ಮಾಜಿ ಸಚಿವ ಡಾ.ಕೆ.ಸುಧಾಕರ್ ಎಚ್ಚರಿಕೆ
ಚಿಕ್ಕಬಳ್ಳಾಪುರ: ಕಾಂಗ್ರೆಸ್ ಸರ್ಕಾರ ಸೇಡಿನ ರಾಜಕಾರಣದಿಂದ ಕೋಚಿಮುಲ್ ವಿಭಜನೆಯ ಆದೇಶ ಹಿಂಪಡೆದು ರೈತರಿಗೆ ಅನ್ಯಾಯ ಮಾಡಿದೆ. ಇದರ ವಿರುದ್ಧ ಕಾನೂನು ಹೋರಾಟ ಮಾಡುತ್ತೇವೆ ಎಂದು ಮಾಜಿ ಸಚಿವ ಡಾ.ಕೆ ಸುಧಾಕರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಕಾನೂನು ಹೋರಾಟ ಮಾಡಿ ರೈತರಿಗೆ ನ್ಯಾಯ ದೊರಕಿಸಲಾಗುವುದು ಎಂದು ಹೇಳಿದರು.
20 ಸಾವಿರ ನಿವೇಶನಕ್ಕೆ ಭೂಮಿ ಮಂಜೂರು ಮಾಡಿಸಿದ್ದೇನೆ ಎಂದು ಭೋಗನಂದೀಶ್ವರ ದೇವಸ್ಥಾನದಲ್ಲಿ ಪ್ರಮಾಣ ಮಾಡುತ್ತೇನೆ, ಈಗಿನ ಶಾಸಕರು ಇದನ್ನು ಮಾಡಿಲ್ಲ ಎಂದು ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದರು.
ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟವು ಬೆಂಗಳೂರು ಹಾಲು ಒಕ್ಕೂಟದಿಂದ ಬೇರ್ಪಟ್ಟಿತ್ತು. ಆಗ ಒಂದೂವರೆ ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, ವಿಭಜನೆ ಬಳಿಕ ಉತ್ಪಾದನೆ 10 ಲಕ್ಷ ಲೀಟರ್‌ಗೆ ಏರಿತು.
ಇದು ಹೆಮ್ಮೆಯ ವಿಚಾರವೇ ಹೊರತು ರಾಜಕೀಯ ವಿಚಾರವಲ್ಲ. ಹಿಂದಿನ ಬಿಜೆಪಿ ಸರ್ಕಾರ, ಬಸವರಾಜ ಬೊಮ್ಮಾಯಿಯವರ ನೇತೃತ್ವದಲ್ಲಿ ಹಾವೇರಿ ಹಾಲು ಒಕ್ಕೂಟವನ್ನು ಪ್ರತ್ಯೇಕವಾಗಿ ರಚಿಸಿದೆ. ಅದರ ಜೊತೆಗೆ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ರಚಿಸಲಾಗಿತ್ತು. ನಮ್ಮ ಜಿಲ್ಲೆಯ ಒಕ್ಕೂಟದಲ್ಲಿ ನಾಲ್ಕೂವರೆ ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ ಎಂದು ತಿಳಿಸಿದರು.
ಕೋಚಿಮುಲ್ ವಿಭಜನೆ ವಿರೋಧಿಸಿ ಕೆಲ ನಿರ್ದೇಶಕರು ಕೋರ್ಟ್ ಮೊರೆ ಹೋಗಿದ್ದರು. ಈ ಪ್ರಕರಣ ನಡೆಯುತ್ತಿದ್ದರೂ ಕಾಂಗ್ರೆಸ್ ಸರ್ಕಾರ ದುರುದ್ದೇಶದಿಂದ, ಸೇಡಿನ ರಾಜಕಾರಣಕ್ಕಾಗಿ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಆದೇಶವನ್ನೇ ವಾಪಸ್ ಪಡೆದಿದೆ ಎಂದು ಆರೋಪಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸೇಡಿನ ರಾಜಕಾರಣ ಮಾಡುವುದಿಲ್ಲವಾದರೆ, ಈ ಆದೇಶ ಹಿಂತೆಗೆದುಕೊಂಡು ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಮರುಸ್ಥಾಪಿಸಲು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಚಾಮರಾಜನಗರ ಹೊಸ ಜಿಲ್ಲೆಯಾದಾಗ ಅಲ್ಲಿ ಹಾಲು ಒಕ್ಕೂಟವನ್ನು ಬೇರ್ಪಡಿಸಿ ನೀಡಿದವರೇ ಸಿದ್ದರಾಮಯ್ಯನವರು. ಅವರ ಜಿಲ್ಲೆಯಲ್ಲಿ ನ್ಯಾಯ ನೀಡುವ ಅವರು ಇಲ್ಲಿ ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಎಂಬ ನೀತಿ ಅನುಸರಿಸಿದ್ದಾರೆ ಎಂದು ದೂರಿದರು
ಚಿಕ್ಕಬಳ್ಳಾಪುರದ ಹೊಸ ಶಾಸಕರು ವಸತಿ ಯೋಜನೆ ಬಗ್ಗೆ ಸುಳ್ಳು ಅಭಿಯಾನ ಆರಂಭಿಸಿದ್ದಾರೆ. ಗೆದ್ದಾದ ಮೇಲಾದರೂ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಲಕ್ಷ್ಯ ನೀಡುತ್ತಾರೆ ಎಂದುಕೊಂಡರೆ ಸುಳ್ಳೇ ಮನೆ ದೇವರು ಎಂಬಂತೆ ನಿವೇಶನಗಳ ಬಗ್ಗೆ ಪ್ರಶ್ನೆ ಮಾಡಿದ್ದಾರೆ ಎಂದು ಟೀಕಿಸಿದರು
ಎಚ್.ಎನ್.ವ್ಯಾಲಿ ಯೋಜನೆಯಡಿ ಮೂರನೇ ಹಂತದ ಸಂಸ್ಕರಣೆ ಮಾಡಲಾಗುವುದು ಎಂದು ತಿಳಿಸಲಾಗಿದೆ. ಎತ್ತಿನಹೊಳೆ ಯೋಜನೆ ಪೂರ್ಣ ಮಾಡಲು, ನಂದಿ ಬೆಟ್ಟಕ್ಕೆ ರೋಪ್‌ವೇ ಮಾಡಲು, ನಂದಿ ಮೆಡಿಕಲ್ ಕಾಲೇಜು ಕಟ್ಟಡ ಕಾಮಗಾರಿ ಪೂರ್ಣ ಮಾಡಲು ಬಜೆಟ್‌ನಲ್ಲಿ ಅನುದಾನ ನೀಡಬೇಕಿದೆ. ಅದನ್ನು ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಮಾಡಲಿ ಎಂದು ಡಾ.ಕೆ.ಸುಧಾಕರ್ ಒತ್ತಾಯಿಸಿದರು.
ಕಾಂಗ್ರೆಸ್ ಸರ್ಕಾರ ಎಲ್ಲಾ ತನಿಖೆಗಳನ್ನು ಮಾಡಲಿ. ಗ್ಯಾರಂಟಿಗಳ ಬಗ್ಗೆ ಮಾತನಾಡುವುದು ಬಿಟ್ಟು ತನಿಖೆ ಬಗ್ಗೆ ಮಾತಾಡಿ ವಿಷಯವನ್ನು ಬೇರೆಡೆ ಸೆಳೆಯಲಾಗುತ್ತಿದೆ ಎಂದು ವ್ಯಂಗ್ಯವಾಡಿದರು.