ಭಗವಾನ್ ಮನೆ ಮುಂದೆ ಭಾರೀ ಪ್ರತಿಭಟನೆ
ಮೈಸೂರು: ಸದಾ ಒಂದಲ್ಲಾ ಒಂದು ವಿವಾದಕ್ಕೆ ಸಿಕ್ಕಿ ಸುದ್ದಿಯಾಗುವ ವಿಚಾರವಾದಿ ಪ್ರೊ.ಕೆ.ಎಸ್. ಭಗವಾನ್ ಅವರು ಮತ್ತೊಮ್ಮೆ ವಿವಾದಕ್ಕೆ ಸಿಲುಕಿದ್ದು, ಒಕ್ಕಲಿಗರು ಸಂಸ್ಕೃತಿ ಹೀನರು ಎಂದ ಅವರ ವಿರುದ್ಧ ಒಕ್ಕಲಿಗ ಸಮುದಾಯ ಬೀದಿಗೆ ಇಳಿದಿದೆ.
ರಾಜ್ಯದ ಒಕ್ಕಲಿಗ ಮುಖಂಡರು ಹಾಗೂ ಒಕ್ಕಲಿಗರ ಸಂಘ ಭಗವಾನ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಅವರು ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದೆ.
ಇನ್ನೊಂದೆಡೆ, ಮೈಸೂರಿನಲ್ಲಿಂದು ಒಕ್ಕಲಿಗರು ಬೃಹತ್ ಪ್ರತಿಭಟನೆ ನಡೆಸಿ, ಭಗವಾನ್ ಮನೆಗೆ ನುಗ್ಗಲು ಯತ್ನಿಸಿದರು. ಮೈಸೂರಿನ ಕುವೆಂಪುನಗರದಲ್ಲಿರುವ ಭಗವಾನ್ ಮನೆಯ ಮುಂದೆ ಜಮಾಯಿಸಿದ ಒಕ್ಕಲಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಭಗವಾನ್ ಯಾವ ಸಮುದಾಯಕ್ಕೆ ಹುಟ್ಟಿರುವುದು ಎಂಬುದನ್ನು ಹೇಳಲಿ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ ಮುಂಡರು, ಕೂಡಲೇ ಭಗವಾನ್ ಅವರನ್ನು ಬಂಧಿಸಬೇಕು ಎಂದು ಆಗ್ರಹಪಡಿಸಿದರು.
ಭಗವಾನ್ ಅನಗತ್ಯವಾಗಿ ಕುವೆಂಪು ಅವರನ್ನು ಎಳೆದು ತಂದು ಒಕ್ಕಲಿಗ ಸಮುದಾಯವನ್ನು ನಿಂದಿಸಿದ್ದಾರೆ. ನಮಗೆ ಸಂಸ್ಕೃತಿ ಇಲ್ಲಾ ಎಂದಿದ್ದಾರೆ, ಭಗವಾನ್ ಅವರಿಗೆ ಸಂಸ್ಕೃತಿ ಇದೆಯಾ? ಅವರೇ ಬಂದು ಸಂಸ್ಕೃತಿ ಪಾಠ ಹೇಳಲಿ ಎಂದು ಪ್ರತಿಭಟನಕಾರರು ಒತ್ತಾಯಿಸಿದರು.
ಭಗವಾನ್ ನಿವಾಸದ ಮುಂದೆ ಧರಣಿ ಕುಳಿತ ಪ್ರತಿಭಟನಾಕಾರರನು ಪೋಲೀಸರು ತಡೆದರು. ಆದರೆ ಪ್ರತಿಭಟನಾ ನಿರತರು ರಸ್ತೆಯಲ್ಲೇ ಕುಳಿತು ಭಗವಾನ್ ಗಡಿಪಾರು ಮಾಡುವಂತೆ ಆಗ್ರಹಿಸಿದರು. ಜತೆಗೆ ಭಗವಾನ್ ನಿವಾಸಕ್ಕೆ ನುಗ್ಗಲು ಯತ್ನಿಸಿದ ಪ್ರತಿಭಟನಾಕಾರರನ್ನು ಅಡ್ಡಗಟ್ಟಿದ ಪೊಲೀಸರು ಕೆಲವರನ್ನು ವಶಕ್ಕೆ ಪಡೆದರು.
ಈ ಸಂದರ್ಭದಲ್ಲಿ ಗಿರೀಶ್ ಎಂಬುವರ ಮುಖಕ್ಕೆ ಪೆಟ್ಟು ಬಿದ್ದು ರಕ್ತ ಸುರಿದಿದ್ದು ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಪರಿಸ್ಥಿತಿ ಬಿಗಡಾಯಿಸುತ್ತಿರುವುದನ್ನು ಅರಿತು ವಶಕ್ಕೆ ಪಡೆದಿದ್ದ ಎಲ್ಲರನ್ನೂ ಪೊಲೀಸ್ ವಾಹನದಿಂದ ಕೆಳಗೆ ಇಳಿಸಲಾಯಿತು. ನಂತರ ರಸ್ತೆ ಮಧ್ಯೆ ಕುಳಿತು ನೂರಾರು ಮಂದಿ ಪ್ರತಿಭಟನೆ ಮುಂದುವರಿಸಿದರು. ಈ ನಡುವೆ ಪ್ರೊ.ಕೆ.ಎಸ್.ಭಗವಾನ್ ಮನೆಗೆ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ
ಶುಕ್ರವಾರ ಮಹಿಷ ಉತ್ಸವ ಕಾರ್ಯಕ್ರಮದ ವೇಳೆ ಭಾಷಣ ಮಾಡಿದಾಗ ಒಕ್ಕಲಿಗರು ಸಂಸ್ಕೃತಿ ಹೀನರು ಎಂಬ ಹೇಳಿ, ಬಳಿಕ ಇದನ್ನು ಹೇಳಿದ್ದು ಕುವೆಂಪು ಅವರು ನಾನು ಹೇಳುತ್ತಿರುವುದಲ್ಲ ಎಂದಿದ್ದರು. ಭಗವಾನ್ ಅವರ ಹೇಳಿಗೆ ಕಿಡಿ ಹೊತ್ತಿಸಿದ್ದು,ಅಹಿತಕರ ಘಟನೆ ನಡೆಯದಂತೆ ಸರ್ಪಗಾವಲು ಹಾಕಲಾಗಿದ್ದು
ಮನೆಯ ಪ್ರವೇಶ ದ್ವಾರದವರೆಗೂ ಬ್ಯಾರಿಕೇಡ್ ಗಳನ್ನ ಅಳವಡಿಸಲಾಗಿದೆ ಅಲ್ಲದೆ ರಾಜ್ಯ ಮೀಸಲು ಪಡೆ ಪೊಲೀಸರನ್ನೂ ನಿಯೋಜಿಸಲಾಗಿದೆ.
ಭಗವಾನ್ ಅರೆ ಹುಚ್ಚ
ಒಕ್ಕಲಿಗರು ಸಂಸ್ಕೃತಿ ಹೀನರು ಎಂದು ಹೇಳಿಕೆ ನೀಡಿರುವ ಭಗವಾನ್ ಅರೆ ಹುಚ್ಚ ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಅವರು ಟೀಕಿಸಿದರು.
ಪದೇ ಪದೆ ಅನಗತ್ಯ ಹೇಳಿಕೆಗಳನ್ನು ನೀಡುವ ಮೂಲಕ ಸಮಾಜದ ಶಾಂತಿಯನ್ನು ಕದಡುತ್ತಿದ್ದಾರೆ. ಅವರು ವಿವಾದಾಸ್ಪದ ಹೇಳಿಕೆಗಳನ್ನು ನೀಡುತ್ತಿರುವುದು ಇದೇ ಮೊದಲಲ್ಲ. ಅವರು ಮೊದಲು ತಮ್ಮ ಹೇಳಿಕೆ ಹಿಂಪಡೆದು ಕ್ಷಮೆ ಕೇಳಬೇಕು ಎಂದು ಅವರು ಒತ್ತಾಯ ಮಾಡಿದರು.
ಪ್ರೊ.ಭಗವಾನ್ ಸ್ವಲ್ಪ ಮೆಂಟಲ್ ಆಗಿದ್ದಾರೆ. ಆದ್ದರಿಂದ ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಬೇಕು. ಅವರು ಕೂಡ ಒಳ್ಳೆಯ ಕುಟುಂಬದಿಂದ ಬಂದವರು. ಯಾರನ್ನೋ ಮೆಚ್ಚಿಸಲು ಈ ರೀತಿಯಾಗಿ ಮಾತನಾಡುತ್ತಾರೆ. ಅವರ ಹೇಳಿಕೆಯನ್ನು ತೀವ್ರವಾಗಿ ನಾನು ಖಂಡಿಸುತ್ತೇನೆ. ಯಾವುದೇ ಸಮುದಾಯದ ಬಗ್ಗೆ ಯಾರು ಕೂಡ ವಿವಾದಾತ್ಮಕ ಹೇಳಿಕೆಯನ್ನು ನೀಡಬಾರದು ಎಂದು ಅವರು ಜಿ.ಟಿ.ದೇವೇಗೌಡರು ಹೇಳಿದ್ದಾರೆ.
ಭಗವಾನ್ ಬಂಧನಕ್ಕೆ ಆಗ್ರಹ
ಭಗವಾನ್ ಹೇಳಿಕೆಯನ್ನು ಮಾಜಿ ಡಿಸಿಎಂ ಡಾ.ಸಿಎನ್ ಅಶ್ವಥ್ ನಾರಾಯಣ ಖಂಡಿಸಿದ್ದಾರೆ.
ವಿಚಾರವಾದಿ ಭಗವಾನ್ ಏನನ್ನು ಹೇಳಲು ಪ್ರಯತ್ನ ಮಾಡುತ್ತಿದ್ದಾರೆ ಅಂತಾ ಅವರೇ ಹೇಳಬೇಕು. ಹಿಂದೂ ಧರ್ಮದ ವಿರುದ್ಧ ಪ್ರಚಾರ ಮಾಡಬೇಕಾ ಏನು ಅಂತಾ ಸ್ಪಷ್ಟಪಡಿಸಬೇಕು. ಮಹಿಷ ಏನು ಬೇರೆ ಸಂಸ್ಕೃತಿಯಾ? ಹಿಂದೂ ಸಂಸ್ಕೃತಿಯ ಒಂದು ಭಾಗ ಆಗಿರುವಂತಹದ್ದು. ಮಹಿಷ ದುಷ್ಟ ಶಕ್ತಿಯನ್ನು ಪೂಜಿಸುತ್ತೇವೆ ಎಂಬ ಮನಸ್ಥಿತಿ ಇರುವ ಭಗವಾನ್ ಅವರನ್ನು ಕೂಡಲೇ ಸರ್ಕಾರ ಬಂಧಿಸಬೇಕು ಎಂದು ಅವರು ಆಗ್ರಹಪಡಿಸಿದ್ದಾರೆ.