ಕೋಲಾರಕ್ಕೆ ಇಲ್ಲ ಪ್ರಾತಿನಿಧ್ಯ; ಮಾಜಿ ಸಚಿವ ಡಾ.ಕೆ.ಸುಧಾಕರ್ ಅವರನ್ನು ರೀಪ್ಲೇಸ್ ಮಾಡಿದ ಸುಧಾಕರ್!
ಬೆಂಗಳೂರು: ಚಿಂತಾಮಣಿ ಶಾಸಕ ಡಾ.ಎಂ.ಸಿ.ಸುಧಾಕರ್ ಸೇರಿದಂತೆ ಒಟ್ಟು 24 ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟಕ್ಕೆ ಸೇರ್ಪಡೆಯಾದರು. ಅಲ್ಲಿಗೆ ಮೊದಲು ಸಿಎಂ ಆಗಿ ಸಿದ್ದರಾಮಯ್ಯ, ಡಿಸಿಎಂ ಆಗಿ ಡಿ.ಕೆ.ಶಿವಕುಮಾರ್ ಸೇರಿ ಎಂಟು ಸಚಿವರನ್ನೊಳಗೊಂಡ ಸಿದ್ದು ಸಂಪುಟ ಈಗ ಫುಲ್ ಭರ್ತಿಯಾಗಿದೆ.
ಕೋಲಾರಕ್ಕೆ ಸಂಪುಟದಲ್ಲಿ ಅವಕಾಶ ಸಿಗಬಹುದು ಎಂದು ನೀರಿಕ್ಷೆ ಇತ್ತಾದರೂ ಕೆ.ಎಚ್.ಮುನಿಯಪ್ಪ ಅವರು ಮೊದಲ ಹಂತದಲ್ಲಿ ಹಾಗೂ ಕೃಷ್ಣಭೈರೇಗೌಡರು ಎರಡನೇ ಹಂತದಲ್ಲಿ ಸಂಪುಟ ಸೇರಿದ್ದಾರೆ.
ಮುನಿಯಪ್ಪ, ಕೃಷ್ಣಭೈರೇಗೌಡರು ಮೂಲತಃ ಕೋಲಾರ ಜಿಲ್ಲೆಯವರೇ. ಮುನಿಯಪ್ಪ ದೇವನಹಳ್ಳಿ ಕ್ಷೇತ್ರದಿಂದ ಕೃಷ್ಣಭೈರೇಗೌಡರು ಬ್ಯಾಟರಾಯನಪುರ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ ಆಗಿದ್ದಾರೆ.
ಹೀಗಾಗಿ ಪ್ರತ್ಯೇಕವಾಗಿ ಕೋಲಾರಕ್ಕೆ ಪ್ರಾತಿನಿಧ್ಯ ಅಗತ್ಯವಿಲ್ಲ ಎಂದು ಕಾಂಗ್ರೆಸ್ ವರಿಷೃರು ನಿರ್ಧರಿಸಿದ್ದ ಪರಿಣಾಮವಾಗಿಯೇ ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ಸಚಿವರಾಗುವ ಅವಕಾಶ ತಪ್ಪಿತು ಎಂದು ಗೊತ್ತಾಗಿದೆ.
ಈ ಇಬ್ಬರಲ್ಲಿ ಒಬ್ಬರಿಗೆ ಕೋಲಾರ ಜಿಲ್ಲೆಯ ಉಸ್ತುವಾರಿ ಕೊಡುವುದು ಖಚಿತ. ಸುಧಾಕರ್ ಅವರಿಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಉಸ್ತುವಾರಿ ದೊರೆಯುವುದು ಗ್ಯಾರಂಟಿ. ಈ ಬಗ್ಗೆ ಕಾಂಗ್ರೆಸ್ ಪಕ್ಷದ ಉನ್ನತ ಮೂಲವೊಂದು ಸಿಕೆನ್ಯೂಸ್ ನೌ ಗೆ ಖಚಿತ ಮಾಹಿತಿ ನೀಡಿದೆ.
ಪ್ರಮಾಣ ಸೀಕರಿಸಿದ ಸಚಿವರು
ರಾಜಭವನದ ಗಾಜಿನಮನೆಯಲ್ಲಿ ನೂತನ ಸಚಿವರಿಗೆ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರು ಅಧಿಕಾರ ಗೌಪ್ಯತೆಯ ಪ್ರತಿಜ್ಞಾ ವಿಧಿ ಬೋಧಿಸಿದರು.
ಹಿರಿಯ ರಾಜಕಾರಣಿ, ಗದಗ ಶಾಸಕ ಹೆಚ್.ಕೆ ಪಾಟೀಲ್, ನಾಗಮಂಗಲ ಶಾಸಕ ಎನ್.ಚೆಲುವರಾಯಸ್ವಾಮಿ, ಪಿರಿಯಾಪಟ್ಟಣ ಶಾಸಕ ಕೆ.ವೆಂಕಟೇಶ್, ಬಾಲ್ಕಿ ಶಾಸಕ ಈಶ್ವರ ಖಂಡ್ರೆ, ಬ್ಯಾಟರಾಯನಪುರ ಶಾಸಕ ಕೃಷ್ಣಬೈರೇಗೌಡ, ಟಿ.ನರಸೀಪುರ ಶಾಸಕ, ಹಿರಿಯ ರಾಜಕಾರಣಿ ಡಾ.ಹೆಚ್. ಸಿ.ಮಹದೇವಪ್ಪ, ಮಧುಗಿರಿ ಶಾಸಕ ಕೆಎನ್ ರಾಜಣ್ಣ, ಗಾಂಧಿನಗರ ಶಾಸಕ ದಿನೇಶ್ ಗುಂಡೂರಾವ್, ಶಹಾಪುರ ಶಾಸಕ ಶರಣಬಸಪ್ಪ ದರ್ಶನಾಪುರ, ಬಸವನ ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ್, ಮುಧೋಳ ಶಾಸಕ ಆರ್.ಬಿ.ತಿಮ್ಮಾಪುರ, ದಾವಣಗೆರೆ ಉತ್ತರ ಕ್ಷೇತ್ರ ಶಾಸಕ ಎಸ್.ಎಸ್.ಮಲ್ಲಿಕಾರ್ಜುನ, ಕನಕಗಿರಿ ಕ್ಷೇತ್ರದ ಶಾಸಕ ಶಿವರಾಜ ತಂಗಡಗಿ, ಸೇಡಂ ಶಾಸಕ ಶರಣ ಪ್ರಕಾಶ್ ಪಾಟೀಲ್ , ಭಟ್ಕಳ ಶಾಸಕ ಮಂಕಾಳು ವೈದ್ಯ (ಇವರು ಇದೇ ಮೊದಲ ಬಾರಿಗೆ ಸಚಿವರಾಗುತ್ತಿದ್ದಾರೆ.) ಬೀದರ್ ಉತ್ತರ ಕ್ಷೇತ್ರದ ಶಾಸಕ ರಹೀಂ ಖಾನ್, ಹಿರಿಯೂರು ಶಾಸಕ ಡಿ.ಸುಧಾಕರ್, ಕಲಘಟಗಿ ಶಾಸಕ ಸಂತೋಷ್ ಲಾಡ್, ಹೆಬ್ಬಾಳ ಕ್ಷೇತ್ರದ ಶಾಸಕ ಭೈರತಿ ಸುರೇಶ್, ಸೊರಬದ ಮಧು ಬಂಗಾರಪ್ಪ, ಬಳ್ಳಾರಿ ಕ್ಷೇತ್ರದ ಬಿ.ನಾಗೇಂದ್ರ ಅವರು ಪ್ರಮಾಣವಚನ ಸ್ವೀಕರಿಸಿದರು.
ಶಾಸಕರೂ ಅಲ್ಲದ, ಎಂಎಲ್ ಸಿಯೂ ಅಲ್ಲದ ಎನ್. ಎಸ್.ಬೋಸರಾಜು ಅವರು ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಅವರು ಆರು ತಿಂಗಳ ಒಳಗಾಗಿ ವಿಧಾನಸಭೆ ಅಥವಾ ವಿಧಾನ ಪರಿಷತ್ತಿನ ಸದಸ್ಯರಾಗಬೇಕಿದೆ. ಶೀಘ್ರವೇ ಬೋಸರಾಜ್ ಅವರನ್ನು ವಿಧಾನ ಪರಿಷತ್ ಗೆ ಆಯ್ಕೆ ಮಾಡಿ ಕಳಿಸಲಾಗುವುದು ಎಂದು ಡಿಕೆಶಿ ಅವರ ಆಪ್ತ ಮೂಲವೊಂದು ತಿಳಿಸಿದೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಎರಡನೇ ಬಾರಿ ಶಾಸಕಿಯಾಗಿರುವ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸಿದ್ದರಾಮಯ್ಯ ಸಂಪುಟಕ್ಕೆ ಸೇರಿದ ಏಕೈಕ ಸಚಿವೆ.
ರಹೀಂ ಖಾನ್ ಅವರು ಇಂಗ್ಲಿಷ್ ಭಾಷೆಯಲ್ಲಿ ಹಾಗೂ ಉಳಿದೆಲ್ಲರೂ ಕನ್ನಡ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಸಂಪುಟಕ್ಕೆ ಸೇರಿದವರ ಪಟ್ಟಿ
ಮೊದಲ ಬಾರಿಗೆ ಸಚಿವರು
ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದ ಕೆ ವೆಂಕಟೇಶ್, ಮಧುಗಿರಿ ವಿಧಾನಸಭಾ ಕ್ಷೇತ್ರದ ಕ್ಯಾತಸಂದ್ರ ನಂಜಪ್ಪ ರಾಜಣ್ಣ, ಭಟ್ಕಳ ವಿಧಾನಸಭಾ ಕ್ಷೇತ್ರದ ಮಾಂಕಾಳ ವೈದ್ಯ, ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಲಕ್ಷೀ ಹೆಬ್ಬಾಳ್ಕರ್, ರಾಯಚೂರು ಜಿಲ್ಲೆಯ ಕಾಂಗ್ರೆಸ್ ಮುಖಂಡ ಎನ್ ಎಸ್ ಬೋಸರಾಜು, ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಬೈರತಿ ಸುರೇಶ್, ಸೊರಬ ವಿಧಾನಸಭಾ ಕ್ಷೇತ್ರದ ಮಧು ಬಂಗಾರಪ್ಪ ಚಿಂತಾಮಣಿ ವಿಧಾನಸಭಾ ಕ್ಷೇತ್ರದ ಎಂ ಸಿ ಸುಧಾಕರ್ ಹಾಗೂ ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಬಿ ನಾಗೇಂದ್ರ ಅವರು ಮೊದಲ ಬಾರಿಗೆ ಸಚಿವರಾಗಿದ್ದಾರೆ. ಉಳಿದವರು ಈ ಹಿಂದೆ ಸಚಿವರಾಗಿ ಸೇವೆ ಸಲ್ಲಿಸಿರುವ ಅನುಭವವನ್ನು ಹೊಂದಿದ್ದಾರೆ.
ಹೆಚ್.ಸಿ ಮಹದೇವಪ್ಪ ಅವರು ಸತ್ಯ ನಿಷ್ಠೆಯ ಹೆಸರಿನಲ್ಲಿ, ಕೆ ಎನ್ ರಾಜಣ್ಣ ಅವರು ಬುದ್ಧ ಬಸವ ಅಂಬೇಡ್ಕರ್ ಹಾಗೂ ಮಹರ್ಷಿ ವಾಲ್ಮೀಕಿ ಅವರ ಹೆಸರಿನಲ್ಲಿ, ದಿನೇಶ್ ಗುಂಡೂರಾವ್ ಅವರು ಯಾವ ಹೆಸರೂ ಉಲ್ಲೇಖಿಸದೇ, ಶಿವಾನಂದ ಪಾಟೀಲ್ ಅವರು ಅಣ್ಣ ಬಸವಣ್ಣ ಅವರ ಹೆಸರಿನಲ್ಲಿ, ಎಸ್ ಎಸ್ ಮಲ್ಲಿಕಾರ್ಜುನ ಅವರು ಕಲ್ಲೇಶ್ವರ ದೇವರ ಹೆಸರಿನಲ್ಲಿ, ಲಕ್ಷ್ಮೀ ಹೆಬ್ಬಾಳ್ಕರ್ ಅವರು ಜಗಜ್ಯೋತಿ ಬಸವೇಶ್ವರ ಛತ್ರಪತಿ ಶಿವಾಜಿ, ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಜನತೆ ಮತ್ತು ತಮ್ಮ ತಾಯಿ ಗಿರಿಜಾ ಬಾಯಿ ಅವರ ಹೆಸರಿನಲ್ಲಿ, ರಹೀಂ ಖಾನ್ ಅವರು ಅಲ್ಲಾಹ್ ಹೆಸರಿನಲ್ಲಿ, ಬಿ ನಾಗೇಂದ್ರ ಅವರು ಮಹರ್ಷಿ ವಾಲ್ಮೀಕಿ ಅವರ ಹೆಸರಿನಲ್ಲಿ ಹಾಗೂ ಉಳಿದ ಎಲ್ಲರೂ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.