ರಜಾಕರ ಕ್ರೌರ್ಯ ಅಳಿದರೂ ಅಳಿಯದ ಬಡತನ
ಕಲ್ಯಾಣ ಕರ್ನಾಟಕ ವಿಮೋಚನೆಯಾಗಿ ಇಂದಿಗೆ 76 ವರ್ಷಗಳು ಸಂದಿವೆ. ನೂರಾರು ಜನರ ಬಲಿದಾನದಿಂದ ಸಿಕ್ಕ ಸ್ವತಂತ್ರವೂ ಜನರ ಬದುಕಲ್ಲಿ ಬದಲಾವಣೆ , ಅಭಿವೃದ್ಧಿ ತಂದಿಯಾ? ಅಥವಾ ಆ ಸ್ವಾತಂತ್ರ್ಯದ ಫಲ ಮರೀಚೀಕೆ ಆಗಿದಿಯೇ ಉಳಿದಿದೆಯಾ? ಈ ಜಿಜ್ಞಾಸೆಯಲ್ಲೇ ಅಮೃತ ಮಹೋತ್ಸವವೂ ಮುಗಿದು ಹೋಗುತ್ತಿದೆ.
by Dr.Guruprasda Hawaldar
1947ರ ಆಗಸ್ಟ್ 15ರಂದು ಇಡೀ ದೇಶವೇ ಸ್ವಾತಂತ್ರ್ಯದ ಸಂಭ್ರಮದಲ್ಲಿದ್ದರೆ ಕಲ್ಯಾಣ ಕರ್ನಾಟಕ ಪ್ರದೇಶ ಮಾತ್ರ ಇನ್ನೂ ಗುಲಾಮಗಿರಿ ಎಂಬ ನರಕದಲ್ಲಿ ಇತ್ತು. ಹೈದರಾಬಾದ್ ನಿಜಾಮನ ಆಳ್ವಿಕೆ ಈ ಜನರ ಬದುಕನ್ನು ದುರ್ಭರವಾಗಿಸಿತ್ತು. ವಂದೇ ಮಾತರಂ ಹೇಳುವುದು, ತ್ರಿವರ್ಣ ಧ್ವಜ ಹಾರಿಸುವುದು ಅಪರಾಧವಾಗಿತ್ತು. ಕಲ್ಯಾಣ ಕರ್ನಾಟಕ ಸ್ವಾತಂತ್ರ್ಯ ಚಳವಳಿ ನಿಜಾಮನ ನಿರಂಕುಶ ಪ್ರಭುತ್ವ ಹಾಗೂ ಸ್ವಾತಂತ್ರ್ಯ ದ ಹೋರಾಟವಾಗಿತ್ತು. 1948ರ ಸೆಪ್ಟೆಂಬರ್ 17ರಂದು ಭಾರತದ ಒಕ್ಕೂಟಕ್ಕೆ ಸೇರಿದ ಆ ಕ್ಷಣಕ್ಕೆ ಇಂದಿಗೆ 76 ವರ್ಷ . ಇದರ ಹಿಂದೆ ಸಾವಿರಾರು ದೇಶಭಕ್ತರು ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲರ ಛಲವಿದೆ.
ಬ್ರಿಟೀಷ್ ಇಂಡಿಯ ಮತ್ತು ಸಂಸ್ಥಾನಿಕ ಇಂಡಿಯ ಸ್ವತಂತ್ರವಾದ ಗಳಿಗೆಯಲ್ಲಿ ದೇಶದ ವಿವಿಧೆಡೆ ಇದ್ದ 560ಕ್ಕೂ ಹೆಚ್ಚು ಪ್ರಾಂತ್ಯಗಳ ರಾಜರು ಭಾರತದ ಒಕ್ಕೂಟದ ವ್ಯವಸ್ಥೆಗೆ ಸೇರಿದರು. ಆದರೆ ಕಾಶ್ಮೀರ, ಜುನಾಘಡ ಹಾಗೂ ಹೈದರಾಬಾದ್ ಪ್ರಾಂತ್ಯಗಳ ರಾಜರು ಒಕ್ಕೂಟದಲ್ಲಿ ಸೇರಲಿಲ್ಲ. ಹೈದರಾಬಾದ್ ಕರ್ನಾಟಕ ಎಂದು ಗುರುತಿಸಿಕೊಳ್ಳುವ ಪ್ರದೇಶಕ್ಕೆ ಹಿನ್ನೆಲೆ ಕ್ರಿ.ಶ. 1724ರಿಂದಲೂ ಇತ್ತು. 1724ರಲ್ಲಿ ನಿಜಾಮ-ಉಲ್ಮ-ಮುಲ್ಕ್ ಎಂಬ ರಾಜ ಹೈದರಾಬಾದ್ ರಾಜ್ಯವನ್ನು ಸ್ಥಾಪಿಸಿ 1748ರವರೆಗೆ ರಾಜ್ಯಭಾರ ನಡೆಸಿದ. ಅಲ್ಲಿಂದ 1948ರವರೆಗಿನ ಸುಮಾರು 224 ವರ್ಷಗಳ ಸುದೀರ್ಘ ಇತಿಹಾಸದಲ್ಲಿ ಏಳು ಜನ ಅಸಫಿಯಾ ವಂಶದ ರಾಜರು ಈ ಪ್ರದೇಶವನ್ನು ಆಳಿದರು. ಈ ಅವಧಿಯಲ್ಲಿ ಈ ಪ್ರದೇಶದಲ್ಲಿ ಹಿಂದೂ- ಮುಸ್ಲಿಂ ಸಂಸ್ಕೃತಿ ಮಿಳಿತಗೊಂಡು ವೈವಿಧ್ಯಮಯ ನಂಬಿಕೆ, ಆಚರಣೆಗಳು ಹುಟ್ಟಿಕೊಂಡವು. ಆ ಮೂಲಕ ಜಗತ್ತಿಗೆ ಸಾಮಾಜಿಕ ಸಾಮರಸ್ಯದ ಪಾಠವನ್ನೂ ನೀಡಿತು.
ಭಾರತದಲ್ಲಿದ್ದ 565 ಸಂಸ್ಥಾನಗಳಲ್ಲಿ ಹೈದ್ರಾಬಾದ್ ಸಂಸ್ಥಾನ 82,689 ಚದರ ಮೈಲಿ ವಿಸ್ತೀರ್ಣವುಳ್ಳ ಬೃಹತ್ ಸಂಸ್ಥಾನವೆಂಬ ಕೀರ್ತಿ ಪಡೆದಿತ್ತು. 1941ರ ಜನಗಣತಿ ಪ್ರಕಾರ ಹೈದ್ರಾಬಾದ್ ಸಂಸ್ಥಾನದ ಜನಸಂಖ್ಯೆ 1,63,38,539 ಇತ್ತು. ನಿಜಾಮನ ಖಾಸಗಿ ಆಸ್ತಿಯ ವಿಸ್ತೀರ್ಣ 8,109 ಚದರ ಮೈಲಿಗಳಷ್ಟಿತ್ತು. ಇದರಿಂದ ವಾರ್ಷಿಕ 2,50,00,000 ರೂಪಾಯಿ ವರಮಾನ ಬರುತ್ತಿತ್ತು. ಇಷ್ಟೆಲ್ಲಾ ಸಂಪನ್ಮೂಲಗಳಿದ್ದರೂ ಜನರ ಜೀವನಮಟ್ಟವು ಅತ್ಯಂತ ಕೆಳಮಟ್ಟದ್ದಾಗಿತ್ತು. ಅವರ ಜೀವನಮಟ್ಟವು ಪ್ರಾಣಿಗಳಿಗಿಂತ ಹೀನಾಯವಾಗಿತ್ತು. ಜಮೀನ್ದಾರಿ ಪಾಳೆಗಾರರು, ಬ್ರಿಟೀಷರು ಹಾಗೂ ನಿಜಾಮ ಹೀಗೆ ಮೂರು ವಿಧದ ಅಧಿಕಾರಿಗಳಿಂದ ಶೋಷಣೆಗೆ ಒಳಗಾಗಿದ್ದ ಜನರ ಜೀವನಮಟ್ಟವು ಉತ್ತಮವಾಗಿರಲು ಹೇಗೆ ಸಾಧ್ಯ?
ಸುಮಾರು 25.629 ಚದುರ ಮೈಲಿ ವಿಸ್ತೀರ್ಣ ಜಮೀನಿನ ಮೇಲೆ ಅಧಿಕಾರ ಪಡೆದಿದ್ದ ಜಮೀನ್ದಾರಿ ಪಾಳೆಗಾರಿಕೆಯಿಂದ ಗ್ರಾಮಾಂತರ ಪ್ರದೇಶಗಳಲ್ಲಿ ಜನರಿಗೆ ಆರ್ಥಿಕ ಸ್ವಾತಂತ್ರ್ಯವೇ ಇರಲಿಲ್ಲ. ಜಮೀನ್ದಾರಿಗಳ ಕೃಪೆಯಲ್ಲಿ ಬಡರೈತರು ಬದುಕಬೇಕಾಗಿತ್ತು. ಜಮೀನ್ದಾರಿ ಪಾಳೆಗಾರಿಕೆ, ಸಾಂಪ್ರದಾಯಿಕ ಗುಲಾಮಿತನ ಜೀತದ ದುಡಿಮೆ, ಅವಮಾನವೀಯ ಹಾಗೂ ಭ್ರಷ್ಟ ಆಡಳಿತದಿಂದಾಗಿ ಆರ್ಥಿಕತೆಯು ಜರ್ಜರಿತವಾಗಿತ್ತು. ಸಾಮಾನ್ಯ ಜನರಿಂದ ಜಮೀನ್ದಾರರು ಜಮೀನನ್ನು ಮೋಸ ಕಪಟಗಳಿಂದ ಕಬಳಿಸುತ್ತಿದ್ದರು. ಅಧಿಕಾರಿಗಳನ್ನು ತಮ್ಮ ವಶದಲ್ಲಿಟ್ಟುಕೊಂಡಿದ್ದ ಇವರು ಜನರ ಗಮನಕ್ಕೆ ತಾರದೆ ಜಮೀನನ್ನು ತಮ್ಮ ಹೆಸರಿನಲ್ಲಿ ನೊಂದಾಯಿಸಿಕೊಂಡು ಕಾನೂನಿನ ಪ್ರಕಾರ ಮಾಲೀಕರಾಗಿ ಬಿಡುತ್ತಿದ್ದರು.
ಅಭಿವ್ಯಕ್ತಿ ಸ್ವಾತಂತ್ರ್ಯ
ನಿಜಾಮನ ಸರ್ವಾಧಿಕಾರಿ ಆಳ್ವಿಕೆಯಲ್ಲಿ ಮೂಲಭೂತ ಹಕ್ಕುಗಳಾದ ಅಭಿವ್ಯಕ್ತಿ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯ, ಸಂಘ ಕಟ್ಟಿಕೊಳ್ಳುವ ಸ್ವಾತಂತ್ರ್ಯ, ಪತ್ರಿಕಾ ಸ್ವಾತಂತ್ರ್ಯ, ಸಮಾನ ಅವಕಾಶಗಳ ಸ್ವಾತಂತ್ರ್ಯ ಮುಂತಾದ ಹಕ್ಕುಗಳನ್ನು ನಾಗರಿಕರಿಂದ ಕಿತ್ತುಕೊಳ್ಳಲಾಗಿತ್ತು. ರಾಷ್ಟ್ರೀಯವಾದಿಗಳ ಸಂಚಾರದ ಮೇಲೆ ಕಟ್ಟುನಿಟ್ಟಿನ ನಿಗಾ ಇಡಲಾಗಿತ್ತು. ನಿಜಾಮನ ಕಾರ್ಯಾಂಗ ಮಂಡಳಿ ಸದಸ್ಯರನ್ನು ಚುನಾವಣೆ ಆಧಾರದ ಮೇಲೆ ಆರಿಸಬೇಕು ಎಂದು ಒತ್ತಾಯಿಸುತ್ತಿದ್ದವರ ಮೇಲೂ ಕಣ್ಣಿಡಲಾಗಿತ್ತು. ಅವರನ್ನು ಕಾರಣ ಅಜ್ಞೆ ಇಲ್ಲದೆ ಬಂಧಿಸಲಾಗುತ್ತಿತ್ತು. ಮೊಗಲಾಯಿ ಅಧಿಕಾರಿಗಳು ಈ ರೀತಿಯಲ್ಲಿ ಬಂಧಿಸಿದವರನ್ನು ಕ್ರೂರವಾಗಿ ಹಿಂಸಿಸುತ್ತಿದ್ದರು.
ಪತ್ರಿಕೆಗಳ ಅಭಿವ್ಯಕ್ತಿ
ಸಾರ್ವಜನಿಕಾಭಿಪ್ರಾಯದ ಪ್ರತಿಬಿಂಬ ಹಾಗೂ ಪ್ರಜಾಪ್ರಭುತ್ವಾದಿ ಸರ್ಕಾರದ ನಾಲ್ಕನೇ ಸ್ತಂಭವಾದ ಪತ್ರಿಕೆಗಳು ಸ್ವಾತಂತ್ರ್ಯ ರಾಷ್ಟ್ರೀಯತೆ ಕುರಿತು ಬರಹ ಪ್ರಕಟಿಸುವಂತಿರಲಿಲ್ಲ. ಜಮೀನ್ದಾರಿ ಪಾಳೆಗಾರಿಕೆಯ ಕರಾಳಮುಖ, ರಜಾಕಾರದ ಹಾವಳಿ, ತೆಲಂಗಾಣದಲ್ಲಿ ಕಮ್ಯುನಿಸ್ಟರ ಭಯೋತ್ಪಾದಕತೆ ಮುಂತಾದ ಸಂಪಾದಕೀಯಗಳನ್ನು ಬರೆಯುತ್ತಿದ್ದ ರಾಷ್ಟ್ರೀಯವಾದಿ ಮುಸ್ಲಿಮ ತರುಣ ಇಮ್ರೋಜ್ ಉರ್ದು ದಿನಪತ್ರಿಕೆಯ ಸಂಪಾದಕ ಶ್ರೀ ಶೋಬುಲ್ಲಾಖಾನ್ನನ್ನು ರಜಾಕಾರರು 1948ರ ಆಗಸ್ಟ್ 21ರಂದು ಕ್ರೂರವಾಗಿ ಕೊಲೆಗೈದರು. ಸರ್ಕಾರದ ನೀತಿಯನ್ನು ಕುರಿತು ಟೀಕೆ ಟಿಪ್ಪಣಿ ಮಾಡಲು ನೀಜಾಮನು ಅವಕಾಶ ಕೊಡುತ್ತಿರಲ್ಲ.
ಕನ್ನಡ ಭಾಷೆ ಸ್ಥಿತಿ
ಹೈದ್ರಾಬಾದ್ ಸಂಸ್ಥಾನದಲ್ಲಿನ 1.6 ಕೋಟಿ ಜನಸಂಖ್ಯೆಯು ಸಾಮಾಜಿಕ ಧಾರ್ಮಿಕ ಹಾಗೂ ಸಾಂಸ್ಕೃತಿಕ ಸೌಹಾರ್ದತೆಯಿಂದ ಬದುಕುತ್ತಿದ್ದ ಒಂದು ದೊಡ್ಡ ಭಾರತೀಯ ಸಮುದಾಯವಾಗಿತ್ತು. ಇದರಲ್ಲಿ 70 ಲಕ್ಷ ಜನ ತೆಲುಗರು, 40 ಲಕ್ಷ ಜನ ಮರಾಠಿಗರು ಮತ್ತು 20 ಲಕ್ಷ ಜನ ಕನ್ನಡಿಗರು ಇದ್ದರು. ನಿಜಾಮನ ಮಲತಾಯಿ ಧೋರಣೆಯಿಂದಾಗಿ ಕನ್ನಡ ಭಾಷೆಯ ಬೆಳವಣಿಗೆಯು ಕುಂಠಿತಗೊಂಡಿತ್ತು. ಆಳುವ ವರ್ಗದ ಭಾಷೆಯಾದ ಉರ್ದುವನ್ನು ಆಡಳಿತ ಭಾಷೆಯನ್ನಾಗಿ ಹೇರಲಾಗಿತ್ತು ಮತ್ತು ಪ್ರಾಥರ್ಮಿಕ ಶಾಲೆಯಿಂದ ಸ್ನಾತಕೋತ್ತರ ಪದವಿ ಮಟ್ಟದವರೆಗೆ ಶಿಕ್ಷಣ ಮಾಧ್ಯಮವು ಉರ್ದು ಭಾಷೆಯಾಗಿತ್ತು. 1948ರವರೆಗೆ ನಿಜಾಮನ ಆಳ್ವಿಕೆಯಲ್ಲಿ ಹೈದ್ರಾಬಾದ್ ಕರ್ನಾಟಕದಲ್ಲಿ ಕನ್ನಡ ಭಾಷೆ ಸಾಹಿತ್ಯವು ಪೂರ್ಣ ನಿರ್ಲಷ್ಯಕ್ಕೆ ಗುರಿಯಾಯಿತು.
ಕೊನೆಯ ನಿಜಾಮ ಮೀರ್ ಉಸ್ಮಾನ್ ಅಲಿಖಾನ್ (1911-1948)ನ ಅವಧಿಯಲ್ಲಿ ಮಾತ್ರ ದೊರೆ ಮನೆತನದ ವಿಲಾಸಿ ಆಡಳಿತ ಹಾಗೂ ಬಹುಸಂಖ್ಯಾತರ ಮೇಲಿನ ದಬ್ಬಾಳಿಕೆಗಳು ಹೆಚ್ಚಿದ್ದವು.
ಭಾರತ ಒಕ್ಕೂಟದಲ್ಲಿ ವಿಲೀನಗೊಳ್ಳಲು ನಿರಾಕರಿಸಿದ ನಿಜಾಮ, ಭಾರತದ ಸೈನ್ಯವನ್ನು ಎದುರಿಸಲೆಂದು ಸೈನ್ಯದ ಯೋಧರು ಹಾಗೂ ಖಾಸಗಿಯಾಗಿ ಕಾರ್ಯಾಚರಿಸುತ್ತಿದ್ದ ನೂರಾರು ಸಂಖ್ಯೆಯ ಪುಂಡರನ್ನು ಸಜ್ಜುಗೊಳಿಸಿಟ್ಟಿದ್ದ. ಒಕ್ಕೂಟ ಹಾಗೂ ಸಂಸ್ಥಾನದ ರಾಯಭಾರಿಗಳ ನಡುವೆ ವಿಲೀನದ ಮಾತುಕತೆಗಳು ನಡೆಯುತ್ತಲೇ ಇದ್ದವು. ನಿಜಾಮ ಯಾವುದಕ್ಕೂ ಸೊಪ್ಪು ಹಾಕಲಿಲ್ಲ. ಇದನ್ನು ನೋಡಿದ ಸಂಸ್ಥಾನದೊಳಗಿನ ಸ್ವಾತಂತ್ರ್ಯಪ್ರಿಯ ಪ್ರಜೆಗಳು, ವಿಲೀನಕ್ಕೆ ಒತ್ತಾಯಿಸಿ ಹೈದರಾಬಾದ್ ಕರ್ನಾಟಕದಲ್ಲಿ ಚಳವಳಿ ಪ್ರಾರಂಭಿಸಿದರು. ಒಂದು ವರ್ಷವಾದರೂ ನಿಜಾಮ ಹೋರಾಟಕ್ಕೆ ಮಣಿಯಲಿಲ್ಲ, ಬದಲಾಗಿ, ತಾನು ಸಾಕಿಕೊಂಡಿದ್ದ ಪುಂಡರ ಪಡೆಯಾದ ‘ರಜಾಕಾರ’ರನ್ನು ಸ್ವಾತಂತ್ರ್ಯ ಹೋರಾಟಗಾರರ ಮೇಲೆ ಛೂ ಬಿಟ್ಟ. ರಜಾಕಾರರು ಖಾಸಿಂ ರಜ್ವಿ ಎಂಬಾತನ ನೇತೃತ್ವದಲ್ಲಿ ಹೋರಾಟಗಾರರ ಮೇಲೆ ಹಲ್ಲೆ, ಕೊಲೆ, ಬಲಾತ್ಕಾರ, ಅತ್ಯಾಚಾರಗಳನ್ನು ನಡೆಸತೊಡಗಿದರು.
ರಜಾಕಾರರ ಪಡೆಯ ಕ್ರೌರ್ಯ
ಬೀದರ್ ಜಿಲ್ಲೆಯ ಅನೇಕ ಗ್ರಾಮಗಳು ಖಾಸಿಂ ರಜ್ವಿಯ ಕ್ರೌರ್ಯಕ್ಕೆ ನಲುಗಿ ಹೋದವು. ಇದರಲ್ಲಿ ಬಸವಕಲ್ಯಾಣದ ಗೋರ್ಟಾ(ಬಿ) ಪ್ರಮುಖ ಸ್ಥಳ. ಇಲ್ಲಿ ಭಯಾನಕ ಹತ್ಯಾಕಾಂಡವೊಂದು ನಡೆಯಿತು. ಗೋರ್ಟಾ ಸುತ್ತಮುತ್ತಲಿನ ಏಳೆಂಟು ಗ್ರಾಮಗಳ ಮೇಲುಸ್ತುವಾರಿ ವಹಿಸಿದ್ದ ಖಾಸಿಂ ರಜ್ವಿಯ ಬಲಗೈ ಬಂಟ ಇಸಾಮುದ್ದಿನ್ನ ಕ್ರೌರ್ಯ ಹೆಚ್ಚಾದಾಗ, ಸ್ಥಳೀಯರು ಅವನನ್ನು ಹತ್ಯೆಗೈದಿದ್ದರು. ಇದಕ್ಕೆ ಸೇಡು ತೀರಿಸಲು 1948ರ ಮೇ 9ರಂದು ಎಂ.ಎ.ಮಸ್ತಾನ್ ನೇತೃತ್ವದ ರಜಾಕಾರರ ಪಡೆ ಗೋರ್ಟಾ ಗ್ರಾಮಕ್ಕೆ ನುಗ್ಗಿ 200 ಜನರ ಹತ್ಯೆಗೈದಿತು. ಇಡೀ ಊರಿಗೆ ಬೆಂಕಿ ಹಚ್ಚಿ ಸ್ಮಶಾನ ಮಾಡಿಬಿಟ್ಟರು.
ಎಲ್ಲ ದೇಶಾಭಿಮಾನಿಗಳು ಸ್ವಾಮಿ ರಮಾನಂದ ತೀರ್ಥರ ನೇತೃತ್ವದಲ್ಲಿ ರಜಾಕಾರರ ನೀಚ ಕೃತ್ಯಗಳ ವಿರುದ್ಧ ಸಂಘಟಿತರಾಗಿ ಹೋರಾಡತೊಡಗಿದರು. ಈ ಹೋರಾಟದಲ್ಲಿ ಸಾವಿರಾರು ಸ್ವಾತಂತ್ರ್ಯ ಯೋಧರು ಮೃತಪಟ್ಟರು. ರಜಾಕಾರರ ಹಿಂಸೆ ಹೆಚ್ಚಿದಂತೆ ಚಳವಳಿಗಾರರ ಪ್ರತಿರೋಧವೂ ಬಲವಾಯಿತು. ಹೈದರಾಬಾದ್ ಸುತ್ತಮುತ್ತ ಗಡಿ ಪ್ರದೇಶದಲ್ಲಿ ಸುಮಾರು 100 ಶಿಬಿರಗಳನ್ನು ಪ್ರಾರಂಭಿಸಲಾಯಿತು. ಒಂದೊಂದು ಶಿಬಿರದಲ್ಲಿ 25-100 ಜನ ಸೇನಾನಿಗಳು ಕಾರ್ಯನಿರ್ವಹಿಸುತ್ತಿದ್ದರು. ಒಂದೊಂದು ಶಿಬಿರಕ್ಕೆ ಒಬ್ಬ ಶಿಬಿರಾಧಿಪತಿ ಇರುತ್ತಿದ್ದ. ಕೆಲ ಶಿಬಿರಗಳಿಗೆ ಕಲ್ಯಾಣ ಕರ್ನಾಟಕ ಪ್ರದೇಶದ ಪ್ರಮುಖರು ಶಿಬಿರಾಧಿಪತಿಗಳಾಗಿದ್ದರು. ಅವರಲ್ಲಿ ಸರದಾರ ಶರಣಗೌಡ ಇನಾಮದಾರ, ಕೋಳೂರು ಮಲ್ಲಪ್ಪ, ಬ್ಯಾರಿಸ್ಟರ್ ರಾಜಾ ವೆಂಕಟಪ್ಪ ನಾಯಕ, ವೀರೂಪಾಕ್ಷಪ್ಪ ಗೌಡ, ದತ್ತಾತ್ರೇಯ ಅವರಾದಿ, ನಾರಾಯಣರಾವ ಕಾನಿಹಾಳ, ಅಳವಂಡಿ ಶಿವಮೂರ್ತಿ ಸ್ವಾಮಿ, ಡಾ.ಚುರ್ಚಿಹಾಳ ಮಠ, ರಾಮಚಂದ್ರಪ್ಪ ವೀರಪ್ಪ ಮುಂತಾದ ಪ್ರಮುಖರಿದ್ದರು. ಶಿಬಿರಗಳ ಮೂಲಕ 1948ರ ಜನವರಿಯಲ್ಲಿ ಇಟಗಿ ಸುತ್ತಮುತ್ತಲಿನ 69 ಹಳ್ಳಿಗಳನ್ನು ತಮ್ಮ ವಶಕ್ಕೆ ಪಡೆದುಕೊಂಡು ಸ್ವಾತಂತ್ರ್ಯ ಘೋಷಿಸಿದರು. ಶಿಬಿರಗಳ ಮೂಲಕ ಹೋರಾಟಗಳು ಯಶಸ್ಸಿನತ್ತ ಸಾಗಿದವು.
ಒಂದೆಡೆ ಹೋರಾಟಗಾರರು ತಮ್ಮ ಹೋರಾಟ ತೀವ್ರಗೊಳಿಸುತ್ತಿದ್ದಂತೆ ಮತ್ತೊಂದೆಡೆ ಭಾರತ ಸರಕಾರ ನಿಜಾಮ ಮೀರ್ ಉಸ್ಮಾನ್ ಅಲಿಖಾನ್ನಿಗೆ ಎಚ್ಚರಿಕೆ ನೀಡಿ ತಕ್ಷಣದಿಂದಲೇ ಹಿಂಸಾಕೃತ್ಯ ನಿಲ್ಲಿಸಲು ಮತ್ತು ಸಂಸ್ಥಾನವನ್ನು ಭಾರತದಲ್ಲಿ ವಿಲೀನಗೊಳಿಸಲು ಎಚ್ಚರಿಕೆ ನೀಡಿದರು. ಎಚ್ಚರಿಕೆ ಫಲಕಾರಿಯಾಗದ ಕಾರಣ ಅಂದಿನ ಗೃಹಮಂತ್ರಿ ಸರದಾರ ವಲ್ಲಭಭಾಯಿ ಪಟೇಲ್ ಸೇನಾ ಕಾರ್ಯಾಚರಣೆಗೆ ಆದೇಶ ನೀಡಿದರು. ಹೈದರಾಬಾದ್ ರಾಜ್ಯದ ನಾಲ್ಕು ದಿಕ್ಕುಗಳಿಂದ ಜನರಲ್ ಚೌಧರಿ ನೇತೃತ್ವದಲ್ಲಿ ಭಾರತೀಯ ಸೈನ್ಯ ಮುತ್ತಿಗೆ ಹಾಕಿತು. 1948 ಸೆಪ್ಟೆಂಬರ್ 13ರಂದು ಹೈದರಾಬಾದ್ ಸುತ್ತುವರಿದ ಭಾರತದ ಸೈನ್ಯ ಸತತ ಐದು ದಿನ ಕಾರ್ಯಾಚರಣೆ ಮುಂದುವರಿಸಿತು. ಸೆ.17ರಂದು ಸಂಜೆ 4ಕ್ಕೆ ನಿಜಾಮ ಹೈದರಾಬಾದ್ ಸಂಸ್ಥಾನವನ್ನು ಭಾರತದ ಒಕ್ಕೂಟಕ್ಕೆ ಸೇರ್ಪಡೆ ಮಾಡುವುದಾಗಿ ಒಪ್ಪಂದಕ್ಕೆ ಅಧಿಕೃತವಾಗಿ ಸಹಿ ಹಾಕಿದ. ಅಂದಿನಿಂದಲೇ ‘ಅಸಫಿಯಾ’ ಧ್ವಜ ಕೆಳಗಿಳಿಸಿ ಭಾರತದ ‘ತ್ರಿವರ್ಣ’ ಧ್ವಜ ಹಾರಾಡತೊಡಗಿತು.
1995ರ ನಂತರ ಕಲ್ಯಾಣ ಕರ್ನಾಟಕ ಪ್ರದೇಶದ ಜನತೆಗೆ ತಮ್ಮ ಸ್ವಾತಂತ್ರ್ಯ ಹೋರಾಟದ ಪ್ರತ್ಯೇಕತೆ, ಅನನ್ಯತೆಗಳು ಗಮನಕ್ಕೆ ಬಂದವು. 1995ರ ನಂತರ ವಿಮೋಚನಾ ದಿನ ಆಚರಿಸಲು ಆರಂಭಿಸಿದರು. ಈ ಜಾಗೃತಿಯ ಹಿಂದೆ ಅನೇಕ ಸಂಘಟನೆಗಳ, ಇತಿಹಾಸಕಾರರ ಜ್ಞಾನ ಜಾಗರಣವಿದೆ. 2002-03ರಲ್ಲಿ ಈ ಕುರಿತು ಅಧಿಕೃತ ಆದೇಶ ಹೊರಡಿಸಿದ ರಾಜ್ಯ ಸರ್ಕಾರ, ಈ ದಿನವನ್ನು ಸಂಭ್ರಮದಿಂದ ಆಚರಿಸಲು ತಿರ್ಮಾನಿಸಿತು.
ಕಲ್ಯಾಣ ಕರ್ನಾಟಕದ ಪರಿಸ್ಥಿತಿ
ಸ್ವಾತಂತ್ರ್ಯ ಲಭಿಸಿ 76 ವರ್ಷ ಕಳೆದರೂ ಕರ್ನಾಟಕದ ಬೇರೆ ಭಾಗಗಳಿಗೆ ಹೋಲಿಸಿದರೆ ಕಲ್ಯಾಣ ಕರ್ನಾಟಕ ಅಭಿವೃದ್ಧಿಯಲ್ಲಿ ತುಂಬಾ ಹಿಂದಿದೆ. ಈ ಭಾಗದ ಅನೇಕ ನೀರಾವರಿ ಯೋಜನೆಗಳಿಗೆ ಸಮಯೋಚಿತ ಹಣ ಮಂಜೂರಾಗದೆ ಬಹಳಷ್ಟು ಅಪೂರ್ಣವಾಗಿಯೇ ಉಳಿದಿವೆ. ಈ ಕಾರಣಕ್ಕಾಗಿಯೇ ನೀರಾವರಿಯಿಂದ ಈ ಪ್ರದೇಶ ವಂಚಿತಗೊಂಡು, ಬರದ ನಾಡಾಗಿ ಉಳಿದಿದೆ. ಮೈಸೂರು ಸೀಮೆ ಅರಸರಂಥ ದೂರದೃಷ್ಟಿಯ ದೊರೆಗಳನ್ನೂ ದಿವಾನರನ್ನೂ ಪಡೆದು ಯೋಜನೆಗಳಿಂದ ಪರಿಪುಷ್ಟವಾಗಿ ಶ್ರೀಮಂತವಾದಂತೆ, ಈ ಭಾಗ ಆಗಲಿಲ್ಲ.ಕಲ್ಯಾಣ ಕರ್ನಾಟಕದ ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ವಿಜಯನಗರ ಸೇರಿ ಏಳು ಜಿಲ್ಲೆಗಳಲ್ಲಿರುವ ಜನಸಂಖ್ಯೆ ಒಟ್ಟು 1.3 ಕೋಟಿ ಯಷ್ಟು .
ಈ ಏಳು ಜಿಲ್ಲೆಗಳಲ್ಲಿ ಸಾಕ್ಷರತೆ ಪ್ರಮಾಣ, ಉನ್ನತ ಶಿಕ್ಷಣಕ್ಕೆ ದಾಖಲಾಗುವವರ ಪ್ರಮಾಣ ನಿರಾಶಾದಾಯಕವಾಗಿಯೇ ಮುಂದುವರಿದಿವೆ. ಅತ್ಯಂತ ಕಷ್ಟಪಟ್ಟು ಪಡೆದ 371(ಜೆ) ಕಲಂ ತಿದ್ದುಪಡಿಯಿಂದ ಪ್ರದೇಶಕ್ಕೆ ಆಗಿರುವ ಪ್ರಯೋಜನಗಳ ಅಷ್ಟಕಷ್ಟೇ.. ಈಗಲೂ ಕೆಲಸ ಹುಡುಕಿಕೊಂಡು ಜನರು ಗುಳೆ ಹೋಗುವ ಕಷ್ಟ ತಪ್ಪಿಲ್ಲ.
ರಾಜ್ಯದಲ್ಲಿ ಪ್ರಾದೇಶಿಕ ಅಸಮಾನತೆಯನ್ನು ನಿವಾರಿಸಲು ಡಾ. ಡಿ.ಎಂ.ನಂಜುಂಡಪ್ಪ ನೇತೃತ್ವದ ಸಮಿತಿ ರಚನೆಗೊಂಡು ಎರಡು ದಶಕ ಪೂರೈಸುವ ಹೊಸ್ತಿಲಲ್ಲಿದ್ದರೂ, ಅದು ನೀಡಿದ ಶಿಫಾರಸುಗಳ ಅನುಷ್ಠಾನ ಇನ್ನೂ ಪರಿಪೂರ್ಣವಾಗಿ ಆರೂ ಜಿಲ್ಲೆಗಳಲ್ಲಿ ಆಗಿಲ್ಲ.
ಸಮಿತಿಯ ಶಿಫಾರಸಿನಂತೆ ಹೈದರಾಬಾದ್ ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ ಬಿಡುಗಡೆಯಾದ ಕೋಟ್ಯಂತರ ರೂಪಾಯಿ ಅನುದಾನದ ಸಮರ್ಪಕ ಬಳಕೆಯಾಗುತ್ತಿಲ್ಲ. ಈ ಜಿಲ್ಲೆಗಳಿಂದ ಆ ಅನುದಾನ ಹಲವು ಬಾರಿ ವಾಪಸು ಹೋಗಿದೆ.
ಈ ಪ್ರದೇಶದಲ್ಲಿ ಜನರ ಜೀವನಮಟ್ಟ ಬದಲಾಗಬೇಕು. ಮೂಲಸೌಕರ್ಯಗಳ ಕೊರತೆ ನೀಗಿ ಶಿಕ್ಷಣ, ಉದ್ಯೋಗ, ಅಭಿವೃದ್ಧಿ ಪಥದಲ್ಲಿ ಅದು ರಾಜ್ಯದ ಇತರ ಪ್ರದೇಶಗಳಿಗೆ ಸರಿಸಮನಾಗಿ ನಿಲ್ಲಲು ಮಹತ್ವದ, ದೂರದೃಷ್ಟಿಯುಳ್ಳ ಕಾರ್ಯಕ್ರಮಗಳೂ ರೂಪುಗೊಳ್ಳಬೇಕು. ಮುಂದುವರಿಯಬೇಕು ಜನತೆಗೆ ಪ್ರತಿ ವರ್ಷ ಸಾವಿರಾರು ಕೋಟಿ ರೂಪಾಯಿಗಳು, ವಿಶೇಷ ಅನುದಾನಗಳನ್ನು ರಾಜ್ಯ , ಕೇಂದ್ರ ಸರ್ಕಾರಗಳು ನೀಡುತ್ತಿವೆ, ಅಲ್ಲದೇ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸಿದೆ , ಕೇಂದ್ರ ಸರ್ಕಾರ 371J ಎಂಬ ವಿಶೇಷ ಸ್ಥಾನಮಾನ ನೀಡಿದೆ, ಇಷ್ಟೆಲ್ಲ ಇದ್ದರೂ ಅಭಿವೃದ್ಧಿ ಎನ್ನುವುದು ಪೂರ್ಣ ಪ್ರಮಾಣದಲ್ಲಿ ಆಗದೇ ಇರುವುದು ದುರದೃಷ್ಟಕರ.