ಸಭೆ ನಡೆಸಿದ ಸಚಿವ ಭೋಸರಾಜು: ಲೋಕಸಭೆ ಚುನಾವಣೆ ನಂತರ ಹೊಸ ವರಸೆ; ಅನುಮಾನಗಳಿಗೆ ಎಡೆಮಾಡಿಟ್ಟ ಬಾಗೇಪಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ನಡೆ
ಬೆಂಗಳೂರು/ಚಿಕ್ಕಬಳ್ಳಾಪುರ/ಕೋಲಾರ: ಕೆ.ಸಿ.ವ್ಯಾಲಿ. ಹೆಚ್.ಎನ್.ವ್ಯಾಲಿ ಹೆಸರಿನಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಕೆರೆಗಳಿಗೆ ಬೆಂಗಳೂರಿನ ವಿಷಕಾರಿ ಕೊಳಚೆ ನೀರು ಹರಿಸಿ ಎರಡೂ ಜಿಲ್ಲೆಗಳ ಜಲಮೂಲಗಳ ಸರ್ವನಾಶಕ್ಕೆ ಕಾರಣವಾಗಿರುವ ರಾಜ್ಯ ಸರಕಾರ ಇದೀಗ ಹೊಸ ವರಸೆ ಶುರುವಿಟ್ಟುಕೊಂಡಿದೆ.
ಲೋಕಸಭೆ ಚುನಾವಣೆ ಇನ್ನು ಕೆಲ ತಿಂಗಳಷ್ಟೇ ಬಾಕಿ ಇರುವಂತೆಯೇ ಮೂರನೇ ಹಂತದ ಶುದ್ಧೀಕರಣದ ಬಗ್ಗೆ ಸರಕಾರ ರಾಗ ತೆಗೆಯುತ್ತಿದೆ. ಕೆಲ ದಿನಗಳ ಹಿಂದೆಯಷ್ಟೇ ಕೋಲಾರದ ಲಕ್ಷ್ಮೀಸಾಗರ ಗ್ರಾಮಕ್ಕೆ ಭೇಟಿ ನೀಡಿದ್ದ ಸಣ್ಣ ನೀರಾವರಿ ಸಚಿವ ಭೋಸರಾಜು ಅವರು, ವಿಜ್ಞಾನಿಗಳ ಸಮ್ಮುಖದಲ್ಲಿ ನೀರನ್ನು ಪರೀಕ್ಷೆ ಮಾಡಿಸುವ ನಾಟಕವಾಡಿ ನೀರು ಶುದ್ಧವಾಗಿದೆ, ಗುಣಮಟ್ಟದಿಂದ ಕೂಡಿದೆ ಎಂದು ಸರ್ಟಿಫಿಕೇಟ್ ನೀಡಿದ್ದರು.
ಆದರೆ, ಬೆಂಗಳೂರಿನಲ್ಲಿಂದು ಸಭೆ ನಡೆಸಿರುವ ಸಚಿವರು, ಮೂರನೇ ಹಂತದ ಶುದ್ಧೀಕರಣದ ಬಗ್ಗೆ ಮಾತನಾಡಿ, ಈ ಬಗ್ಗೆ ಜಲಸಂನ್ಮೂಲ ಸಚಿವರು ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಜತೆ ಚರ್ಚೆ ನಡೆಸುವುದಾಗಿ ಹೇಳಿದ್ದಾರೆ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ತಮ್ಮ ಭಾಗದ ಜಲಮೂಲಗಳನ್ನು ನಾಶ ಮಾಡುತ್ತಿರುವ ಕೆ.ಸಿ.ವ್ಯಾಲಿ ಮತ್ತು ಹೆಚ್.ಎನ್.ವ್ಯಾಲಿಗಳ ಮೂಲಕ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕೊಳಚೆ ನೀರು ಹರಿಸುವುದನ್ನು ನಿಲ್ಲಿಸಬೇಕು ಎಂದು ಎರಡೂ ಜಿಲ್ಲೆಗಳ ಜನರು ಒತ್ತಾಯ ಮಾಡುತ್ತಿದ್ದಾರೆ. ಈಗಾಗಲೇ ಸಾವಿರಾರು ಕೋಟಿ ರೂಪಾಯಿ ವೆಚ್ಚ ಮಾಡಿರುವ, ಇನ್ನೂ ನೆನೆಗುದಿಯಲ್ಲೇ ಬಿದ್ದಿರುವ ಎತ್ತಿನಹೊಳೆ ಯೋಜನೆಯಿಂದ ನೀರು ಕೋಡಿ ಎಂದು ಜನ ಕೇಳುತ್ತಿದ್ದಾರೆ. ಆದರೆ, ಎತ್ತಿನಹೊಳೆಯಲ್ಲಿ ನೀರು ಸಿಗದು, ಬಯಲುಸೀಮೆಗೆ ಹನಿನೀರೂ ಸಿಗದು ಎಂದು ಈಗಾಗಲೇ ಕೇಂದ್ರೀಯ ಜಲ ಆಯೋಗ ಸ್ಪಷ್ಟ ಮಾತುಗಳಲ್ಲಿ ಹೇಳಿದೆ.
ಸುಖಾಮುಮ್ಮನೆ ಜನಪ್ರತಿನಿಧಿಗಳನ್ನು ಕೂರಿಸಿಕೊಂಡು ಸಭೆಗಳನ್ನು ನಡೆಸುತ್ತಿರುವ ಸಣ್ಣ ನೀರಾವರಿ ಸಚಿವರಿಗೆ ಈ ಬಗ್ಗೆ ಮಾಹಿತಿ ಇಲ್ಲವೇ ಎಂದು ಎರಡೂ ಜಿಲ್ಲೆಗಳ ಜನರು ಪ್ರಶ್ನೆ ಮಾಡುತ್ತಿದ್ದಾರೆ.
ಸಭೆಯಲ್ಲಿ ಸಚಿವರು ಹೇಳಿದ ಮಾತುಗಳು ಹೀಗಿವೆ;
ಕೆ.ಸಿ.ವ್ಯಾಲಿ ಏತ ನೀರಾವರಿ ಯೋಜನೆ ಹಾಗೂ ಹೆಚ್.ಎನ್ ವ್ಯಾಲಿ ಏತ ನೀರಾವರಿ ಯೋಜನೆಯ ಮೂಲಕ ಬೆಂಗಳೂರು ನಗರದ ತ್ಯಾಜ್ಯ ನೀರನ್ನು ಎರಡನೇ ಹಂತದ ಸಂಸ್ಕರಣೆ ಮಾಡಿ ಕೆರೆಗಳಿಗೆ ಹರಿಸಲಾಗುತ್ತಿದೆ. ನೀರಿನ ಸಂಸ್ಕರಣೆಯ ಕಾರ್ಯವನ್ನು ಬೆಂಗಳೂರು ಜಲಮಂಡಳಿ ಮಾಡುತ್ತಿದೆ. ಸಣ್ಣ ನೀರಾವರಿ ಇಲಾಖೆ ಈ ಸಂಸ್ಕರಿಸಿದ ನೀರನ್ನು ಯೋಜನೆ ವ್ಯಾಪ್ತಿಯ ಕೆರೆಗಳಿಗೆ ಹರಿಸುವ ಕಾರ್ಯ ನಿರ್ವಹಿಸುತ್ತಿದೆ. ಈ ನೀರನ್ನು ಮೂರನೇ ಹಂತದಲ್ಲಿ ಸಂಸ್ಕರಿಸಬೇಕು ಎನ್ನುವುದು ಆ ಭಾಗದ ಜನರ ಹಾಗೂ ಜನಪ್ರತಿನಿಧಿಗಳ ಆಶಯವಾಗಿದೆ.
ಈ ನಿಟ್ಟಿನಲ್ಲಿ ಬೆಂಗಳೂರು ಜಲಮಂಡಳಿಯ ಉಸ್ತುವಾರಿಗಳಾದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಜೊತೆಯಲ್ಲಿ ಸಂಬಂಧಪಟ್ಟ ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜನಪ್ರತಿನಿಧಿಗಳ ಸಭೆಯನ್ನು ಆಯೋಜಿಸುವಂತೆ ಸಚಿವರಾದ ಕೆ.ಹೆಚ್ ಮುನಿಯಪ್ಪ ಸಲಹೆ ನೀಡಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಣ್ಣ ನೀರಾವರಿ ಸಚಿವರು, ಸಭೆಯನ್ನು ಆಯೋಜಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್.ಮುನಿಯಪ್ಪ ಹಾಗೂ ಶಾಸಕರುಗಳ ಸಮ್ಮುಖದಲ್ಲಿ ಸಣ್ಣ ನೀರಾವರಿ ಇಲಾಖೆಯ ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಸಣ್ಣ ನೀರಾವರಿ ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕೆ.ಸಿ ವ್ಯಾಲಿ, ಹೆಚ್. ಎನ್ ವ್ಯಾಲಿಯಲ್ಲಿ ಎರಡನೇ ಹಂತದ ಸಂಸ್ಕರಿಸಿದ ನೀರನ್ನ ಹರಿಸಲಾಗುತ್ತಿದೆ. ಈ ನೀರಿನ ಮೂರನೇ ಹಂತದ ಸಂಸ್ಕರಣೆ ಆ ಭಾಗದ ಜನರ ಹಾಗೂ ಜನಪ್ರತಿನಿಧಿಗಳ ಆಶಯವಾಗಿದೆ. ಈ ನಿಟ್ಟಿನಲ್ಲಿ ಬೆಂಗಳೂರು ಜಲಮಂಡಳಿ ಉಸ್ತುವಾರಿ ಸಚಿವರೊಂದಿಗೆ ಸಮಾಲೋಚನೆ ನಡೆಸುವಂತೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜನಪ್ರತಿನಿಧಿಗಳ ಸಲಹೆಯ ಹಿನ್ನಲೆಯಲ್ಲಿ, ಸಭೆಯನ್ನು ಆಯೋಜಿಸುವುದಾಗಿ ಸಚಿವ ಎನ್.ಎಸ್.ಭೋಸರಾಜು ಭರವಸೆ ನೀಡಿದ್ದಾರೆ.
ಹೆಚ್.ಎನ್. ವ್ಯಾಲಿ ಏತ ನೀರಾವರಿ ಯೋಜನೆಯ ಅಡಿಯಲ್ಲಿ ಮೊದಲ ಹಂತದಲ್ಲಿ ಚಿಕ್ಕಬಳ್ಳಾಪುರ, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ವ್ಯಾಪ್ತಿಯಲ್ಲಿ ಒಟ್ಟು 65 ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ. ಎರಡನೇ ಹಂತದಲ್ಲಿ ಬಾಗೇಪಲ್ಲಿ ತಾಲ್ಲೂಕಿನ 24 ಕೆರೆಗಳಿಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆಯ ಪ್ರಗತಿಯಲ್ಲಿದೆ ಎಂದಿರುವ ಅವರು; ಬಾಗೇಪಲ್ಲಿ ಕ್ಷೇತ್ರದಲ್ಲಿ ಶುದ್ಧವಾಗಿರುವ ಜಲಮೂಲಗಳನ್ನು ಹಾಳು ಮಾಡುವ ಹುನ್ನಾರಕ್ಕೆ ಪರಿಹಾರ ಇದೆಯಾ? ಎನ್ನುವ ಬಗ್ಗೆ ಹೇಳಲಿಲ್ಲ.
ಬಾಗೇಪಲ್ಲಿ ಶಾಸಕರ ಅತ್ಯುತ್ಸಾಹ
ಚುನಾವಣೆಗೆ ಮುನ್ನ ಅತ್ಯುತ್ಸಾಹದಿಂದ ಬಾಗೇಪಲ್ಲಿ ಕ್ಷೇತ್ರಕ್ಕೆ ಬೆಂಗಳೂರು ಕೊಳಚೆ ನೀರು ಹರಿಸಲು ತರಾತುರಿಯಲ್ಲಿ ಹೆಜ್ಜೆ ಇರಿಸಿದ್ದ ಕ್ಷೇತ್ರದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಕೂಡ ಕೋಲಾರ, ಚಿಕ್ಕಬಳ್ಳಾಪುರ ಕೆರೆಗಳ ದುಃಸ್ಥಿತಿ ಬಗ್ಗೆ ಚಕಾರ ಎತ್ತುತ್ತಿಲ್ಲ. ಈಗಾಗಲೇ ಮಿಟ್ಟೇಮರಿ ಸಮೀಪದ ಹಲವಾರು ಕೆರೆಗಳಿಗೆ ಬೆಂಗಳೂರಿನ ಗಬ್ಬು ನೀರು ಹರಿಸಲು ದೊಡ್ಡ ದೊಡ್ಡ ಪೈಪುಗಳನ್ನು ತಂದು ಹಾಕಿದ್ದಾರೆ.
ಚಿಕ್ಕಬಳ್ಳಾಪುರದ ಕಂದವಾರ ಕೆರೆ, ಅವರು ಬಾಗೇಪಲ್ಲಿಗೆ ಸಾಗುವಾಗ ಹೆದ್ದಾರಿ ಪಕ್ಕದಲ್ಲಿಯೇ ಕಣ್ಣಿಗೆ ರಾಚುವ ಅಮಾನಿ ಗೋಪಾಲಕೃಷ್ಣ ಕೆರೆಯ ದುಸ್ಥಿತಿ ಬಾಗೇಪಲ್ಲಿ ಶಾಸಕರಿಗೆ ಕಾಣದಿರುವುದು ಅಚ್ಚರಿಯ ಸಂಗತಿಯೇ ಸರಿ. ಬೆಂಗಳೂರಿನ ಕೊಳಚೆ ನೀರಿನಿಂದ ಎರಡೂ ಜಿಲ್ಲೆಗಳ ಕೆರೆಗಳು ಸರ್ವನಾಶವಾಗಿ ಆ ನೀರಿನಲ್ಲಿ ಯುರೇನಿಯಂ ಅಂಶ ಪತ್ತೆ ಆಗಿದ್ದರೆ, ಬಾಗೇಪಲ್ಲಿ ಶಾಸಕರು ಇದೇ ಕೊಳಚೆ ನೀರನ್ನು ತಮ್ಮ ಕ್ಷೇತ್ರಕ್ಕೂ ಹರಿಸಲು ಅತ್ಯುತ್ಸಾಹ ತೋರಿರುವುದು ಅನುಮಾನಗಳಿಗೆ ಕಾರಣವಾಗಿದೆ.
ಇದೆಲ್ಲ ಗೊತ್ತಿದ್ದರೂ, ಕೊಳಚೆ ನೀರಿನ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದರೂ ನಿರ್ಲಕ್ಷ್ಯ ದೋರಣೆ ತಾಳಿರುವ ಸಣ್ಣ ನೀರಾವರಿ ಸಚಿವರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಏತ ನೀರಾವರಿ ಕಾಮಗಾರಿ ಪ್ರಗತಿಯಲ್ಲಿದ್ದು, ಕೊನೆಯ ಹಂತದ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುತ್ತಿದೆ. 38 ಕೆರೆಗಳಿಗೆ ನೀರು ತುಂಬಿಸುವ ಈ ಯೋಜನೆಯ ಮೊದಲ ಹಂತ ಶೀಘ್ರ ಪೂರ್ಣಗೊಳಿಸಬೇಕು. ಈ ಕಾಮಗಾರಿ ಪೂರ್ಣಗೊಳಿಸುವಲ್ಲಿ ವಿಳಂಬವಾಗುತ್ತಿದೆ. ತೀವ್ರಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸದಿದ್ದಲ್ಲಿ ಸಂಬಂಧಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ!
ತುಮಕೂರಿಗೂ ಇದೇ ನೀರು
ಬೆಂಗಳೂರು ನಗರದ ವೃಷಭಾವತಿ ವ್ಯಾಲಿಯಿಂದ ದ್ವಿತೀಯ ಹಂತದಲ್ಲಿ ಸಂಸ್ಕರಿಸಿದ 243 ಎಂ.ಎಲ್.ಡಿ ನೀರನ್ನು ಮೊದಲನೇ ಹಂತದಲ್ಲಿ ಬೆಂಗಳೂರು ನಗರ, ಗ್ರಾಮಾಂತರ ಮತ್ತು ತುಮಕೂರು ಜಿಲ್ಲೆಯ 70 ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಯ ಟೆಂಡರ್ ಆಗಿದೆ. ಸರ್ವೇ ಕಾರ್ಯ ಮುಗಿದಿದ್ದು, ವಿನ್ಯಾಸ ತಯಾರಿಕಾ ಕಾರ್ಯ ಪ್ರಗತಿಯಲ್ಲಿದೆ. ಈ ಕಾಮಗಾರಿಯ ಪ್ರಾರಂಭಕ್ಕೆ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈಗಾಗಲೇ ಚಿಕ್ಕಬಳ್ಳಾಪುರ, ಕೋಲಾರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಜನರು ಈ ನೀರಿನ ಹೊಡೆತಕ್ಕೆ ಸಿಕ್ಕಿದ್ದು, ತುಮಕೂರು ಜಿಲ್ಲೆಯ ಜನರೂ ಅಪಾಯಕ್ಕೆ ಸನಿಹದಲ್ಲಿ ಇದ್ದಾರೆ.