ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಸಿದ್ದರಾಮಯ್ಯ ಆರೋಪ
ಬೆಂಗಳೂರು: ಜಾತಿಗಣತಿ ವರದಿ ಸರಕಾರಕ್ಕೆ ಸಲ್ಲಿಸಲು ಹಿಂದುಳಿದ ವರ್ಗಗಳ ಆಯೋಗಕ್ಕೆ ತಿಳಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಯೋಗವು ವರದಿ ಸಲ್ಲಿಸಿದರೆ ಪರಿಶೀಲಿಸಲಾಗುವುದು. ಹೆಚ್.ಡಿ ಕುಮಾರಸ್ವಾಮಿ ಅವರು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಮುಖ್ಯಮಂತ್ರಿ ಆಗಿದ್ದಾಗ ಕಾಂತರಾಜು ಅವರು ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರಾಗಿದ್ದರು ಎಂದಿದ್ದಾರೆ.
ಆಗ ಆಯೋಗ ವರದಿ ತಯಾರು ಮಾಡಿತ್ತು. ವರದಿ ಸಲ್ಲಿಸಲು ಕಾಂತರಾಜು ಹೋದಾಗ ಅದನ್ನು ಅವರು ಸ್ವೀಕರಿಸಲಿಲ್ಲ. ಆಗಿನ ಕಾರ್ಯದರ್ಶಿಗಳು ವರದಿಗೆ ಸಹಿ ಮಾಡಿಲ್ಲ. ಈಗಿನ ಕಾರ್ಯದರ್ಶಿಗಳ ಬಳಿ ಸಹಿ ಮಾಡಿಸಿ ಅವರು ಸಲ್ಲಿಸಬೇಕು ಎಂದು ತಿಳಿಸಿದ್ದಾರೆ.
ಜಾತಿ ಗಣತಿ ಹಾಗೂ ಸಾಮಾಜಿಕ, ಆರ್ಥಿಕ ಸಮೀಕ್ಷೆ ಮಾಡಬೇಕೆಂದು ನಾನೇ ಹಿಂದೆ ಆದೇಶ ಮಾಡಿದ್ದು. ಆಗ ಕಾಂತರಾಜು ಆವರು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದರು. ನಮ್ಮ ಸರ್ಕಾರದ ಅವಧಿಯಲ್ಲಿ ವರದಿ ಪೂರ್ಣವಾಗಿರಲಿಲ್ಲ. ನಂತರ ಸಮ್ಮಿಶ್ರ ಸರ್ಕಾರ ಇರುವಾಗ ಅಂದಿನ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ, ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರಾಗಿ ಪುಟ್ಟರಂಗಶೆಟ್ಟಿ ಇದ್ದರು. ಆಗ ವರದಿಯನ್ನು ಪಡೆಯಲಿಲ್ಲ ಎಂದು ಸಿಎಂ ಆರೋಪಿಸಿದ್ದಾರೆ.
ನಂತರ ಆಯೋಗಕ್ಕೆ ಜಯಪ್ರಕಾಶ್ ಹೆಗಡೆಯವರನ್ನು ಬಿಜೆಪಿ ಸರ್ಕಾರ ನೇಮಿಸಿತ್ತು. ಅವರು ವರದಿಯನ್ನು ಸಲ್ಲಿಸುವಂತೆ ತಿಳಿಸಿಲಾಗಿದೆ. ಆದರೆ ಇನ್ನೂ ಕೊಟ್ಟಿಲ್ಲ ಎಂದು ಹೇಳಿದ್ದಾರೆ.