ಗುತ್ತಿಗೆದಾರರಿಂದ ಕರ್ನಾಟಕ ಕಾಂಗ್ರೆಸ್ 50% ಕಮೀಷನ್ ಸಂಗ್ರಹ ಮಾಡುತ್ತಿದೆ; ಆ ಹಣವನ್ನು ಇಲ್ಲಿಗೆ ಕಳಿಸುತ್ತಿದೆ ಎಂದು ಕಿಡಿ
ಹೈದರಾಬಾದ್: ತೆಲಂಗಾಣ ರಾಜ್ಯದಲ್ಲಿ ಅಡ್ಡದಾರಿಯಲ್ಲಿ ಚುನಾವಣೆ ಗೆಲ್ಲುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷವು ಕರ್ನಾಟಕದಿಂದ ಹಣ ಗುತ್ತಿಗೆದಾರರು, ಚಿನ್ನದ ವ್ಯಾಪಾರಿಗಳಿಂದ ಅಕ್ರಮವಾಗಿ ಸಂಗ್ರಹ ಮಾಡಿ ಇಲ್ಲಿಗೆ ಸಾಗಣೆ ಮಾಡುತ್ತಿದೆ ಎಂದು ಭಾರತ್ ರಾಷ್ಟ್ರ ಸಮಿತಿ (ಬಿಆರ್ ಎಸ್) ನೇರ ಆರೋಪ ಮಾಡಿದೆ.
ಭ್ರಷ್ಟ ಮಾರ್ಗದಲ್ಲಿ ಸಂಗ್ರಹ ಮಾಡಲಾಗುತ್ತಿರುವ ಸಾವಿರಾರು ಕೋಟಿ ರೂಪಾಯಿಗಳನ್ನು ತೆಲಂಗಾಣಕ್ಕೆ ಕರ್ನಾಟಕ ಕಾಂಗ್ರೆಸ್ ಸಾಗಿಸುತ್ತಿದೆ. ಮತದಾರರಿಗೆ ಭಾರೀ ಪ್ರಮಾಣದಲ್ಲಿ ಹಣ ಹಂಚಿ ಗೆಲ್ಲಲು ಆ ಪಕ್ಷ ಷಡ್ಯಂತ್ರ್ಯ ರೂಪಿಸಿದೆ ಎಂದು ಸಚಿವ ಹರೀಶ್ ರಾವು ಆರೋಪ ಮಾಡಿದ್ದಾರೆ.
ರಾಜಸ್ತಾನ, ಮಧ್ಯಪ್ರದೇಶ, ತೆಲಂಗಾಣ, ಛತ್ತೀಸ್‌ಗಢ, ಮಿಜೋರಾಂನಲ್ಲಿ ಚುನಾವಣೆ ಘೋಷಣೆ ಆಗಿವೆ. ಈ ಎಲ್ಲಾ ರಾಜ್ಯಗಳಿಗೆ ಕಾಂಗ್ರೆಸ್ ಆಡಳಿತ ಇರುವ ಕರ್ನಾಟಕದಿಂದ ಭಾರೀ ಪ್ರಮಾಣದಲ್ಲಿ ಹಣ ಸಂಗ್ರಹ ಮಾಡಲಾಗುತ್ತಿದೆ ಎನ್ನುವ ಶಂಕೆಯ ಬೆನ್ನಲ್ಲಿಯೇ ಬೆಂಗಳೂರಿನಲ್ಲಿ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ 42 ಕೋಟಿ ರೂ. ವಶಕ್ಕೆ ಪಡೆದಿದ್ದಾರೆ. ಈ ಹಣವು ಆ ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಆಪ್ತ, ಗುತ್ತಿಗೆದಾರ ಅಂಬಿಕಾಪತಿ ಮನೆಯಲ್ಲಿ ಸಿಕ್ಕಿದೆ ಎಂದು ಅವರು ದೂರಿದ್ದಾರೆ.
ಕರ್ನಾಟಕದಲ್ಲಿ ಈ ಹಿಂದೆ ಅಧಿಕಾರದಲ್ಲಿ ಇದ್ದ ಬಿಜೆಪಿ ಸರಕಾರದ ವಿರುದ್ಧ 40% ಕಮೀಷನ್ ವಸೂಲಿ ಆರೋಪ ಇತ್ತು. ಈಗ ಬಂದಿರುವ ಕಾಂಗ್ರೆಸ್ ಸರಕಾರದ ವಿರುದ್ಧ 50% ಕಮೀಷನ್ ವಸೂಲಿ ಆರೋಪ ಇದೆ. ಹೀಗೆ ಕಾಂಗ್ರೆಸ್ ಪಕ್ಷವು ಸ್ಕ್ಯಾಂಗ್ರೆಸ್ ಪಕ್ಷವಾಗಿ ಪರಿವರ್ತನೆ ಆಗಿದೆ. ತೆಲಂಗಾಣ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಒಂಡೆದೆ ಹಣ ಹಂಚಲು ಹುನ್ನಾರ ನಡೆಸುತ್ತಿದೆ, ಮತ್ತೊಂದೆಡೆ ಟಿಕೆಟ್ ಗಳನ್ನು ಹಣಕ್ಕೆ ಮಾರಿಕೊಳ್ಳುತ್ತಿದೆ ಎಂದು ಹರೀಶ್ ರಾವು ಅವರು ಗಂಭೀರ ಆರೋಪ ಮಾಡಿದರು.
119 ಸದಸ್ಯ ಬಲದ ತೆಲಂಗಾಣ ವಿಧಾನಸಭೆಗೆ ನವೆಂಬರ್ 30ರಂದು ಚುನಾವಣೆ ನಡೆಯಲಿದೆ.
ಬೆಂಗಳೂರಿನಲ್ಲಿ ಸಿಕ್ಕಿಬಿದ್ದರುವ ೪೨ ಕೋಟಿ ರೂ. ಹಣವನ್ನು ತೆಲಂಗಾಣ ಚುನಾವಣೆಗೆ ಕಳಿಸುವ ಪ್ಲಾನ್ ಮಾಡಿತ್ತು ಎನ್ನುವ ವಿಚಾರ ತೆಲಂಗಾಣದಲ್ಲಿ ದೊಡ್ಡ ಕಂಪನವನ್ನೇ ಸೃಷ್ಟಿ ಮಾಡಿದೆ. ಅತ್ತ ಕೆ.ಚಂದ್ರಶೇಖರ ರಾವ್ ನೇತೃತ್ವದ ಭಾರತ್ ರಾಷ್ಟ್ರ ಸಮಿತಿ (ಬಿ ಆರ್ ಎಸ್) ಹಾಗೂ ಬಿಜೆಪಿ ಪಕ್ಷಗಳು ಕಾಂಗ್ರೆಸ್ ವಿರುದ್ಧ ಬೆಂಕಿ ಉಗುಳುತ್ತಿವೆ.
ಬಿಆರ್ ಎಸ್ ಪಕ್ಷವಂತೂ ಹಣ ಸಿಕ್ಕಿದ್ದನೇ ದೊಡ್ಡ ಪ್ರಚಾರಾಂದೋಲನವನ್ನಾಗಿ ಮಾಡಿಕೊಂಡಿದೆ. ಅಲ್ಲಿನ ಸುದ್ದಿವಾಹಿನಿಗಳು, ಸೋಶಿಯಲ್ ಮೀಡಿಯಾದಲ್ಲಿ ಇದು ಬಿಟ್ಟರೆ ಬೇರೆ ಸುದ್ದಿ ಇಲ್ಲ.
Comments 1