ಮುಖ್ಯಮಂತ್ರಿ ಮೆಚ್ಚುಗೆಗೆ ಪಾತ್ರವಾದ ಪರಿಶ್ರಮಿ
ಬೆಂಗಳೂರು: 2024ರ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಪಕ್ಷವನ್ನು ಹೆಚ್ಚು ಬಲಪಡಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಶಾಸಕರಿಗೆ ಶಾಸಕಾಂಗ ಪಕ್ಷದ ನಾಯಕ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖಡಕ್ ಸೂಚನೆಗಳನ್ನು ನೀಡಿದ್ದಾರೆ. ಅಲ್ಲದೆ, ಬಿಜೆಪಿ ಸರಕಾರದ ಪ್ರಭಾವೀ ಸಚಿವರನ್ನು ಸೋಲಿಸಿ ಗೆದ್ದು ಬಂದಿರುವ ಯುವ ಶಾಸಕರನ್ನು ಬಹಳ ಮುತುವರ್ಜಿಯಿಂದ ವಿಚಾರಿಸಿಕೊಂಡರು.
ಬುಧವಾರ ಬೆಳಿಗ್ಗೆ ವಿಧಾನಸೌಧದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಶಾಸಕರುಗಳಿಗೆ ಸಿದ್ದರಾಮಯ್ಯ ಅವರು ಖಡಕ್ ಸೂಚನೆ ನೀಡಿದ್ದು ಈಗಿನಿಂದಲೇ ಕೆಲಸ ಪ್ರಾರಂಭಿಸುವಂತೆ ಆದೇಶಿಸಿದರು. 135 ಕ್ಷೇತ್ರ ಗಳಿಸಿರುವ ಕಾಂಗ್ರೆಸ್ ಪಕ್ಷವು, ಲೋಕಸಭೆ ಚುನಾವಣೆಯಲ್ಲೂ ಉತ್ತಮ ಸಾಧನೆ ಮಾಡಬೇಕು ಎಂದು ಹೇಳಿದರು.
ಬಿಜೆಪಿ ಸರಕಾರದ ಹೈಪ್ರೊಫೈಲ್ ಮಂತ್ರಿ ಡಾ.ಸುಧಾಕರ್ ಅವರನ್ನು ಸೋಲಿಸಿದ ಪ್ರದೀಪ್ ಈಶ್ವರ್ ಅವರನ್ನು ಸಿದ್ದರಾಮಯ್ಯ ವಿಶೇಷವಾಗಿ ವಿಚಾರಿಸಿದರು. ಹಾಗೆ ನೋಡಿದರೆ, ಇಡೀ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಪ್ರದೀಪ್ ಈಶ್ವರ್ ಅವರೇ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿದ್ದರು. ಬಹಳಷ್ಟು ಶಾಸಕರು ಬಂದೂಬಂದು ಚಿಕ್ಕಬಳ್ಳಾಪುರ ಶಾಸಕರಿಗೆ ಕೈಕುಲಕಿ ಮೆಚ್ಚುಗೆ ಸೂಚಿಸುತ್ತಿದ್ದದ್ದು ಕಂಡು ಬಂದಿತು.
ಹಾಗೆಯೇ; ಹರಪನಹಳ್ಳಿ ಕ್ಷೇತ್ರದಿಂದ ಪಕ್ಷೇತರವಾಗಿ ಸ್ಫರ್ಧಿಸಿ ಜಯಗಳಿಸಿರುವ ಲತಾ ಮಲ್ಲಿಕಾರ್ಜುನ್ ಅವರನ್ನು ಪಕ್ಷಕ್ಕೆ ಸ್ವಾಗತಿಸಿ ಅವರನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಹ ಸದಸ್ಯರನ್ನಾಗಿ ಸಿದ್ದರಾಮಯ್ಯ ಅವರು ಅನುಮೋದಿಸಿದರು.
ಸಭೆಯಲ್ಲಿ ಸಿದ್ದರಾಮಯ್ಯ ಶಾಸಕರಿಗೆ ಕೆಲ ಸೂಚನೆಗಳನ್ನು ನೀಡಿದ್ದಾರೆ. ರಾಜ್ಯದ ಜನತೆ ಅಪಾರ ನಿರೀಕ್ಷೆಗಳ ಜತೆಗೆ ನಮಗೆ ಅಪಾರ ಬಹುಮತದ ಮೂಲಕ ಜವಾಬ್ದಾರಿ ವಹಿಸಿದ್ದಾರೆ. 5 ವರ್ಷಗಳ ಕಾಲ ಅಭಿವೃದ್ಧಿ ಕಡೆಗೆ ಗಮನ ಹರಿಸಿ. ನಿಮ್ಮ ಕ್ಷೇತ್ರಗಳ ಜನರ ನಿರೀಕ್ಷೆಗಳನ್ನು ಈಡೇರಿಸಿ ಎಂದು ಹೇಳಿದ್ದಾರೆ.
ಅಧಿವೇಶನದಲ್ಲಿ ಕಡ್ಡಾಯವಾಗಿ ಹೆಚ್ಚು ಕ್ರಿಯಾಶೀಲರಾಗಿ ಭಾಗವಹಿಸಿ. ನಿಮಗೆ ತಿಳಿಯದೇ ಇರುವ ವಿಚಾರಗಳು ಇರುತ್ತವೆ ಅದನ್ನೆಲ್ಲ ತಿಳಿದುಕೊಳ್ಳಿ,ಬಿಜೆಪಿಯವರು ಮಾಡುವ ಸುಳ್ಳು ಅಪಾದನೆಗಳನ್ನು ಯಶಸ್ವಿಯಾಗಿ ಎದುರಿಸಲು ಎಲ್ಲಾ ಶಾಸಕರು ಕಡ್ಡಾಯವಾಗಿ ಅಧಿವೇಶನದಲ್ಲಿ ಭಾಗವಹಿಸಬೇಕು ಎಂದು ಕಡಕ್ ಸೂಚನೆ ನೀಡಿದ್ದಾರೆ.
ಕೇಂದ್ರದ ತಾರತಮ್ಯ ನೀತಿಯಿಂದ ರಾಜ್ಯದ ಜನತೆಗೆ ಅಪಾರ ನಷ್ಟವಾಗಿದೆ. ಹಣಕಾಸು ಆಯೋಗದಲ್ಲೂ ನಮಗೆ ಅನ್ಯಾಯವಾಗಿದೆ. ತೆರಿಗೆ ಪಾಲಿನಲ್ಲೂ ಅನ್ಯಾಯವಾಗಿದೆ. ನಮ್ಮ ನಾಡಿನ ಜನತೆ ಕಟ್ಟುವ ತೆರಿಗೆಯಲ್ಲಿ ನಮ್ಮ ಪಾಲು ಸಮರ್ಪಕವಾಗಿ ಬರುತ್ತಿಲ್ಲ. ನಾವು ಒತ್ತಡ ಮತ್ತು ಬೇಡಿಕೆ ಮೂಲಕ ನಮ್ಮ ಪಾಲನ್ನು ನಾವು ಪಡೆದುಕೊಳ್ಳಬೇಕು.
ಕೇಂದ್ರದಿಂದ ರಾಜ್ಯಕ್ಕೆ, ನಾಡಿನ ಜನತೆಗೆ ಅನ್ಯಾಯ ಆಗುತ್ತಿದ್ದರೂ ರಾಜ್ಯದಿಂದ ಆಯ್ಕೆ ಆದ ಸಂಸದರು ನಾಲ್ಕೂವರೆ ವರ್ಷಗಳ ಕಾಲ ನಾಡಿನ ಜನತೆಯ ಪರವಾಗಿ ಬಾಯಿ ಬಿಡಲಿಲ್ಲ. ಇದನ್ನು ರಾಜ್ಯದ ಜನತೆ ಗಮನಿಸಿದ್ದಾರೆ. ಕೋವಿಡ್, ಪ್ರವಾಹದ ಸಂದರ್ಭದಲ್ಲೂ ಈ ಸಂಸದರು ರಾಜ್ಯದ ಪರವಾಗಿ ಕೇಂದ್ರದ ಮುಂದೆ ಚಕಾರ ಎತ್ತಿಲ್ಲ,ಹೀಗಾಗಿ ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಇವರಿಗೆ ಸರಿಯಾದ ಉತ್ತರ ಕೊಡಬೇಕಿದೆ.
ಆದ್ದರಿಂದ ಬರಲಿರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಜನಪರವಾಗಿ ಕೆಲಸ ಮಾಡಬೇಕೆಂದು ಸಿದ್ದರಾಮಯ್ಯ ಕಾಂಗ್ರೆಸ್ ಶಾಸಕರಿಗೆ ಸೂಚನೆ ನೀಡಿದ್ದಾರೆ.