ಸಿಎಂ ಸಿದ್ದರಾಮಯ್ಯ ಸಿದ್ಧತೆ; ಗ್ಯಾರಂಟಿ ಒತ್ತಡಕ್ಕೆ ನಲುಗಿದ ಕಾಂಗ್ರೆಸ್ ಸರಕಾರ
ಬೆಂಗಳೂರು: ಚುನಾವಣೆಯಲ್ಲಿ ಗೆಲ್ಲಲು ಐದು ಗ್ಯಾರಂಟಿಗಳ ಕಾರ್ಯತಂತ್ರ ಹೂಡಿ ಯಶಸ್ವಿಯಾದ ಕಾಂಗ್ರೆಸ್, ಜೂನ್ ತಿಂಗಳಲ್ಲಿ ಶತಾಯಗತಾಯ ಗ್ಯಾರಂಟಿಗಳನ್ನು ಜಾರಿ ಮಾಡಲು ಶ್ರಮಿಸುತ್ತಿದೆ.
ಕೇವಲ ಮತ ಗಳಿಕೆಗಾಗಿ ಚುನಾವಣೆ ತಂತ್ರಗಾರರು ಹಣೆದ ಈ ವ್ಯೂಹ ಈ ಮಟ್ಟಿಗೆ ಬಾಧಿಸುತ್ತದೆ ಎನ್ನುವ ದೂರದೃಷ್ಟಿ ಇಲ್ಲದ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಹೇಗಾದರೂ ಮಾಡಿ ಗ್ಯಾರಂಟಿಗಳನ್ನು ಜಾರಿಗೆ ತಂದರೆ ಸಾಕಪ್ಪಾ ಎನ್ನುವಂತೆ ಆಗಿದೆ ಎಂದು ಕೆಲ ಶಾಸಕರು ಹೇಳುವ ಮಾತು.
ಸಚಿವ ಸಂಪುಟದ ಎಲ್ಲ 34 ಸ್ಥಾನಗಳನ್ನು ಭರ್ತಿ ಮಾಡಲಾಗಿದ್ದು, ಇನ್ನೇನು ಆಡಳಿತಕ್ಕೆ ಹೊಸ ರೂಪ ಕೊಡುವ ತೀರ್ಮಾನ ಮಾಡಿದ್ದೇವೆ ಎಂದು ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ. ಅದಕ್ಕೆ ಪೂರಕವಾಗಿ ಮುಂದಿನ ಸಂಪುಟ ಸಭೆಯಲ್ಲಿ ಗ್ಯಾರಂಟಿಗಳ ಜಾರಿಗೆ ಅಂತಿಮರೂಪ ನೀಡಲಾಗುವುದು ಎಂದಿದ್ದಾರೆ.
ಒಂದೆಡೆ, ಆರ್ಥಿಕ ಸಂಪಚನ್ಮೂಲಗಳ ಕೊರತೆ, ಇನ್ನೊಂದೆಡೆ ಕೇಂದ್ರದಿಂದ ಗ್ಯಾರಂಟಿಗಳಿಗೆ ನಯಾಪೈಸೆ ಆರ್ಥಿಕ ನೆರವು ಸಿಗದು ಎನ್ನುವ ಆತಂಕ, ಮತ್ತೊಂದೆ ದಿನೇದಿನೆ ಹೆಚ್ಚುತ್ತಿರುವ ಜನರ ಒತ್ತಡದಿಂದ ಸರಕಾರ ಬಸವಳಿದು ಹೋಗಿದೆ.
ಸದ್ಯಕ್ಕೆ ಸಂಪುಟ ಸಂಕಟ ತೀರಿದ ನೆಮ್ಮದಿಯಲ್ಲಿರವ ಮುಖ್ಯಮಂತ್ರಿಗಳು, ಭಾನುವಾರದಿಂದ ಗ್ಯಾರಂಟಿಗಳ ಪೂರ್ಣ ಅನುಷ್ಠಾನಕ್ಕೆ ಸಚಿವರು ಹಾಗೂ ಉನ್ನತಮಟ್ಟದ ಅಧಿಕಾರಿಗಳ ಜತೆ ಮಾತುಕತೆಗೆ ಕೂರಲಿದ್ದಾರೆ. ಈ ಬಗ್ಗೆ ಕ್ಲಾರಿಟಿ ಸಿಕ್ಕ ನಂತರವೇ ಸಂಪುಟ ಸಭೆಯ ದಿನ ನಿಗದಿ ಮಾಡಲಾಗುವುದು ಎಂದು ತಿಳಿದು ಬಂದಿದೆ.
ಮತ ಪಡೆಯಲು ಗ್ಯಾರಂಟಿಗಳ ಐಡಿಯಾ ಕೊಟ್ಟು ಜಾಗ ಖಾಲಿ ಮಾಡಿದ ಕಾಂಗ್ರೆಸ್ ಚುನಾವಣಾ ತಂತ್ರಗಾರರು, ಅದೇ ಐದು ಗ್ಯಾರಂಟಿಗಳನ್ನು ಜಾರಿ ಮಾಡುವ, ಅದರಿಂದ ಎದುರಾಗುವ ಸವಾಲುಗಳ ಬಗ್ಗೆ ಯಾವ ಪರಿಹಾರಗಳನ್ನೂ ಸೂಚಿಸಿಲ್ಲ ಎಂದು ಗೊತ್ತಾಗಿದ್ದು, ಈ ಬಗ್ಗೆ ಮುಖ್ಯಮಂತ್ರಿ ಒಬ್ಬರೇ ಭಾರ ಹೊತ್ತುಕೊಂಡು ಒದ್ದಾಡುವ ಪರಿಸ್ಥಿತಿ ಸೃಷ್ಟಿಯಾಗಿದೆ.
ಸಂಪುಟ ವಿಸ್ತರಣೆ ನಂತರ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟದ ಅನೌಪಚಾರಿಕ ಸಭೆಯ ನಂತರ ಮಾಧ್ಯಮದವರೊಂದಿಗೆ ಮುಖ್ಯಮಂತ್ರಿಗಳು ಮಾತನಾಡಿದರು. ರಾಜ್ಯದಲ್ಲಿ ಪೂರ್ಣ ಪ್ರಮಾಣದ ಸಚಿವ ಸಂಪುಟ ರಚಿಸಲಾಗಿದೆ. ಮುಖ್ಯಮಂತ್ರಿ ಹೊರತುಪಡಿಸಿ 33 ಸ್ಥಾನಗಳನ್ನೂ ಭರ್ತಿ ಮಾಡಲಾಗಿದೆ. ಖಾತೆ ಹಂಚಿಕೆ ಸಧ್ಯದಲ್ಲೇ ಮಾಡಲಾಗುವುದು ಎಂದು ಹೇಳಿದರು.
ಸಚಿವ ಸಂಪುಟವು ಹೊಸ ಹಾಗೂ ಹಳೆ ಮುಖಗಳ ಸಮ್ಮಿಶ್ರಣವಾಗಿದೆ. ಮೊದಲ ಬಾರಿ ಗೆದ್ದವರನ್ನು ಮಂತ್ರಿ ಮಾಡಿಲ್ಲ. ನಾವು ಕೊಟ್ಟಿರುವ ಭರವಸೆಯನ್ನು ಈಡೇರಿಸಬೇಕಿದೆ. ಜನ ಹೊಸ ಬದಲಾವಣೆ ಬಯಸಿದ್ದಾರೆ. ಹಾಗಾಗಿ ಆಡಳಿತಕ್ಕೆ ಹೊಸ ರೂಪ ಕೊಡುವ ದೃಷ್ಟಿಯಿಂದ ಈ ಸಚಿವರ ಸಂಪುಟ ರಚಿಸಲಾಗಿದೆ.
ಸಿದ್ದರಾಮಯ್ಯ / ಮುಖ್ಯಮಂತ್ರಿ
ವಿರೋಧ ಪಕ್ಷಗಳು ತಾವು ಕೊಟ್ಟ ವಚನ ಈಡೇರಿಸಿಲ್ಲ. ನಾವು ಹಿಂದೆಯೂ ನಮ್ಮ ವಚನ ಈಡೇರಿಸಿದ್ದೇವೆ. ಈಗಲೂ ಈಡೇರಿಸುತ್ತೇವೆ. ಐದು ಗ್ಯಾರಂಟಿಗಳ ಕುರಿತು ಮುಂದಿನ ಸಚಿವ ಸಂಪುಟದಲ್ಲಿ ವಿವರಗಳನ್ನು ಮಂಡಿಸಲು ಸೂಚಿಸಲಾಗಿದೆ. ಈ ಕುರಿತು ಚರ್ಚಿಸಿ ಅನುಮೋದನೆ ನೀಡಿ ಶೀಘ್ರವೇ ಅವುಗಳನ್ನು ಜಾರಿಗೆ ತರಲಾಗುವುದು ಎಂದು ಭರವಸೆ ನೀಡಿದರು.
ಕೊಡಗು, ಹಾವೇರಿ, ಹಾಸನ , ಚಿಕ್ಕಮಗಳೂರು ಮತ್ತಿತರ ಜಿಲ್ಲೆಗಳಿಗೆ ಪ್ರಾತಿನಿಧ್ಯ ಲಭಿಸಿಲ್ಲ. ಕೆಲವು ಮಾನದಂಡಗಳನ್ನು ಅನುಸರಿಸುವಾಗ ಕೆಲವು ಜಿಲ್ಲೆಗಳಿಗೆ ಪ್ರಾತಿನಿಧ್ಯ ದೊರೆತಿಲ್ಲ. ಉದಾಹರಣೆಗೆ ಕೊಡಗು ಜಿಲ್ಲೆಯಲ್ಲಿ ಇಬ್ಬರೂ ಮೊದಲ ಬಾರಿ ಶಾಸಕರಾಗಿದ್ದಾರೆ. ಹಾಗಾಗಿ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ನೀಡಲು ಸಾಧ್ಯವಾಗಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.