ರಾಜ್ಯದ ವಾಸ್ತವ ಚಿತ್ರಣ ಬಿಡಿಸಿಟ್ಟ ಚಲುವರಾಯಸ್ವಾಮಿ
ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್ ಬಿಕ್ಕಟ್ಟು ತಾರಕಕ್ಕೇರಿದೆ. ಅದು ಜಟಿಲ ಸಮಸ್ಯೆಯಾಗಿ ಪರಿಣಮಿಸಿದ್ದು, ಸರಕಾರಕ್ಕೆ ಇನ್ನಿಲ್ಲದ ತಲೆನೋವಾಗಿ ಪರಿಣಮಿಸಿದೆ.
ವಿದ್ಯುತ್ ಕುರಿತ ರಾಜ್ಯದ ವಾಸ್ತವ ಚಿತ್ರಣವನ್ನು ಬಿಡಿಸಿಟ್ಟಿರುವ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ, ಮುಂಗಾರು ಮಳೆ ವೈಫಲ್ಯದಿಂದ ರಾಜ್ಯ ಒಂದೆಡೆ ಬರಕ್ಕೆ ಸಿಲುಕಿದ್ದರೆ, ಮತ್ತೊಂದೆಡೆ ವಿದ್ಯುತ್ ಉತ್ಪಾದನೆ ಕುಂಠಿತಗೊಂಡು ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗಿರುವುದು ಸಮಸ್ಯೆಗೆ ಕಾರಣವಾಗಿದೆ ಎಂದಿದ್ದಾರೆ.
ಸಮಸ್ಯೆ ಹಿನ್ನೆಲೆಯಲ್ಲಿ ಅನಧಿಕೃತವಾಗಿ ಲೋಡ್ ಶೆಡ್ಡಿಂಗ್ ಉಂಟಾಗುತ್ತಿದೆ. ನಮ್ಮಲ್ಲಿರುವ ವಿದ್ಯುತ್ ಉತ್ಪಾದನೆಯನ್ನು ಇಡೀ ರಾಜ್ಯಕ್ಕೆ ಹಂಚುವ ಕಾರ್ಯ ನಡೆದಿದೆ. ಇದರಿಂದ ಕೆಲವೆಡೆ ವಿದ್ಯುತ್ ಅಭಾವ ಸೃಷ್ಟಿಯಾಗುತ್ತಿದೆ. ಜಲಾಶಯಗಳಲ್ಲಿ ನೀರಿನ ಕೊರತೆ, ಕೊಳವೆ ಬಾವಿಗಳಲ್ಲಿ ಅಂರ್ತಜಲ ಕುಸಿಯುತ್ತಿದೆ. ರೈತರು ತಮ್ಮ ಬೆಳೆ ಉಳಿಸಿಕೊಳ್ಳು ಕೃಷಿ ಪಂಪುಸೆಟ್ಟುಗಳಿಗೆ ಅಗತ್ಯ ವಿದ್ಯುತ್ ಸರಬರಾಜು ಮಾಡಲು ಸದ್ಯಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.
ಸಮಸ್ಯೆಯ ಗಂಭೀರತೆ ಅರಿತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿದ್ಯುತ್ ಬಿಕ್ಕಟ್ಟು ಬಗೆಹರಿಸಲು ಪ್ರಯತ್ನ ಮಾಡುತ್ತಿದ್ದಾರೆ. ಇಂಧನ ಖಾತೆ ಸಚಿವ ಕೆ.ಜೆ.ಜಾರ್ಜ್ ಅವರು ಕೇಂದ್ರ ಸಚಿವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಕಲ್ಲಿದ್ದಲು ಪೂರೈಕೆಗೆ ಕ್ರಮ ಕೈಗೊಳ್ಳುತ್ತಿದ್ದಾರೆ.
ಚಲುವರಾಯಸ್ವಾಮಿ, ಕೃಷಿ ಸಚಿವ
ಹೆಚ್ಚುವರಿ ವಿದ್ಯುತ್ ಹೊಂದಿರುವ ರಾಜ್ಯಗಳಿಂದ ಖರೀದಿಗೆ ಮಾತುಕತೆ ನಡೆದಿದೆ. ಪೂರ್ಣವಾಗಿ ಅಲ್ಲದಿದ್ದರೂ ಸಮಸ್ಯೆ ಬಗೆಹರಿಸುವ ಪ್ರಯತ್ನ ನಡೆದಿದೆ ಎಂದರು.
ಈ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಳೆಯಾಗಿದ್ದರೆ ವಿದ್ಯುತ್ ಸಮಸ್ಯೆ ಆಗುತ್ತಿರಲಿಲ್ಲ. ಮಳೆ ಪ್ರಮಾಣ ಕಡಿಮೆಯಾಗಿರುವುದರಿಂದ ನಾವು ಈ ಸ್ಥಿತಿಗೆ ಬಂದಿದ್ದೆವೆ ಎಂದಿದ್ದಾರೆ ಅವರು.
ಸಿದ್ದರಾಮಯ್ಯ ಅವರ ಹಿಂದಿನ ಆಡಳಿತದಲ್ಲೂ ವಿದ್ಯುತ್ ಸಮಸ್ಯೆ ಎದುರಾಗಿತ್ತು. ಅಂದು 10-13 ಸಾವಿರ ಮೆ.ವ್ಯಾ. ವಿದ್ಯುತ್ ಉತ್ಪಾದನೆ ಹೆಚ್ಚಳ ಮಾಡಲಾಗಿತ್ತು.
ಕಳೆದ 4 ವರ್ಷಗಳಲ್ಲಿ ಬಿಜೆಪಿ ಸರ್ಕಾರ ರಾಜ್ಯದಲ್ಲಿ ವಿದ್ಯುತ್ ಉತ್ಪಾನೆ ಹೆಚ್ಚಳ ಮಾಡಿಲ್ಲ. ಹೀಗಾಗಿ ಲೋಡ್ಶೆಡ್ಡಿಂಗ್ ಜಾರಿ ಮಾಡುವ ಸ್ಥಿತಿ ಎದುರಾಗಿದೆ.
ರಾಜ್ಯದಲ್ಲಿ ಬೀಕರ ಬರಗಾಲ ಎದುರಾಗಿದೆ. ನಮ್ಮ ಅಣೆಕಟ್ಟುಗಳಲ್ಲಿ ನೀರಿನ ಲಭ್ಯತೆ ಕಡಿಮೆ ಇದೆ. ಬರಗಾಲ ಎದುರಾದಾಗ ವಿದ್ಯುತ್ ಉತ್ಪಾದನೆ ಕುಸಿಯುತ್ತದೆ. ಅಲ್ಲದೆ, ಪ್ರತಿ ವರ್ಷ ಶೇ.10-15ರಷ್ಟು ಬೇಡಿಕೆ ಹೆಚ್ಚುತ್ತದೆ ಎಂದು ಮಾಹಿತಿ ನೀಡಿದ್ದಾರೆ ಕೃಷಿ ಸಚಿವರು.
ಇದನ್ನು ಗಮನದಲ್ಲಿಟ್ಟುಕೊಂಡೇ ಹತ್ತು ಸಾವಿರ ಎಕರೆಯಲ್ಲಿ ಸೌರ ಮತ್ತು ಪವನಶಕ್ತಿ ವಿದ್ಯುತ್ ಉತ್ಪಾದನೆಗೆ ನಮ್ಮ ಸರ್ಕಾರ ಕಾರ್ಯಕ್ರಮ ರೂಪಿಸುತ್ತಿದೆ ಎಂದರು.
ರೈತರಿಂದಲೂ ವಿದ್ಯುತ್ ಬೇಡಿಕೆ ಪ್ರಮಾಣ ಹೆಚ್ಚಾಗಿದೆ. ಕೃಷಿಕರಿಗೆ ಯಾವುದೇ ಕಾರಣಕ್ಕೂ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ. ಈಗಾಗಲೇ ನಮ್ಮ ಸಚಿವರು ಕಾರ್ಯ ಪ್ರವೃತ್ತರಾಗಿದ್ದಾರೆ ಎಂದರು ಅವರು.
ಮತ್ತೊಂದೆಡೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕೈಗಾರಿಕಾ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವರಾದ ಎಂ.ಬಿ.ಪಾಟೀಲ್ ಮತ್ತು ಪ್ರಿಯಾಂಕ ಖರ್ಗೆ ಅವರು, ರಾಜ್ಯದಲ್ಲಿ ಎದುರಾಗಿರುವ ವಿದ್ಯುತ್ ಅಭಾವ ಕೈಗಾರಿಕಾ ಉತ್ಪಾದನೆಗಳ ಮೇಲೆ ಪರಿಣಾಮ ಬೀರದು ಎಂದಿದ್ದಾರೆ ಸಚಿವರು.
ಬೃಹತ್ ಕೈಗಾರಿಕೆಗಳು ತಮ್ಮ ಉದ್ದಿಮೆಗೆ ಅಗತ್ಯವಾದ ವಿದ್ಯುತ್ ಅನ್ನು ತಾವೇ ಉತ್ಪಾದಿಸಿಕೊಂಡು ಹೆಚ್ಚುವರಿ ವಿದ್ಯುತ್ ಅನ್ನು ವಿದ್ಯುತ್ ಕಂಪನಿಗಳಿಗೆ ಮಾರುತ್ತಿವೆ.
ಹೊಸದಾಗಿ ರಾಜ್ಯದಲ್ಲಿ ಬೃಹತ್ ಉದ್ದಿಮೆಗಳ ಸ್ಥಾಪನೆಗೆ ಮುಂದಾಗುತ್ತಿರುವ ಹೂಡಿಕೆದಾರರಿಗೆ ವಿದ್ಯುತ್ ಸಮಸ್ಯೆ ಉಂಟಾಗುವುದಿಲ್ಲ ಎಂದು ಅವರು ಅಭಯ ನೀಡಿದರು.