8 ಕೋಟಿ ರೂ. ಮೌಲ್ಯದ ಚಿನ್ನ, ವಜ್ರದ ಆಭರಣ, 30 ವಿದೇಶಿ ವಾಚ್ ಪತ್ತೆ
ನವದೆಹಲಿ: ರಾಜ್ಯದಲ್ಲಿ ನಡೆದ ಆದಾಯ ತೆರಿಗೆ ದಾಳಿ ಬೆನ್ನಲ್ಲಿಯೇ ಅಧಿಕೃತವಾಗಿ ಹೊರಬಿದ್ದಿರುವ ಲೆಕ್ಕ ಬೆಚ್ಚಿ ಬೀಳಿಸುವ ರೀತಿಯಲ್ಲಿದೆ.
ಕರ್ನಾಟಕವೂ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಸರಕಾರಿ ಗುತ್ತಿಗೆದಾರರು, ರಿಯಲ್ ಎಸ್ಟೇಟ್ ಡೆವಲಪರ್ ಗಳು ಹಾಗೂ ಇನ್ನಿತರರ ಮೇಲೆ ನಡೆದ ಐಟಿ ದಾಳಿಯಲ್ಲಿ ಆದಾಯ ತೆರಿಗೆ ಇಲಾಖೆಯು 94 ಕೋಟಿ ರೂಪಾಯಿ ನಗದು ಮತ್ತು 8 ಕೋಟಿ ರೂಪಾಯಿ ಮೌಲ್ಯದ ಚಿನ್ನ ಮತ್ತು ವಜ್ರದ ಆಭರಣಗಳು, 30 ವಿದೇಶಿ ನಿರ್ಮಿತ ಐಷಾರಾಮಿ ಕೈ ಗಡಿಯಾರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಬಗ್ಗೆ ದಾಳಿ ಮುಗಿದ ನಂತರ ಆದಾಯ ತೆರಿಗೆ ಇಲಾಖೆಯೇ ಸೋಮವಾರ ಅಧಿಕೃತ ಪ್ರಕಟಣೆ ಹೊರಡಿಸಿದೆ.
ಪಂಚರಾಜ್ಯಗಳ ಚುನಾವಣೆ ಘೋಷಣೆಯಾದ ಬಳಿಕ ಕಪ್ಪುಹಣದ ಚಲನವಲನದ ಬಗ್ಗೆ ಖಚಿತ ಮಾಹಿತಿ ಸಂಗ್ರಹ ಮಾಡಿದ ಐಟಿ ಇಲಾಖೆ; ಅಕ್ಟೋಬರ್ 12ರಂದು ಬೆಳಗ್ಗೆಯಿಂದ ಅಖಾಡಕ್ಕೆ ಇಳಿದಿತ್ತು.ಅನೇಕ ತಂಡಗಳಾಗಿ ದಾಳಿ ನಡೆಸಿದ ತೆರಿಗೆ ಅಧಿಕಾರಿಗಳು, ವಿವಿಧ ರಾಜ್ಯಗಳಲ್ಲಿ ಏಕಕಾಲಕ್ಕೆ ಪರಿಶೀಲನೆ, ಶೋಧ ನಡೆಸಿದರು.
ಬೆಂಗಳೂರು ಸೇರಿ ಕರ್ನಾಟಕದ ವಿವಿಧ ಭಾಗಗಳು ಸೇರಿ ನೆರೆಯ ತೆಲಂಗಾಣ, ಆಂಧ್ರ ಪ್ರದೇಶ, ದೆಹಲಿಯ ಹಲವೆಡೆ ಒಟ್ಟು 55 ಕಡೆಗಳಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ತೆರಿಗೆ ದಾಳಿಯ ಸಂದರ್ಭದಲ್ಲಿ ವೇಳೆ 94 ಕೋಟಿ ರೂಪಾಯಿ ನಗದು ಮತ್ತು 8 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಬಂಗಾರ, ವಜ್ರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (ಸಿಬಿಡಿಟಿ) ಪ್ರಕಟಣೆಯಲ್ಲಿ ತಿಳಿಸಿದೆ.
ತೆರಿಗೆ ಅಧಿಕಾರಿಗಳ ಶೋಧದ ಸಮಯದಲ್ಲಿ ಕೈ ಗಡಿಯಾರಗಳನ್ನು ಮಾರಾಟ ವ್ಯವಹಾರದಲ್ಲಿ ತೊಡಗಿರದ ಖಾಸಗಿ ಉದ್ಯೋಗಿ ಒಬ್ಬರ ಬಳಿ 30 ಫಾರಿನ್ ಮೇಡ್ ಐಷಾರಾಮಿ ಕೈಗಡಿಯಾರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದಿದೆ ಎಂದು ಪ್ರಕಟಣೆ ಹೇಳಿದೆ.