ವೀರಪ್ಪ ಮೊಯಿಲಿ ಅವರಿಗೆ ಟಿಕೆಟ್ ಬಹುತೇಕ ಅನುಮಾನ
ಬೆಂಗಳೂರು: ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರವನ್ನು ಎರಡು ಅವಧಿಗೆ ಪ್ರತಿನಿಧಿಸಿ ಕೇಂದ್ರದಲ್ಲಿ ಆ ಎರಡೂ ಸಲ ಸಂಪುಟ ದರ್ಜೆ ಮಂತ್ರಿಯಾಗಿ ಮೆರೆದಿದ್ದ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ ಅವರಿಗೆ ಈ ಬಾರಿ ಲೋಕಸಭೆ ಟಿಕೆಟ್ ಇಲ್ಲ ಎನ್ನುವುದು ಗೊತ್ತಾಗಿದೆ.
ಕಳೆದ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದ ಮತದಾರರು ಮೊಯಿಲಿಗೆ ಚೆಕ್ ಮೇಟ್ ಇಟ್ಟಿದ್ದರು. ಆದರೆ, ಮತ್ತೊಮ್ಮೆ ಕ್ಷೇತ್ರದ ಸಂಸದರಾಗಲು ಅವರು ಶತಾಯಗತಾಯ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಈ ಬಾರಿ ಅವರಿಗೆ ಟಿಕೆಟ್ ವಿಷಯದಲ್ಲೇ ಪೈಪೋಟಿ ಎದುರಾಗಿದೆ.
ಕಳೆದ ಚುನಾವಣೆಯಲ್ಲಿ ಸೋತಿದ್ದ ಮೊಯಿಲಿ ಅವರು ಈ ಬಾರಿ ಚಿಕ್ಕಬಳ್ಳಾಪುರದಿಂದಲೇ ಗೆದ್ದು ಲೋಕಸಭೆ ಪ್ರವೇಶ ಮಾಡಲು ಕಸರತ್ತು ಶುರು ಮಾಡಿದ್ದಾರೆ. ಆದರೆ, ಅವರಿಗೆ ಎಂ.ಎಸ್.ರಾಮಯ್ಯ ಅವರ ಮೊಮ್ಮಗ, ಮಾಜಿ ಶಾಸಕ ಎಂ.ಆರ್.ಸೀತಾರಾಂ ಅವರ ಪುತ್ರ ರಕ್ಷಾ ರಾಮಯ್ಯ ಬಿಗ್ ಫೈಟ್ ಕೊಡುತ್ತಿದ್ದಾರೆ. ಸದ್ಯಕ್ಕೆ ಸಿಕ್ಕಿರುವ ಖಚಿತ ಮಾಹಿತಿ ಪ್ರಕಾರ ಈ ಬಾರಿ ಮೊಯಿಲಿ ಅವರಿಗೆ ಚಿಕ್ಕಬಳ್ಳಾಪುರ ಕ್ಷೇತ್ರದ ಟಿಕೆಟ್ ಇಲ್ಲವೇ ಇಲ್ಲ.
ಕಾರಣ ಇಷ್ಟೇ;
ಇನ್ನೂ ಲೋಕಸಭೆ ಚುನಾವಣೆ ಬಿಸಿ ಏರದೇ ಇದ್ದರೂ ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ದೊಡ್ಡದೇ ಇದೆ. ಚಿಕ್ಕಬಳ್ಳಾಪುರದ ಮಟ್ಟಿಗೆ ಮೊಯಿಲಿ ಹಾಗೂ ರಕ್ಷಾ ರಾಮಯ್ಯ ಅವರ ಹೆಸರುಗಳು ಮಾತ್ರ ಜೋರು ದನಿಯಲ್ಲಿ ಸದ್ದು ಮಾಡುತ್ತಿವೆ.
ಮೊಯಿಲಿ ಅವರು ಈಗಾಗಲೇ ಕ್ಷೇತ್ರದ ಪ್ರವಾಸ ಶುರು ಮಾಡಿದ್ದು, ನೆಲಮಂಗಲ ಸೇರಿದಂತೆ ಹಲವಾರು ಕಡೆ ಕಾರ್ಯಕರ್ತರ ಸಭೆ ನಡೆಸಿದ್ದಾರೆ. ರಕ್ಷಾ ರಾಮಯ್ಯ ಸೇರಿ ಇನ್ನಿತರೆ ಸಂಭವನೀಯ ಅಭ್ಯರ್ಥಿಗಳು ಇನ್ನಷ್ಟೇ ಕ್ಷೇತ್ರಕ್ಕೆ ಎಂಟ್ರಿ ಕೊಡಬೇಕಿದೆ. ಅಲ್ಲದೆ; ರಕ್ಷಾ ರಾಮಯ್ಯ ಅವರ ಕುಲ ಬಾಂಧವರು ಕ್ಷೇತ್ರದಲ್ಲಿ 60ರಿಂದ 65 ಸಾವಿರದಷ್ಟು ಇದ್ದಾರೆ. ಮೊಯಿಲಿ ಅವರಿಗೆ ಅಂಥಾ ದೊಡ್ಡ ಜಾತಿ ಬಲ ಇಲ್ಲ. ಇದು ಮೊಯಿಲಿ ಅವರ ಪಾಲಿಗೆ ದೊಡ್ಡ ಹಿನ್ನಡೆ.
ಎರಡು ಸಲ ಗೆದ್ದು, 2019ರಲ್ಲಿ ಬಿಜೆಪಿಯ ಬಿ.ಎನ್.ಬಚ್ಚೇಗೌಡರ ಎದುರು 182,110 ಮತಗಳ ಅಂತರದಲ್ಲಿ ಮೊಯಿಲಿ ಅವರು ಸೋತಿದ್ದರು. ಮಂಗಳೂರಿನ ಮೊಯಿಲಿ ಅವರಿಗೂ ಹೊಸಕೋಟೆಯ ಬಚ್ಚೇಗೌಡರಿಗೂ ಆ ಚುನಾವಣೆಯಲ್ಲಿ ಜಿದ್ದಾಜಿದ್ದಿ ನಡೆದಿತ್ತು.
ಮೊಯಿಲಿ ಅವರು 2009ರಿಂದ 2019ರವರೆಗೆ ಚಿಕ್ಕಬಳ್ಳಾಪುರ ಸಂಸದರಾಗಿ ಕೇಂದ್ರದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರ, ಇಂಧನ, ಕಾರ್ಪೊರೇಟ್ ವ್ಯವಹಾರ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಹಾಗೂ ಪರಿಸರ ಮತ್ತು ಅರಣ್ಯ ಖಾತೆ ಮಂತ್ರಿ ಆಗಿದ್ದರು. ಸತತವಾಗಿ ಮೂರು ಬಾರಿ ಮಂಗಳೂರಿನಲ್ಲಿ ಸೋತಿದ್ದ ಅವರನ್ನು ಚಿಕ್ಕಬಳ್ಳಾಪುರ ಕೈ ಹಿಡಿದಿತ್ತು. ಆ ಕೃತಜ್ಞತೆ ಅವರಿಲ್ಲ ಎನ್ನುವ ಸಿಟ್ಟು ಜನರಿಗಿದೆ. ಅದೂ ಕಾಂಗ್ರೆಸ್ ಪಕ್ಷಕ್ಕೆ ಚನ್ನಾಗಿ ಗೊತ್ತಿದೆ.
ಇಂಥ ಪ್ರಭಾವೀ ಖಾತೆಗಳನ್ನು ಹೊಂದಿದ್ದರೂ ಮೊಯಿಲಿ ಅವರು ಕ್ಷೇತ್ರಕ್ಕೆ ಕೊಟ್ಟ ಕೊಡುಗೆಗಳ ಬಗ್ಗೆ ಜನತೆಗೆ ಏನೊಂದೂ ನೆನಪಿಲ್ಲ ಎನ್ನಬಹುದು. ಸಂಸದರಾಗಿ ದಿಲ್ಲಿ ಮತ್ತು ಬೆಂಗಳೂರಿಗಷ್ಟೇ ಸೀಮಿತರಾದ ಅವರ ಬಗ್ಗೆ ಕ್ಷೇತ್ರದಲ್ಲಿ ವಿರೋಧಿ ಅಲೆ ವಿಪರೀತ ಇದೆ.
ಮೂರೇ ವರ್ಷದಲ್ಲಿ ಎತ್ತಿನಹೊಳೆ ನೀರನ್ನು ಚಿಕ್ಕಬಳ್ಳಾಪುರಕ್ಕೆ ಹರಿಸಲಾಗುವುದು ಎಂದು ಹೇಳಿದ್ದ ಮೊಯಿಲಿ ಅವರ ಮಾತು ಹತ್ತು ವರ್ಷ ಕಳೆದರೂ ಕಾರ್ಯರೂಪಕ್ಕೆ ಬಂದಿಲ್ಲ. ಈಗಲೂ ಶೀಘ್ರದಲ್ಲಿಯೇ ಎತ್ತಿನಹೊಳೆ ನೀರು ಹರಿಸಲಾಗುವುದು, ಸರಕಾರದ ಮೇಲೆ ಒತ್ತಡ ತಂದ ಆದಷ್ಟು ಬೇಗ ಕಾರ್ಯಗತ ಮಾಡಲಾಗುವುದು ಎಂದಷ್ಟೇ ಭಾಷಣ ಮಾಡುತ್ತಿದ್ದಾರೆ ಅವರು.
ಎತ್ತಿನಹೊಳೆ ನೀರು ಕೇವಲ 3 ರಿಂದ 6 ತಿಂಗಳೊಳಗೆ ಬರುತ್ತೇ ಎಂದು ಸುಳ್ಳು ಹೇಳಿ ಕೊಂಡು ಬಂದ ಮೊಯ್ಲಿ, ಇತ್ತೀಚಿಗೆ ಬಾಗೇಪಲ್ಲಿ ಕ್ಷೇತ್ರದ 25 ಕೆರೆಗಳಿಗೆ ಮಾರ್ಚ 2024 ರೊಳಗೆ ಹೆಚ್.ಎನ್.ವ್ಯಾಲಿಯ ಬೆಂಗಳೂರಿನ ಕೊಳಚೆ ನೀರನ್ನು ಹರಿಸುತ್ತೇವೆಂದು ಹೇಳಿದ್ದಾರೆ. ಎತ್ತಿನಹೊಳೆ ಬದಲು ಕೊಳಚೆ ನೀರು ಹರಿಸಲು ಮೊಯಿಲಿ ಅವರೂ ಕಾರಣರು. ಈಗಷ್ಟೇ ಜನರಿಗೆ ಕೊಳಚೆ ನೀರಿನ ಅಪಾಯ ಢಾಳಾಗಿ ಕಾಣುತ್ತಿದೆ.
ತಮ್ಮ ಸಂಸದರ ಅನುದಾನವನ್ನು ಮೊಯಿಲಿ ಅವರು ಎಂಟು ವಿಧಾನಸಭೆ ಕ್ಷೇತ್ರಗಳನ್ನು ಹೊಂದಿರುವ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಎಲ್ಲೆಲ್ಲಿಗೆ ಹಂಚಿದರು ಎಂಬ ಬಗ್ಗೆ ಮಾಹಿತಿ ಇಲ್ಲ. ಜನರನ್ನು ಕೇಳಿದರೆ ತಮಗೇನೂ ಗೊತ್ತಿಲ್ಲ ಅನ್ನುತ್ತಿದ್ದಾರೆ.
ಅಲ್ಲದೆ, ಕ್ಷೇತ್ರದ ಕಾಂಗ್ರೆಸ್ ಪಕ್ಷದ ನಾಯಕರಿಗೆ ಮೊಯಿಲಿ ಅಪಥ್ಯರಾಗಿದ್ದಾರೆ. ಅವರು ಈಗ ಯಾರಿಗೂ ಬೇಡವಾಗಿದ್ದಾರೆ ಹಾಗೂ 83 ವರ್ಷಗಳ ಅವರನ್ನು ನಾವು ಆರ್.ಟಿ.ನಗರಕ್ಕೆ (ಮೊಯಿಲಿ ಅವರ ಮನೆ ಇರುವ ಜಾಗ) ಹೋಗಲಾಗದು ಎನ್ನುತ್ತಿದ್ದಾರೆ.
ಮಿಗಿಲಾಗಿ ಈ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಖಚಿತ. ಒಂದು ವೇಳೆ ಹಾಗೇನಾದರೂ ಆದರೆ ಚಿಕ್ಕಬಳ್ಳಾಪುರ ಕ್ಷೇತ್ರವನ್ನು ಬಿಜೆಪಿಯು ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಡಬಹುದು ಅಥವಾ ಜೆಡಿಎಸ್ ಪಕ್ಷವೇ ಬಿಜೆಪಿಗೆ ಬಿಟ್ಟು ಕೊಡಬಹುದು. ಏನೇ ಆದರೂ ಕಾಂಗ್ರೆಸ್ ಪಕ್ಷಕ್ಕೆ ನಷ್ಟ ತಪ್ಪಿದ್ದಲ್ಲ. ಅದರಲ್ಲೂ ಮೊಯಿಲಿ ಅವರು ಅಭ್ಯರ್ಥಿ ಆದರೆ, ಹೀನಾಯವಾಗಿ ಸೋಲುವುದು ಗ್ಯಾರಂಟಿ ಎನ್ನುವ ಮಾತನ್ನು ಕೈ ಪಕ್ಷದ ಹಿರಿಯ ನಾಯಕರೊಬ್ಬರೇ ಹೇಳುವ ಮಾತು.
ಮುಖ್ಯವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಕ್ಷಾ ರಾಮಯ್ಯ ಅವರ ಪರವಾಗಿ ಒಲವಿದೆ ಎನ್ನಲಾಗಿದೆ. ಹೀಗಾಗಿ ಮೊಯಿಲಿ ಪರವಾಗಿ ರಾಜ್ಯಮಟ್ಟದಲ್ಲಿ ಯಾರೂ ಬ್ಯಾಟಿಂಗ್ ಮಾಡುತ್ತಿಲ್ಲ. ಬೆಂಗಳೂರು ನಗರ ಮಲ್ಲೇಶ್ವರ ಕ್ಷೇತ್ರದಲ್ಲಿ ರಕ್ಷಾ ಅವರ ತಂದೆ ಎಂ.ಆರ್.ಸೀತಾರಾಂ ಅವರು ಶಾಸಕರಾಗಿದ್ದರು. ಆದರೆ, ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರಿಗೆ ಟಿಕೆಟ್ ಕೊಡುವ ಸಲುವಾಗಿ ಅವರಿಗೆ ಅವಕಾಶ ತಪ್ಪಿಸಲಾಗಿತ್ತು. ಹೀಗಾಗಿ, ಹಿಂದೆ ಆದ ಅನ್ಯಾಯವನ್ನು ಈಗ ಸರಿಪಡಿಸಲು ಸಿದ್ದರಾಮಯ್ಯ ಅವರು ಉದ್ದೇಶಿಸಿದ್ದಾರೆ ಎಂದು ಹೇಳಲಾಗಿದೆ.
Comments 1