ಡಿಸಿಎಂ ಹೇಳಿಕೆಗಳಿಂದ ರಾಜ್ಯದ ಹಿತಕ್ಕೆ ಧಕ್ಕೆ
ಬೆಂಗಳೂರು: ಪ್ರತಿನಿತ್ಯ 12,500 ಕ್ಯೂಸೆಕ್ ನೀರು ಬಿಡುಗಡೆಗೆ ತಮಿಳುನಾಡು ಸಲ್ಲಿಸಿದ್ದ ಅರ್ಜಿಯನ್ನು ಕಾವೇರಿ ನೀರು ನಿಯಂತ್ರಣ ಸಮಿತಿಯು (CWRC) ತಿರಸ್ಕಾರ ಮಾಡಿರುವುದು ಸಂತಸ ತಂದಿದೆ. ನಮ್ಮ ರಾಜ್ಯದ ಅಧಿಕಾರಿಗಳು ಸಮರ್ಥವಾಗಿ ವಾದ ಮಂಡಿಸಿದ್ದಾರೆ ಎಂದು ಜಲ ಸಂಪನ್ಮೂಲ ಸಚಿವಾರು ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಾರೆ.
ನಿತ್ಯ 3000 ಕ್ಯೂಸೆಕ್ಸ್ ನೀರು ಬಿಡುಗಡೆಗೆ ಕಾವೇರಿ ನೀರು ನಿಯಂತ್ರಣ ಸಮಿತಿಯ ಶಿಫಾರಸ್ಸು ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಪ್ರತಿಕ್ರಿಯೆ ನೀಡಿದರು.
12,500 ಕ್ಯೂಸೆಕ್ ನೀರಿಗೆ ತಮಿಳುನಾಡು ಬೇಡಿಕೆ ಇಟ್ಟಿತ್ತು. 3 ಸಾವಿರ ಕ್ಯೂಸೆಕ್ಸ್ ನೀರು ಹರಿಸುವಂತೆ ಸಮಿತಿ ಶಿಫಾರಸ್ಸು ಮಾಡಿದೆ. ನಮ್ಮ ರಾಜ್ಯದ ಅಧಿಕಾರಿಗಳು ಸಮಿತಿಗೆ ರಾಜ್ಯದ ಬರ ಪರಿಸ್ಥಿತಿಯನ್ನು ಮನವರಿಕೆ ಮಾಡಿದ್ದಾರೆ. ರಾಜ್ಯದ ಪರಿಸ್ಥಿತಿ ಅರ್ಥ ಮಾಡಿಕೊಂಡ ಸಮಿತಿಗೆ ಧನ್ಯವಾದ ಎಂದರು ಅವರು.
ಆಣೆಕಟ್ಟೆ ಕೆಳಗಿನ ಕಾವೇರಿ ಜಲಾನಯನ ಪ್ರದೇಶದಿಂದ ಸಾಮಾನ್ಯವಾಗಿ 2000 ಕ್ಯೂಸೆಕ್ಸ್ ಹರಿದು ಹೋಗುತ್ತಿರುತ್ತದೆ. 1000 ಸಾವಿರ ಕ್ಯೂಸೆಕ್ಸ್ ಬಿಡಬೇಕಾಗುತ್ತದೆ. ಕನಕಪುರ, ಬೆಂಗಳೂರು ಕಡೆಯ ಮಳೆ ನೀರು ಹೋಗುತ್ತಾ ಇರುತ್ತದೆ. ಎರಡು ಮೂರು ದಿನದಿಂದ ಒಳಹರಿವು ಚೆನ್ನಾಗಿದೆ.
ಡಿ.ಕೆ.ಶಿವಕುಮಾರ್
ಇಂತಹ ಸಂಕಷ್ಟದ ಸಮಯದಲ್ಲಿ ಮೇಕೆದಾಟು ಯೋಜನೆಯೇ ಪರಿಹಾರ. ಈ ಯೋಜನೆಯಿಂದ 66 ಟಿಎಂಸಿ ನೀರು ಅವರಿಗೆ ಸೇರುತ್ತದೆ. ಕೆಆರ್ಎಸ್, ಕಬಿನಿ, ಹೇಮಾವತಿ ಆಣೆಕಟ್ಟೆಗಳ ಮೇಲಿನ ಒತ್ತಡ ತಗ್ಗುತ್ತದೆ. ಬೆಂಗಳೂರಿನ ಕುಡಿಯುವ ನೀರಿಗೂ ಸಾಕಷ್ಟು ಅನುಕೂಲ ಆಗುತ್ತದೆ. ಕಳೆದ ವಾರ ಸುಪ್ರೀಂಕೋರ್ಟ್ ತೀರ್ಪು ನೀಡುವ ಹೊತ್ತಿನಲ್ಲಿ ಕರ್ನಾಟಕದವರು ಎಷ್ಟು ಬೇಕಾದರೂ ಅಣೆಕಟ್ಟು ಕಟ್ಟಿಕೊಳ್ಳಲಿ, ನಿಮಗೆ ತೊಂದರೆ ಏನು? ನಿಮ್ಮ ಪಾಲಿನ ನೀರು 177 ಟಿಎಂಸಿ ನಿಮಗೆ ಸಿಗುತ್ತದೆ ಎಂದು ಸ್ಪಷ್ಟವಾಗಿ ಹೇಳಿದೆ ಎಂದು ಅವರು ಮಾಹಿತಿ ನೀಡಿದರು.
ಮೇಕೆದಾಟು ಅಣೆಕಟ್ಟು ನೀರನ್ನು ಕನಕಪುರದವರು ಬಳಸಿಕೊಳ್ಳುತ್ತಾರೆ ಎಂದು ಯಾರೋ ಹೇಳುತ್ತಿದ್ದರು. ಅಣೆಕಟ್ಟು ಇರುವುದೇ ತಮಿಳುನಾಡು ಗಡಿಯಲ್ಲಿ ಎಂದು ಛೇಡಿಸಿದರು.
ಕಾವೇರಿ ನೀರಿನ ಎರಡೂ ಸಮಿತಿಗಳಿಗೆ ಮೇಕೆದಾಟು ಯೋಜನೆ ಬಗ್ಗೆ ಮನವರಿಕೆ ಮಾಡಿಕೊಡುತ್ತೇವೆ. ಸುಪ್ರೀಂ ಕೋರ್ಟಿನ ತೀರ್ಪಿನಿಂದ ಮತ್ತೊಮ್ಮೆ ಭರವಸೆ ಮೂಡಿದೆ, ಆದ ಕಾರಣ ನಮ್ಮ ಸಂಸದರು, ಕೇಂದ್ರ ಸಚಿವರಿಗೆ ಕೇಂದ್ರದ ಮೇಲೆ ಒತ್ತಡ ಹಾಕಿ ಎಂದು ಮನವಿ ಮಾಡುತ್ತೇನೆ. ರಾಜ್ಯದ ಜನರು ಶಾಂತಿಯುತ ಪ್ರತಿಭಟನೆ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತೊಮ್ಮೆ ಬಂದ್ ಮಾಡಲು ನ್ಯಾಯಾಲಯ ಬಿಡುವುದಿಲ್ಲ, ಆದ ಕಾರಣ ಸೆ.29 ರ ಬಂದ್ಗೆ ಅವಕಾಶವಿಲ್ಲ ಎಂದರು ಡಿಕೆಶಿ.
ಕಾವೇರಿ ಹೋರಾಟದ ಜೊತೆಗೆ ರಾಜಕೀಯ ಟೀಕೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಟೀಕೆ ಮಾಡಬೇಡಿ ಎಂದು ಹೇಳಲು ಸಾಧ್ಯವಿಲ್ಲ. ಅವರು ತಮ್ಮ ಅಸ್ತಿತ್ವಕ್ಕೆ ಮಾಡುತ್ತಾರೆ. ವಿರೋಧ ಪಕ್ಷಗಳ ಬಾಯಿ ಮುಚ್ಚಿಸಲು ಆಗುವುದಿಲ್ಲ. ಬೇಸರ ಮಾಡಿಕೊಳ್ಳಲೂ ಹೋಗುವುದಿಲ್ಲ. ಪ್ರಜಾಪ್ರಭುತ್ವದ ಹಕ್ಕನ್ನು ನಾವು ಪ್ರಶ್ನಿಸಬಾರದು. ಮಾಧ್ಯಮಗಳು ಸಹ ನಮ್ಮ ಮೇಲೆ ಇಲ್ಲಸಲ್ಲದ ಕಥೆಗಳನ್ನು ಹೇಳುತ್ತಾರೆ, ಇದೆಲ್ಲಾ ರಾಜಕೀಯದ ಒಂದು ಭಾಗ ಎಂದು ಅವರು ತಿಳಿಸಿದರು.
ನಿಮ್ಮ ಆಡಳಿತವಾಧಿಯಲ್ಲಿ ಮೇಕೆದಾಟು ಯೋಜನೆ ಆಗುತ್ತದೆಯೇ ಎನ್ನುವ ಪ್ರಶ್ನೆಗೆ ಕಾಲವೇ ಉತ್ತರ ಕೊಡುತ್ತದೆ. ಜಯನಗರದ ಶಾಸಕರ ನೇತೃತ್ವದಲ್ಲಿ ದಾಂಧಲೆ ನಡೆದಿದೆ ಎನ್ನುವ ಪ್ರಶ್ನೆಗೆ ಸಾರ್ವಜನಿಕರ ಆಸ್ತಿ ಹಾನಿ ಮಾಡುವವರ ವಿರುದ್ದ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳುತ್ತೇವೆ. ನಾನು ಇದನ್ನು ಮಾಡುವುದಿಲ್ಲ, ನ್ಯಾಯಾಲಯ ಮಾಡುತ್ತದೆ. ಬಂದ್ ಮಾಡುವ ಮುಂಚಿತವಾಗಿ ಸೂಚನೆಯನ್ನೂ ನೀಡಿದೆ ಎಂದು ಅವರು ವಿವರಿಸಿದರು.
ಕಾವೇರಿ ವಿಚಾರವಾಗಿ ಪಕ್ಷಾತೀತವಾಗಿ ಹೋರಾಟ ಮಾಡಿದ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ. ರಾಜ್ಯದ ಜನರೆಲ್ಲರೂ ಮಳೆಗಾಗಿ ಪ್ರಾರ್ಥನೆ ಮಾಡೋಣ” ಎಂದರು.
ಇಂದು ದೆಹಲಿಯಲ್ಲಿ ನಡೆದ ಕಾವೇರಿ ನೀರು ನಿಯಂತ್ರಣ ಸಮಿತಿಯ ಸಭೆಯಲ್ಲಿ ತಮಿಳುನಾಡಿಗೆ ಅ.15 ರ ತನಕ 3 ಸಾವಿರ ಕ್ಯೂಸೆಕ್ ನೀರು ಹರಿಸಬೇಕು ಎಂದು ಶಿಫಾರಸ್ಸು ಮಾಡಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಡಿಕೆಶಿ ಹೇಳಿಕೆಗಳ ಗೊಂದಲ
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನೀಡುತ್ತಿರುವ ಹೇಳಿಕೆಗಳು ಗೊಂದಲಕ್ಕೆ ಕಾರಣವಾಗಿವೆ. ಅವರ ಹೇಳಿಕೆಗಳೇ ರಾಜ್ಯಕ್ಕೆ ಮಾರಕವಾಗಿವೆ ಎಂದು ಹೇಳಲಾಗುತ್ತಿದೆ. ನೀರಿನ ಒಳ ಹರಿವಿನ ಬಗ್ಗೆ ಅವರು ನೀಡುತ್ತಿರುವ ಅಂಕಿ ಅಂಶಗಳೇ ಧಕ್ಕೆ ಉಂಟು ಮಾಡುತ್ತಿವೆ ಎಂದು ವಿಪಕ್ಷಗಳು ದೂರುತ್ತಿವೆ.
ಕೆಆರ್ ಎಸ್ ಜಲಾಶಯಕ್ಕೆ ನಿತ್ಯವೂ 10,000 ಕ್ಯೂಸೆಕ್ ಒಳಹರಿವು ಇದೆ ಎನ್ನುತ್ತಾರೆ ಜಲ ಸಂಪನ್ಮೂಲ ಸಚಿವರು. ಇದಕ್ಕೆ ತದ್ವಿರುದ್ಧವಾಗಿ ಸಮಿತಿಯ ಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳು “ನಮ್ಮಲ್ಲಿ ನೀರೇ ಇಲ್ಲ” ಎಂಬ ಮಾಹಿತಿ ನೀಡುತ್ತಾರೆ. ಇನ್ನೊಂದೆಡೆ ಹಿರಿಯ ಅಧಿಕಾರಿಯೊಬ್ಬರು “ಈ ಆದೇಶದಿಂದ ರಾಜ್ಯಕ್ಕೆ 2.5 ಟಿಎಂಸಿ ನೀರು ಉಳಿತಾಯವಾಗಿದೆ” ಎನ್ನುತ್ತಾರೆ. ‘ಎತ್ತು ಏರಿಗೆ, ಕೋಣ ನೀರಿಗೆ’ ಎನ್ನುವಂತಿದೆ ಜಲ ಸಂಪನ್ಮೂಲ ಇಲಾಖೆ ಮತ್ತು ಸರಕಾರದ ಪರಿಸ್ಥಿತಿ. ಹೆಜ್ಜೆಹೆಜ್ಜೆಗೂ ಅನರ್ಥಗಳನ್ನೇ ಮಾಡುತ್ತಿರುವ ಈ ಸರಕಾರದ ವೈಫಲ್ಯದ ಲಾಭವನ್ನು ತಮಿಳುನಾಡು ಅತ್ಯಂತ ಜಾಣತನದಿಂದ ಪಡೆದುಕೊಳ್ಳುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.