ಒಟ್ಟು 300 ಕೋಟಿ ರೂ. ಲೂಟಿ ಹೊಡೆದ ಚಲುವರಾಯಸ್ವಾಮಿ!!
ಮಂಡ್ಯ: ಕೃಷಿ ಸಚಿವ ಎನ್.ಚಲುವರಾಯಸ್ಡಾಮಿ ವಿರುದ್ಧ ಕೇಳಿ ಬರುತ್ತಿರುವ ಭ್ರಷ್ಟಾಚಾರ ಆರೋಪಗಳಿಗೆ ದಿನಕ್ಕೊಂದು ತಿರುವು ಸಿಗುತ್ತಿದೆ. ಹೊಸ ನಾಗಮಂಗಲದ ಮಾಜಿ ಶಾಸಕ ಸುರೇಶ್ ಗೌಡ ಮಾಡಿರುವ ಗುರುತರ ಆರೋಪಗಳು ಕೃಷಿ ಸಚಿವರಿಗಷ್ಟೇ ಅಲ್ಲ, ಕಾಂಗ್ರೆಸ್ ಸರಕಾರಕ್ಕೂ ತೀವ್ರ ಮುಜುಗರ ಉಂಟು ಮಾಡುವ ರೀತಿಯಲ್ಲಿವೆ.
ಮಂಡ್ಯದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಭ್ರಷ್ಟಾಚಾರದಲ್ಲಿ ಚಲುವರಾಯಸ್ವಾಮಿಗೆ ಮೊದಲ ಸ್ಥಾನ ಎಂದು ಮಾಜಿ ಶಾಸಕ ಸುರೇಶ್ ಗೌಡ ಗಂಭೀರ ಆರೋಪ ಮಾಡಿದ್ದಾರೆ.
ಇಷ್ಟಕ್ಕೂ ಸುರೇಶ್ ಗೌಡರು ಹೇಳಿದ್ದೇನು?
ಅಧಿಕಾರ ಸಿಕ್ಕಾಗ ಜನಗಳಿಗೆ ಒಳ್ಳೆಯದು ಮಾಡಬೇಕು, ಆದರೆ ಇವರು ಲೂಟಿ ಮಾಡುತ್ತಿದ್ದಾರೆ ಎಂದು ಅವರು ಟೀಕಿಸಿದ್ದಾರೆ. ಅಧಿಕಾರಿಗಳ ವರ್ಗಾವಣೆಯಲ್ಲಿ 150 ಕೋಟಿ ರೂ., ಜಲಧಾರೆ ಯೋಜನೆ 100 ಕೋಟಿ ರೂ., ಅಧಿಕಾರಿಗಳ ಬಳಿ ಲೂಟಿ ಹೀಗೆ ಒಟ್ಟು 300 ಕೋಟಿ ರೂ.ಗಳನ್ನು ಚಲುವರಾಯಸ್ವಾಮಿ ಲೂಟಿ ಹೊಡೆದಿದ್ದಾರೆ. ಭ್ರಷ್ಟಾಚಾರದಲ್ಲಿ ಚಲುವರಾಯಸ್ವಾಮಿಗೆ ಮೊದಲ ಸ್ಥಾನವಿದೆ.
ಹಿಂದಿನ ಬಿಜೆಪಿ ಸರಕಾರ ಜೆಸಿಬಿಯಲ್ಲಿ ಹಣ ತುಂಬುತ್ತಿದೆ ಎಂದು ಇದೇ ಕಾಂಗ್ರೆಸ್ ನವರು ಹೇಳುತ್ತಿದ್ದರು. ಆದರೆ ಈ ಕಾಂಗ್ರೆಸ್ ಸರಕಾರ ಭ್ರಷ್ಟ ಹಣವನ್ನು ರಾಷ್ಟ್ರ ರಾಜಧಾನಿ ದೆಹಲಿಗೆ ಏರ್‌ಲಿಫ್ಟ್ ಮಾಡುತ್ತಿದೆ. ಇವರು ಕರ್ನಾಟಕ ರಾಜ್ಯವನ್ನೇ ಲೂಟಿ ಹೊಡೆಯುತ್ತಿದ್ದಾರೆ ಎಂದು ಸುರೇಶ್ ಗೌಡರು ನೇರ ಆರೋಪ ಮಾಡಿದ್ದಾರೆ.
ನಮ್ಮ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಿದರೆ ನಾವು ಸುಮ್ಮನಿರುವುದಿಲ್ಲ. ಚಲುವರಾಯಸ್ವಾಮಿಯನ್ನು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರನ್ನಾಗಿ ಮಾಡಿದ್ದು ಜೆಡಿಎಸ್, ಶಾಸಕ, ಸಚಿವ ಮತ್ತು ಎಂಪಿಯನ್ನಾಗಿ ಮಾಡಿದ್ದು ಜೆಡಿಎಸ್ ಪಕ್ಷ. ಅದು ಆ ವ್ಯಕ್ತಿಗೆ ತಿಳಿದಿರಲಿ.
ಕೃಷಿ ಇಲಾಖೆ ಅಧಿಕಾರಗಳು ರಾಜ್ಯಪಾಲರಿಗೆ ಪತ್ರ ಬರೆದದ್ದು ಸತ್ಯ, ಬೆಂಗಳೂರಿನ ಹೋಟೆಲ್‌ಗೆ ಅಧಿಕಾರಿಗಳನ್ನು ಕರೆಸಿಕೊಂಡು ಒತ್ತಡ ಹೇರಿದ್ದಾರೆ, ಅದೂ ನಿಜ. ಬೆಂಗಳೂರಿನ 37 ಕ್ರೆಸೆಂಟ್ ಹೋಟೆಲ್‌ಗೆ ಅಧಿಕಾರಿಗಳನ್ನು ಕರೆಸಿಕೊಂಡು ಒತ್ತಡ ಹೇರಿ ಅವರನ್ನು ಹೇಗೆಲ್ಲಾ ಹೆದರಿಸಿದರು ಎನ್ನುವ ಮಾಹಿತಿ ಇದೆ. 37 ಕ್ರೆಸೆಂಟ್ ಹೋಟೆಲ್ , ಆ ರಸ್ತೆಯ ಸಿಸಿಟಿವಿ ದೃಶ್ಯಗಳನ್ನು ಸಿಐಡಿ ಅಧಿಕಾರಿಗಳು ಪರಿಶೀಲನೆ ಮಾಡಲಿ. ಆಗ ಆ ಹೋಟೆಲ್ಲಿಗೆ ಯಾವ ಎಡಿ, ಜೆಡಿ ಹೋಗಿದ್ದರು ಗೊತ್ತಾಗುತ್ತದೆ.
ಸಚಿವ ಚಲುವರಾಯಸ್ವಾಮಿಗೆ ಬ್ರೈನ್ ಮ್ಯಾಪಿಂಗ್ ಮಾಡಬೇಕು. ಎಲ್ಲೆಲ್ಲಿ ಎಷ್ಟೆಷ್ಟು ತಿಂದಿದ್ದಾನೆ ಎಂಬುದು ಆಗ ತಿಳಿಯುತ್ತದೆ. ಈ ಮನುಷ್ಯ ಎಲ್ಲೆಲ್ಲಿ ಎಷ್ಟೆಷ್ಟು ಬಾಚಿದ್ದಾನೆ ಎನ್ನುವುದು ರಾಜ್ಯದ ಜನರಿಗೆ ತಿಳಿಯಬೇಕಲ್ಲವೇ?
ಕಾಂಗ್ರೆಸ್ ಪಕ್ಷದ ಯುವ ಅಧ್ಯಕ್ಷರೊಬ್ಬರದ್ದು ಬೆಂಗಳೂರಿನಲ್ಲಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಅಂತ ಇದೆ. ಅಲ್ಲಿ ಈ ಚಲುವರಾಯಸ್ವಾಮಿ ಎಷ್ಟು ಕಪ್ಪು ಹಣವನ್ನು ವೈಟ್ ಮಾಡಿಕೊಂಡಿದ್ದಾರೆ ಎಂಬುದು ಕೂಡ ಜನರಿಗೆ ತಿಳಿಯಲಿ. ಬೆಳ್ಳೂರು ಕ್ರಾಸ್‌ನಲ್ಲಿ ಪೆಟ್ರೋಲ್ ಬಂಕ್ ಮಾಲೀಕರ ಹತ್ತಿರ ಎಷ್ಟು ಕಲೆಕ್ಷನ್ ಮಾಡುತ್ತಿದ್ದಾನೆ? ಇದೆಲ್ಲವೂ ಜನರಿಗೆ ಗೊತ್ತಿದೆ. ಅದೆಲ್ಲವೂ ಆಚೆ ಬರಲಿ, ಇಡಿ (ಜಾರಿ ನಿರ್ದೇಶನಾಲಯ) ಕಣ್ಣು ಬಿಡಲಿದೆ. ಮುಂದಿದೆ ನೋಡಿ ಮಾರಿಹಬ್ಬ..
ಜಮೀರ್ ಜತೆ ಸಂಬಂಧ ಕೆಡಿಸಿಕೊಂಡ ಸಚಿವ!!
ಚಲುವರಾಯಸ್ವಾಮಿಗೂ ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೂ ಸಂಬಂಧ ಕೆಟ್ಟು ಹೋಗಿದೆ. ಕಳೆದ 7-8 ತಿಂಗಳಿಂದ ಅವರಿಬ್ಬರೂ ಮಾತನಾಡುತ್ತಿಲ್ಲ. ಚುನಾವಣೆಯಲ್ಲಿ ಅವರು ಚಲುವರಾಯಸ್ವಾಮಿ ಪರ ಪ್ರಚಾರಕ್ಕೂ ಬರಲಿಲ್ಲ. ಜಮೀರ್ ಕೋಪಕ್ಕೆ ಕಾರಣ ಏನು? ಚಲುವರಾಯಸ್ವಾಮಿ ಹೇಳುತ್ತಾರಾ?
ಹೆಚ್.ಡಿ.ಕುಮಾರಸ್ವಾಮಿ ಅವರು ವಿದೇಶಕ್ಕೆ ಹೋಗುವ ಬಗ್ಗೆ ಚಲುವರಾಯಸ್ವಾಮಿ ಮಾತನಾಡುತ್ತಾರೆ. ಆದರೆ, ಕುಮಾರಣ್ಣ ಯಾವುದಾದರೂ ಕ್ಯಾಸಿನೋಗೆ ಇಸ್ಪಿಟ್ ಆಡುವುದಕ್ಕೆ ಹೋಗಿದ್ದರಾ? ಆದರೆ, ಈ ವ್ಯಕ್ತಿ ಅದೆಲ್ಲವನ್ನೂ ಮಾಡುತ್ತಾರೆ. ಅನೇಕ ಕಡೆ ಜಮೀರ್ ಅಹಮದ್ ಹೆಸರನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಅಲ್ಲಿ ಏನೇನು ನಡೆದಿತ್ತು ಎನ್ನುವುದನ್ನು ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ.
ಬೀಡಿ ತಂದುಕೊಡುತ್ತಿದ್ದ ಚಲುವರಾಯಸ್ವಾಮಿ!!
ಶ್ರವಣಬೆಳಗೊಳದ ಮಾಜಿ ಶಾಸಕ ಪುಟ್ಟೇಗೌಡರಿಗೆ ಚಲುವರಾಯಸ್ವಾಮಿ ಬೀಡಿ, ಸಿಗರೇಟ್ ತಂದು ಕೊಡುತ್ತಿದ್ದರು, ಅದು ಸುಳ್ಳಾ? ಎಲ್.ಆರ್.ಶಿವರಾಮೇಗೌಡರ ಬಳಿ ಐದು ಸಾವಿರ ರೂಪಾಯಿ ಕೇಳಿದ್ದು ಸುಳ್ಳಾ? ಹಿಟ್ಟಿಕ್ಕಿದವಳನ್ನೇ ಇಟ್ಟು ಕೊಳ್ಳುವವರನ್ನು ಏನಂತ ಅಂತ ಕರಿಯೋದು?