ಆಪರೇಷನ್ ಹಸ್ತಕ್ಕೆ ಕಾಂಗ್ರೆಸ್ಸಿನಲ್ಲೇ ಭಾರೀ ವಿರೋಧ
ಬೆಂಗಳೂರು: ಕಾಂಗ್ರೆಸ್ ಗೆ ಬಂದರೆ ಫಸ್ಟ್ ಬೆಂಚ್ ಸಿಗಲ್ಲ ಎಂಬ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿಕೆಗೆ ಶಾಸಕ ಎಸ್.ಟಿ.ಸೋಮಶೇಖರ್ ತಿರುಗೇಟು ನೀಡಿದ್ದಾರೆ.
ಡಿಸಿಎಂ ಆಗಿದ್ಧ ಪರಮೇಶ್ವರ್ ಈಗ ಎಲ್ಲಿದ್ದಾರೆ? ಎಂಬುದನ್ನು ನೋಡಿಕೊಳ್ಳಲಿ. ಅವರು ಕರೆಕ್ಟ್ ಆಗಿ ಇರುತ್ತಿದ್ದರೆ ಅವರಿಗೆ ಫಸ್ಟ್ ಬೆಂಚ್ ಸಿಗುತ್ತಿತ್ತು, ನಾನು ಇಲ್ಲಿ ಹಿಂದೆಯೂ ಇಲ್ಲ, ಮುಂದೆಯೂ ಇಲ್ಲ, ಆರಾಮಾಗಿಯೇ ಇದ್ದೇನೆ ಎಂದು ಸೋಮಶೇಖರ್ ಹೇಳಿದ್ದಾರೆ.
ನಾನು ಬಿಜೆಪಿ ಶಾಸಕ, ಕಾಂಗ್ರೆಸ್ ಅವಧಿಯಲ್ಲಿ ಎರಡು ಬಾರಿ ಶಾಸಕನಾಗಿದ್ದೆ. ಆಗ ಅನುದಾನ ಕೊಟ್ಟಿದ್ದರು ಅಂತ ಮುಖ್ಯಮಂತ್ರಿ ಬಗ್ಗೆ ಎರಡು ಒಳ್ಳೆಯ ಮಾತಾಡಿದ್ದೇನೆ. ಕಳೆದ ಮೂರು ತಿಂಗಳಿನಿಂದ ನನ್ನ ಕ್ಷೇತ್ರದಲ್ಲಿ ಅನುದಾನ ಇಲ್ಲದೇ ಕೆಲಸ ಮಾಡಲು ಆಗಿಲ್ಲ. ರಾಜ್ಯಮಟ್ಟ, ಜಿಲ್ಲಾ ಮಟ್ಟದಲ್ಲಿ ನನಗೆ ಯಾವುದೇ ಸಮಸ್ಯೆ ಇಲ್ಲ. ಸ್ಥಳೀಯವಾಗಿ ನನ್ನ ವಿರುದ್ಧ ಕೆಲಸ ಮಾಡಿದ್ದಾರೆ ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ.
ನಾನು ಕಾಂಗ್ರೆಸ್ಗೆ ಹೋಗುತ್ತೇನೆ ಅಂತಾ ಬೆಂಬಲಿಗರ ಜತೆ ಮಾತನಾಡಿಲ್ಲ. ಡಿ.ಕೆ.ಶಿವಕುಮಾರ್ ಜತೆ ರಾಜಕೀಯ ಮಾತುಕತೆ ಏನೂ ಹೇಳಿಲ್ಲ.ನನ್ನ ವಿರುದ್ಧ ಕೆಲಸ ಮಾಡಿದವರು ಏನೇನೊ ಮಾಡಿದ್ದಾರೆ. ನನಗೆ ಬಿಜೆಪಿ ಬಗ್ಗೆ ಅಸಮಾಧಾನ ಇಲ್ಲ ಅಂತ ನಳಿನ್ ಕುಮಾರ್ ಕಟೀಲ್, ಬಸವರಾಜ ಬೊಮ್ಮಾಯಿ, ಸಿ.ಟಿ.ರವಿಗೆ ಹೇಳಿದ್ದೇನೆ ಎಂದು ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.
ಘರ್ʼವಾಪ್ಸಿಗೆ ವಿರೋಧ
ಈ ನಡುವೆ ಆಪರೇಷನ್ ಹಸ್ತ ವಾಯುವೇಗದಲ್ಲಿ ನಡೆಯುತ್ತಿದೆ ಎನ್ನುವ ಮಾಹಿತಿ ಹೊರಬಂದಿದ್ದು, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಧಾವಂತಕ್ಕೆ ಕೆಲ ಹಿರಿಯ ಸಚಿವರು, ಪಕ್ಷದ ಕೆಲ ಪ್ರಮುಖ ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ.
ಕಷ್ಟಕಾಲದಲ್ಲಿ ಪಕ್ಷ ಬಿಟ್ಟು ರಾಷ್ಟ್ರೀಯ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ಬಗ್ಗೆ ಕೀಳಾಗಿ ಮಾತನಾಡಿದ್ದವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವುದು ಸರಿಯಲ್ಲ. ಪಕ್ಷದ ಬೆನ್ನಿಗೆ ಚೂರಿ ಹಾಕಿದವರನ್ನು ಯಾವುದೇ ಕಾರಣಕ್ಕೂ ಪಕ್ಷ ಮರಳಿ ಸೇರಿಸಿಕೊಳ್ಳುವುದಿಲ್ಲ ಎಂದು ಸದನದಲ್ಲಿಯೇ ಸಿದ್ದರಾಮಯ್ಯ ಅವರು ಹೇಳಿದ್ದರು. ಈಗ ಆಪರೇಷನ್ ಕಮಲಕ್ಕೆ ಬಿಜೆಪಿಗೆ ಜಿಗಿದಿದ್ದ ಶಾಸಕರನ್ನು ಪಕ್ಷಕ್ಕೆ ಸೇರಿಸಿಕೊಂಡರೆ ಕೆಟ್ಟ ಹೆಸರು ಬರುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಕೆಲವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರಿಗೆ ಆಪರೇಷನ್ ಹಸ್ತದ ಬಗ್ಗೆ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.