ಸುಪ್ರೀಂ ಕೋರ್ಟ್ ಪಾಲಿಸಲಾಗದ ಆದೇಶ ಕೊಟ್ಟರೆ ಸರಕಾರ ಏನು ಮಾಡಬೇಕು?
ಬೆಂಗಳೂರು: ರಾಜ್ಯವು ಎದುರಿಸುತ್ತಿರುವ ಕಾವೇರಿ ಜಲ ಸಂಕಷ್ಟದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ವಿಸ್ತೃತವಾಗಿ ಚರ್ಚೆ ನಡೆಸಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.
ನವದೆಹಲಿಯಲ್ಲಿ ಅಮಿತ್ ಶಾ ಅವರನ್ನು ಅವರ ನಿವಾಸದಲ್ಲಿಯೇ ಭೇಟಿಯಾಗಿ ಮಾತುಕತೆ ನಡೆಸಿದ ನಂತರ ಅವರು ಮಾಧ್ಯಮಗಳ ಜತೆ ಮಾತನಾಡಿದರು.
ಅಮಿತ್ ಶಾ ಅವರಿಗೆ ರಾಜ್ಯದ ಕಾವೇರಿ ಕುರಿತ ವಾಸ್ತವ ಸ್ಥಿತಿಯನ್ನು ವಿವರಿಸಿದ್ದೇನೆ. ಕಾವೇರಿ ಸಮಸ್ಯೆ, ಬರ ಇತ್ಯಾದಿ ವಿಷಯಗಳ ಬಗ್ಗೆ ಅವರಿಗೆ ಮಾಹಿತಿ ನೀಡಿದ್ದೇನೆ ಎಂದ ಅವರು; ಕಾವೇರಿ ನದಿ ನೀರಿನ ವಿಷಯದಲ್ಲಿ ರಾಜ್ಯ ಕಾಂಗ್ರೆಸ್ ಸರಕಾರ ಬಹಳ ಅಸಡ್ಡೆ ಪ್ರದರ್ಶಿಸಿದೆ. ಕನ್ನಡನಾಡಿನ ರೈತರು, ಜನರ ವಿಷಯದಲ್ಲಿ ಚೆಲ್ಲಾಟವಾಡಿದೆ ಎಂದು ಕಿಡಿಕಾರಿದರು.
ಒಂದು ಕಡೆ ನೀರಿನಲ್ಲ ಎಂದು ಸರಕಾರವೇ ಹೇಳುತ್ತದೆ, ಇನ್ನೊಂದೆಡೆ ತಮಿಳುನಾಡಿಗೆ ನೀರು ಹರಿಸುತ್ತದೆ. ಸುಪ್ರೀಂ ಕೋರ್ಟ್ ಮುಂದೆ ಅತ್ಯಂತ ತಡವಾಗಿ ಅರ್ಜಿಯನ್ನು ಹಾಕಿದೆ ಸರಕಾರ. ರೈತರ ಬಗ್ಗೆ ಇವರಿಗೆ ಬದ್ಧತೆ ಎನ್ನುವುದು ಇದ್ದಿದ್ದರೆ ಅರ್ಜಿ ಸಲ್ಲಿಸುವ ಬಗ್ಗೆ ವಿಳಂಬ ಮಾಡುತ್ತಿರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿಗಳು ದೂರಿದರು.
ರೈತರ ಹಿತರಕ್ಷಣೆ ಮಾಡುವ ಕೆಲಸ ಮಾಡಬೇಕು. ಬೆಂಗಳೂರು ನಗರಕ್ಕೆ ಕುಡಿಯುವ ನೀರಿನ ಅಗತ್ಯವಿದೆ. ಕನ್ನಡಿಗರ ಹಿತ ಕಡೆಗಣಿಸಿ ತಮಿಳುನಾಡಿಗೆ ನೀರು ಬಿಡಬೇಡಿ ಎಂದು ನಾನು ಸಲಹೆ ಮಾಡಿದ್ದೆ. ಆದರೆ ಸರಕಾರ ನನ್ನ ಮಾತನ್ನು ಕೇಳಲಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಕೋರ್ಟ್ ಆದೇಶದಿಂದ ಪಾರಾಗಲು ಮಾರ್ಗವಿದೆ
ಈ ಹಿಂದೆ ಸುಪ್ರೀಂ ಕೋರ್ಟ್ ನೀಡಿರುವ ಒಂದು ಆದೇಶವನ್ನು ಗಮನಿಸಿದ್ದೇನೆ. ಒಂದು ವೇಳೆ ಕೋರ್ಟ್ ಪಾಲಿಸಲಾಗದ ಕಠಿಣ ಆದೇಶವನ್ನೇನಾದರೂ ನೀಡಿದರೆ, ಅಂತಹ ಸಂಕಷ್ಟ ಸಮಯದಲ್ಲಿ ಆಯಾ ರಾಜ್ಯ ಸರಕಾರ ಜನರ ಪರವಾಗಿ ಕೈಗೊಳ್ಳುವ ನಿರ್ಧಾರವು ನ್ಯಾಯಾಲಯದ ಆದೇಶದ ಉಲ್ಲಘನೆ ಆಗುವುದಿಲ್ಲ. ಆಂಧ್ರ ಪ್ರದೇಶಕ್ಕೆ ಸಂಬಂಧಿಸಿದಂತೆ ಸರ್ವೋಚ್ಛ ನ್ಯಾಯಾಲಯ ನೀಡಿರುವ ಒಂದು ತೀರ್ಪಿನಲ್ಲಿ ಈ ಬಗ್ಗೆ ಸ್ಪಷ್ಟ ಉಲ್ಲೇಖವಿದೆ. ಈ ಬಗ್ಗೆ ರಾಜ್ಯ ಸರಕಾರ ಮಾಹಿತಿ ಪಡೆದು ದಿಟ್ಟ ಕ್ರಮ ಕೈಗೊಳ್ಳಲಿ ಎಂದು ಮಾಜಿ ಮುಖ್ಯಮಂತ್ರಿಗಳು ಒತ್ತಾಯಿಸಿದರು.