ರಾಜ್ಯದ ಬೆಳೆ & ಕುಡಿಯುವ ನೀರಿನ ಉದ್ದೇಶಕ್ಕೆ ರಾಜ್ಯಕ್ಕೆ 112 ಟಿಎಂಸಿ ನೀರು ಬೇಕು
ಬೆಂಗಳೂರು: ಕಾವೇರಿ ಬಿಕ್ಕಟ್ಟಿನ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದಿರುವ ಸುದೀರ್ಘ ಪತ್ರದಲ್ಲಿ ಮಹತ್ವದ ಅಂಶಗಳನ್ನು ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡ ಅವರು ಉಲ್ಲೇಖ ಮಾಡಿದ್ದಾರೆ.
ಪತ್ರದಲ್ಲಿರುವ ಮುಖ್ಯಾಂಶಗಳು:
ಪ್ರಧಾನಮಂತ್ರಿಗಳು ಎರಡೂ ರಾಜ್ಯಗಳ ವಾಸ್ತವ ಸ್ಥಿತಿಯನ್ನು ಗಮನಿಸಲು ಕೇಂದ್ರದ ಜಲಶಕ್ತಿ ಇಲಾಖೆಯಿಂದ ತಜ್ಞರ ಸಮಿತಿ ನೇಮಿಸಲು ಸುಪ್ರೀಂ ಕೋರ್ಟ್ ಗೆ ಒಂದು ಅರ್ಜಿ ಹಾಕಿಸಬೇಕು. ಕರ್ನಾಟಕ ಮತ್ತು ತಮಿಳುನಾಡಿಗೆ ತಟಸ್ಥವಾಗಿರುವ ತಂಡವನ್ನು ಕಳಿಸಿ ಪರಿಶೀಲನೆ ಮಾಡಿಸಬೇಕು.
ಕರ್ನಾಟಕದ ಕಾವೇರಿ ಜಲಾನಯನ ಪ್ರದೇಶದ ಎಲ್ಲಾ ನಾಲ್ಕು ಜಲಾಶಯಗಳಲ್ಲಿ ಸೆಪ್ಟೆಂಬರ್ 23ಕ್ಕೆ ಲಭ್ಯವಿರುವ ಸಂಗ್ರಹವಾಗಿರುವ ನೀರಿನ ಪ್ರಮಾಣ ಕೇವಲ 51 ಮಾತ್ರ.
ಸದ್ಯದ ಬೆಳೆದ ಬೆಳೆಗಳಿಗೆ ಮತ್ತು ಕುಡಿಯುವ ನೀರಿನ ಉದ್ದೇಶಕ್ಕೆ ರಾಜ್ಯಕ್ಕೆ 112 ಟಿಎಂಸಿ ನೀರು ಬೇಕಾಗಿದೆ.
ಹೆಚ್ಚಿನ ನೀರಿಗೆ ಬೇಡಿಕೆ ಇಟ್ಟಿರುವ ತಮಿಳುನಾಡು ವಾಸ್ತವ ಸ್ಥಿತಿಯನ್ನು ಅರಿತಿಲ್ಲ. 40 ಟಿಎಂಸಿಗೂ ಮಿಗಿಲಾದ ಹೆಚ್ಚುವರಿ ಬಿಡುಗಡೆಗೆ ಬೇಡಿಕೆ ಇಟ್ಟಿರುವ ತಮಿಳುನಾಡಿನ ಧೋರಣೆ ಅನ್ಯಾಯ.
ಅಲ್ಲದೆ, ಆ ರಾಜ್ಯದ ಬೇಡಿಕೆ ಸಮಾನತೆ ಮತ್ತು ನೈಸರ್ಗಿಕ ನ್ಯಾಯದ ತತ್ವಗಳಿಗೆ ವಿರುದ್ಧವಾಗಿದೆ. ಕುಡಿಯುವ ನೀರು ಸಂವಿಧಾನದ ಅಡಿಯಲ್ಲಿ ಮೂಲಭೂತ ಹಕ್ಕು. ರಾಷ್ಟ್ರೀಯ ಜಲನೀತಿಯಲ್ಲಿ ಇದು ಹೆಚ್ಚಿನ ಆದ್ಯತೆಯನ್ನು ಪಡೆಯುತ್ತದೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ ಗುರುತಿಸಲಾದ/ನಿಯೋಜಿತ ಜಲಾಶಯಗಳ ಪರಿಪೂರ್ಣ ಪರಿಶೀಲನೆ ನಡೆಸಲು ಸಮಗ್ರ ಜಲಾಶಯ ಕಾರ್ಯಾಚರಣೆ ವ್ಯವಸ್ಥೆಯನ್ನು ಅನುಷ್ಟಾನಕ್ಕೆ ತರಬೇಕು.
ಅಲ್ಲದೆ, ನೀರಾವರಿ ಅಧ್ಯಯನದಲ್ಲಿ ಪರಿಣತಿ ಹೊಂದಿರುವ ಹಾಗೂ ಕೇಂದ್ರ ಸರಕಾರದಿಂದ ಸ್ವತಂತ್ರವಾದ ಬಾಹ್ಯ ಏಜೆನ್ಸಿಯನ್ನು ತಕ್ಷಣವೇ ನೇಮಿಸಬೇಕು.
ಮಳೆಯ ಕೊರತೆ, ಒಳಹರಿವು, ಜಲಾಶಯದ ಮಟ್ಟ, ಶೇಖರಣಾ ಪ್ರಮಾಣ, ಬೆಳೆ ಮತ್ತು ಕುಡಿಯುವ ನೀರಿನ ಅಗತ್ಯತೆ, ಕರ್ನಾಟಕ ಮತ್ತು ತಮಿಳುನಾಡಿನ ವಿವಿಧ ಮಳೆ ಮಾರುತಗಳು; ಇವೆಲ್ಲ ವಸ್ತುನಿಷ್ಠ ಅಂಶಗಳನ್ನು ಪರಿಗಣಿಸಿ ಸೂಕ್ತವಾದ ಸಂಕಷ್ಟಸೂತ್ರವನ್ನು ರೂಪಿಸುವ ಹೊಣೆಗಾರಿಕೆಯನ್ನು ಸ್ವತಂತ್ರ್ಯ ಏಜೆನ್ಸಿಗೆ ವಹಿಸಬೇಕು.
ಐದು ಸದಸ್ಯರ ತಜ್ಞರ ತಟಸ್ಥ ಸಮಿತಿ ರಚಿಸಿ, ಆ ಸಮಿತಿಯು ಕರ್ನಾಟಕ ಮತ್ತು ತಮಿಳುನಾಡಿನ ಜಲಾಶಯಗಳಿಗೆ ಭೇಟಿ ನೀಡಿ ವಾಸ್ತವ ಸ್ಥಿತಿಯನ್ನು ಪರಿಶೀಲಿಸಬೇಕು.
ಸಮಿತಿಯು ಸೂಕ್ತ ಕ್ರಮ ಕೈಗೊಳ್ಳಲು ಸಿಡಬ್ಲ್ಯುಎಂಎಗೆ ಮಾತ್ರವಲ್ಲದೆ ಸುಪ್ರೀಂ ಕೋರ್ಟ್‌ಗೆ ತಕ್ಷಣದ ಪರಿಹಾರದ ಕ್ರಮವಾಗಿ ವರದಿ ಮಾಡಬೇಕು.
ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ (CWMA) ಹಾಗೂ ಕಾವೇರಿ ಜಲ ನಿಯಂತ್ರಣ ಸಮಿತಿ (CWRC) ಗಳು ಕಾವೇರಿ ಜಲಾನಯನ ಪ್ರದೇಶದಲ್ಲಿ ಗುರುತಿಸಲಾದ ಎಲ್ಲಾ ಜಲಾಶಯಗಳಿಗೆ ನಿಯತಕಾಲಿಕವಾಗಿ ಭೇಟಿ ನೀಡಬೇಕು.
15 ದಿನಗಳಿಗೆ ಒಮ್ಮೆ ಸಲ್ಲಿಸಲಾಗುವ ದಾಖಲೆಗಳನ್ನು ಅವಲಂಬಿಸದೆ ನೆಲದ ವಾಸ್ತವತೆಯನ್ನು ಅರಿತು ನಿರ್ಧಾರಗಳನ್ನು ಕೈಗೊಳ್ಳಬೇಕು.
ಕರ್ನಾಟಕದಲ್ಲಿ ಈ ವರ್ಷ ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಕಳೆದ 123 ವರ್ಷಗಳಲ್ಲೇ ಅತ್ಯಂತ ಕಡಿಮೆ ಮಳೆಯಾಗಿದೆ. ಈ ಅಂಶವನ್ನು ಗಂಭೀರವಾಗಿ ಪರಿಗಣಿಸಬೇಕು.
ಕಾವೇರಿ ಜಲಾನಯನ ಪ್ರದೇಶದಲ್ಲಿ ಕರ್ನಾಟಕವು ನದಿಯ ಮೇಲ್ಭಾಗದ ರಾಜ್ಯವಾಗಿದೆ. ಇದೇ ರಾಜ್ಯಕ್ಕೆ ಶಾಪವಾಗಿದೆ. ಕೆಳಭಾಗದ ರಾಜ್ಯದ ಬೇಡಿಕೆಗಳನ್ನು ಈಡೇರಿಸಲು ಯಾವಾಗಲೂ ಕರ್ನಾಟಕ ಬದ್ಧವಾಗಿದೆ.