₹1.50 ಕೋಟಿ ಡಿಮಾಂಡ್; ಸಿಎಂ ರಾಜಕೀಯ ಕಾರ್ಯದರ್ಶಿ, MLC ನಸೀರ್ ಅಹಮದ್ ಹೆಸರಿನಲ್ಲಿ ವಂಚನೆ ಪ್ರಕರಣಕ್ಕೆ ಟ್ವಿಸ್ಟ್!! ಒತ್ತಡಕ್ಕೆ ಮಣಿದರಾ ಪೊಲೀಸರು
ಕೋಲಾರ: ಪೊಲೀಸ್ ಇಲಾಖೆಯಲ್ಲಿ ನಡೆಯುತ್ತಿರುವ ವರ್ಗಾವಣೆ ದಂಧೆ ಪರಾಕಾಷ್ಠೆ ಮುಟ್ಟಿರುವ ಬೆನ್ನಲ್ಲಿಯೇ ಕೋಲಾರದಲ್ಲಿ ನಡೆದಿರುವ FIR ತಿದ್ದುಪಡಿಯ ಕರ್ಮಕಾಂಡ ಅನೇಕ ತಿರುವುಗಳಿಗೆ, ಅನುಮಾನಗಳಿಗೆ ಕಾರಣವಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ನಸೀರ್ ಅಹ್ಮದ್ ಹೆಸರಿನಲ್ಲಿ ನಡೆದಿದೆ ಎನ್ನಲಾದ ವಂಚನೆ ಕೇಸಿನ ತನಿಖೆಯನ್ನು ಹಳ್ಳ ಹಿಡಿಸುವ ಪ್ರಯತ್ನ ನಡೆದಿದಿದ್ದು, ಕೋಲಾರ ಪೊಲೀಸರ ಮೇಲೆ ಅನೇಕ ಅನುಮಾನಗಳಿಗೆ ಕಾರಣವಾಗಿದೆ.
- ಮೊದಲ FIR
ಅಲ್ಲದೆ; ಇಡೀ ಪ್ರಕರಣದ ತನಿಖೆಯ ದಿಕ್ಕು ತಪ್ಪಿಸುವ ಪ್ರಯತ್ನ ನಡೀತಿದಿಯಾ? ಎನ್ನುವ ಅನುಮಾನ ಸಾರ್ವಜನಿಕರನ್ನು ಕಾಡುತ್ತಿದೆ. ಮಿಗಿಲಾಗಿ ವರ್ಗಾವಣೆಗಾಗಿ 1.50 ಕೋಟಿ ರೂಪಾಯಿ ಲಂಚಕ್ಕೆ ಬೇಡಿಕೆ ಇರಿಸಿದ್ದ ಪ್ರಕರಣದಲ್ಲಿ ಎರಡು ಬಾರಿ FIR ಮಾಡಿರುವ ಕೋಲಾರ ಪೊಲೀಸರು ರಾತ್ರೋರಾತ್ರಿ ಪ್ರಭಾವಿಗಳ ಒತ್ತಡಕ್ಕೆ ಮಣಿದು ದೂರನ್ನೇ ಅದಲು ಬದಲು ಮಾಡಿರುವ ಅತೀ ಚಾಣಾಕ್ಷ ಕೃತ್ಯ ಎಸಗಿದ್ದಾರೆ.
ಈ ಪ್ರಕರಣದಲ್ಲಿ ರಾಜಕೀಯ ಒತ್ತಡ ಕೆಲಸ ಮಾಡಿರುವುದು ಖಚಿತ ಎನ್ನಲಾಗಿದ್ದು, ಪ್ರಕರಣದಲ್ಲಿ ನಸೀರ್ ಅಹಮದ್ ಅವರೇ ನೇರ ಭಾಗಿ ಆಗಿದ್ದಾರಾ? ಅಥವಾ ಇಬ್ಬರು ಏಜೆಂಟ್ʼಗಳಷ್ಟೇ ಇದ್ದಾರಾ? ಎನ್ನುವ ಬಗ್ಗೆ ವಿಸ್ತೃತ ತನಿಖೆ ನಡೆಯಬೇಕಿದೆ.
- ಎರಡನೇ FIR
ಏನಿದು ಪ್ರಕರಣ?
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೋಲಾರ ನಗರದ ಗಲ್ ಪೇಟೆ ಪೊಲೀಸ್ ಠಾಣೆಯಲ್ಲಿ ಎರಡು FIR ಗಳನ್ನು ದಾಖಲು ಮಾಡಲಾಗಿದ್ದು, ಮೊದಲ FIRಗೂ ಎರಡನೇ FIRಗೂ ದೂರೇ ಅದಲು ಬದಲಾಗಿದೆ. ಆ ಎರಡೂ FIRಗಳು ಸಿಕೆನ್ಯೂಸ್ ನೌ ಗೆ ಲಭ್ಯವಾಗಿವೆ.
ಮೊದಲ FIRನಲ್ಲಿ ವರ್ಗಾವಣೆ ಒಂದನ್ನು ಮಾಡಿಸಿಕೊಡಲು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಅವರ ಹೆಸರಿನಲ್ಲಿ 1.50 ಕೋಟಿ ರೂಪಾಯಿಗೆ ಡೀಲ್ ಕುದುರಿಸಿ, ಅದರ ಅಡ್ವಾನ್ಸ್ ಆಗಿ 25 ಲಕ್ಷ ರೂ. ಪಡೆಯಲಾಗಿತ್ತು ಎಂದು ಉಲ್ಲೇಖ ಮಾಡಲಾಗಿದೆ. ಬೆಂಗಳೂರಿನ ಆಡುಗೋಡಿಯ ಪ್ರತಾಪ್ ಬಿ.ಎನ್. ಎಂಬುವವರ ದೂರನ್ನಾಧರಿಸಿ ಇಲ್ಲಿನ ಗಲ್ ಪೇಟೆ ಪೋಲೀಸರು ಮೊದಲ FIR ದಾಖಲಿಸಿದ್ದರು.
ಮೊದಲನೇ FIRನಲ್ಲಿ ದೂರುದಾರ ಪ್ರತಾಪ್ ವರ್ಗಾವಣೆ ವಿಚಾರಕ್ಕೆ ಹಣ ನೀಡಿದ್ದರು ಎಂದು ಸ್ಪಷ್ಟವಾಗಿ ಬರೆಯಲಾಗಿದೆ. ಈ ಕೇಸಿನಲ್ಲಿ ಹೊಸದಾಗಿ ನೀಡಿರುವ ದೂರಿನಲ್ಲಿ ವರ್ಗಾವಣೆ ಡೀಲಿಂಗ್ ಮಾಹಿತಿ ಮಾಯವಾಗಿ ʼಕಾಮಗಾರಿ ಬಾಕಿ ಬಿಲ್ ನೀಡಲು ಲಂಚಕ್ಕೆ ಬೇಡಿಕೆʼ ಎಂದು ಉಲ್ಲೇಖ ಮಾಡಲಾಗಿದೆ. ಜತೆಗೆ, ಬೆಂಗಳೂರಿನ ಉದ್ಯಮಿ ಹಾಗೂ ಗುತ್ತಿಗೆದಾರ ಪ್ರತಾಪ್ ದೂರು ನೀಡಿದ್ದಾರೆ ಎಂದಿದೆ. ಕೋಲಾರದ ಗಲ್ ಪೇಟೆ ಪೊಲೀಸ್ ಠಾಣೆಯಲ್ಲಿ ಜುಲೈ 31ರಂದು ಅವರು ನೀಡಿದ್ದ ದೂರು ಇದಾಗಿದೆ.
ದೂರು ನೀಡಿದ ದಿನವೇ ಪ್ರತಾಪ್ ಅವರಿಂದ ಹಣ ಪಡೆದಿದ್ದ ಆರೋಪಿ ಹಾಗೂ ಕೋಲಾರ ನಗರಸಭೆ ಕಾಂಗ್ರೆಸ್ ಸದಸ್ಯ ಮುಬಾರಕ್ ಎಂಬಾತನನ್ನು ಬಂಧಿಸಿ, ಮರುದಿನ ಕೋರ್ಟ್ ನಲ್ಲಿ ಹಾಜರುಪಡಿಸಿದ್ದ ಪೊಲೀಸರು, ಕೊನೆಗೆ FIR ತಿದ್ದುಪಡಿ ಮಾಡಿದ್ದು, ದೂರುದಾರ ಪ್ರತಾಪ್ ಅವರ ನಡೆ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
FIRನಲ್ಲಿ ವರ್ಗಾವಣೆ ವಿಚಾರಕ್ಕೆ ಸಂಬಂಧಿಸಿ ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಅವರ ಹೆಸರಿದ್ದರೆ ಸರಕಾರಕ್ಕೆ ಮುಜುಗರ ತಪ್ಪದು ಎನ್ನುವ ಕಾರಣಕ್ಕೆ ಪ್ರಭಾವಿಗಳ ಒತ್ತಡಕ್ಕೆ ಒಳಗಾದ ಪ್ರತಾಪ್ ಹೊಸದಾಗಿ ದೂರು ನೀಡಿದರಾ? ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.
ಅಲ್ಲದೆ, ಒಂದೇ ಕೇಸ್ ನಲ್ಲಿ ಎರಡು ಬಾರಿ FIR ಮಾಡಿರುವ ಕೋಲಾರ ಗಲ್ ಪೇಟೆ ಠಾಣೆ ಪೊಲೀಸರ ಮೇಲೆ ರಾಜಕೀಯ ಒತ್ತಡ ಹೇರಲಾಗಿದೆಯಾ ಎನ್ನುವ ಅಂಶವೂ ವ್ಯಾಪಕವಾಗಿ ಹರಿದಾಡುತ್ತಿದೆ. ಇಷ್ಟಕ್ಕೂ ಪೊಲೀಸರ ಮೇಲೆ ಒತ್ತಡ ಹೇರಿದ ಶಕ್ತಿ ಯಾವುದು ಎನ್ನುವುದರತ್ತ ಎಲ್ಲರ ಗಮನ ನೆಟ್ಟಿದೆ. ಸದ್ಯ ನಿನ್ನೆ ಅರೋಪಿ ಮುಬಾರಕ್ ಗೆ ಕೋಲಾರ ಜಿಲ್ಲಾ ನ್ಯಾಯಾಲಯ ಜಾಮೀನು ನೀಡಿದೆ.
ಲಭ್ಯ ಮಾಹಿತಿ ಪ್ರಕಾರ ವರ್ಗಾವಣೆಗೆ 1.15 ಕೋಟಿ ಹಣಕ್ಕೆ ಬೇಡಿಕೆ ಇಟ್ಟು, 84 ಲಕ್ಷ ಹಣ ನೀಡಿರುವುದಾಗಿ ದೂರು ಗುತ್ತಿಗೆದಾರ ನೀಡಿರುವ ದೂರು ಈಗ ನೇರ ಸಿಎಂ ಕಚೇರಿಗೇ ಉರುಳಾಗುವ ಸಾಧ್ಯತೆ ಇದೆ. ಏಕೆಂದರೆ, ನಸೀರ್ ಅಹ್ಮದ್ ಗೆ ಈ ಮುಬಾರಕ್ ಪರಮಾಪ್ತ ಎನ್ನಲಾಗಿದೆ. ಪ್ರತಾಪ್ ಜತೆ ಡೀಲ್ ಕುದುರಿಲು ಮುಬಾರಕ್ ನಡೆಸಿರುವ ದೂರವಾಣಿ ಸಂಭಾಷಣೆಯ ವಿವರಗಳೂ ಪ್ರತಾಪ್ ಬಳಿ ಇವೆ ಎನ್ನಲಾಗಿದ್ದು, ಅವು ಈಗಾಗಲೇ ಯಾರಿಗಾದರೂ ತಲುಪಿರಬಹುದಾ? ಎನ್ಜುವ ಅನುಮಾನವಿದೆ.
ಈ ಡೀಲ್ʼಗೆ ಸಂಬಂಧಿಸಿದಂತೆ ಕೋಲಾರ, ಬೆಂಗಳೂರು ಸೇರಿದಂತೆ ಹಲವಾರು ಕಡೆ ಮಧ್ಯವರ್ತಿಗಳನ್ನು ಪ್ರತಾಪ್ ಭೇಟಿ ಮಾಡಿದ್ದು, ಎಲ್ಲಾ ಕಡೆಯೂ ನಸೀರ್ ಅಹಮದ್ ಹೆಸರು ಉಲ್ಲೇಖ ಆಗಿದೆ ಎಂದು ಗೊತ್ತಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆಯೇ ಗಲ್ ಪೇಟೆ ಪೊಲೀಸರು ಆರೋಪಿ ಮುಬಾರಕ್ ನನ್ನು ಬಂಧಿಸಿದ್ದರು.
ಪ್ತಕರಣದ ಅಸಲಿ ಕಥೆ
ಆಡುಗೋಡಿ ಪೋಲೀಸ್ ಠಾಣೆಗೆ ಆಯುಧ ತರಬೇತಿಗೆ ತೆರಳಿದ್ದಾಗ ಪ್ರತಾಪ್ ಗೆ ಪರಿಚಯವಾಗಿದ್ದ ಕೋಲಾರದ ಪೀರ್ ಸೈಯ್ಯದ್ ಖಾದರ್, ನಂತರ ನನಗೆ ದೊಡ್ಡ ದೊಡ್ಡ ವ್ಯಕ್ತಿಗಳು ಪರಿಚಯ ಎಂದು ನಂಬಿಸಿದ್ದ. ವರ್ಗಾವಣೆ ವಿಷಯಕ್ಕೆ ನೆರವು ಕೋರಿದ್ದ ಪ್ರತಾಪ್ʼಗೆ ನಗರಸಭೆ ಸದಸ್ಯ ಮುಭಾರಕ್ ಪರಿಚಯ ಮಾಡಿಸಿದ್ದ ಸೈಯ್ಯದ್ ಖಾದರ್. ಆಗ ಕೆಲಸ ಮಾಡಿಕೊಡುವುದಾಗಿ ಹೇಳಿ ಎಂಎಲ್ಸಿ ನಜೀರ್ ಅಹ್ಮದ್ ಬಳಿ ಮಾತನಾಡಿ ತಿಳಿಸುತ್ತೇನೆ ಎಂದು ಮತ್ತೂ ನಂಬಿಸಿದ್ದ ಮುಬಾರಕ್ ಮಾತನ್ನು ಪ್ರತಾಪ್ ಪೂರ್ಣವಾಗಿ ನಂಬಿದ್ದರು.
ದಿನಾಂಕ 2.7.2023 ರಂದು ವರ್ಗಾವಣೆಗೆ ಬಗ್ಗೆ ಬೆಂಗಳೂರಿನ ರೇಸ್ ಕೋರ್ಸ್ ಬಳಿ ಮಾತನಾಡಿದ್ದ ಮುಬಾರಕ್, ವರ್ಗಾವಣೆ ಮಾಡಿಸಲು 1.50 ಕೋಟಿ ಬೇಡಿಕೆ ಇಟ್ಟಿದ್ದರು. ಅದಕ್ಕೆ ಮುಂಗಡವಾಗಿ 25 ಲಕ್ಷ ರೂ. ಪಡೆದುಕೊಂಡಿದ್ದರು. ನಂತರ ಕೋಲಾರದ ಬೈಪಾಸ್ನಲ್ಲಿರುವ ನಾಗಾರ್ಜುನ ಹೋಟೆಲ್ ಬಳಿ ನಗದು ರೂಪದಲ್ಲಿ ದಿನಾಂಕ 22.7.2023 ರಂದು ಸೈಯ್ಯದ್ ಪಿರ್ ಗೆ 9 ಲಕ್ಷ ರೂಪಾಯಿ ಕೊಟ್ಟಿದ್ದರು ಪ್ರತಾಪ್. ಹಣ ಪಡೆದ ಮೇಲೆ ವರ್ಗಾವಣೆ ಆಗುವುದು ತಡವಾದ ಹಿನ್ನೆಲೆಯಲ್ಲಿ ಪ್ರತಾಪ್ ಮುಬಾರಕ್ ಮೇಲೆ ಒತ್ತಡ ಹೇರಿದ್ದರು. ಇದರಿಂದ ಕೊಂಚ ವಿಚಲಿನಾಗಿದ್ದ ಮುಬಾರಕ್ ವರ್ಗಾವಣೆಯ ಬಗ್ಗೆ ನಜೀರ್ ಅಹ್ಮದ್ ಜತೆ ನಡೆಸಿದ ಸಂಬಾಷಣೆ ಆಡಿಯೋ ದಾಖಲೆಗಳನ್ನು ಪ್ರತಾಪ್ ಗೆ ಕಳುಹಿಸಿದ್ದರು. ಅಲ್ಲಿಗೂ ಸುಮ್ಮನಾಗದ ಪ್ರತಾಪ್ ನಿರಂತರ ಒತ್ತಡ ಹೇರುತ್ತಲೇ ಇದ್ದರು. ಇಷ್ಟರಲ್ಲಿ ಇಡೀ ಪ್ರಕರಣದ ವಿವರಗಳು ಎಲ್ಲೆಡೆ ಹರಿದಾಡತೊಡಗಿದ್ದವು.
ಕೊನೆಗೆ ಈ ಇಕ್ಕಟ್ಟಿನಿಂದ ಹೊರಬರಬೇಕು ಎಂದು ನಿರ್ಧರಿಸಿದ ಮುಬಾರಕ್, ಕೋಲಾರ ಹಾಲು ಒಕ್ಕೂಟದಲ್ಲಿ ಗುತ್ತಿಗೆ ಕೊಡಿಸುವುದಾಗಿ ನಂಬಿಸಿ ಮಾಲೂರು ಶಾಸಕ ನಂಜೇಗೌಡರರನ್ನು ಪ್ರತಾಪ್ ಗೆ ಪರಿಚಯಿಸಿದ್ದ. ನಂಜೇಗೌಡರನ್ನು ಪರಿಚಯಿಸಿದ ಮೇಲೆ ಗುತ್ತಿಗೆ ಕೊಡಿಸುವುದಾಗಿ ತಿಳಿಸಿ, ಮತ್ತೊಂದು ಡೀಲ್ ಗೆ ಕೈ ಹಾಕಿದ ಆರೋಪಿಗಳು, ಡೈರಿ ಅಧ್ಯಕ್ಷರು 25 ಲಕ್ಷಕ್ಕೆ ಬೇಡಿಕೆ ಇಟ್ಟಿರುವುದಾಗಿ ಹೇಳಿ ಹೊಸ ಕಥೆ ಕಟ್ಟಿದ್ದರು. ಆಗ ಪ್ರತಾಪ್ ಜಾಗೃತರಾಗಿದ್ದಾರೆ.
ಕೊನೆಗೆ ಈ ಬಗ್ಗೆ ತಮ್ಮ ಸಂಬಂದಿಕರ ಬಳಿ ಅವರು ಆಳವಾಗಿ ವಿಚಾರಿಸಿಕೊಂದಿದ್ದಾರೆ. ಡೈರಿ ಡೀಲ್ ಕೈಕೊಡಲಿದೆ ಎಂದು ಅವರಿಗೆ ಸ್ಪಷ್ಟವಾಗಿ ಗೊತ್ತಾಗಿದೆ. ಅದರಲ್ಲೂ ಮಾಲೂರು ಶಾಸಕ ನಂಜೇಗೌಡರು ಹಾಗೆಲ್ಲಾ ಹಣ ಪಡೆಯುವುದಿಲ್ಲ ಎಂದು ಸಂಬಂಧಿಕರು ತಿಳಿಸಿದ್ದಾರೆ. ಅಂತಿಮವಾಗಿ ಹಣಕ್ಕಾಗಿ ಪ್ರತಾಪ್ ಆರೋಪಿ ಮುಬಾರಕ್ ಗೆ ಗಂಟು ಬಿದ್ದಿದ್ದಾರೆ. ಹಣ ವಾಪಸ್ ಕೇಳಿದ್ದಕ್ಕೆ ಬೆದರಿಕೆ ಹಾಕಿರುವ ಮುಬಾರಕ್ ವಿರುದ್ಧ ಪ್ರತಾಪ್ ಧೈರ್ಯವಾಗಿ ದೂರು ದಾಖಲಿಸಿದ್ದಾರೆ. ದೂರು ದಾಖಲು ಮಾಡಿಕೊಂಡಿದ್ದ ಗಲ್ ಪೇಟೆ ಪೋಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಯಾವಾಗ ಈ FIR ದಾಖಲಾಯಿತೋ, ಮೊದಲೇ ವರ್ಗಾವಣೆ ದಂಧೆಯ ಸುಳಿಯಲ್ಲಿ ಸಿಲುಕಿದ್ದ ಕೆಲ ರಾಜಕೀಯ ಶಕ್ತಿಗಳು ಜಾಗೃತವಾಗಿವೆ. ರಾಜಕೀಯ ಪ್ರಭಾವ ದೊಡ್ಡ ಪ್ರಮಾಣದಲ್ಲಿ ಈ ಪ್ರಕರಣದಲ್ಲಿ ಕೆಲಸ ಮಾಡಿದೆ. ಅಲ್ಲಿಗೆ ದೂರುಗಳು ಅದಲು ಬದಲಾಗಿ ಹೊಸ FIR ಜನ್ಮ ತಾಳಿದೆ.
ಈ ಕೆಳಗಿನ ಸುದ್ದಿಯನ್ನೂ ಓದಿ
Comments 2