆಯಲಿದೆ.
ಶಾಸಕರಿಗೆ ಪ್ರಮಾಣವಚನ ಬೋಧಿಸುವ ಜವಾಬ್ದಾರಿಯನ್ನು ಹಿರಿಯ ಶಾಸಕ, ಮಾಜಿ ಸಚಿವ ಆರ್.ವಿ. ದೇಶಪಾಂಡೆ ಅವರು ವಹಿಸಿಕೊಂಡಿದ್ದಾರೆ. ಅವರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಿಸಲಾಗಿದೆ.
ಶಾಸಕರಿಗೆ ಪ್ರಮಾಣವಚನ ಬೋಧಿಸುವ ಹಂಗಾಮಿ ಸ್ಪೀಕರ್ ಆರ್.ವಿ.ದೇಶಪಾಂಡೆ ಅವರಿಗೆ ರಾಜಭವನದಲ್ಲಿ ಮೊದಲು ರಾಜ್ಯಪಾಲರು ಪ್ರಮಾಣವಚನ ಬೋಧಿಸಿದರು. ನಂತರ ವಿಧಾನಸಭೆಯಲ್ಲಿ ಶಾಸಕರಿಗೆ ಪ್ರಮಾಣವಚನ ಬೋಧನೆ ಆರಂಭಗೊಂಡಿತು.
ಹಂಗಾಮಿ ಸ್ಪೀಕರ್ ದೇಶಪಾಂಡೆಯವರು ಎಲ್ಲಾ ಶಾಸಕರಿಗೆ ಪ್ರತ್ಯೇಕವಾಗಿ ಪ್ರಮಾಣ ವಚನ ಬೋಧನೆ ಮಾಡಿಸುತ್ತಿದ್ದಾರೆ. ಮೊದಲಿಗೆ ವರುಣ ಕ್ಷೇತ್ರದ ಶಾಸಕರಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಗವಂತನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಸಿದರು. ಕನಕಪುರ ಕ್ಷೇತ್ರದ ಶಾಸಕರಾಗಿ ಡಿ.ಕೆ.ಶಿವಕುಮಾರ್ ಅವರು, ಗಂಗಾಧರ ಅಜ್ಜಯ್ಯನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಕೊರಟಗೆರೆ ಕ್ಷೇತ್ರದ ಶಾಸಕರಾಗಿ ಡಾ.ಜಿ.ಪರಮೇಶ್ವರ್ ಅವರು ಸಂವಿಧಾನದ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರೆ, ದೇವನಹಳ್ಳಿ ಶಾಸಕರಾಗಿ ಕೆ.ಹೆಚ್.ಮುನಿಯಪ್ಪ, ಸರ್ವಜ್ಞನಗರ ಕ್ಷೇತ್ರದ ಶಾಸಕರಾಗಿ ಕೆ.ಜೆ.ಜಾರ್ಜ್, ಬಬಲೇಶ್ವರ ಕ್ಷೇತ್ರದ ಶಾಸಕರಾಗಿ ಎಂ.ಬಿ.ಪಾಟೀಲ್ ಭಗವಂತನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಯಮಕನಮರಡಿ ಶಾಸಕರಾಗಿ ಸತೀಶ್ ಜಾರಕಿಹೊಳಿ, ಚಿತ್ತಾಪುರ ಶಾಸಕರಾಗಿ ಪ್ರಿಯಾಂಕ್ ಖರ್ಗೆ, ಬಿಟಿಎಂ ಲೇಔಟ್ ಶಾಸಕರಾಗಿ ರಾಮಲಿಂಗಾರೆಡ್ಡಿ, ಮಂಗಳೂರು ಶಾಸಕರಾಗಿ ಯು.ಟಿ.ಖಾದರ್, ಬಸವನಬಾಗೇವಾಡಿ ಶಾಸಕರಾಗಿ ಶಿವಾನಂದ ಪಾಟೀಲ್ ಅವರು ಪ್ರಮಾಣವಚನ ಸ್ವೀಕರಿಸಿದರು.
ಅಧಿವೇಶನ ಪ್ರಾರಂಭಕ್ಕೂ ಮುನ್ನಾ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ನೂತನ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಅಭಿನಂದಿಸಿ ಶುಭಾಶಯ ಕೋರಿದರು.ಈ ಸಂದರ್ಭದಲ್ಲಿ ಬೊಮ್ಮಾಯಿ ಅವರು ಡಿಕೆಶಿ ಅವರನ್ನು ಆತ್ಮೀಯವಾಗಿ ಹಿಡಿದುಕೊಂಡು ನಗೆ ಬೀರಿದರು.
ಈ ವೇಳೆ ಮಾಜಿ ಸಚಿವ ಆರ್. ಅಶೋಕ್ ಜೊತೆಯಲಿದ್ದು ಡಿಕೆಶಿ ಬುಜದ ಮೇಲೆ ಕೈ ಇಟ್ಟು ಶುಭ ಹಾರೈಸಿದರು. ನಂತರ ಅಧಿವೇಶನಕ್ಕೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಆಗಮಿಸುತ್ತಿದ್ದಂತೆ ಅವರಿಗೆ ಮಾಜಿ ಸಿಎಂ ಬೊಮ್ಮಾಯಿ ಹಸ್ತಲಾಘವ ನೀಡಿ ಶುಭ ಕೋರಿದರು. ಈ ಸಂದರ್ಭದಲ್ಲಿ ಆರ್.ಅಶೋಕ್, ಸುನಿಲ್ ಕುಮಾರ್ ಮತ್ತಿತರರು ಸಿದ್ದರಾಮಯ್ಯ ಅವರನ್ನು ಮಾತನಾಡಿಸಿ ಶುಭ ಹಾರೈಸಿದರು.