ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ವ್ಯಂಗ್ಯ
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಎರಡೂವರೆ ವರ್ಷ ಮುಖ್ಯಮಂತ್ರಿಯಾಗುತ್ತೇನೆಂದು ಹೇಳುವ ಎದೆಗಾರಿಕೆ ತೋರುತ್ತಿಲ್ಲ ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ. ದೇವೇಗೌಡ ವ್ಯಂಗ್ಯವಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಡಿ.ಕೆ.ಶಿವಕುಮಾರ್ ಅವರದು ಉತ್ತರನ ಪೌರುಷವಿದ್ದಂತೆ ಎರಡೂವರೆ ವರ್ಷಗಳ ಕಾಲ ಮುಖ್ಯಮಂತ್ರಿಯಾಗುತ್ತೇನೆ ಎಂಬ ಧೈರ್ಯವಾಗಿ ಹೇಳುತ್ತಿಲ್ಲ ಎಂದು ಟೀಕಿಸಿದರು.
ವಿಧಾನಸಭೆ ಚುನಾವಣೆಗೂ ಮುನ್ನ ಮಾಜಿ ಪ್ರಧಾನಿ ದೇವೇಗೌಡರು, ಎಸ್ಎಂ ಕೃಷ್ಣ, ಡಿ.ವಿ ಸದಾನಂದ ಗೌಡ, ಎಚ್.ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾರೆ ಒಮ್ಮೆ ಅವಕಾಶ ಕೊಡಿ ನಾನು ಸಿಎಂ ಆಗುತ್ತೇನೆ ಎಂದು ಕೋರಿದ್ದರು.
ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಉಪಮುಖ್ಯಮಂತ್ರಿ ಆಗಿದ್ದಾರೆ, ಆದರೆ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ನಾವೇ ಮುಖ್ಯಮಂತ್ರಿ ಎನ್ನುತ್ತಾರೆ. ಕೆ.ಎನ್ ರಾಜಣ್ಣ ಮೂವರು ಉಪಮುಖ್ಯಮಂತ್ರಿಗಳಾಬೇಕು ಎಂದರೆ, ಮಾಜಿ ಸಚಿವ ಬಸವರಾಜರಾಯರೆಡ್ಡಿ 6 ಮಂದಿ ಉಪಮುಖ್ಯಮಂತ್ರಿಗಳಾಗಲಿ ಎಂದು ಹೇಳಿಕೆ ನೀಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕುರುಬರ ಸಮಾವೇಶದಲ್ಲಿ ಕಾವೇರಿಯಿಂದ ಕನ್ಯಾಕುಮಾರಿಯವರೆಗೂ ಕುರುಬ ಸಮುದಾಯವಿದೆ. ಈ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕೇಂದ್ರಕ್ಕೆ ಶಿಫಾರಸು ಮಾಡುವುದಾಗಿ ಹೇಳಿದ್ದಾರೆ.
ಜತೆಗೆ ಐದು ವರ್ಷ ಅಧಿಕಾರದಲ್ಲಿ ಮುಂದುವರಿಯುವುದಾಗಿ ಸಂದರ್ಶನದಲ್ಲಿ ಹೇಳಿದ್ದಾರೆ. ಹಾಗಾದರೆ ಡಿ ಕೆ ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ಎಲ್ಲಿ ಸಿಗುತ್ತದೆ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಹಿಂದೆಂದೂ ಕಾಣದಂತಹ ಭೀಕರ ಬರಗಾಲವಿದ್ದು, 40 ಲಕ್ಷ ಹೆಕ್ಟೇರ್ ಬೆಳೆಹಾನಿಯಾಗಿದ್ದರೂ ಇದುವರೆಗೂ ರಾಜ್ಯ ಸರ್ಕಾರ ಬೆಳೆನಷ್ಟ ಪರಿಹಾರ ನೀಡಿಲ್ಲ ಎಂದು ಜಿ.ಟಿ.ಡಿ ಆಕ್ರೋಶ ವ್ಯಕ್ತಪಡಿಸಿದರು.
ಬರಪೀಡಿತ ಪ್ರದೇಶಗಳಿಗೆ ಸಚಿವರು ಭೇಟಿ ನೀಡಿ ರೈತರಿಗೆ, ಜನರಿಗೆ ಧೈರ್ಯ ತುಂಬಿಲ್ಲ. ರೈತರ ಸ್ಥಿತಿ ರಾಜ್ಯದಲ್ಲಿ ಜೀವನ್ಮರಣದ ಪರಿಸ್ಥಿತಿ ಉಂಟಾಗಿದೆ. ಕೃಷಿ ಪಂಪ್ ಸೆಟ್ಗಳಿಗೆ 7 ಗಂಟೆ ಬದಲಿಗೆ 2 ಗಂಟೆ ಮಾತ್ರ ವಿದ್ಯುತ್ ನೀಡುತ್ತಿದ್ದಾರೆ ಎಂದು ಟೀಕಿಸಿದರು.
ಮೈಸೂರಿನಲ್ಲಿ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಗ್ಯಾರಂಟಿ ಯೋಜನೆಗೆ ಬಸವಣ್ಣ ಪ್ರೇರಣೆ ಎಂದಿದ್ದಾರೆ. ಬಸವಣ್ಣನವರು ಕಾಯಕ ಮಾಡಿ ಬದುಕಬೇಕು ಎಂದು ಹೇಳಿದ್ದರೆ ಹೊರತು ಬಿಟ್ಟಿಭಾಗ್ಯದಿಂದಲ್ಲ ಎಂದು ಕುಟುಕಿದರು.