ಜೆಡಿಎಸ್ – ಬಿಜೆಪಿ ಜಂಟಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಹೆಚ್.ಡಿ.ಕುಮಾರಸ್ವಾಮಿ, ಯಡಿಯೂರಪ್ಪ
ಬೆಂಗಳೂರು: ರಾಜ್ಯದ ಜನರು ನೀರಿಲ್ಲದೆ ಸಂಕಷ್ಟದಲ್ಲಿ ಇದ್ದರೆ ಜಲ ಸಂಪನ್ಮೂಲ ಸಚಿವರು ತಮಿಳುನಾಡಿಗೆ ಸಂತೋಷವಾಗಿ ನೀರು ಬಿಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ವಿಧಾನಸೌಧ ಬಳಿ ಮಹಾತ್ಮ ಗಾಂಧೀಜಿ ಪ್ರತಿಮೆ ಮುಂಭಾಗದಲ್ಲಿ ತಮಿಳುನಾಡಿಗೆ ಕಾವೇರಿ ಬಿಡುವುದನ್ನು ವಿರೋಧಿಸಿ ಜೆಡಿಎಸ್ – ಬಿಜೆಪಿ ಪಕ್ಷಗಳು ಜಂಟಿಯಾಗಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗಿಯಾಗಿ ಅವರು ಮಾತನಾಡಿದರು.
ರಾಜ್ಯದಲ್ಲಿ ಇನ್ನು ಮಳೆ ಬರುವ ಸಾಧ್ಯತೆ ಬಹಳ ಕಡಿಮೆ. ಜಲಾಶಯಗಳು ಬರಿದಾಗಿವೆ. ಇದ್ದ ನೀರಿನಲ್ಲಿ ಬಹುಪಾಲನ್ನು ತಮಿಳುನಾಡಿಗೆ ಹರಿಸಲಾಗಿದೆ. ಈ ಬಗ್ಗೆ ಪ್ರಾಯಶ್ಚಿತ್ತವೇ ಇಲ್ಲದ ಜಲಸಂಪನ್ಮೂಲ ಸಚಿವರು ತಮಿಳುನಾಡಿಗೆ ನೀರು ಹೋಗುತ್ತಿರುವುದಕ್ಕೆ ಖುಷಿ ವ್ಯಕ್ತಪಡಿಸಿದ್ದಾರೆ. ಇವರಿಗೆ ರಾಜ್ಯದ ಜನ ಕಷ್ಟದಲ್ಲಿ ಇದ್ದರೆ ಸಂತೋಷ ಆಗುತ್ತದೆ ಎನ್ನುವ ವಿಷಯ ತಿಳಿದು ಅಚ್ಚರಿ ಆಯಿತು ಎಂದು ಮಾಜಿ ಮುಖ್ಯಮಂತ್ರಿಗಳು ಪರೋಕ್ಷವಾಗಿ ಡಿ.ಕೆ.ಶಿವಕುಮಾರ್ ವಿರುದ್ಧ ಹರಿಹಾಯ್ದರು.
ಕಾವೇರಿ ಜಲ ನಿಯಂತ್ರಣ ಮಂಡಳಿಯ ಮುಂದೆ ತಮಿಳುನಾಡು 12,500 ಕ್ಯೂಸೆಕ್ ನೀರು ಬಿಡಿಸಿ ಎಂದು ಬೇಡಿಕೆ ಇಟ್ಟಿತ್ತು. ಸಮಿತಿ ದೊಡ್ಡ ಮನಸ್ಸು ಮಾಡಿ ಕೇವಲ ಮುಂದಿನ 18 ದಿನಗಳ ಕಾಲ 3,000 ಕ್ಯೂಸೆಕ್ ಮಾತ್ರ ಬಿಡುಗಡೆ ಮಾಡಿ ಎಂದು ಕರ್ನಾಟಕಕ್ಕೆ ಆದೇಶ ನೀಡಿದೆ. ಅದು ತಮಗೆ ಸಂತಸ ಉಂಟು ಮಾಡಿದೆ ಎಂದು ಸಚಿವರು ಹೇಳಿದ್ದಾರೆ. ಇವರು ಕರ್ನಾಟಕದ ಉಪ ಮುಖ್ಯಮಂತ್ರಿಯಾ? ಅಥವಾ ತಮಿಳುನಾಡಿನ ಏಜೆಂಟಾ? ಎಂದು ಕುಮಾರಸ್ವಾಮಿ ಅವರು ತೀಕ್ಷ್ಣವಾಗಿ ಪ್ರಶ್ನಿಸಿದರು.
ಸಂಕಷ್ಟ ಹಂಚಿಕೆ ಸೂತ್ರ ರೂಪಿಸಿದ ಹೊರತು ತಮಿಳುನಾಡಿಗೆ ನೀರು ಹರಿಸಬೇಡಿ ಎಂದು ಜನರು ಮತ್ತು ವಿರೋಧ ಪಕ್ಷಗಳು ಒತ್ತಾಯ ಮಾಡುತ್ತಿದ್ದಾರೆ ಇವರು ಸಂತೋಷವಾಗಿ ನೆರೆ ರಾಜ್ಯಕ್ಕೆ ನೀರು ಹರಿಸುತ್ತಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಜಲ ಸಂಪನ್ಮೂಲ ಸಚಿವರು ನೀಡುತ್ತಿರುವ ಹೇಳಿಕೆಗಳು ರಾಜ್ಯಕ್ಕೆ ಧಕ್ಕೆ ತರುತ್ತಿವೆ. ನಿನ್ನೆ ಹೇಳಿಕೆ ನೀಡಿದ್ದ ಅವರು ಕೆ ಆರ್ ಎಸ್ ಜಲಾಶಯಕ್ಕೆ ನಿತ್ಯವೂ 10,000 ಕ್ಯೂಸೆಕ್ ನೀರು ಹರಿದು ಬರುತ್ತಿದೆ ಎಂದು ಹೇಳಿಕೆ ನೀಡಿದ್ದರು. ಆದರೆ, ಅಧಿಕಾರಿಗಳು ನೀರೇ ಇಲ್ಲ ಎಂದು ನಿಯಂತ್ರಣ ಸಮಿತಿ ಸಭೆಯಲ್ಲಿ ಹೇಳುತ್ತಾರೆ. ಜನರು ಯಾರ ಮಾತು ನಂಬುವುದು? ಮಂಗಳವಾರ ಸಚಿವರು ನೀಡಿರುವ ಹೇಳಿಕೆಯಂತೂ ಬೇಜವಾಬ್ದಾರಿಯ ಪರಮಾವಧಿ ಎಂದು ಅವರು ಟೀಕಾಪ್ರಹಾರ ನಡೆಸಿದರು.
ನಾನಿಂದು ಮೆಟ್ಟೂರು ಜಲಾಶಯದ ನೀರಿನ ಮಟ್ಟದ ವಿವರಗಳನ್ನು ತರಿಸಿದ್ದೇನೆ. 124.80 ಅಡಿ ಗರಿಷ್ಠ ಮಟ್ಟದ ಆ ಜಲಾಶಯದಲ್ಲಿ ಬುಧವಾರ 38.02 ಅಡಿ ನೀರಿತ್ತು. 11.09 ಟಿಎಂಸಿ ನೀರು ಸಂಗ್ರಹ ಇದೆ. 7231 ಕ್ಯೂಸೆಕ್ ಒಳಹರಿವು ಇದ್ದರೆ, 6500 ಕ್ಯೂಸೆಕ್ ಹೊರ ಹರಿವು ಇದೆ. ಈ ವಿವರ ಸಚಿವರ ಬಳಿ ಇದೆಯಾ? ಅವರು ಕೊಡುತ್ತಿರುವ ಹೇಳಿಕೆಗಳಿಗೆ ತಾಳಮೇಳ ಇದೆಯಾ? ಎಂದು ಕುಮಾರಸ್ವಾಮಿ ಅವರು ಕಿಡಿ ಕಾರಿದರು.
ರಾಜ್ಯದ ಜನರಿಗೆ ದ್ರೋಹ: ಯಡಿಯೂರಪ್ಪ
ಕಾವೇರಿ ನದಿ ನೀರಿನ ವಿಚಾರದಲ್ಲಿ ರಾಜ್ಯದ ಕಾಂಗ್ರೆಸ್ ಸರಕಾರವು ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಪಕ್ಷದ ಏಜೆಂಟರಂತೆ ವರ್ತಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಡಿಎಂಕೆ ಜತೆ ರಾಜಕೀಯ ಹೊಂದಾಣಿಕೆ ಮಾಡಿಕೊಂಡಿರುವ ಕಾಂಗ್ರೆಸ್ ಪಕ್ಷವು ರಾಜ್ಯದ ಜನರಿಗೆ ಅನ್ಯಾಯ ಮಾಡುತ್ತಿದ್ದಾರೆ. ಇದನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ ಎಂದು ಅವರು ಹೇಳಿದರು.
ರಾಜ್ಯದ ಜನರು ಬೀದಿಗಿಳಿದು ಹೋರಾಡುತ್ತಿದ್ದು, ಬಿಜೆಪಿ- ಜೆಡಿಎಸ್ ಇದಕ್ಕೆ ಎಲ್ಲ ರೀತಿಯ ಬೆಂಬಲ ಕೊಡುತ್ತದೆ ಎಂದು ಪ್ರಕಟಿಸಿದರು ಅವರು. ಈಗಲಾದರೂ ಕಾವೇರಿ ಬಿಕ್ಕಟ್ಟನ್ನು ಶಮನ ಮಾಡಿ ಕನ್ನಡಿಗರಿಗೆ ನ್ಯಾಯ ಒದಗಿಸಬೇಕು. ಇಲ್ಲವಾದರೆ ಕಾನೂನು- ಸುವ್ಯವಸ್ಥೆ ಹದಗೆಡಲಿದೆ. ಅದಕ್ಕೆ ರಾಜ್ಯ ಸರಕಾರವೇ ಹೊಣೆ ಆಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮಾಜಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್, ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಮುಂತಾದವರು ಮಾತನಾಡಿದರು. ಎರಡೂ ಪಕ್ಷಗಳ ಎಲ್ಲಾ ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಂಸದರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.