ಅನ್ಯಪಕ್ಷಗಳ ಬುಟ್ಟಿಗೆ ಕೈ ಹಾಕಿದ್ದ ಕಾಂಗ್ರೆಸ್ಸಿಗೆ ಶಾಕ್
ಬೆಂಗಳೂರು: ಮಧ್ಯ ಕರ್ನಾಟಕದ ಪ್ರಭಾವಿ ಸಚಿವರು ಹಾಗೂ ಕೆಲವು ಶಾಸಕರು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹಾಗೂ ಬಿಜೆಪಿ ಮುಖಂಡ ಪ್ರಪುಲ್ ಪಟೇಲ್ ಜತೆ ನಿರಂತರ ಸಂಪರ್ಕದಲ್ಲಿರುವುದು ಕಾಂಗ್ರೆಸ್ಗೆ ನುಂಗಲಾರದ ತುತ್ತಾಗಿದೆ.
ಈ ಸಚಿವರು ಅಧಿಕಾರ ವಹಿಸಿಕೊಂಡ ನಂತರ ಒಂದು ದಿನವೂ ತಮ್ಮ ವಿಧಾನಸೌಧದ ಕಚೇರಿಗೂ ತಲೆ ಹಾಕಿಲ್ಲ. ಸರಕಾರ ವಹಿಸಿರುವ ಇಲಾಖೆಯ ಉಸ್ತುವಾರಿ ಹೊಣೆಯನ್ನೂ ಸಮರ್ಥವಾಗಿ ನಿರ್ವಹಿಸಿಲ್ಲ. ಅಲ್ಲದೆ, ಇತ್ತೀಚಿನ ದಿನಗಳಲ್ಲಿ ನಿರಂತರವಾಗಿ ಬಿಜೆಪಿ ಮುಖಂಡರೊಂದಿಗೆ ಸಂಪರ್ಕ ಹೊಂದಿದ್ದಾರೆ.
ಪಣಜಿ ಹಾಗೂ ಪುಣೆಯಲ್ಲಿ ಬಿಜೆಪಿ ನಾಯಕರೊಂದಿಗೆ ನಿರಂತರವಾಗಿ ಭೇಟಿ ನಡೆದಿದೆ. ವೀರಶೈವ ಸಮುದಾಯದ ಅಧಿಕಾರಿಗಳಿಗೆ ಸರಕಾರದಲ್ಲಿ ಕಡೆಗಣಿಸಲಾಗುತ್ತಿದೆ ಎಂಬ ಬಹಿರಂಗ ಹೇಳಿಕೆ ವಿಚಾರವೂ ಈ ಭೇಟಿಗೆ ಹೆಚ್ಚು ಒತ್ತು ಕೊಟ್ಟಿದೆ. ಸಚಿವರ ಮೂಲಕ ಕೆಲ ಕಾಂಗ್ರೆಸ್ ಶಾಸಕರೊಂದಿಗೆ ಬಿಜೆಪಿ ಮುಖಂಡರು ಸಂಪರ್ಕ ಬೆಳೆಸುತ್ತಿದ್ದಾರೆ. ಈ ಎಲ್ಲಾ ಮಾಹಿತಿಯನ್ನು ರಾಜ್ಯ ಗುಪ್ತಚರ ವಿಭಾಗವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಂದಿದೆ ಎಂದು ಗೊತ್ತಾಗಿದೆ.
ಗುಪ್ತಚರ ಮಾಹಿತಿ
ಗುಪ್ತಚಾರ ವಿಭಾಗದ ಮಾಹಿತಿ ಬರುತ್ತಿದ್ದಂತೆ ಪಕ್ಷದ ವರಿಷ್ಠರು, ಕೆಪಿಸಿಸಿ ಅಧ್ಯಕ್ಷರು ಹಾಗೂ ತಮ್ಮ ಹಿರಿಯ ಸಹೋದ್ಯೋಗಿಗಳ ಗಮನಕ್ಕೆ ತಂದಿದ್ದಾರೆ. ಆಪರೇಷನ್ ಕಮಲದ ಮೂಲಕ ತಮ್ಮ ನೇತೃತ್ವದ ಸರಕಾರವನ್ನು ಕೆಡವಬಹುದು ಎಂಬ ಸಂದೇಶ ಮುಖ್ಯಮಂತ್ರಿ ಅವರ ಅಂಗಳಕ್ಕೆ ತಲುಪಿದೆ.
ತದ ನಂತರ ಗುರುವಾರ ತಮ್ಮ ಎಲ್ಲಾ ಸರಕಾರಿ ಕಾರ್ಯಕ್ರಮಗಳನ್ನು ರದ್ದುಮಾಡಿ, ಅಸಮಾಧಾನಿತ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನವನ್ನು ಮುಖ್ಯಮಂತ್ರಿ ಮಾಡಿದ್ದಾರೆ. ಬಿಜೆಪಿ ಮುಖಂಡರು ಹಾಗೂ ಗೋವಾ ಮುಖ್ಯಮಂತ್ರಿ ಜತೆ ಸಂಪರ್ಕ ಹೊಂದಿರುವ ಸಚಿವರನ್ನು ಸಂಪರ್ಕಿಸಿ ಚರ್ಚೆ ಮಾಡಿರುವುದಲ್ಲದೆ, ತಮಗೆ ಬಂದಿರುವ ಮಾಹಿತಿಯನ್ನು ಅವರ ಗಮನಕ್ಕೆ ತಂದು ವಿವರಣೆ ಕೋರಿದ್ದಾರೆ ಎನ್ನಲಾಗಿದೆ.
ಇದಾದ ನಂತರ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ 42 ಮುಖಂಡರು ತಮ್ಮ ಜತೆ ಸಂಪರ್ಕದಲ್ಲಿದ್ದಾರೆ ಎಂದು ಒಂದು ಕಡೆ ಹೇಳಿಕೆ ನೀಡಿದರೆ, ಮತ್ತೊಂದೆಡೆ ಬಿಜೆಪಿ ಮುಖಂಡರು ಕಾಂಗ್ರೆಸ್ ಶಾಸಕರಿಗೆ ಗಾಳ ಹಾಕುತ್ತಿದ್ದಾರೆ ಎನ್ನುವುದು ಹಸ್ತ ಪಾಳೆಯದಲ್ಲಿ ಕೋಲಾಹಲ ಎಬ್ಬಿಸಿದೆ.
ಈ ಹೇಳಿಕೆ ನೀಡಿದ್ದ ಬೆನ್ನಲೇ ಕಾಂಗ್ರೆಸ್ ಮುಖಂಡ ಹಾಗೂ ಗುತ್ತಿಗೆದಾರರ ಮನೆಗಳ ಮೇಲೆ ಐಟಿ ದಾಳಿ ನಡೆಸಿ ಕೋಟ್ಯಂತರ ರೂಪಾಯಿ ವಶಪಡಿಸಿಕೊಂಡಿದ್ದಾರೆ. ಆಪರೇಷನ್ ಹಸ್ತದ ರೂವಾರಿ, ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಅವರು, ಬರುವ ಸಂಕ್ರಾಂತಿ ವೇಳೆಗೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಪತನಗೊಳ್ಳಲಿದೆ ಎಂದು ಭವಿಷ್ಯ ನುಡಿದಿದ್ದರು.
ಈ ಬಾರಿ ಆಪರೇಷನ್ ಕಮಲದಿಂದ ಸರಕಾರ ಪತನವಿಲ್ಲ. ಆ ಪಕ್ಷದ ಶಾಸಕರೇ ಈ ಸರ್ಕಾರಕ್ಕೆ ಮುಳುವಾಗಲಿದ್ದಾರೆ ಎಂದು ಅವರು ತಿಳಿಸಿದ್ದರು. ಇದರ ಬೆನ್ನಲೆ ಗುಪ್ತಚರ ವಿಭಾಗವು ಪಕ್ಷದ ಸಚಿವರು ಹಾಗೂ ಶಾಸಕರು ಬಿಜೆಪಿ ಮುಖಂಡರೊಂದಿಗೆ ಸಂಪರ್ಕವಿರುವ ಮಾಹಿತಿಯನ್ನು ಮುಖ್ಯಮಂತ್ರಿ ಅವರಿಗೆ ತಲುಪಿಸಿದ್ದಾರೆ.