ಜು.31ರಂದು ದೈಹಿಕ ಶಿಕ್ಷಕ ಕೆ.ಆರ್. ಅಶ್ವತ್ಥಪ್ಪ ನಿವೃತ್ತಿ
by Gs Bharath Gudibande
ಗುಡಿಬಂಡೆ: ಗುಡಿಬಂಡೆಯ ದ್ರೋಣಾಚಾರ್ಯ ಎಂದೇ ಹೆಸರಾಗಿರುವ ಕೆ.ಆರ್.ಅಶ್ವತ್ಥಪ್ಪ ಅವರು ತಿಂಗಳ 31ರಂದು ಸೇವಾ ನೀವೃತ್ತಿ ಹೊಂದಲಿದ್ದಾರೆ.
ಇಪ್ಪತ್ತೈದು ವರ್ಷಗಳ ಸಾರ್ಥಕ ಸೇವೆ ಮುಗಿಸಿ ನಿವೃತ್ತಿ ಆಗುತ್ತಿರುವ ಅಶ್ವತ್ಥಪ್ಪ ಅವರು ಇಲ್ಲದ ಶಾಲೆ ಅವರ ಶಿಷ್ಯರಿಗೂ ನೋವಿನ ಸಂಗತಿ, ಸ್ವತಃ ಅಶ್ವತ್ಥಪ್ಪ ಅವರಿಗೂ ಅರಗಿಸಿಕೊಳ್ಳಲಾಗದ ಬೇಸರ.
ತಾವು ಓದಿ ಬೆಳೆದ ಶಾಲೆಯಲ್ಲಿಯೇ ಶಿಕ್ಷಕರಾಗಿ ಸೇವೆ ಮಾಡಬೇಕು ಎಂಬ ಮಾಹತ್ವಾಕಾಂಕ್ಷೆಯಿಂದ 1998ರಲ್ಲಿ ದೈಹಿಕ ಶಿಕ್ಷಕರಾಗಿ ಗುಡಿಬಂಡೆ ಶಾಲೆಗೆ ಬಂದ ಅವರು ಪಟ್ಟಣದ ಶಾಲಾ ಮಕ್ಕಳಲ್ಲಿ ಕ್ರೀಡಾಸ್ಫೂರ್ತಿ ಬೆಳವಣಿಗೆಗೆ ತಮ್ಮದೇ ಆದ ಅನನ್ಯ ಕೊಡುಗೆ ನೀಡಿದ್ದಾರೆ. ಈ ತಿಂಗಳ ಕೊನೆಯಲ್ಲಿ ಅವರು ನಿವೃತ್ತರಾಗುತ್ತಿರವುದು ಅವರ ಶಿಷ್ಯರಿಗೆ ಭಾರೀ ನೋವುಂಟು ಮಾಡಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ರಂಗಪ್ಪ ಮತ್ತು ತಾಯಿ ಕಾಂತಮ್ಮ ದಂಪತಿಯ ಪುತ್ರರಾದ ಕೆ.ಆರ್.ಅಶ್ವತ್ಥಪ್ಪ ಅವರು ಕಡು ಬಡತನದಲ್ಲಿ ವಿದ್ಯಾಭ್ಯಾಸ ಮಾಡಿ, ಉನ್ನತ ಸ್ಥಾನಕ್ಕೇರಕೆಂಬ ಕನಸಿನೊಂದಿಗೆ ಮೊದಲಿಗೆ 1985ರಲ್ಲಿ ಗೌರಿಬಿದನೂರು ತಾಲ್ಲೂಕಿನ ಮೈಲಗಾನಹಳ್ಳಿ ಗ್ರಾಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದೈಹಿಕ ಶಿಕ್ಷಕರಾಗಿ ತಮ್ಮ ವೃತ್ತಿ ಜೀವನವನ್ನು ಆರಂಭ ಮಾಡಿದರು.
ಬದುಕಿನ ಕಷ್ಟಗಳೆಲ್ಲವನ್ನೂ ಮೆಟ್ಟಿನಿಂತ ಮೇಷ್ಟ್ರು ಮೈಲಗಾನಹಳ್ಳಿ ಹಾಗೂ ನಗರಗೆರೆ ಶಾಲೆಗಳಲ್ಲಿ ಸುಮಾರು 10 ವರ್ಷ ಕಾಲ ಸೇವೆ ಸಲ್ಲಿಸಿದರು. ಆ ನಂತರ 1996ರಲ್ಲಿ ತಾವೇ ಓದಿದ ಗುಡಿಬಂಡೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವರ್ಗಾವಣೆಯಾಗಿ ಬಂದರು. ಅಲ್ಲಿಂದ ಹುಟ್ಟೂರಿನ ಶಾಲೆಯಲ್ಲಿ ಮಕ್ಕಳಿಗೆ ಆಟಪಾಠ ಕಲಿಸುತ್ತಾ ಬದುಕನ್ನು ಸಾರ್ಥಕ ಮಾಡಿಕೊಂಡ ಅಶ್ವತ್ಥಪ್ಪ ಅವರು ಕ್ರೀಡಾ ಬೋಧನೆಗಾಗಿಯೇ ತಮ್ಮ ಬದುಕನ್ನು ಮೀಸಲಿಟ್ಟರು. ಅನೇಕ ಪ್ರತಿಭೆಗಳನ್ನು ತಮ್ಮ ಗರಡಿಯಲ್ಲಿ ಅರಳುವಂತೆ ಮಾಡಿದರು.
ರಾಜ್ಯಮಟ್ಟದ ಸಾಧನೆ
ಅತ್ಯಂತ ಹಿಂದುಳಿದ ಗುಡಿಬಂಡೆ ತಾಲ್ಲೂಕಿನ ವಿದ್ಯಾರ್ಥಿಗಳಿಗೆ ಕ್ರೀಡೆಯಲ್ಲಿ ಮಾರ್ಗದರ್ಶನ ಮಾಡುತ್ತಾ ರಾಜ್ಯಮಟ್ಟಕ್ಕೆ ತಲುಪಿಸುವುದು ಎಂದರೆ ಸುಲಭದ ಮಾತಲ್ಲ. 1998ರಲ್ಲಿ ಅವರು ಗುಡಿಬಂಡೆ ಶಾಲೆಯ ಮಕ್ಕಳು ರಾಜ್ಯ ಮಟ್ಟದಲ್ಲಿ ಮಿಂಚುವಂತೆ ಮಾಡಿದರು. ಜಿಲ್ಲಾ ಮಟ್ಟದಲ್ಲಿ ಗೆದ್ದು, ರಾಜ್ಯ ಮಟ್ಟದಲ್ಲಿಯೂ ಉದ್ದ ಜಿಗಿತ, ಎತ್ತರ ಜಿಗಿತ ಹಾಗೂ ಗುಂಡು ಎಸೆತ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಮೇಷ್ಟ್ರ ಸಾಧನೆ
ಹಿಂದುಳಿದ ತಾಲ್ಲೂಕಿನಿಂದ 1998ರಲ್ಲಿ ವಿದ್ಯಾರ್ಥಿಗಳನ್ನು ರಾಜ್ಯ ಮಟ್ಟಕ್ಕೆ ಕಳುಹಿಸಿದ್ದರು ಅಶ್ವತ್ಥಪ್ಪನವರು. ಪ್ರತೀ ವರ್ಷ ಜಿಲ್ಲಾ ಮತ್ತು ರಾಜ್ಯಮಟ್ಟಕ್ಕೆ ಈ ಶಾಲೆಯ ವಿದ್ಯಾರ್ಥಿಗಳು ಆಯ್ಕೆಯಾಗಿ ಉತ್ತಮ ಸಾಧನೆ ಮಾಡಿದ್ದಾರೆ. ಅಲ್ಲದೆ, ಇವರಿಗೆ ಅನೇಕ ಗೌರವಗಳು ಅರಸಿ ಬಂದಿವೆ.
- ಉತ್ತಮ ಶಿಕ್ಷಕ ಪ್ರಶಸ್ತಿ
- ಜನ ಮೆಚ್ಚಿದ ಶಿಕ್ಷಕ ಪ್ರಶಸ್ತಿ
- ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ
- ಕನ್ನಡ ರಾಜ್ಯೋತ್ಸವ ಪ್ರಶಸ್ತಿ
- ಶಾಸಕರಿಂದ ಸನ್ಮಾನ
- ಸಾವಿರಾರು ವಿದ್ಯಾರ್ಥಿಗಳಿಗೆ ಕ್ರೀಡೆಯಲ್ಲಿ ಗುರುತಿಸಿ ತರಬೇತಿ ನೀಡುತ್ತಿದ್ದರು.
ಶಾಲೆಯ ಅಭಿವೃದ್ಧಿಗೆ ಪಣ
ಅಶ್ವತ್ಥಪ್ಪ ಮೇಷ್ಟ್ರು ಶಾಲೆಯ ಅಭಿವೃದ್ಧಿಗಾಗಿ ಸಾಕಷ್ಟು ಪರಿಶ್ರಮವನ್ನು ಹಾಕಿದ್ದಾರೆ. ಇವರು 9 ತಿಂಗಳು ಪ್ರಭಾರ ಮುಖ್ಯ ಶಿಕ್ಷಕರಾಗಿ ಕೆಲಸ ಮಾಡಿದ್ದಾರೆ. ಆ ಸಂದರ್ಭದಲ್ಲಿ ದಾನಿಗಳ ಸಹಾಯದಿಂದ ಶಾಲೆ ವೇದಿಕೆಗೆ ಶೀಟ್ ಹಾಕಿಸುವುದು ಸೇರಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ.
ಅಶ್ವತ್ಥಪ್ಪ ಮೇಷ್ಟ್ರು ಚಿಕ್ಕಂದಿನಿಂದಲೂ ಕ್ರೀಡೆ ಎಂದರೆ ಅಪಾರ ಪ್ರೀತಿ ತೋರಿಸುತ್ತಿದ್ದರು. ಅಷ್ಟೇ ಪ್ರೀತಿಯನ್ನು ಕ್ರೀಡಾಪಟುಗಳ ಮೇಲೆಯೂ ಇಟ್ಟಿದ್ದರು. ಮಕ್ಕಳಿಗೆ ಬೆಳಗ್ಗೆಯಿಂದ ಸಂಜೆಯವರೆಗೂ ಉತ್ತಮ ದೈಹಿಕ ತರಬೇತಿಯನ್ನು ನೀಡುತ್ತಿದ್ದರು.
ಕೆ.ಆರ್.ಅಶ್ವತ್ಥಪ್ಪ ಅವರು ಕಡು ಬಡತನದ ಎದೆಗುಂದದೆ ಈ ಸಾಧನೆ ಮಾಡಿದ್ದಾರೆ. ಇವರು ಎಲ್ಲರ ಪ್ರೀತಿ, ಗೌರವಕ್ಕೆ ಪಾತ್ರರು. ಒಂದೇ ಒಂದು ಕಪ್ಪುಚುಕ್ಕೆ ಇಲ್ಲದೆ ಇಲ್ಲಿಯವರೆಗೂ ಅಪಾರ ಸಾಧನೆ ಮಾಡಿದ್ದಾರೆ. ಇವರ ನಿವೃತ್ತಿ ಜೀವನ ಸುಖವಾಗಿರಲಿ.
ವಿ.ಶ್ರೀರಾಮಪ್ಪ, ಪ್ರಧಾನ ಕಾರ್ಯದರ್ಶಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ