ತಮಿಳುನಾಡಿಗೆ ನಿತ್ಯ 5 ಸಾವಿರ ಕ್ಯೂಸೆಕ್ ನೀರು; ಇದು ರಾಜ್ಯಕ್ಕೆ ನಿರೀಕ್ಷಿತ ನಿರಾಶೆಯೇ?
ನವದೆಹಲಿ: ಮುಂದಿನ 15 ದಿನಗಳವರೆಗೆ ಕರ್ನಾಟಕ ರಾಜ್ಯವು ತಮಿಳು ನಾಡಿಗೆ ನಿತ್ಯ 5 ಸಾವಿರ ಕ್ಯೂಸೆಕ್ ನೀರು ಹರಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಈ ಬೆನ್ನಲ್ಲೇ ಮುಂದೇನು ಎನ್ನುವ ಪ್ರಶ್ನೆ ಸರಕಾರ ಮುಂದೆ ಇದೆ. ಮತ್ತೊಂದು ಕಡೆ, ಜನರು ಪ್ರತಿಭಟನೆ ನಡೆಸಲು ಆರಂಭ ಮಾಡಿರುವುದು ಸರಕಾರಕ್ಕೆ ದಿಗಿಲು ಉಂಟು ಮಾಡಿದೆ.
ಕೋರ್ಟ್ ಆದೇಶ ಹೊರಬೀಳುವುದಕ್ಕೆ ಮುನ್ನವೇ ಪೊಲೀಸರು ಕಾವೇರಿ ವ್ಯಾಪ್ತಿಯ ಜಿಲ್ಲೆಗಳಲ್ಲಿ ಬಿಗಿ ಭದ್ರತೆ ಮಾಡಿ ಕಟ್ಟೆಚ್ಚರ ವಹಿಸಿದ್ದಾರೆ.
ಕೊಡಗು, ಮೈಸೂರು, ಮಂಡ್ಯ, ಬೆಂಗಳೂರು ಸೇರಿ ವಿವಿಧ ಭಾಗಗಳಲ್ಲಿ ಎಚ್ಚರ ವಹಿಸಲಾಗಿದೆ.
ರಾಜ್ಯಕ್ಕೆ ನಿರೀಕ್ಷಿತ ನಿರಾಶೆಯೇ?
ಸುಪ್ರೀಂ ಕೋರ್ಟ್ ನಲ್ಲಿ ನಮ್ಮ ಪರವಾಗಿ ಆದೇಶ ಬರಬಹುದು ಎಂಬ ನಿರೀಕ್ಷೆಯಲ್ಲಿದ್ದ ಕರ್ನಾಟಕಕ್ಕೆ ನಿರಾಸೆಯಾಗಿದೆ. ಕಾವೇರಿ ಜಲ ಹಂಚಿಕೆ ವಿವಾದ ಕೇಸಿನಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ಮಂಡಿಸಿದ ಕರ್ನಾಟಕದ ವಾದ ಫಲ ಕೊಡದ ಕಾರಣ ತೀರ್ಪು ತಮಿಳುನಾಡಿಗೆ ವರವಾಗಿ ಪರಿಣಮಿಸಿದೆ.
ರಾಜ್ಯಕ್ಕೆ ಇದು ನಿರೀಕ್ಷಿತ ನಿರಾಶೆಯೇ ಆಗಿದೆ ಎಂದು ಹೆಸರು ಹೇಳಲು ಇಚ್ಛಿಸದ ವಿಶ್ರಾಂತ ಹಿರಿಯ ಅಧಿಕಾರಿಯೊಬ್ಬರು ಸಿಕೆನ್ಯೂಸ್ ನೌ ಗೆ ತಿಳಿಸಿದರು.
ಅವರ ಪ್ರಕಾರ; ಕಾನೂನು ಹೋರಾಟದ ಎಲ್ಲಾ ಅವಕಾಶಗಳನ್ನು ರಾಜ್ಯ ಸರಕಾರ ಕೈ ಚೆಲ್ಲಿದೆ ಹಾಗೂ ಈ ಸಲದ ಕಾವೇರಿ ನೀರಿನ ಸಂಕಟವನ್ನು ಸರಕಾರ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಕಳೆದ ವರ್ಷದಂತೆ ಈ ವರ್ಷವೂ ಸಮೃದ್ಧವಾಗಿ ಮಳೆ ಆಗುತ್ತದೆ ಎಂಬ ಹುಂಬತನವೇ ಪಾಠ ಕಲಿಸಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
15 ದಿನಗಳ ಕಾಲ 5 ಸಾವಿರ ಕ್ಯೂಸೆಕ್
ಮುಂದಿನ 15 ದಿನಗಳ ಕಾಲ 5 ಸಾವಿರ ಕ್ಯೂಸೆಕ್ ನೀರನ್ನು ತಮಿಳು ನಾಡಿಗೆ ಬಿಡಬೇಕೆಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ಆರ್.ಗವಾಯಿ ನೇತೃತ್ವದ ತ್ರಿಸದಸ್ಯ ಪೀಠ ಆದೇಶ ನೀಡಿದೆ.
ಜತೆಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ಕಾವೇರಿ ನೀರು ನಿಯಂತ್ರಣ ಸಮಿತಿಯ ಆದೇಶವನ್ನು ಯಥಾವತ್ತಾಗಿ ಜಾರಿಗೆ ತರಬೇಕೆಂದು ಕೂಡಾ ಸೂಚಿಸಿದೆ.
ನ್ಯಾಯಾಲಯದಲ್ಲಿ ಕಾವೇರಿ ನೀರಿನ ಕುರಿತು ಬೆಳಗ್ಗೆ 10.30ಕ್ಕೆ ವಿಚಾರಣೆ ಆರಂಭವಾಯಿತು. ತಮಿಳುನಾಡು ಪರ ವಕೀಲರಾದ ಮುಕುಲ್ ರೋಹಟಗಿ ಮತ್ತು ಕರ್ನಾಟಕದ ಪರ ವಕೀಲ ಶ್ಯಾಮ್ ದಿವಾನ್ ತಮ್ಮ ವಾದವನ್ನು ಮಂಡಿಸಿದರು.
ಪ್ರಸ್ತುತ ನೀರಿನ ಸಂಕಷ್ಟ ಇದೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಆದರೆ, ಸಂಕಷ್ಟ ಸೂತ್ರವನ್ನು ಕರ್ನಾಟಕ ಪಾಲಿಸುತ್ತಿಲ್ಲ. ನಾವು ಬಹಳಷ್ಟು ಕಡಿಮೆ ನೀರನ್ನು ಪಡೆಯುತ್ತಿದ್ದೇವೆ ಎಂದು ತಮಿಳುನಾಡು ಪರ ವಕೀಲ ಮುಕುಲ್ ರೋಹಟಗಿ ವಾದ ಮಂಡನೆ ಮಾಡಿದರು.
ಕರ್ನಾಟಕ ಪರ ವಾದ ಮಂಡಿಸಿದ ಶ್ಯಾಮ್ ದಿವಾನ್, ಕಾವೇರಿ ನೀರು ನಿಯಂತ್ರಣ ಸಮಿತಿ ನೀಡಿರುವ ಆದೇಶವನ್ನು ನಾವು ಪಾಲಿಸಿದ್ದೇವೆ ಎಂದು ತಿಳಿಸಿದರು.
ವಾದ-ವಿವಾದಗಳನ್ನು ಆಲಿಸಿದ ಬಳಿಕ ನ್ಯಾಯಮೂರ್ತಿ ಬಿ.ಆರ್.ಗವಾಯಿ ನೇತೃತ್ವದ ತ್ರಿಸದಸ್ಯ ಪೀಠ ತಮಿಳುನಾಡಿಗೆ ನೀರು ಹರಿಸಲು ಆದೇಶ ಹೊರಡಿಸಿತು.
ತಮಿಳುನಾಡಿಗೆ ಸದ್ಯಕ್ಕೆ ಕರ್ನಾಟಕ 5 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನೀಡಿರುವ ಆದೇಶದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಅಲ್ಲದೆ ಪ್ರತಿ 15 ದಿನಗಳಿಗೊಮ್ಮೆ ಸಭೆ ನಡೆಸುವಂತೆ ಸುಪ್ರೀಂ ಕೋರ್ಟ್ ಪ್ರಾಧಿಕಾರಕ್ಕೆ ಸೂಚನೆ ನೀಡಿದೆ