ಸುಪ್ರೀಂ ಕೋರ್ಟ್ ಗೆ ಕೇಂದ್ರದಿಂದ ಪರಿಶೀಲನಾ ಅರ್ಜಿ ಸಲ್ಲಿಸಿ
ಎರಡೂ ರಾಜ್ಯಗಳಿಗೆ ತಟಸ್ಥ ತಂಡವನ್ನು ಕಳಿಸಿ ಪರಿಶೀಲನೆ
ಬೆಂಗಳೂರು: ಕಾವೇರಿ ನೀರಿನ ವಿಷಯದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಕ್ಷಣವೇ ಮಧ್ಯಪ್ರವೇಶ ಮಾಡಬೇಕು ಹಾಗೂ ಎರಡೂ ರಾಜ್ಯಗಳ ವಾಸ್ತವ ಸ್ಥಿತಿಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಸುಪ್ರೀಂ ಕೋರ್ಟಿಗೆ ಪರಿಶೀಲನಾ ಅರ್ಜಿ ಸಲ್ಲಿಸಲು ಜಲಶಕ್ತಿ ಸಚಿವಾಲಯಕ್ಕೆ ಆದೇಶ ಮಾಡಬೇಕು ಎಂದು ಮಾಜಿ ಪ್ರಧಾನಮಂತ್ರಿಗಳಾದ ಹೆಚ್.ಡಿ.ದೇವೇಗೌಡ ಅವರು ಒತ್ತಾಯಿಸಿದ್ದಾರೆ.
ಅಲ್ಲದೆ, ಈ ಸಂಬಂಧ ಮಾಜಿ ಪ್ರಧಾನಿಗಳು, ಪ್ರಧಾನಿ ಮೋದಿ ಅವರಿಗೆ ಸುದೀರ್ಘ ಪತ್ರ ಬರೆದಿದ್ದು, ಆ ಪತ್ರವನ್ನು ಇಂದು ಮಾಧ್ಯಮಗಳಿಗೆ ಬಿಡುಗಡೆ ಮಾಡಿದರು.ಎರಡು ರಾಜ್ಯಗಳಿಗೆ ಸಂಬಂಧವಿಲ್ಲದ, ತಟಸ್ಥವಾದ ಒಂದು ಸಮಿತಿಯನ್ನು ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಿಗೆ ಕಳಿಸಿ ವಸ್ತುನಿಷ್ಠ ಮಾಹಿತಿ ಪಡೆದುಕೊಳ್ಳಬೇಕು ಎಂದು ಪ್ರಧಾನಿಗಳನ್ನು ಮಾಜಿ ಪ್ರಧಾನಿಗಳು ಮನವಿ ಮಾಡಿದ್ದಾರೆ.
ಕಾವೇರಿ ಜಲಸಂಕಷ್ಟದ ಈಗಿನ ವಾಸ್ತವಾಂಶ ಆಧಾರದ ಮೇಲೆ ಕೇಂದ್ರ ಜಲ ಶಕ್ತಿ ಇಲಾಖೆಯಿಂದ ಸುಪ್ರೀಂ ಕೋರ್ಟ್‌ಗೆ ತಾವು ಅರ್ಜಿ ಹಾಕಬೇಕು. ಮಳೆ ಇಲ್ಲದೆ ಕಂಗಾಲಾಗಿರುವ ರಾಜ್ಯದ ರೈತರ ನೆರವಿಗೆ ಧಾವಿಸಬೇಕು ಎಂದು ಅವರು ಕೋರಿದ್ದಾರೆ.ಮಳೆ ಕೊರತೆ ಕಾರಣದಿಂದ ರೈತರು ಪರದಾಡುತ್ತಿದ್ದಾರೆ. ಕಾವೇರಿ ಕೊಳ್ಳದ ಜಲಾಶಯಗಳಿಗೆ ನೀರು ಹರಿದು ಬಂದಿಲ್ಲ. ವಸ್ತುಸ್ಥಿತಿ ಹೀಗಿದ್ದರೂ ಕಾವೇರಿ ನದಿ ನೀರು ಪ್ರಾಧಿಕಾರ ಹಾಗೂ ಸುಪ್ರೀಂ ಕೋರ್ಟ್ ತಮಿಳುನಾಡಿಗೆ ನೀರು ಹರಿಸುವಂತೆ ಆದೇಶಿಸಿವೆ. ಇದು ರಾಜ್ಯದ ಸಂಕಷ್ಟಕ್ಕೆ ಕಾರಣವಾಗಿದೆ. ಕಾವೇರಿ ಭಾಗದ ಜನ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಅವರು ಪ್ರಧಾನಿಗಳ ಗಮನ ಸೆಳೆದಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶದ ಬಗ್ಗೆ ನಾನು ಮಾತಾಡಲ್ಲ. ಆದರೆ, ನಮ್ಮ ರಾಜ್ಯ ಸರಕಾರ ಪೂರ್ಣವಾಗಿ ವಿಫಲವಾಗಿದೆ ಅಷ್ಟೆ. ಈ ಬಗ್ಗೆ ಕುಮಾರಸ್ವಾಮಿ ಅವರು ಸ್ಥಳ ಪರಿಶೀಲನೆ ಮಾಡಬೇಕಿತ್ತಾ? ಯಾಕೆ ಸರಕಾರಕ್ಕೆ ಸಾಧ್ಯವಿಲ್ಲವೇ? ನಮ್ಮ ಜಲ ಸಂಪನ್ಮೂಲ ಇಲಾಖೆಗೆ ಏನಾಗಿದೆ? ಕುಮಾರಸ್ವಾಮಿ ಅವರು ಕೆಆರ್ ಎಸ್ ಗೆ ಹೋಗಿ ಬಂದ ಕೇವಲ ಒಂದು ಗಂಟೆಯೊಳಗೆ ಅಂದೇ ಈ ಮಾಹಿತಿ ಕೊಟ್ಟಿದ್ದೇನೆ ನಾನು ಎಂದು ರಾಜ್ಯ ಸರಕಾರವನ್ನು ಅವರು ತರಾಟೆಗೆ ತೆಗೆದುಕೊಂಡರು.
ಕಾಂಗ್ರೆಸ್ ಅನ್ಯಾಯ ಮಾಡಿದೆ
ಕುಮಾರಸ್ವಾಮಿ ಅವರ ಮಾತಿಗೆ ಸರಕಾರ ಎಷ್ಟು ಮಾನ್ಯತೆ ಕೊಟ್ಟಿದೆ? ಕಾಂಗ್ರೆಸ್ ಪಕ್ಷಕ್ಕೆ ಮೊದಲಿನಿಂದಲೂ ಕಾವೇರಿ ಬಗ್ಗೆ ಕರ್ನಾಟಕದ ಪರ ನಿಲುವು ಇಲ್ಲ ಎಂದು ಅವರು ದೂರಿದರು.
ಹಿಂದಿನ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ಒಮ್ಮೆ ಹೇಳಿದ್ದರು, ದೇವೇಗೌಡರೇ ನೀವು ಕಾವೇರಿ ಬಗ್ಗೆ ಮಾತನಾಡಿದರೆ ನನ್ನ ಸರಕಾರ ಹೋಗುತ್ತದೆ. ತಮಿಳರು ಎಲ್ಲರೂ ಒಟ್ಟಾಗಿ ಇದ್ದಾರೆ. ಕೋರ್ಟ್ ನಲ್ಲಿಯೇ ಇದನ್ನು ಬಗೆಹರಿಸಿಕೊಳ್ಳಿ ಎಂದು ಕೈಚೆಲ್ಲಿದ್ದರು. ಅವರ ಸಂಪುಟದಲ್ಲಿ ನಮ್ಮ ರಾಜ್ಯದ ನಾಲ್ಕು ಜನ ಮಂತ್ರಿಗಳು ಇದ್ದರು. ಅವರಲ್ಲಿ ಒಬ್ಬರೂ ಮಾತನಾಡಲಿಲ್ಲ. ಈಗ ಮನಮೋಹನ್ ಸಿಂಗ್ ಅವರೂ ಇದ್ದಾರೆ, ಆ ನಾಲ್ವರು ಸಚಿವರಾದ ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ, ಎಸ್.ಎಂ.ಕೃಷ್ಣ, ಕೆ.ಹೆಚ್.ಮುನಿಯಪ್ಪ ಆವರೂ ಇದ್ದಾರೆ. ಇದು ಕರ್ನಾಟಕದ ಬಗ್ಗೆ ಕಾಂಗ್ರೆಸ್ ತೋರಿಸಿದ ಕಾಳಜಿ ಎಂದು ಮಾಜಿ ಪ್ರಧಾನಿಗಳು ಟೀಕಾಪ್ರಹಾರ ನಡೆಸಿದರು.
ಕುಮಾರಸ್ವಾಮಿ ಅವರು ರಾಜ್ಯದ ಎಲ್ಲಾ ನೀರನ್ನು ಸದ್ಬಳಕೆ ಮಾಡಿಕೊಂಡು ಇಡೀ ರಾಜ್ಯಕ್ಕೆ ನೀರು ಕೊಡಬೇಕು ಎಂದು ಜಲಧಾರೆ ಕಾರ್ಯಕ್ರಮ ಮಾಡಿದರು. ಹಾಗಾದರೆ, ಈ ಸರಕಾರ ಮಾಡುತ್ತಿರುವುದು ಏನು ಕಾರ್ಯಕ್ರಮ? ಕೇವಲ ತಮಿಳುನಾಡಿಗೆ ನೀರು ಹರಿಸುವುದೆ ಎಂದು ಅವರು ತೀಕ್ಷ್ಣವಾಗಿ ಪ್ರಶ್ನಿಸಿದರು.
ಕುಮಾರಸ್ವಾಮಿ ಅವರು ಕೃಷ್ಣರಾಜಸಾಗರ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಅವರು ಎಲ್ಲಾ ಮಾಹಿತಿ ಸಂಗ್ರಹ ಮಾಡಿದ್ದಾರೆ. ಹೀಗಾಗಿ ಈ ಗೋಷ್ಠಿಯಲ್ಲಿ ಕಾವೇರಿ ವಿಷಯ ಹೊರತುಪಡಿಸಿ ಯಾವುದೇ ಕಾರಣಕ್ಕೂ ರಾಜಕೀಯದ ಬಗ್ಗೆ ಮಾತನಾಡುವುದಿಲ್ಲ ಎನ್ನುತ್ತಲೇ, ಕಾವೇರಿ ವಿಷಯವನ್ನು ನಿರ್ವಹಣೆ ಮಾಡುವಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ನೇರವಾಗಿ ಆರೋಪ ಮಾಡಿದರು.
ನೀರಿಲ್ಲದ ಕೆಆರ್ ಎಸ್ ಚಿತ್ರಗಳ ಪ್ರದರ್ಶನ
ರಾಜ್ಯದಲ್ಲಿ ದೊಡ್ಡ ಪ್ರಮಾಣದ ಜಲ ಸಂಕಷ್ಟ ಉಂಟಾಗಿದೆ. ಜಲಾಶಯಗಳಲ್ಲಿ ನೀರಿಲ್ಲ. ಆದರೂ ತಮಿಳುನಾಡಿಗೆ ನೀರು ಬಿಡಿ ಎಂದು ಆದೇಶಗಳು ಬರುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದ ಮಾಜಿ ಪ್ರಧಾನಿಗಳು, ಸುದ್ದಿಗೋಷ್ಟಿಯಲ್ಲಿ ಬರಿದಾದ ಕೆಆರ್ ಎಸ್ ಜಲಾಶಯದ ಚಿತ್ರಗಳನ್ನು ಪ್ರದರ್ಶಿಸಿದರು.
ಈ ಫೋಟೋಗಳನ್ನು ಪ್ರಧಾನಿಯವರಿಗೂ ಕಳಿಸುತ್ತೇವೆ. ಅವರೇ ಗಮನಿಸಲಿ. ನಿರಿದ್ದರೆ ಸಮಸ್ಯೆ ಇಲ್ಲ. ನೀರು ಇಲ್ಲದಿದ್ದಕ್ಕೆ ಈ ಬಿಕ್ಕಟ್ಟು. ಅವರೂ ಬದುಕಬೇಕು, ನಾವೂ ಬದುಕಬೇಕು. ಎರಡೂ ರಾಜ್ಯಗಳಿಗೆ ಸಂಬಂಧ ಇಲ್ಲದಿರುವ ಐವರ ತಂಡವನ್ನು ಕಳುಹಿಸಕೊಡಿ, ವಾಸ್ತವ ಪರಿಸ್ಥಿತಿ ನೋಡಲಿ ಅಂತ ರಾಜ್ಯಸಭೆಯಲ್ಲಿ ಹೇಳಿದ್ದೇನೆ. ಬೇರೆ ರಾಜ್ಯದವರನ್ನು ಕಳುಹಿಸಿ ಸ್ಥಳ ಪರಿಶೀಲನೆ ಮಾಡಲಿ ಅಂತ ಹೇಳಿದೆ. ಯಾವ ಪರಿಸ್ಥಿತಿ ಇದೆ ಅಂತ ತಿಳಿಸಲಿ ಅಂತ ಉಪರಾಷ್ಟ್ರಪತಿಯವರಿಗೆ ಹೇಳಿದ್ದೇನೆ. ಅದನ್ನೇ ಪ್ರಧಾನಿಯಾರಿಗೂ ಮನವಿ ಮಾಡಿದ್ದೇನೆ ಎಂದು ಮಾಜಿ ಪ್ರಧಾನಿಗಳು ತಿಳಿಸಿದರು.
ಕಾವೇರಿ ವಿಷಯದಲ್ಲಿ ರಾಜ್ಯಕ್ಕೆ ಆಗುತ್ತಿರುವ ಎಲ್ಲಾ ಮಾಹಿತಿಯನ್ನು ಮೋದಿ ಅವರಿಗೆ ವಿವರಿಸಿದ್ದೇನೆ. ಮೊದಲ ತೀರ್ಪುನಲ್ಲಿ 13 ಟಿಎಂಸಿ, ಮತ್ತೆ ಐದು ಸಾವಿರ ಕ್ಯುಸೆಕ್. ಇದು ಎಂಥಾ ದುರಂತ ಅಲ್ಲವೇ? ಇದು ಸರ್ಕಾರದ ವೈಪಲ್ಯ ಅಲ್ಲದೆ ಮತ್ತೇನು? ರಾಜ್ಯದಲ್ಲಿ ಬರದಿಂದ 40 ಲಕ್ಷ ಹೆಕ್ಟರ್ ಗು ಹೆಚ್ಚು ಬೆಳೆ ನಾಶವಾಗಿದೆ. ನಮ್ಮ ಪಕ್ಷ ಇರುವುದು ಅಧಿಕಾರಕ್ಕಾಗಿ ಅಲ್ಲ, ಜನರಿಗಾಗಿ, ಜನರ ಸಮಸ್ಯೆ ಪರಿಹಾರಕ್ಕಾಗಿ. ಈ 91 ವಯಸ್ಸಿನಲ್ಲಿ ನನ್ನ ಮನಸ್ಸು ತಡೀಲಿಲ್ಲ. ಮಹದಾಯಿ ಹೊಡೆತ ಒಂದು ಕಡೆ, ಮತ್ತೊಂದು ಕಡೆ ಆಂಧ್ರದ ಹೊಡೆತ, ಮಹರಾಷ್ಟ್ರದ ಹೊಡೆದ ಇನ್ನೊಂದು ಕಡೆ. ಕರ್ನಾಟಕದ ಕಥೆ ಏನಾಗಬೇಕು? ತಮಿಳುನಾಡಿಗೆ ಮೂರು ಬೆಳೆ, ನಮಗೆ ಒಂದೇ ಬೆಳೆ. ಇದ್ಯಾವ ಸೀಮೆ ನ್ಯಾಯ? ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯಸಭೆಯಲ್ಲಿ ನಾನು ಎಲ್ಲಾ ವಿಷಯವನ್ನು ಹೇಳಿದ್ದೇನೆ. ನನ್ನಿಂದ ನಿಲ್ಲಲು ಆಗದಿದ್ದರೂ ಎದ್ದು ನಿಂತು ಮಾತನಾಡಿದ್ದೇನೆ. ನನ್ನ ಶಕ್ತಿ ಬಳಕೆ ಮಾಡಿ ಎದ್ದು ನಿಂತು ಮಾತಾಡಿದ್ದೇನೆ. ಕಣ್ಣೀರು ಹಾಕಿದ್ದೇನೆ ಎಂದು ಮಾಜಿ ಪ್ರಧಾನಿಗಳು ಗದ್ಗದಿತರಾಗಿ ಹೇಳಿದರು.
ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ
ಸುದ್ದಿಗೋಷ್ಠಿಯಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಪ್ರಧಾನಿಗಳು, ಕುಮಾರಸ್ವಾಮಿ ಅವರು ಸಾಲಮನ್ನಾ ಮಾಡುವಾಗ ಆಗ ಮಾಜಿ ಸಿಎಂ ಆಗಿದ್ದ ಸಿದ್ದರಾಮಯ್ಯ ಅವರು ಹೇಳ್ತಾರೆ, ನಮ್ಮ ಭಾಗ್ಯ ಮುಂದುವರೆಸಿ ಸಾಲಮನ್ನಾ ಮಾಡಿ ಅಂತ. ಆದರೆ ಕುಮಾರಸ್ವಾಮಿ ಅವರು ಕಷ್ಟದಲ್ಲಿ ಇದ್ದ ರೈತರ ಪರ ನಿಂತರು ಎಂದರು ಮಾಜಿ ಪ್ರಧಾನಿಗಳು.
ಸುದ್ದಿಗೋಷ್ಟಿಯಲ್ಲಿ ಮಾಜಿ ಮುಖ್ಯಮಂತ್ರಿ ಜೆಎಂಗೆ ಹೆಚ್.ಡಿ.ಕುಮಾರಸ್ವಾಮಿ ಅವರು, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ, ವಿಧಾನ ಪರಿಷತ್ ಸದಸ್ಯರಾದ ಬಿ.ಎಂ.ಫಾರೂಖ್, ಕೆ.ಎ.ತಿಪ್ಪೇಸ್ವಾಮಿ, ಮಾಜಿ ಸಂಸದ ಕುಪೇಂದ್ರ ರೆಡ್ಡಿ, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ ಸೇರಿದಂತೆ ಹಲವರು ನಾಯಕರು ಉಪಸ್ಥಿತರಿದ್ದರು.
ಶಾಂತಿಯುತವಾಗಿ ನಡೆಯಲಿ
ನಮಗೆ ಅನ್ಯಾಯ ಆಗಿದೆ, ನಿಜ. ಹಾಗಂತ ಕಾನೂನನ್ನು ಕೈಗೆ ಎತ್ತಿಕೊಳ್ಳುವುದು ಬೇಡ. ಶಾಂತಿಯುತವಾಗಿ ಬಂದ್ ನಡೆಯಲಿ ಎಂದು ಮಾಜಿ ಪ್ರಧಾನಿಗಳು ಹೇಳಿದರು.ಬಂದ್ ಗೆ ಕುಮಾರಸ್ವಾಮಿ ಅವರು ಬೆಂಬಲ ಕೊಟ್ಟಿದ್ದಾರೆ. ಎಲ್ಲರೂ ಶಾಂತಿಯುತ ವಾಗಿ ಹೋರಾಟ ಮಾಡಿ. ಅಹಿತಕರ ಘಟನೆ ನಡೆಯಬಾರದು ಎಂದು ಅವರು ಜನತೆಯಲ್ಲಿ ಮನವಿ ಮಾಡಿಕೊಂಡರು.ನೆಲ, ಜಲ, ಭಾಷೆ ವಿಷಯ ಬಂದಾಗ ತಮಿಳರಲ್ಲಿ ಕಂಡು ಬರುವ ಐಕ್ಯತೆ ನಮ್ಮಲ್ಲಿ ಇಲ್ಲ. ಅದನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.