ಬಾಗೇಪಲ್ಲಿಯಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ
ಬಾಗೇಪಲ್ಲಿ: ಪಟ್ಟಣದ ಗೂಳೂರು ಮುಖ್ಯರಸ್ತೆ ಅಗಲೀಕರಣದ ಮೊದಲ ಭಾಗವಾಗಿ ಪೊಲೀಸ್ ಬಿಗಿಭದ್ರತೆಯಲ್ಲಿ ಅತಿಕ್ರಮಣ ತೆರವುಗೊಳಿಸುವ ಕಾರ್ಯವನ್ನು ತಹಶೀಲ್ದಾರ್ ಪ್ರಶಾಂತ್ ಪಾಟೀಲ್ ನೇತೃತ್ವದಲ್ಲಿ ಪ್ರಾರಂಭವಾಗಿದೆ.
ಹೆದ್ದಾರಿ ನಿಯಮಗಳಂತೆ ಈಗಾಗಲೇ ರಸ್ತೆಯ ಮಧ್ಯಭಾಗದಿಂದ ಎರಡೂ ಕಡೆಗಳಲ್ಲಿ ಅಧಿಕಾರಿಗಳು ಅಳತೆ ಮಾಡಿ ೪೧ ಅಡಿಗಳಿಗೆ ಗುರುತು ಹಾಕಿದ್ದರು. ಸುಮಾರು ಒಂದು ತಿಂಗಳ ಹಿಂದೆಯೇ ರಸ್ತೆ ಅಗಲೀಕರಣದ ಸುಳಿವನ್ನು ಅಧಿಕಾರಿಗಳು ಮತ್ತು ತಾಲ್ಲೂಕು ಆಡಳಿತ ನೀಡಿತ್ತು. ಈಗಾಗಲೇ ಗೂಳೂರು ಮುಖ್ಯರಸ್ತೆಯಲ್ಲಿ ತಮಗೆ ಇಷ್ಟಬಂದಂತೆ ಅಂಗಡಿ ಮಾಲೀಕರು ರಸ್ತೆಯನ್ನು ಅತಿಕ್ರಮಿಸಿಕೊಂಡು ಕಟ್ಟಡಗಳನ್ನು ನಿರ್ಮಿಸಿದ್ದರೆ, ಬಾಡಿಗೆದಾರರು ಇನ್ನೂ ಸ್ವಲ್ಪಮುಂದೆ ಹೋಗಿ ಎಲ್ಲೆಂದರಲ್ಲಿ ಶೀಟುಗಳನ್ನು ಹಾಕಿ ಕಟ್ಟಿಗೆಗಳನ್ನು ರಸ್ತೆಗೆ ಅಡ್ಡಲಾಗಿ ಇಟ್ಟುಕೊಂಡಿದ್ದರು.
ಅವರವರಿಗೆ ತೋಚಿದಂತೆ ಅವರವರಗೆ ಮನ ಬಂದಂತೆ ರಸ್ತೆಯನ್ನು ಒತ್ತುವರಿ ಮಾಡಿಕೊಂಡಿದ್ದರ ಪರಿಣಾಮ ಸಾರ್ವಜನಿಕರ ಸಂಚಾರ ಮತ್ತು ವಾಹನಗಳ ಸಂಚಾರಕ್ಕೆ ತೀವ್ರ ಅಡಚಣೆಯಾಗಿತ್ತು. ನಮ್ಮನ್ನು ಕೇಳುವವರೂ ಯಾರೂ ಇಲ್ಲ ಎಂಬ ಧಿಮಾಕಿನಲ್ಲಿ ಒತ್ತುವರಿದಾರರು ಇದ್ದಾರೆ ಎಂದು ಸಾರ್ವಜನಿಕರು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದರು. ರಸ್ತೆಯ ಎರಡೂ ಕಡೆಗಳಲ್ಲಿನ ಚರಂಡಿಯನ್ನು ಮುಚ್ಚಿಹಾಕಿ ರಸ್ತೆಗಿಂತ ೨-೩ ಅಡಿಗಳಷ್ಟು ಎತ್ತರಕ್ಕೆ ಮಣ್ಣು ಹಾಕಿಕೊಂಡಿದ್ದು ರಸ್ತೆ ಕಿರಿದಾಗುವಂತೆ ಮಾಡಿದ್ದರು.
ಸದ್ದು ಮಾಡಿದ ಜೆಸಿಬಿಗಳು
ಇಂದು ಬೆಳ್ಳಂ ಬೆಳಗ್ಗೆಯೇ ಗೂಳೂರು ಮುಖ್ಯರಸ್ತೆಯಲ್ಲಿ ಜೆಸಿಬಿಗಳು ಸದ್ದು ಮಾಡಿದವು. ಸ್ವತಃ ತಹಶೀಲ್ದಾರ್ ಪ್ರಶಾಂತ್ ಪಾಟೀಲ್ ನೂರಾರು ಪೊಲೀಸರೊಂದಿಗೆ ರಸ್ತೆಯಲ್ಲಿ ತೆರವು ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಪೊಲೀಸ್ ಇನಸ್ಪೆಕ್ಟರ್ ಪ್ರಶಾಂತ್ ವರ್ಣಿ ಮತ್ತು ಪುರಸಭೆ ಮುಖ್ಯಾಧಿಕಾರಿ ರುದ್ರಮ್ಮ ಶರಣಯ್ಯ, ಲೊಕೋಪಯೋಗಿ ಎಇಇ ಪ್ರದೀಪ್ ಮತ್ತಿತರ ಅಧಿಕಾರಿ ಸಿಬ್ಬಂದಿ ವರ್ಗದವರು ಈ ಕಾಯಾಚರಣೆಯಲ್ಲಿ ಭಾಗಿಯಾಗಿದ್ದರು. ಯಾವುದೇ ಮುಲಾಜಿಗೆ ಒಳಗಾಗದೆ ಒತ್ತುವರಿ ತೆರವುಗೊಳಿಸುವ ಕಾರ್ಯ ಸುಗಮವಾಗಿ ನಡೆಯಿತು.
ಶಾಸಕರ ಮನೆಯಿಂದಲೇ ತೆರವು ಕಾರ್ಯಾಚರಣೆ
ರಸ್ತೆ ಅಗಲೀಕರಣದ ಕಾರ್ಯಾಚರಣೆಯನ್ನು ಸ್ವತಃ ಶಾಸಕ ಎಸ್.ಎನ್.ಸುಬ್ಬಾರೆಡ್ಡಿಯವರ ಮನೆಯ ಕಾಂಪೌಂಡನ್ನೇ ಜೆಸಿಬಿ ಮೂಲಕ ಬೀಳಿಸುವುದರ ಮೂಲಕ ಅಧಿಕಾರಿಗಳು ಪ್ರಾರಂಭಿಸಿದ್ದು ವಿಶೇಷವಾಗಿತ್ತು. ಕಾನೂನು ಶಾಸಕರಿಗೂ ಒಂದೇ ಸಾಮಾನ್ಯನಿಗೂ ಒಂದೇ ಎಂಬ ಸಂದೇಶವನ್ನು ನೀಡುವ ನಿಟ್ಟಿನಲ್ಲಿ ಅಧಿಕಾರಿಗಳು ಯಶಸಸ್ವಿಯಾದರು.
ಬಿಗಿ ಪೊಲೀಸ್ ಭದ್ರತೆ
ಒತ್ತುವರಿ ತೆರವುಗೊಳಿಸುವ ಕಾರ್ಯಕ್ಕೆ ಪೊಲೀಸ್ ಇನಸ್ಪೆಕ್ಟರ್ ಪ್ರಶಾಂತ್ ವರ್ಣಿ ನೇತೃತ್ವದಲ್ಲಿ ನೂರಾರು ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. ಜಿಲ್ಲಾ ಮೀಸಲು ಪಡೆಯನ್ನು ಸಹ ಬಳಸಿಕೊಳ್ಳಲಾಗಿತ್ತು. ಹೆಚ್ಚಿನ ಪೊಲೀಸರು ಇದ್ದ ಕಾರಣ ಒತ್ತುವರಿ ತೆರವು ಕಾರ್ಯಾಚರಣೆಗೆ ಯಾರೂ ಅಡ್ಡಿಪಡಿಸಲು ಮುಂದಾಗಲಿಲ್ಲ.
ಗೂಳೂರು ರಸ್ತೆ ಅಗಲೀಕರಣ ಕಾರ್ಯಕ್ಕೆ ಅಧಿಕಾರಿಗಳು ಮುಂದಾಗಿ ಮೊದಲ ಭಾಗವಾಗಿ ಒತ್ತುವರಿಯನ್ನು ತೆರವುಗೊಳಿಸಿದ್ದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು. ಇಷ್ಟು ವರ್ಷಗಳ ಕಾಲ ಈ ರಸ್ತೆಯಲ್ಲಿ ಸಂಚಾರಕ್ಕೆ ತಾವು ಪಡುತ್ತಿದ್ದ ಕಷ್ಟಕ್ಕೆ ಕೊನೆಗೂ ಮುಕ್ತಿ ದೊರೆಯಿತಲ್ಲ ಎಂಬ ಮಾತುಗಳನ್ನು ಆಡುತ್ತಿದ್ದುದು ಕಂಡುಬಂದಿತು. ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರು ಕೂಡಲೇ ರಸ್ತೆಯನ್ನು ಉತ್ತಮವಾಗಿ ಅಭಿವೃದ್ಧಿಪಡಿಸಿ ಸಾರ್ವಜನಿಕರು ಮತ್ತು ವಾಹನ ಸಂಚಾರಕ್ಕೆ ಅನುವುಮಾಡಿಕೊಡಬೇಕು ಎಂದು ಒತ್ತಾಯಿಸಿದರು.