ಯುವ ಜನತಾದಳ ಅಧ್ಯಕ್ಷ ಸ್ಥಾನ ತ್ಯಜಿಸಿದ ಯುವನಾಯಕ
ಬೆಂಗಳೂರು: ರಾಜ್ಯ ತಯುವ ಜನತಾದಳ ಅಧ್ಯಕ್ಷ ಸ್ಥಾನಕ್ಕೆ ನಿಖಿಲ್ ಕುಮಾರಸ್ವಾಮಿ ಅವರು ರಾಜೀನಾಮೆ ನೀಡಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವೂ ಸೋತ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ನೀಡಿದ್ದು, ಪಕ್ಷದ ಜತೆ ಸದಾ ನಿಲ್ಲುವೆ ಎಂದು ತಿಳಿಸಿದ್ದಾರೆ.
ಅವಾರ ರಾಜೀನಾಮೆ ಪತ್ರದ ಒಕ್ಕಣಿ ಹೀಗಿದೆ;
ಪ್ರಸಕ್ತ ವಿಧಾನಸಭೆ ಚುನಾವಣೆ ಫಲಿತಾಂಶ ನನಗೆ ಅತೀವ ಬೇಸರ ಉಂಟು ಮಾಡಿದೆ ಎನ್ನುವುದರ ಜತೆಗೆ, ಪಕ್ಷವನ್ನು ಹೊಸದಾಗಿ ಮರು ನಿರ್ಮಾಣ ಮಾಡುವ ಅನೇಕ ಸಾಧ್ಯತೆಗಳನ್ನು ತೆರೆದಿಟ್ಟಿದೆ ಎಂದು ವಿಶ್ವಾಸದಿಂದ ಹೇಳಬಯಸುತ್ತೇನೆ.
ಇಷ್ಟು ದಿನ ಕರ್ನಾಟಕ ಪ್ರದೇಶ ಯುವ ಜನತಾದಳ (ಜಾತ್ಯತೀತ) ಘಟಕದ ಅಧ್ಯಕ್ಷನಾಗಿ ಮಾಜಿ ಪ್ರಧಾನಮಂತ್ರಿಗಳಾದ ಶ್ರೀ ಹೆಚ್.ಡಿ.ದೇವೇಗೌಡ ಸಾಹೇಬರು, ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಹೆಚ್.ಡಿ.ಕುಮಾರಸ್ವಾಮಿ ಅವರು ಹಾಗೂ ತಮ್ಮಗಳ ಮಾರ್ಗದರ್ಶನ, ಪ್ರೋತ್ಸಾಹದಿಂದ ನನ್ನ ಕೈಲಾದ ಮಟ್ಟಿಗೆ ಕಾರ್ಯ ನಿರ್ವಹಿಸಿದ್ದೇನೆ. ಸಂಘಟನೆ ಮಾಡಲು ಶ್ರಮಿಸಿದ್ದೇನೆ.
ಆದರೆ, ಸೋಲೇ ಅಂತಿಮವಲ್ಲ. ಈ ಚುನಾವಣೆಯ ಸೋಲನ್ನು ಮೆಟ್ಟಿ ಪಕ್ಷವನ್ನು ಬಲವಾಗಿ ಕಟ್ಟುವ ದಿಸೆಯಲ್ಲಿ ನಾವೆಲ್ಲರೂ ಅರ್ಪಣಾ ಮನೋಭಾವದಿಂದ ಕರ್ತವ್ಯ ನಿರ್ವಹಿಸಬೇಕಿದೆ ಹಾಗೂ ಹೊಸ ನಾಯಕತ್ವಕ್ಕೆ ಅವಕಾಶ ಮಾಡಿಕೊಡಬೇಕಿದೆ. ಈ ನಿಟ್ಟಿನಲ್ಲಿ ನಾನು ಕರ್ನಾಟಕ ಪ್ರದೇಶ ಜನತಾದಳ (ಕರ್ನಾಟಕ) ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಅದನ್ನು ತಾವು ಅಂಗೀಕಾರ ಮಾಡಬೇಕು ಎಂದು ಕೇಳಿಕೊಳ್ಳುತ್ತೇನೆ.
ನನ್ನ ಈ ನಿರ್ಧಾರವನ್ನು ತಾವು ಒಪ್ಪಿ ನವ ನಾಯಕತ್ವಕ್ಕೆ ಅವಕಾಶ ಕೊಟ್ಟು ಪಕ್ಷವನ್ನು ಗಟ್ಟಿಗೊಳಿಸುವ ದಿಕ್ಕಿನಲ್ಲಿ ಒಟ್ಟಾಗಿ ಸಾಗಬೇಕಿದೆ ಎನ್ನುವುದು ನನ್ನ ವಿನಮ್ರ ಸಲಹೆ ಮತ್ತು ಮನವಿ. ತಮ್ಮ ಹಾಗೂ ವರಿಷ್ಠರ ಆಶಯ, ಪಕ್ಷದ ಹಿತದೃಷ್ಟಿಯಿಂದ ಸಂಘಟನೆ ಕೆಲಸಕ್ಕೆ ನಾನು ಸದಾ ಸಿದ್ದನಿರುತ್ತೇನೆ. ಯುವ ಸಮುದಾಯದ ಜತೆ ಸೇರಿ ಪಕ್ಷ ಕಟ್ಟುವುದಕ್ಕೆ ನಾನೆಂದೂ ಹಿಂಜರಿಯುವುದಿಲ್ಲ.
ನನ್ನ ಭಾವನೆಗಳನ್ನು ತಾವು ಗೌರವಿಸುವಿರಿ ಎನ್ನುವ ವಿಶ್ವಾಸದೊಂದಿಗೆ..
ಇಷ್ಟು ದಿನ ನನ್ನೊಂದಿಗೆ ಶ್ರಮಿಸಿ ಪಕ್ಷಕ್ಕಾಗಿ ಹೆಗಲು ಕೊಟ್ಟ ಎಲ್ಲಾ ಹಿರಿ, ಕಿರಿಯರಿಗೆ ನನ್ನ ಗೌರವಪೂರ್ವಕ ನಮನಗಳು ಎಂದು ಇಬ್ರಾಹಿಂ ಅವರಿಗೆ ಸಲ್ಲಿಸಿರುವ ರಾಜೀನಾಮೆ ಪತ್ರದಲ್ಲಿ ನಿಖಿಲ್ ಅವರು ಬರೆದಿದ್ದಾರೆ.