ಜಟಾಪಟಿಗೆ ಕಾರಣವಾದ ಕಾಸಿಗಾಗಿ ಹುದ್ದೆ ಆರೋಪ
ಬೆಂಗಳೂರು: ಮುಖ್ಯಮಂತ್ರಿ ಕಚೇರಿಯಲ್ಲಿ ಕೆಲಸ ಪಡೆಯಲು ಲಂಚ ನೀಡಬೇಕು ಎಂಬುದರ ಬಗ್ಗೆ ಕುಮಾರಸ್ವಾಮಿ ಅವರ ಬಳಿ ದಾಖಲೆ ಇದ್ದರೆ ಲೋಕಾಯುkft ಕ್ಕೆ ಸಲ್ಲಿಸಲಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
ವಿಧಾನಸೌಧದಲ್ಲಿ ಮಂಗಳವಾರ ಡಿಸಿಎಂ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಮುಖ್ಯಮಂತ್ರಿ ಕಚೇರಿಯಲ್ಲಿ ಕೆಲಸ ಪಡೆಯಲು 30 ಲಕ್ಷ ನೀಡಬೇಕು ಎಂಬ ಕುಮಾರಸ್ವಾಮಿ ಅವರ ಆರೋಪದ ಬಗ್ಗೆ ಡಿಕೆಶಿ ಪ್ರತಿಕ್ರಿಯಿಸಿ, ಸರ್ಕಾರದ ಯಾವುದೇ ಕಚೇರಿಯಲ್ಲಿ ಹಣ ಪಡೆದು ಕೆಲಸ ನೀಡಲಾಗುತ್ತಿಲ್ಲ. ಅವರ ಬಳಿ ದಾಖಲೆ ಇದ್ದರೆ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಲಿ ತನಿಖೆ ಮಾಡಿಸಲಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅದಕ್ಕೆ ಅವಕಾಶವಿದೆ ಎಂದರು.
ಕುಮಾರಸ್ವಾಮಿಯವರಿಗೆ ಚುನಾವಣೆಯಲ್ಲಿ ಕಡಿಮೆ ನಂಬರ್ ಬಂದಿದೆ ಎಂಬ ಬೇಸರದಲ್ಲಿ ಮಾತನಾಡುತ್ತಿದ್ದಾರೆ. ಹೀಗಾಗಿ ಅವರ ಮಾತುಗಳು ಬಗ್ಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ಅವರ ಆರೋಪ ಸತ್ಯಕ್ಕೆ ದೂರವಾದುದು ಎಂದರು.
ಕಾಂಗ್ರೆಸ್ ಸರ್ಕಾರ ಜನರಿಗೆ ಕೊಟ್ಟಿರುವ ಭರವಸೆಗಳನ್ನು ಈಡೇರಿಸುತ್ತಿದೆ ಎಂದ ಅವರು ಬಿಜೆಪಿ ಏನೇ ಮಾಡಿದರು ನಮ್ಮ ಗ್ಯಾರಂಟಿ ಯೋಜನೆಗಳಿಗೆ ಹೆಚ್ಚಿನ ಪ್ರಚಾರ ಸಿಗುತ್ತಿದ್ದು, ಅದಕ್ಕಾಗಿ ಅವರಿಗೆ ಧನ್ಯವಾದಗಳು ಎಂದು ಡಿಕೆಶಿ ಹೇಳಿದರು.
ಬಿಜೆಪಿ ನಾಯಕರಿಗೆ ರಾಜ್ಯದ ಜನ ವಿಶ್ರಾಂತಿ ಪಡೆಯಲು ಮನೆಗೆ ಕಳುಹಿಸಿದ್ದು, ಅವರಿಗೆ ಮಾಡಲು ಕೆಲಸವಿಲ್ಲದೆ ಅನಗತ್ಯವಾಗಿ ಪ್ರತಿಭಟನೆ ಮಾಡುತ್ತಿದ್ದಾರೆಂದದು ಡಿಕೆಶಿ ಟೀಕಿಸಿದರು.
ಬಿಜೆಪಿ ನಾಯಕರು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಮೊದಲು ಧರಣಿ ಮಾಡಬೇಕು. ಅಕ್ಕಿಯ ದಾಸ್ತಾನು ಇದ್ದರೂ ಕೂಡ ಕೇಂದ್ರ ಸರ್ಕಾರ ಹಾಗೂ ಭಾರತ ಆಹಾರ ಪ್ರಾಧಿಕಾರ ರಾಜ್ಯ ಸರ್ಕಾರಕ್ಕೆ ಅಕ್ಕಿ ನೀಡಲು ನಿರಾಕರಿಸಿದೆ. ಕೇಂದ್ರದ ಈ ನಿಲುವಿನ ವಿರುದ್ಧ ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರ ತಂಡ ಹೋರಾಟ ಮಾಡಲಿ ಎಂದು ಸಲಹೆ ನೀಡಿದರು.